ADVERTISEMENT

ನಿನ್ನ ಮೇಷ್ಟ್ರು ನಿನಗೆ ತಂದೆಯಂತಾಗಿಬಿಟ್ಟ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2017, 19:30 IST
Last Updated 14 ನವೆಂಬರ್ 2017, 19:30 IST
ನಿನ್ನ ಮೇಷ್ಟ್ರು ನಿನಗೆ ತಂದೆಯಂತಾಗಿಬಿಟ್ಟ
ನಿನ್ನ ಮೇಷ್ಟ್ರು ನಿನಗೆ ತಂದೆಯಂತಾಗಿಬಿಟ್ಟ   

ಕೆಲವು ಅನುಭವಗಳು ಅತ್ಯಂತ ಸೂಕ್ಷ್ಮದ್ದಾಗಿರುತ್ತವೆ. ಕತ್ತಿಯ ಅಲುಗಿನ ಮೇಲಿನ ನಡಿಗೆಯಾಗಿರುತ್ತದೆ. ಮಾನಾಪಮಾನವನ್ನು ಅಡವಿಟ್ಟುಕೊಂಡಿರುತ್ತದೆ. ಸಣ್ಣ ಎಡವಟ್ಟಾದರೂ ಯಾವುದೋ ಒಂದು ರೀತಿಯ ತಲೆದಂಡ ನಿಶ್ಚಿತ. ನನಗೆ ಸಂಬಂಧಿಸಿದ ಇಂಥ ಹಲವು ಪ್ರಸಂಗಗಳಲ್ಲಿ ಇದೂ ಒಂದು.

ಕೋಲಾರ ಜಿಲ್ಲೆಯ ಗೌನಿಪಲ್ಲಿ ಶಾಲೆಯಲ್ಲಿ ಗಾಯಗೊಂಡ ಪ್ರಾಣಿಗಳಿಗೆ ಚಿಕಿತ್ಸೆ ಮಾಡಲು ಆರಂಭಿಸಿದ್ದು, ಮಕ್ಕಳ ಅನಾರೋಗ್ಯಕ್ಕೂ ವಿಸ್ತರಿಸಿತು. ನಂತರ ಹಿರಿಯರಿಗೂ ಆಯಿತು. ಅದೊಂದು ಚಿಕ್ಕ ಆಸ್ಪತ್ರೆಯೇ ಆಗಿತ್ತು. ಇದು ಕಶೆಟ್ಟಿಪಲ್ಲಿ ಶಾಲೆಗೂ ನನ್ನ ಜೊತೆಯೇ ಬಂದಿತು. ಗೌನಿಪಲ್ಲಿಗಿಂತ ಇಲ್ಲಿ ಅದರ ಅಗತ್ಯ ಹೆಚ್ಚಿಗಿತ್ತು. ಕಾರಣ ಹತ್ತಿರದಲ್ಲಿ ಆಸ್ಪತ್ರೆಯಿರಲಿಲ್ಲ. ಶಾಲೆ ಮಕ್ಕಳ ಆಚೆಗೆ ಮುದುಕರು, ಮಹಿಳೆಯರಿಗೆ ಹೆಚ್ಚು ಉಪಯುಕ್ತವಾಗಿತ್ತು.

ಒಂದು ದಿನ ಯಾವುದೋ ನೆಪದಲ್ಲಿ ಆ ಊರಿನವನೊಬ್ಬ ಜಗಳವಾಡಿ ಹೋಗಿದ್ದ. ಆ ಕ್ಷಣದಲ್ಲಿ ಉಂಟಾಗಿದ್ದ ಸಿಟ್ಟನ್ನು ಶಮನ ಮಾಡಿಕೊಳ್ಳದೆ ತರಗತಿಗೆ ಹೋಗಿದ್ದು ನನ್ನ ಅಯೋಗ್ಯತನವಾಗಿತ್ತು. ಅದು ಎಂಟನೇ ತರಗತಿ.... ಪಲ್ಲಿಯ ಹುಡುಗಿಯೊಬ್ಬಳು ಹೋಂವರ್ಕ್ ಮಾಡಿಕೊಂಡು ಬಂದಿರಲಿಲ್ಲ. ಹೋಗಲಿ ಎಂದರೆ ಪಾಠದಲ್ಲಿ ಶ್ರದ್ಧೆವಹಿಸಿರಲಿಲ್ಲ. ಎದೆಯಲ್ಲಿದ್ದ ಸಿಟ್ಟಿಗೆ ಇದರ ಸಿಟ್ಟೂ ಜೊತೆಯಾಗಿ ಅವಳಿಗೆ ಚುರುಕು ಮುಟ್ಟುವಂತೆ ಏಟನ್ನೂ ಹಾಕಿಬಿಟ್ಟೆ. ‘ಕಲಿಯೋದಿದ್ದರೆ ಸರಿಯಾಗಿ ಕಲಿಯಿರಿ, ಇಲ್ಲಾ ಹಾಳಾಗಿ ಹೋಗಿ’ ಎಂದು ಸಿಡುಕಿ ತರಗತಿಯಿಂದ ಹೊರಬಂದೆ. ಮನಸ್ಸು ಅಪರಾಧಿಯಂತೆ ತಳಮಳಕ್ಕೆ ಒಳಗಾಯಿತು.

ADVERTISEMENT

ತರಗತಿಯ ಆಚೆ ಮಕ್ಕಳಿಗೆ ನನ್ನಲ್ಲಿ ತುಂಬಾ ಸಲಿಗೆ. ಅದು ಚಡ್ಡಿ ದೋಸ್ತಿಗಳಲ್ಲಿರುತ್ತಲ್ಲ ಅಂಥ ಸಲಿಗೆ. ಶಾಲೆಯ ಆವರಣದಲ್ಲಿದ್ದ ನೇರಳೆ ಮರದಡಿ ಒಂಟಿಯಾಗಿ ಕುಳಿತಿದ್ದೆ. ಇಂಥ ಸಂದರ್ಭಗಳಲ್ಲಿ ಉಳಿದ ಶಿಕ್ಷಕರು ಮಾತನಾಡಿಸುವುದಿರಲಿ, ನನ್ನ ಬಳಿಗೂ ಸುಳಿಯುತ್ತಿರಲಿಲ್ಲ. ಎಚ್.ಎಂ.ಗೆ ಕೋಪ ಬಂದಿದೆ ಯಾರೂ ಹೋಗಬೇಡಿ ಎಂದು ಮಕ್ಕಳಿಗೆ, ಅಡುಗೆಯವರಿಗೆ ಹೇಳುತ್ತಿದ್ದರು. ಹೀಗಿದ್ದಾಗ ಅದೇ ಎಂಟನೇ ತರಗತಿಯ ವರಲಕ್ಷ್ಮಿ ಓರೆಗಣ್ಣಿನಿಂದ ನನ್ನತ್ತ ನೋಡುತ್ತ ಹೋಗುತ್ತಿದ್ದಳು.

ಅವಳನ್ನು ನೋಡಿ ನಕ್ಕುಬಿಟ್ಟೆ. ಹತ್ತಿರಕ್ಕೆ ಬಂದವಳು, ‘ಸಾ ಅವಳನ್ನು ಹೊಡೀಬಾರ‍್ದಿತ್ತು. ತಪ್ಪು ಮಾಡಿದಿರಿ’ ಎಂದಳು. ತಪ್ಪು ಮಾಡಿದ್ದರಿಂದ ಅವಳ ಆಕ್ಷೇಪಣೆಯನ್ನು ಸ್ವೀಕರಿಸಿದೆ. ‘ಅವಳ ಎದೆ ಮೇಲೆ ದೊಡ್ಡ ಕುರ ಆಗಿದೆ. ನೋವಿನಿಂದ ಜ್ವರ ಬಂದಿದೆ. ಅದಕ್ಕೆ ಹೋಂವರ್ಕ್ ಮಾಡಿಲ್ಲ’ ಅಂದಳು. ನಾನು ನರಕದವನು ಅನ್ನಿಸಿತು. ತಕ್ಷಣ ಮೇಡಂ ಒಬ್ಬಾಕೆಯನ್ನು ಕರೆದು, ‘ಆ ಹುಡುಗೀನ ಆಫೀಸ್ ರೂಂಗೆ ಕರಕೊಂಡು ಹೋಗಿ ನೋಡಮ್ಮ. ಅದು ಯಾವ ಸ್ಥಿತಿಯಲ್ಲಿದೆ ಹೇಳು’ ಅಂದೆ.

ಆಗಲಿ ಎಂದ ಆ ಪುಣ್ಯಾತಗಿತ್ತಿ ನೋಡಲೂ ಇಲ್ಲ, ಹೇಳಲೂ ಇಲ್ಲ. ಸಂಜೆ ವೇಳೆಗೆ ಆ ಹುಡುಗಿ ತೀರಾ ಬಳಲಿದ್ದಳು. ನೋವು ಮತ್ತು ಜ್ವರದಿಂದಾಗಿ ಮಧ್ಯಾಹ್ನದ ಊಟವನ್ನೂ ಮಾಡಿರಲಿಲ್ಲ. ಮೇಡಮ್ಮನ ಮೇಲೆ ಬೇಸರ ಮತ್ತು ಸಿಟ್ಟು ಬಂದರೂ ಅಸಹಾಯಕನಾಗಿದ್ದೆ.

ಆ ಹುಡುಗಿಯನ್ನು ಕರೆದು ‘ನಿನಗೆ ಒಪ್ಪಿಗೆ ಇದ್ದರೆ ಆಫೀಸು ರೂಮಿಗೆ ನಡಿ’ ಎಂದೆ. ನೆಲ್ಲಿಕಾಯಿ ಗಾತ್ರದ ರಕ್ತಕುರು! ಕಣ್ಣ ತುಂಬ ಅದೇ ಕುರು. ‘ನೋವನ್ನು ಸಹಿಸುತ್ತೀಯಾ’ ಎಂದೆ. ನರಳಿಕೆಯ ಧ್ವನಿಯಲ್ಲಿ ‘ಊಂ’ ಎಂದಳು. ಅರ್ಧ ಬೊಗಸೆಯಷ್ಟು ಕೀವು ಮಿಶ್ರಿತ ನೆತ್ತರು ಹೊರಚಿಮ್ಮಿತು. ಶುಚಿಗೊಳಿಸಿ ಔಷಧಿ ಹಾಕಿ ಬ್ಯಾಂಡೇಜ್ ಮಾಡಿದೆ. ಅಸಾಧ್ಯ ನೋವಿನಿಂದ ಅವಳ ಬಾಯಿ ಒಣಗಿತ್ತು. ಸುಸ್ತಾಗಿದ್ದಳು. ತಲೆ ಸುತ್ತುತ್ತಿದೆ ಎಂದಳು. ನೆಲ್ಲಿ ಕಾಯಿ ರಸ ನಮ್ಮಲ್ಲಿ ಯಾವಾಗಲೂ ಸಿದ್ಧವಿರುತ್ತಿತ್ತು. ಒಂದು ನೂರು ಎಂ.ಎಲ್‌ನಷ್ಟು ಕುಡಿಸಿದೆ. ಸುಧಾರಿಸಿಕೊಂಡಳು.

ತನ್ನ ಪಾಡಿನಲ್ಲಿದ್ದು, ಮಗಳ ಆರೋಗ್ಯದ ಕಡೆ ಗಮನ ಕೊಡದೆ, ಎರಡು ದಿನ ಕಳೆದಿದ್ದ ಅವಳ ಅಮ್ಮ, ಅಂದು ರಾತ್ರಿ ‘ನಾಳೆ ಆಸ್ಪತ್ರೆಗೆ ಹೋಗೋಣ’ ಎಂದಾಗ ಆ ಹುಡುಗಿ ನಡೆದುದನ್ನೆಲ್ಲ ಹೇಳಿದಳಂತೆ. ಅದಕ್ಕೆ ಆ ತಾಯಿ ‘ನಿನ್ನ ಮೇಷ್ಟ್ರು ನಿನಗೆ ತಂದೆಯಂತಾಗಿಬಿಟ್ಟ ಬಿಡು’ ಅಂದುದಲ್ಲದೆ, ಚಿಕಿತ್ಸೆಗೆ ಪ್ರತಿಫಲವಾಗಿ ಮನೆಗೆ ಎಂದು ಇಟ್ಟುಕೊಂಡಿದ್ದ ಟೊಮೆಟೊವನ್ನು ಶಾಲಾ ಅಡುಗೆಗೆ ಕಳುಹಿಸಿಕೊಟ್ಟಿದ್ದಳು. ಆಕೆ ಏನಾದರೂ ಬೇರೆ ರೀತಿ ಆಲೋಚಿಸಿದ್ದರೆ ನನ್ನ ಪಾಡೇನಾಗುತ್ತಿತ್ತೊ! ಅವಳನ್ನು ಹೊಡೆದದ್ದು, ಅವಳು ಅನುಭವಿಸುತ್ತಿದ್ದ ನೋವು ನನ್ನನ್ನು ಆ ಕ್ಷಣ ಹಾಗೆ ಪ್ರೇರೇಪಿಸಿತ್ತು ಮತ್ತು ನನ್ನಲ್ಲಿ ವೈದ್ಯನೊಬ್ಬನ ಆವಾಹನೆಯಾಗಿತ್ತು.

ರಾತ್ರಿ ನಿದ್ದೆಗೆ ಜಾರುವ ಮೊದಲು, ಆರನೇ ತರಗತಿಯಿಂದ ಮುಂದಿನ ತರಗತಿಗಳಲ್ಲಿನ ಹೆಣ್ಣು ಮಕ್ಕಳಿಗೆ ಚುರುಕಾದ ಹುಡುಗಿಯನ್ನು ಮಾನಿಟರ್ ಮಾಡಬೇಕೆಂದು ಅನ್ನಿಸಿತು. ಯಾರು ಸೂಕ್ತವೆಂದು ಯೋಚಿಸಿದೆ. ಮಾನವೀಯವಾಗಿ ನಡೆದುಕೊಳ್ಳುತ್ತಿದ್ದವರಲ್ಲಿ ವರಲಕ್ಷ್ಮಿಯನ್ನೇ ಆರಿಸಲು ನಿಶ್ಚಯಿಸಿದೆ. ಮರುದಿನದಿಂದಲೇ ಅವಳಿಗೆ ತರಬೇತಿ ಕೊಟ್ಟೆ. ಇದರಿಂದ ಮಕ್ಕಳಿಗಾಗಿ ಇನ್ನೊಬ್ಬರನ್ನು ಆಶ್ರಯಿಸುವಂತಾಗಲಿಲ್ಲ.

–ಸ.ರಘುನಾಥ, ಶ್ರೀನಿವಾಸಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.