ADVERTISEMENT

ನಿರೀಕ್ಷೆಯ ಭಾರ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2017, 19:30 IST
Last Updated 15 ಸೆಪ್ಟೆಂಬರ್ 2017, 19:30 IST
ನಿರೀಕ್ಷೆಯ ಭಾರ
ನಿರೀಕ್ಷೆಯ ಭಾರ   

‘ನಿನಗೆ ಅಂತ ಇನ್ನೂ ಏನೆಲ್ಲಾ ಮಾಡಬೇಕು ಅಂತ ಎಕ್ಸ್‌ಪೆಕ್ಟ್ ಮಾಡ್ತೀ...?
- ಗಂಡಾದರೂ ಸರಿ- ಹೆಣ್ಣಾದರೂ ಸರಿ ಇಂಥ ಮಾತು ಒಮ್ಮೊಮ್ಮೆ ಕೇಳುವುದು ಸಹಜ.

ಈ ವಾಕ್ಯದಲ್ಲಿರುವ ‘ಎಕ್ಸ್‌ಪೆಕ್ಟ್‌’ ಎಂದೇ ಜನಜನಿತವಾಗಿರುವ ಇಂಗ್ಲಿಷ್ ಪದವನ್ನು ಕನ್ನಡದಲ್ಲಿ ನಿರೀಕ್ಷೆ ಎಂದು ಅನುವಾದಿಸಿಕೊಳ್ಳೋಣ. ಯಾರನ್ನಾದರೂ ಇಷ್ಟಪಟ್ಟರೆ, ನಾವು ಇಷ್ಟಪಡುತ್ತಿರುವುದನ್ನು ಅವರು ಒಪ್ಪಿಕೊಂಡರೆ ಆಗ ಶುರುವಾಗುತ್ತೆ ನೋಡಿ ನಿರೀಕ್ಷೆಯ ಭಾರ. ಕೆಲವೊಮ್ಮೆ ಈ ಭಾರ ಹೊರಲಾರದೇ ಸಂಬಂಧಗಳ ಕೊಂಡಿ ಕಳಚುಕೊಳ್ಳುವುದೂ ಇದೆ. ಹಾಗಾಗದಿರಲು ಅನುಸರಿಸಬೇಕಾದ ಒಂದಿಷ್ಟು ಅಂಶಗಳು ಇಲ್ಲಿವೆ.

ಸಂಗಾತಿಯೇ ಸರ್ವಸ್ವ
ಪ್ರೀತಿಯಲ್ಲಿ ಬಿದ್ದವರಿಗೆ ಪ್ರೇಮಿಯೇ ಸರ್ವಸ್ವ. ಅವನನ್ನು/ಅವಳನ್ನು ಬಿಟ್ಟರೆ ಬದುಕು ಶೂನ್ಯ ಎನ್ನುವಂತೆ ಮಾತನಾಡುತ್ತೇವೆ. ಆದರೆ ನೆನಪಿಡಿ, ಸಂಗಾತಿಯೇ ಸರ್ವಸ್ವ ಎಂದರೆ, ನಿಮ್ಮನ್ನೂ ಸೇರಿಸಿದಂತೆ ಪ್ರಪಂಚದ ಎಲ್ಲವೂ, ಎಲ್ಲರೂ ನಗಣ್ಯ ಎಂಬ ಭಾವ ಸೂಸುತ್ತದೆ.

ADVERTISEMENT

ಅತಿ ಮಾತು
ಸಂಬಂಧ ಗಟ್ಟಿಗೊಳಿಸುವುದರಲ್ಲಿ ಮಾತು ಬಹುಮುಖ್ಯ. ಆದರೆ ಒಮ್ಮೆ ಅತಿಮಾತು ರೂಢಿಯಾದರೆ ಅದೇ ಗೀಳಾಗಿಬಿಡುತ್ತದೆ. ಇನ್ನೊಬ್ಬರಿಗೆ ಮಾತು ಕೇಳುವಷ್ಟು ಸಮಯ, ವ್ಯವಧಾನ ಇದೆಯೇ ಎಂದೂ ಯೋಚಿಸುವುದಿಲ್ಲ. ಮಾತು ಅತಿಯಾಗುವುದು ಬೇಡ. ಮಾತು ಮನಸ್ಸು ಮತ್ತು ಸಂಬಂಧವನ್ನೂ ಕೆಡಿಸೀತು.

ಭಾವನೆಗಳ ನಿಯಂತ್ರಣ
ಭಾವನೆಗಳು ಎಲ್ಲರಿಗೂ ಮುಖ್ಯ ಎನಿಸುತ್ತವೆ. ಆದರೆ ನಿಮ್ಮೆಲ್ಲಾ ಭಾವನೆಗಳಿಗೆ ಸಂಗಾತಿ ಸದಾ ಪ್ರಾಧಾನ್ಯ ನೀಡಬೇಕು ಎಂಬ ನಿರೀಕ್ಷೆ ತಪ್ಪು. ನಿಮ್ಮ ಮನಸಿನಲ್ಲಿ ಸುಳಿದಾಡುವ ಎಲ್ಲ ವಿಷಯಗಳನ್ನೂ ಸಂಗಾತಿಯೊಡನೆ ಹೇಳಿಕೊಳ್ಳುವುದೂ

ಸಲ್ಲ. ಎಲ್ಲವನ್ನೂ ಹೇಳಿಕೊಳ್ಳುವ- ಸಣ್ಣಪುಟ್ಟದನ್ನೂ ದೊಡ್ಡದು ಮಾಡುವುದೇ ನಿಮ್ಮ ಸ್ವಭಾವ ಎಂದಾದರೆ, ಪ್ರಾಮುಖ್ಯತೆ ಸಿಗಬೇಕಾದ ಸಂದರ್ಭಗಳಲ್ಲೂ ನಿಮ್ಮ ಸಂಗಾತಿ ಅವನ್ನು ಮಾಮೂಲಿ ಎಂದುಕೊಳ್ಳುವ ಅಪಾಯ ಇದೆ. ಭಾವನೆಗಳನ್ನು ನಿಯಂತ್ರಿಸಿಕೊಳ್ಳುವುದು ಒಳಿತು.

ಯಾರು ಹೊಣೆ
ನಿಮ್ಮೆಲ್ಲಾ ಭಾವನೆಗಳಿಗೆ ನಿಮ್ಮ ಸಂಗಾತಿಯನ್ನೇ ಹೊಣೆಯಾಗಿಸುವುದು ಅಥವಾ ಆತನೇ/ಆಕೆಯೇ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಬೇಕು ಎಂದು ನಿರೀಕ್ಷಿಸುವುದು ಸರಿಯಲ್ಲ. ನಿಮ್ಮ ಸಂಗಾತಿಯು ಸದಾ ನಿಮ್ಮ ಬಗ್ಗೆಯೇ ತಲೆಕೆಡಿಸಿಕೊಳ್ಳಬೇಕು ಎಂಬ ಒತ್ತಡ ಹೇರದಿರಿ. ಅವರ ಸಮಸ್ಯೆ ಪರಿಹರಿಸಿಕೊಳ್ಳುವುದರತ್ತಲೂ ಅವರು ಯೋಚಿಸಲು ಅವಕಾಶ ಮಾಡಿಕೊಡಿ.

ಖುಷಿಗೆ ಹೆಚ್ಚಿನ ಒತ್ತು ಕೊಡಿ
ಪ್ರೇಮಿಗಳು, ದಂಪತಿ ನಡುವೆ ಮಾತು ಸದಾ ಮುಕ್ತವಾಗಿರಬೇಕು. ಹಾಗೆಂದು ಸದಾ ಸಮಸ್ಯೆ, ಒತ್ತಡ, ಚಿಂತೆ, ತಳಮಳಗಳ ಬಗ್ಗೆಯೇ ಮಾತನಾಡಿಕೊಳ್ಳದಿರಿ. ಖುಷಿಯ ವಿಷಯಗಳನ್ನೇ ಹೆಚ್ಚು ಹಂಚಿಕೊಳ್ಳಿ. ಸಾಧ್ಯವಾದಷ್ಟೂ ಸಂಗಾತಿಯ ಸಹಾಯಕ್ಕೆ ನಿಲ್ಲಿ. ಜೊತೆಗೇ ಕೆಲಸ ಮಾಡಿ. ಪರಸ್ಪರ ಬೆಂಬಲಿಸುತ್ತ ಸಕಾರಾತ್ಮಕ ವಿಷಯಗಳನ್ನೇ ಮಾತನಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.