ADVERTISEMENT

ನಾಯಗನ್‌

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2017, 19:30 IST
Last Updated 15 ಫೆಬ್ರುವರಿ 2017, 19:30 IST
ನಾಯಗನ್‌
ನಾಯಗನ್‌   

‘ನಾಯಗನ್‌’ ಸಿನಿಮಾನಿರ್ದೇಶಕ  ಮಣಿ ರತ್ನಂ, ನಟ ಕಮಲ್‌ ಹಾಸನ್‌ ಅವರಿಗೆ ಅಪಾರ ಜನಪ್ರಿಯತೆತಂದುಕೊಟ್ಟ ಸಿನಿಮಾ ಅಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲಿ ಮೈಲುಗಲ್ಲು ಸೃಷ್ಟಿಸಿದ ಚಿತ್ರವೂ ಹೌದು.

ಇದುವರೆಗೆ ಭೂಗತಲೋಕದ ಕಥನವನ್ನಿಟ್ಟುಕೊಂಡು ನೂರಾರು ಸಿನಿಮಾಗಳು ಬಂದಿದ್ದರೂ ‘ನಾಯಗನ್‌’ ಇಂದಿಗೂ ಮಾಸದೇ ಮುಕ್ಕಾಗದೇ ಉಳಿದಿದೆ. ಇದು ಮುಂಬೈನ ಭೂಗತದೊರೆ ವರದರಾಜನ್‌ ಮುದಲಿಯಾರ್‌ ಬದುಕನ್ನು ಆಧರಿಸಿದ ಸಿನಿಮಾ. ಆದರೆ ವ್ಯಕ್ತಿಚಿತ್ರ, ಕ್ರೌರ್ಯದ ವಿಜೃಂಭಣೆಗಳನ್ನೆಲ್ಲ ಮೀರಿ ಹೊಸ ಲೋಕವೊಂದರ ಅನಾವರಣವಾಗಿ ನಮ್ಮನ್ನು ಆವರಿಸಿಕೊಳ್ಳುವ ಶಕ್ತಿ ಈ ಸಿನಿಮಾಕ್ಕಿದೆ. ಆಡಳಿತ ವ್ಯವಸ್ಥೆಯೇ ಪಾತಕಿಗಳನ್ನು ಸೃಷ್ಟಿಸುವ ವಿಪರ್ಯಾಸವನ್ನು ನಮ್ಮೆದುರು ಬಿಚ್ಚಿಡುತ್ತದೆ.

ದಕ್ಷಿಣ ಭಾರತದ ಊರೊಂದರಿಂದ ಮುಂಬೈಗೆ ಓಡಿಬಂದ ಶಕ್ತಿವೇಲು ಎಂಬ ಹುಡುಗ ಅಲ್ಲಿ ಬಡ ಮುಸ್ಲೀಮನ ಮನೆಯಲ್ಲಿ ಆಶ್ರಯ ಪಡೆಯುತ್ತಾನೆ. ಅಲ್ಲಿಯೂ ಆಡಳಿತ ವ್ಯವಸ್ಥೆ ಬಡಜನರ ಮೇಲೆ ಎಸಗುವ ದೌರ್ಜನ್ಯವನ್ನು ಕಂಡು ಉಣ್ಣುತ್ತಲೇ ಬೆಳೆದ ಅವನು ಕೊನೆಗೆ ಬಂಡೆದ್ದು, ತಾನೇ ಒಂದು ಸರ್ಕಾರವಾಗಿ ಬದಲಾಗುತ್ತಾನೆ.

ಜಗತ್ತಿನ ಕಣ್ಣಿನಲ್ಲಿ ಪಾತಕಿ ಎನಿಸಿಕೊಳ್ಳುವವರ ವೈಯಕ್ತಿಕ ಬದುಕಿನ ನಿರ್ಗತಿಕತೆ, ತನ್ನ ಮನೆಯವರಿಂದಲೇ ತಿರಸ್ಕೃತನಾಗುವ ದಾರುಣತೆ ಈ ಸಿನಿಮಾದಲ್ಲಿ ತೀವ್ರವಾಗಿ ಅಭಿವ್ಯಕ್ತವಾಗಿದೆ. ಕೊನೆಗೂ ಎಲ್ಲ ಅಪರಾಧಗಳಿಂದ ಮುಕ್ತನಾದ ಶಕ್ತಿವೇಲು, ಹಿಂದೊಮ್ಮೆ ತಾನು ಕೊಂದ ಪೊಲೀಸ್‌ ಅಧಿಕಾರಿಯ ಮಗನಿಂದಲೇ ಹತನಾಗುವ ಮೂಲಕ ತಾನೇ ಸೃಷ್ಟಿಸಿಕೊಂಡ ದುರಂತಚಕ್ರ ತಾನೇ ಆಹಾರವಾಗುವ ವಿಪರ್ಯಾಸವೂ ಈ ಚಿತ್ರದಲ್ಲಿದೆ.

ಶಕ್ತಿವೇಲು ಅವರ ಪಾತ್ರದಲ್ಲಿ ನಟಿಸಿರುವ ಕಮಲ್‌ ಹಾಸನ್‌ ದೈತ್ಯ ಪ್ರತಿಭೆಯ ಅಭಿನಯವನ್ನು ನೋಡಲಾದರೂ ಈ ಸಿನಿಮಾ ನೋಡಬೇಕು. ನಾಯಕನ್‌ ಸಿನಿಮಾವನ್ನು ಯೂಟ್ಯೂಬ್‌ನಲ್ಲಿ goo.gl/u3LjN5 ಕೊಂಡಿ ಬಳಸಿ ನೋಡಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.