ADVERTISEMENT

‘ನಾನು ಡೀಸೆಂಟ್‌ ಹುಡುಗ ಕಣ್ರೀ ’

ಕಿರುತೆರೆ

ವಿದ್ಯಾಶ್ರೀ ಎಸ್.
Published 17 ಏಪ್ರಿಲ್ 2017, 19:30 IST
Last Updated 17 ಏಪ್ರಿಲ್ 2017, 19:30 IST
ಸೂರಜ್‌
ಸೂರಜ್‌   

ಪ್ರೀತಿಸಿದ  ಹುಡುಗಿ ಅಣ್ಣನ ಕೈಹಿಡಿದರೆ ಆಕೆಯ ಅಕ್ಕನನ್ನೇ ಮದುವೆಯಾಗುವ ಅನಿವಾರ್ಯತೆ ಇವನಿಗೆ. ಕೊನೆಗೆ ಹಳೆಯದೆಲ್ಲವನ್ನೂ ಮರೆತು ಜೀವನವನ್ನು ಇದ್ದ ಹಾಗೆ ಸ್ವೀಕರಿಸುವ ಸಂಕಲ್ಪ ಇಬ್ಬರದು. ಇದು ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಕುಲವಧು ಧಾರಾವಾಹಿಯ ಕಥೆಯ ತಿರುಳು.

ಇದರಲ್ಲಿ ಲವರ್ ಬಾಯ್ ಆಗಿಯೂ ಗಂಭೀರ ಪಾತ್ರದ ಮೂಲಕ ಗಮನಸೆಳೆದವರು ಗೌರವ್‌ ಪಾತ್ರಧಾರಿ ಸೂರಜ್‌. ಸಕಲೇಶಪುರದ ಇವರು ಎಂಜಿನಿಯರ್‌ ಪದವೀಧರ. ನಟನೆಯೇ ಬದುಕು ಎಂದುಕೊಂಡಿರುವ ಇವರು, ವೃತ್ತಿ ಪಯಣದ ಬಗ್ಗೆ ಹೇಳುವುದು ಹೀಗೆ...

*ಧಾರಾವಾಹಿಯಲ್ಲಿ ನೀವು ನಕ್ಕಿದ್ದೇ ಕಡಿಮೆ ಅಲ್ವಾ?
ಪಾತ್ರ ಬೇಡುವ ಗಂಭೀರತೆಗೆ ಒಗ್ಗಿಸಿಕೊಂಡಿರುವುದರಿಂದ ನಿಮಗೆ ಹಾಗೆ ಅನಿಸುತ್ತದೆ.

*ನಿಜ ಜೀವನದಲ್ಲಿ ನೀವು ಹೀಗೆನಾ?
ಗಂಭೀರವಾಗಿಯೇನು ಇರುವುದಿಲ್ಲ. ಸಂದರ್ಭಕ್ಕೆ ತಕ್ಕಂತೆ ನಗುತ್ತೇನೆ. ಆದರೆ ನಾನು ಡೀಸೆಂಟ್ ಹುಡುಗ.

*ಪ್ರೀತಿಸಿದವಳು ಮನೆಯಲ್ಲಿಯೇ ಇದ್ದಾಳೆ. ನಿಮಗೆ ಹಳೇ ಪ್ರೀತಿ ನೆನಪಾಗಲ್ವಾ?
ಮೊದಲಿಗೆ ತುಂಬಾ ಕಿರಿಕಿರಿ ಆಗುತ್ತಿತ್ತು. ಆದರೆ ಈಗ ಅಭ್ಯಾಸವಾಗಿದೆ. ಮನೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ ಅಲ್ವಾ, ಹಾಗಾಗಿ ಬೇರೆ ಕಡೆ ಗಮನ ಕೊಡಲು ಆಗುತ್ತಿಲ್ಲ.

*ಧನ್ಯಾ, ವಚನಾ ಇಬ್ಬರಲ್ಲಿ ನಿಮ್ಮ ಹುಡುಗಿ ಹೇಗಿರಬೇಕು?
ಧನ್ಯಾ ತರಹ ಒಳ್ಳೆಯ ಹುಡುಗಿಯಾಗಿರಬೇಕು. ಎಲ್ಲ ಸಂದರ್ಭಗಳನ್ನು ಸಮರ್ಥವಾಗಿ ನಿಭಾಯಿಸುವಂತಿರಬೇಕು.

*ನಿಮ್ಮ ಸಮಸ್ಯೆಗಳಿಗೆಲ್ಲ ಮುಕ್ತಿ ದೊರಕುವುದು ಯಾವಾಗ?
ಅದು ಮುಗಿಯುವ ಹಾಗೆ ಕಾಣುತ್ತಿಲ್ಲ. ಬಹುಶಃ ಧಾರಾವಾಹಿ ಮುಗಿದ ನಂತರ ಮುಕ್ತಿ ದೊರಕಬಹುದು ಅನಿಸುತ್ತದೆ.

*ನಿಮಗೆ ಲವ್‌ ಮ್ಯಾರೇಜ್‌ ಇಷ್ಟನೋ, ಅರೆಂಜ್ಡ್‌ ಮಾರೇಜೊ?
ಇಲ್ಲಿಯವರೆಗೆ ಯಾರನ್ನೂ ಲವ್‌ ಮಾಡಿಲ್ಲ. ಹಾಗಾಗಿ ನಾನು ಬಹುಶಃ ಅರೇಂಜ್‌ ಮ್ಯಾರೇಜ್‌ ಆಗುತ್ತೇನೆ.

*ಧಾರಾವಾಹಿಗೆ ಅವಕಾಶ ದೊರಕಿದ್ದು ಹೇಗೆ?
ವಾರಾಂತ್ಯದಲ್ಲಿ ನಟನಾ ತರಬೇತಿಗೆಂದು ಹೋಗುತ್ತಿದ್ದೆ. ಅವರು ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯ ಚಿತ್ರೀಕರಣದ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು. ಆಗ ನಿರ್ದೇಶಕರು ನನ್ನನ್ನು  ನೋಡಿ ಕುಲವಧು ಧಾರಾವಾಹಿಯಲ್ಲಿ ನಟಿಸುವ ಅವಕಾಶ ಕೊಟ್ಟರು.

*ಫಿಟ್‌ನೆಸ್‌ ರಹಸ್ಯ ಏನು?
ವರ್ಕೌಟ್‌ ಮಾಡುತ್ತೇನೆ. ಪ್ರತಿದಿನ ಏಳು ಮೊಟ್ಟೆ, ಓಟ್ಸ್‌, ಚಿಕನ್‌, ಸೇಬು, ದಾಳಿಂಬೆ, ಪಪ್ಪಾಯಿ, ಕಲ್ಲಂಗಡಿ ಹಣ್ಣನ್ನು ಸೇವಿಸುತ್ತೇನೆ.

*ಜನರ ಪ್ರತಿಕ್ರಿಯೆ ಹೇಗಿದೆ?
ಕಲರ್ಸ್‌ ಕನ್ನಡದ ಕಡೆಯಿಂದ ಗಣೇಶೋತ್ಸವ ಆಯೋಜಿಸಿದ್ದರು. ಆ ಸಮಾರಂಭದಲ್ಲಿ ಕುಳಿತಿದ್ದಾಗ ಯಾರೋ ಅಪರಿಚಿತರು ಬಂದು ‘ಹಾಯ್‌ ಹೇಗಿದ್ದೀರಿ’ ಎಂದರು. ನಾನು ಕ್ಷಮಿಸಿ ನೀವು ಯಾರೆಂದು ಗೊತ್ತಾಗಲಿಲ್ಲ ಎಂದೆ, ಅದಕ್ಕೆ ಪಕ್ಕದಲ್ಲಿ ಕೂತವರು ‘ನಿಮ್ಮ ಅಭಿಮಾನಿಗಳು’ ಎಂದರು. ಹೀಗೆ ಪರಿಚಯವಿಲ್ಲದವರು ಮಾತನಾಡಿಸಿ ನಟನೆ ಗುರುತಿಸಿದಾಗ ಖುಷಿ ಎನಿಸುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.