ADVERTISEMENT

ನೋಡಿ ಸ್ವಾಮಿ ನಾವಿರೋದೆ ಹೀಗೆ

ವಿದ್ಯಾಶ್ರೀ ಎಸ್.
Published 13 ಆಗಸ್ಟ್ 2017, 19:30 IST
Last Updated 13 ಆಗಸ್ಟ್ 2017, 19:30 IST
ನೋಡಿ ಸ್ವಾಮಿ ನಾವಿರೋದೆ ಹೀಗೆ
ನೋಡಿ ಸ್ವಾಮಿ ನಾವಿರೋದೆ ಹೀಗೆ   

ಮಿಸ್ಟರ್‌ ಅಂಡ್‌ ಮಿಸೆಸ್‌ ರಾಮಾಚಾರಿ’ ಸಿನಿಮಾದಲ್ಲಿ ಈ ಅವಳಿ ಸಹೋದರಿಯರ ಜೋಡಿ ಭರ್ಜರಿ ಮೋಡಿಯನ್ನೇ ಮಾಡಿತ್ತು. ನೋಡಲು ಮಾತ್ರವಲ್ಲ, ಧ್ವನಿ, ಸ್ವಭಾವದಲ್ಲಿಯೂ ಹೋಲಿಕೆ ಇರುವ ಅದ್ವಿತಿ, ಅಶ್ವಿತಿ ಹಲವು ರಿಯಾಲಿಟಿ ಶೋಗಳಲ್ಲಿಯೂ ಚಮಕ್‌ ತೋರಿಸಿದ್ದಾರೆ. ಕಾಲೇಜು, ಚಿತ್ರೀಕರಣ ಸ್ಥಳದಲ್ಲಿ ಕೊನೆಗೆ ಮನೆಯವರಿಗೂ ಅದ್ವಿತಿ ಯಾರು, ಅಶ್ವಿತಿ ಯಾರು ಎಂದು ಗುರುತು ಹಿಡಿಯುವುದು ಕಷ್ಟ. ಇದನ್ನೇ ಪ್ಲಸ್‌ಪಾಯಿಂಟ್‌ ಮಾಡಿಕೊಂಡಿರುವ ಇವರು, ಸಾಕಷ್ಟು ಕಿತಾಪತಿಗಳನ್ನೂ ಮಾಡಿದ್ದಾರೆ.

* ಇಬ್ಬರೂ ಈಗ ಏನು ಮಾಡುತ್ತಿದ್ದೀರಿ?

ಅದ್ವಿತಿ: ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ‘ಎರಡು ಕನಸು’ ಧಾರಾವಾಹಿಯಲ್ಲಿ ನಟಿಸುತ್ತಿದ್ದೇನೆ. ‘ಗಿರಿಗಿಟ್ಲೆ’ ಸಿನಿಮಾದಲ್ಲಿ ನಟಿಸಿದ್ದೇನೆ. ಈ ಸಿನಿಮಾ ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ.

ADVERTISEMENT

ಅಶ್ವಿತಿ: ಸದ್ಯಕ್ಕೆ ಬಿಡುವು ತೆಗೆದುಕೊಂಡಿದ್ದೇನೆ.

* ಒಂದೇ ಥರ ಇರುವ ಕಾರಣ ಎಷ್ಟು ಜನರಿಗೆ ಚಳ್ಳೇಹಣ್ಣು ತಿನ್ನಿಸಿದ್ದೀರಿ?

ನಾವು ಏನೂ ಮಾಡುವ ಅಗತ್ಯವೇ ಇಲ್ಲ. ನೋಡಿದವರೇ ಗೊಂದಲ ಮಾಡಿಕೊಳ್ಳುತ್ತಾರೆ. ಕಾಲೇಜಿನಲ್ಲಿದ್ದಾಗ ಈ ರೀತಿಯ ಅನುಭವ ತುಂಬಾ ಆಗಿದೆ. ನಾವಿಬ್ಬರೂ ಒಂದೇ ಕ್ಲಾಸ್‌ ಆದರೂ, ವಿಭಾಗ ಬೇರೆ ಇತ್ತು. ನಾನು (ಅದ್ವಿತಿ) ತರಗತಿಯಲ್ಲಿ ನಿದ್ದೆ ಮಾಡಿದರೆ ಪಾಪ, ನನ್ನ ತಂಗಿ (ಅಶ್ವಿತಿ) ಬೈಸಿಕೊಳ್ಳುತ್ತಿದ್ದಳು. ಅಧ್ಯಾಪಕರೂ ಹೊರಗೆ ಸಿಕ್ಕಾಗ ‘ಕ್ಲಾಸಿನಲ್ಲಿ ನೀನು ತುಂಬಾ ನಿದ್ದೆ ಮಾಡುತ್ತೀಯಾ’ ಎನ್ನುತ್ತಿದ್ದರು.

* ಮನೆಯವರೂ ಅಶ್ವಿತಿ, ಅದ್ವಿತಿ ಯಾರು ಅನ್ನುವುದನ್ನು ಹೇಗೆ ಗುರುತಿಸುತ್ತಾರೆ?

ಅಯ್ಯೋ ಅವರ ಪಜೀತಿ ಹೇಳಕ್ಕೇ ಆಗೊಲ್ಲ. ನಮ್ಮ, ಅಪ್ಪ, ಅಮ್ಮನಿಗೂ ನಮ್ಮಿಬ್ಬರ ನಡುವೆ ವ್ಯತ್ಯಾಸ ಗುರುತಿಸುವುದು ಕಷ್ಟ. ಎಷ್ಟೋ ಸಲ ಅಶ್ವಿತಿ ಎಂದು ಕರೆದಾಗ, ನಾನು (ಅದ್ವಿತಿ) ಹೋದರೆ, ಆಗಲೇ ಕರೆದೆ ಈಗ ಬಂದ್ಯಾ ಎನ್ನುತ್ತಾರೆ. ಅಮ್ಮ ಅದ್ವಿತಿಗೆ ಫೋನ್‌ ಮಾಡಿದಾಗ ನಾನು (ಅಶ್ವಿತಿ) ಮಾತನಾಡಿ, ಅವರನ್ನು ಗೊಂದಲ ಮಾಡಿದ್ದೂ ಇದೆ. ಅಜ್ಜಿ, ಅತ್ತೆಯರೆಲ್ಲ ಚಿಕ್ಕವರಿಂದ ನಿಮ್ಮನ್ನು ದಿನಾ ನೋಡ್ತಿದ್ದರೂ, ವ್ಯತ್ಯಾಸ ಗುರುತಿಸುವುದು ಸಾಧ್ಯವಾಗಿಲ್ವಲ್ಲ ಎಂದು ಪೇಚಾಡುತ್ತಾರೆ.‌ ಇಬ್ಬರ ಧ್ವನಿ ಒಂದೇ ರೀತಿ ಇರುವ ಕಾರಣ ಯಾರನ್ನಾದರೂ ಸುಲಭವಾಗಿ ಗೊಂದಲಕ್ಕೀಡು ಮಾಡಬಹುದು.

* ಹಾಗಾದರೆ ನಿಮ್ಮಿಬ್ಬರ ವ್ಯತ್ಯಾಸವನ್ನು ಗುರುತಿಸುವುದಾದರೂ ಹೇಗೆ?

ಮೊದಲೆಲ್ಲ ಥೇಟ್‌ ಒಂದೇ ತರಹ ಇದ್ವಿ. ಆದರೆ ಈಗ ಜನರಿಗೆ ಗೊತ್ತಾಗಲಿ ಅಂತ ಸ್ವಲ್ಪ ಬದಲಾಗಿದ್ದೇವೆ. ಕೇಶ ವಿನ್ಯಾಸ ಬೇರೆ ಮಾಡಿಕೊಂಡಿದ್ದೇವೆ. ನನಗೆ (ಅದ್ವಿತಿ) ಕೆನ್ನೆಯ ಮೇಲೆ ಮಚ್ಚೆ ಇದೆ. ಅಶ್ವಿತಿಗೆ ತುಟಿಯ ಮೇಲೆ ಮಚ್ಚೆ ಇದೆ. ಇಬ್ಬರೂ ಅದನ್ನು ಹೈಲೆಟ್‌ ಮಾಡಿಕೊಂಡಿದ್ದೇವೆ.

* ಇಬ್ಬರ ಸ್ವಭಾವದಲ್ಲಿ ಎಷ್ಟು ಸಾಮ್ಯತೆ ಇದೆ?

ಹಲವು ಸಲ ಇಬ್ಬರೂ ಒಂದೇ ರೀತಿ ಯೋಚಿಸುತ್ತೇವೆ. ಕೆಲವೊಮ್ಮೆ ಇಬ್ಬರಿಗೂ ಆಶ್ಚರ್ಯವಾಗುತ್ತದೆ. ಒಮ್ಮೆ ಡಾನ್ಸ್‌ ಕರ್ನಾಟಕ ಡಾನ್ಸ್‌ ರಿಯಾಲಿಟಿ ಷೋನಲ್ಲಿ ಕೋರಿಯೊಗ್ರಫರ್‌ ಹೇಳಿಕೊಟ್ಟ ಸ್ಟೆಪ್‌ ಮರೆತು ಬೇರೆ ಸ್ಟೆಪ್‌ ಹಾಕಿದ್ದೆವು. ನಮ್ಮ ಸಿಕ್ತ್ ಸೆನ್ಸ್‌ ಹೇಗೆ ಕೆಲಸ ಮಾಡಿತ್ತು ಎಂದರೆ, ನಾವಿಬ್ಬರೂ ಯಾವುದೇ ಯೋಜನೆ ಇಲ್ಲದೇ ಒಂದೇ ರೀತಿಯ ಸ್ಟೆಪ್‌ ಹಾಕಿದ್ದೆವು. ಮನೆಯಲ್ಲಿಯೂ ಕೆಲವೊಮ್ಮೆ ಒಂದೇ ವಿಷಯವನ್ನು ಒಟ್ಟಿಗೆ ಮಾತನಾಡಲು ಆರಂಭಿಸುತ್ತೇವೆ. ನಂತರ ಒಬ್ಬರ ಮುಖ ನೋಡಿ, ಇನ್ನೊಬ್ಬರು ನಗುತ್ತೇವೆ. ಹಾಗಿದೆ ನಮ್ಮಿಬ್ಬರ ಬಾಂಡಿಂಗ್‌.  

* ಇಬ್ಬರ ಆಸಕ್ತಿಯೂ ಒಂದೇ ಇದ್ದ ಹಾಗಿದೆ?

ಹೌದು. ನಮ್ಮಿಬ್ಬರ ಆಸಕ್ತಿ ಒಂದೇ ರೀತಿಯಾಗಿದೆ. ಇಬ್ಬರೂ ಎಂಬಿಎ ಮಾಡಿದ್ದೇವೆ. ಐದು ರಿಯಾಲಿಟಿ ಷೋ, ನಟನೆ, ನೃತ್ಯ ಹೀಗೆ ಎಲ್ಲವೂ ಒಟ್ಟಿಗೆ ಮಾಡಿದ್ದೇವೆ. ಇಬ್ಬರೂ ಶಾಸ್ತ್ರೀಯ ನೃತ್ಯವನ್ನು ಕಲಿತಿದ್ದೇವೆ. 55 ಡಾನ್ಸ್‌ ಷೋ ನೀಡಿದ್ದೇವೆ. ಹಿಂದಿಯ ಕಲರ್ಸ್‌ ವಾಹಿನಿಯ ಇಂಡಿಯಾ ಗಾಟ್‌ ಟಾಲೆಂಟ್‌ನಲ್ಲಿಯೂ ಭಾಗಿಯಾಗಿದ್ದೆವು. ಮಣಿಪಾಲ ವಿಶ್ವವಿದ್ಯಾಲಯದಲ್ಲಿ ‘ಇಬ್ಬರಿಗೂ ಬೆಸ್ಟ್‌ ಅಥ್ಲೆಟಿಕ್ಸ್‌’ ಪ್ರಶಸ್ತಿಯೂ ಸಿಕ್ಕಿದೆ.

* ಇಬ್ಬರೂ ಒಂದೇ ಮನೆಗೆ ಸೊಸೆಯಾಗಿ ಹೋಗುವ ಆಸೆಯಿದೆಯಾ?

ಹ್ಹಹ್ಹಹ್ಹ... ಇಲ್ಲಿಯವರೆಗೂ ಆ ಯೋಚನೆ ಬಂದಿಲ್ಲ.

* ಒಬ್ಬರಿಗೆ ಸಿಗಬೇಕಿದ್ದ ಪ್ರೇಮಪತ್ರ ಇನ್ನೊಬ್ಬರಿಗೆ ಸಿಕ್ಕಿದ್ದು ಇದೆಯಾ?

ಹಾಗೇನೂ ಆಗಿಲ್ಲ. ಆದರೆ ಇಬ್ಬರೂ ಜೊತೆಗೆ ಮಾಡೆಲಿಂಗ್‌ ಕ್ಷೇತ್ರ ಪ್ರವೇಶಿಸಿದೆವು. ಆಗ ನನಗೆ (ಅದ್ವಿತಿ) ಮಿಸ್‌ ಬ್ಯೂಟಿಫುಲ್‌ ಹೇರ್‌ ಗರಿಮೆ ಸಿಕ್ಕಿತ್ತು. ನನಗೆ ಹೇಳಬೇಕಿದ್ದ ಶುಭಾಶಯಗಳನ್ನೆಲ್ಲ ಅಶ್ವಿತಿಗೆ ಕಳುಹಿಸುತ್ತಿದ್ದರು. ಅವಳಿಗೆ ‘ನಾನವಳಲ್ಲ’ ಎಂದು ಉತ್ತರಿಸಿ ಉತ್ತರಿಸಿ ಸಾಕಾಗಿ ಹೋಗಿತ್ತು ಪಾಪ.

* ಕಾಲೇಜಿನಲ್ಲಿ ಕಿತಾಪತಿ ಮಾಡ್ತಿದ್ರಾ?

ತುಂಬಾ ಮಾಡಿಲ್ಲ. ಸ್ನೇಹಿತರೆಲ್ಲ ‘ಏನ್ರೇ ನೀವು ದಂಡ ಕಣ್ರೇ’ ಎನ್ನುತ್ತಿದ್ದರು. ಒಮ್ಮೆ ಎಂಬಿಎ ಮಾಡಬೇಕಾದರೆ ಪ್ರಾಜೆಕ್ಟ್‌ ಕೊಡಬೇಕಿತ್ತು. ಆದರೆ ನನಗೆ ಹೋಗಲು ಆಗಲಿಲ್ಲ. ಆಗ ತಂಗಿ (ಅಶ್ವಿತಿ) ಕೊಟ್ಟಿದ್ದಳು. ನಾವು ತೆಗೆದುಕೊಂಡ ದೊಡ್ಡ ರಿಸ್ಕ್‌ ಅದೇ. ನನ್ನ (ಅದ್ವಿತಿ) ಬಳಿ ಡ್ರೈವಿಂಗ್‌ ಲೈಸೆನ್ಸ್‌ ಇತ್ತು. ಆದರೆ ಅಶ್ವಿತಿ ಬಳಿ ಇರಲಿಲ್ಲ. ಅವಳಿಗೆ ಡ್ರೈವಿಂಗ್‌ ಮಾಡೋ ಆಸೆ. ಅದಕ್ಕಾಗಿ ಕೆಲವೊಮ್ಮೆ ನನ್ನ ಲೈಸೆನ್ಸ್‌ ಬಳಸಿಕೊಂಡಿದ್ದೂ ಇದೆ.

* ಇಬ್ಬರ ಮೊದಲ ಕ್ರಷ್‌ ಯಾರು?

ಹೃತಿಕ್‌ ರೋಷನ್‌. ನಮ್ಮಿಬ್ಬರ ರೂಮ್‌ ತುಂಬಾ ಹೃತಿಕ್‌ ಫೋಟೊ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.