ADVERTISEMENT

ಪಾತ್ರದಲ್ಲಿ ತಲ್ಲೀನಳಾಗುವೆ

ಅನಿತಾ ಎಚ್.
Published 29 ಜುಲೈ 2016, 19:30 IST
Last Updated 29 ಜುಲೈ 2016, 19:30 IST
ಪಾತ್ರದಲ್ಲಿ ತಲ್ಲೀನಳಾಗುವೆ
ಪಾತ್ರದಲ್ಲಿ ತಲ್ಲೀನಳಾಗುವೆ   

ಬಾಲ್ಯವಿವಾಹ ಕಥಾವಸ್ತು ಆಧಾರಿತ ಧಾರಾವಾಹಿ ‘ಪುಟ್ಟಗೌರಿ ಮದುವೆ’ ಸಾಕಷ್ಟು ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಂಡಿದೆ. ಧಾರಾವಾಹಿ ಆರಂಭವಾಗಿ ಮೂರೂವರೆ ವರ್ಷಗಳಾದರೂ, ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಜೋಕ್‌ಗಳು ಹರಿದಾಡುತ್ತಿವೆ.

ಈ ಜೋಕ್‌ಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸುವುದಾಗಿ ಹೇಳುತ್ತಾರೆ ಧಾರಾವಾಹಿಯ ನಾಯಕಿ ನಟಿ ರಂಜನಿ ರಾಘವನ್‌ (ಗೌರಿ). ಧಾರಾವಾಹಿಯನ್ನು ಮುಗಿಸುವುದು ನಿಮಗಿಷ್ಟವೇ? ಎಂಬ ಪ್ರಶ್ನೆಯನ್ನೂ ಅವರು ಮುಂದಿಡುತ್ತಾರೆ.

ಎಂ.ಬಿಎ ಪದವೀಧರೆಯಾಗಿರುವ ರಂಜನಿ ತಂದೆ ಬಿಇಎಲ್‌ ಉದ್ಯೋಗಿ. ತಾಯಿ ಗೃಹಿಣಿ. ಆಕಾಶದೀಪ ಎಂಬ ಧಾರಾವಾಹಿಯಲ್ಲಿ ನಟಿಸಿದ್ದರಾದರೂ, ಹೆಚ್ಚು ಖ್ಯಾತಿ ತಂದುಕೊಟ್ಟದ್ದು ‘ಪುಟ್ಟಗೌರಿ ಮದುವೆ’. ಕರ್ನಾಟಕ ಸಂಗೀತವನ್ನೂ ಅಭ್ಯಸಿಸಿರುವ ಅವರು ಉತ್ತಮ ಗಾಯಕಿಯೂ ಹೌದು. ಅಭಿನಯದ ಜೊತೆಗೆ ಪಿಎಚ್‌.ಡಿ ಮಾಡುವ, ಪ್ರೊಫೆಸರ್‌ ಆಗಬೇಕೆನ್ನುವ ಕನಸು ಕಟ್ಟಿಕೊಂಡಿರುವ ರಂಜನಿ, ಅವರನ್ನು ಕಿಚಾಯಿಸುವ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

* ಧಾರಾವಾಹಿಯನ್ನು ಎಳೆಯುತ್ತಿರುವ ಬಗ್ಗೆ ಜೋಕ್‌ಗಳು ಹರಡಿವೆಯಲ್ಲ?
ಸಾಮಾನ್ಯವಾಗಿ ಗೃಹಿಣಿಯರು, ಮಕ್ಕಳು ಅಥವಾ ಬಿಡುವಿರುವವರು ಧಾರಾವಾಹಿಯನ್ನು ನೋಡುತ್ತಾರೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಜೋಕ್‌ಗಳು ಹರಿದಾಡುತ್ತಿವೆಯೆಂದರೆ ಅದು ಧಾರಾವಾಹಿಯ ಜನಪ್ರಿಯತೆ ಎಷ್ಟಿದೆ ಎಂಬುದನ್ನು ಸೂಚಿಸುತ್ತದೆ. ನಾನಿದನ್ನು ಸಕಾರಾತ್ಮಕವಾಗಿ ಸ್ವೀಕಸುತ್ತೇನೆ. ಯಾವುದೇ ಧಾರಾವಾಹಿ ನಂ.1 ಸ್ಥಾನದಲ್ಲಿ ನಿಲ್ಲಬೇಕೆಂದರೆ ಅಷ್ಟು ಸುಲಭವಲ್ಲ. ಯಾವ ಧಾರಾವಾಹಿಗಳಲ್ಲಿಯೂ ಇರದಷ್ಟು ಮಾತು ನಮ್ಮ ಧಾರಾವಾಹಿಯಲ್ಲಿ ಇದೆ.

* ನಿಜ ಜೀವನದಲ್ಲಿ ಮಹೇಶನಂಥ ಗಂಡ ಸಿಕ್ಕರೆ ಹೇಗೆ ನಿಭಾಯಿಸುತ್ತೀರಾ?
ತುಂಬಾ ಹುಷಾರಾಗಿ ಆಯ್ಕೆ ಮಾಡುತ್ತೇನೆ. ಹಂಗೂ ಒಂದು ವೇಳೆ ಸಮಸ್ಯೆ ಎದುರಾದರೆ ಧೈರ್ಯದಿಂದ ಎದುರಿಸುತ್ತೇನೆ. ಧಾರಾವಾಹಿಯಲ್ಲಿ ನನ್ನದು ಬಾಲ್ಯವಿವಾಹ. ಏನೂ ತಿಳಿಯದ ವಯಸ್ಸಿನಲ್ಲಿಯೇ ಮದುವೆ ಮಾಡಿದರು. ಆದರೂ ನಾನೇನೂ ಸುಮ್ಮನೆ ಕೂತಿಲ್ಲ. ಗಂಡನನ್ನು ಉಳಿಸಿಕೊಳ್ಳಲು ಸತತ ಹೋರಾಟ ನಡೆಸುತ್ತಲೇ ಬಂದಿದ್ದೇನೆ.

* ಮಾತು ಮಾತಿಗೂ ಅಳುತ್ತೀರಿ. ನೀವು ಸ್ವಭಾವತಃ ಅಳುಮೂಂಜಿನಾ?
ಖಂಡಿತಾ ಇಲ್ಲ. ನಾನು ತುಂಬಾ ಗಟ್ಟಿ. ಆದರೆ ಪಾತ್ರದ ಕೆಲವೊಂದು ಸಂದರ್ಭಗಳಲ್ಲಿ ಅಳುವುದು ಅನಿವಾರ್ಯ. ಶೂಟಿಂಗ್‌ ವೇಳೆ ಅಳುವ ದೃಶ್ಯವಿದೆ ಎಂದಾಗ ಅಯ್ಯೋ ಅಳಬೇಕಲ್ಲ ಅನಿಸುತ್ತೆ. ಪಾತ್ರಕ್ಕೆ ನ್ಯಾಯ ಒದಗಿಸಲೇಬೇಕು. ಮಹೇಶನಿಗಾಗಿ ಅಳುವುದರ ಜೊತೆ ಹಿಮಾಳ ತಂದೆ ಮತ್ತು ಅತ್ತೆಯರಿಗೆ ಏಟಿಗೆ–ಎದಿರೇಟು ನೀಡಿದ್ದೇನೆ.

* ಸಂಪ್ರದಾಯ ಕುಟುಂಬದಲ್ಲಿ ಪತ್ನಿ ಪತಿಯ ಹೆಸರು ಹೇಳಲ್ಲ. ಆದರೆ ನೀವು ಹೇಳುತ್ತೀರಲ್ಲ?
ಇಲ್ಲಿ ನನ್ನದು ಬಾಲ್ಯವಿವಾಹ. ಮಹೇಶ ನಾನು ಜೊತೆಯಾಗಿ ಆಡಿ ಬೆಳೆದವರು. ಅವನೀಗ ನನ್ನ ಗಂಡ ಎಂದ ಮಾತ್ರಕ್ಕೆ ಬನ್ನಿ ಹೋಗಿ ಎಂದು ಕರೆಯಲು ಹೇಗೆ ಸಾಧ್ಯ. ನಾವಿಬ್ಬರು ಗಂಡ ಹೆಂಡತಿ ಆಗುವುದಕ್ಕೆ ಮೊದಲು ಸ್ನೇಹಿತರು. ಜೀವನದಲ್ಲಿಯೂ ಸಾಮಾನ್ಯವಾಗಿ ಸೋದರ ಸಂಬಂಧಿಯೊಡನೆ ಇಲ್ಲವೇ ಪರಿಚಿತರೊಂದಿಗೆ ಮದುವೆಯಾದಾಗಲೂ ಬನ್ನಿ ಹೋಗಿ ಎಂದು ಕರೆಯಲು ಆಗುವುದಿಲ್ಲ. ಅಜ್ಜಮ್ಮ ನನಗೆ ಏಕವಚನದಲ್ಲಿ ಮಾತಾಡಬೇಡ, ಹೆಸರಿಟ್ಟು ಕರೆಯಬೇಡ ಅಂತ ಬುದ್ಧಿವಾದ ಹೇಳುತ್ತಿರುತ್ತಾರೆ. ಆದರೂ ನಾನು ಮಾತ್ರ ಅಜ್ಜಮ್ಮನ ಕಣ್ಣು ತಪ್ಪಿಸಿ ಮಹೇಶ ಅಂತಾನೇ ಕರೆಯುತ್ತೇನೆ.

* ಮನೆಯಲ್ಲಿ ನಿತ್ಯವೂ ಬೆಲಬಾಳುವ ಸೀರೆ, ಒಡವೆ ಹಾಕಿಕೊಂಡಿರುತ್ತೀರಿ ಸೆಕೆ ಆಗಲ್ವಾ?
ರಾಯದುರ್ಗದಲ್ಲಿ ನಮ್ಮದು ದೊಡ್ಡ ಅರಮನೆ. ಯಥೇಚ್ಛವಾಗಿ ಗಾಳಿ ಬೀಸುತ್ತೆ. ಹವಾನಿಯಂತ್ರಣ ಸಾಧನಗಳಿರುವಾಗ ಸೆಕೆ ಎನ್ನುವ ಮಾತೇ ಇಲ್ಲ. ರಾಜ–ಮಹಾರಾಜರ ಕಾಲದಲ್ಲಿ ರಾಣಿಯರೂ ಹೀಗೇ ಇರುತ್ತಿದ್ದರು. ಅವರೆಲ್ಲ ಸೆಕೆ ಎನ್ನುತ್ತಿದ್ದರೇ?. ಅಜ್ಜಮ್ಮನಿಗೆ ಮನೆಯ ಹೆಣ್ಣಮಕ್ಕಳು ರಾಣಿಯರಂತೆ ಕಂಗೊಳಿಸಬೇಕೆಂದು ಇಷ್ಟ. ಹಾಗಾಗಿ ಅವರಿಷ್ಟಕ್ಕೆ ತಕ್ಕಂತೆ ನಾನು ನಡೆದುಕೊಳ್ಳುತ್ತಿದ್ದೇನೆ.

* ಧಾರಾವಾಹಿಯಲ್ಲಿ ಗರ್ಭಿಣಿಯಾಗಿ ತುಂಬಾ ದಿವಸವಾಯಿತು. ಹೆರಿಗೆ ಯಾವಾಗ?
ಒಂದು ಹಾಡಿನಲ್ಲಿ ಮದುವೆ, ಮಕ್ಕಳು ಎಲ್ಲ ತೋರಿಸಿಬಿಡಬಹುದು. ಹಾಗೆಯೇ ಇಡೀ ಜೀವನದ ಕಥೆ ಮೂರು ಗಂಟೆ ಸಿನಿಮಾದಲ್ಲಿ ಮುಗಿದುಹೋಗುತ್ತದೆ. ಮಹೇಶ ಮತ್ತು ನನ್ನ ನಡುವಿನ ಸಂಬಂಧಕ್ಕೆ ಕೊಂಡಿ ಈ ಮಗು ಎಂದ ಮೇಲೆ ಹೆರಿಗೆ ಆಗಲೇಬೇಕು ಅಲ್ವಾ?

* ಶೂಟಿಂಗ್‌ ಸಂದರ್ಭದ ಅನುಭವ?
ಕಳೆದ ಎರಡೂವರೆ ವರ್ಷದಿಂದ ಈ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದೇನೆ. ಎಲ್ಲರ ನಡುವೆ ಉತ್ತಮ ಬಾಂಧವ್ಯವಿದೆ. ಗೌರಿ ಪಾತ್ರದ ವೇಷ ತೊಟ್ಟ ಕ್ಷಣ ಅದರಲ್ಲಿ ತಲ್ಲೀನಳಾಗಿಬಿಡುತ್ತೇನೆ. ನಟಿಸುತ್ತಿದ್ದೇನೆ ಎನಿಸುವುದೇ ಇಲ್ಲ. ಜೀವನದಲ್ಲಿಯೇ ಇಂಥಹದೊಂದು ಘಟನೆ ಘಟಿಸಿದೆಯೇನೋ ಎನ್ನುವ ರೀತಿಯಲ್ಲಿ ಎಲ್ಲರೂ ಸಹಜವಾಗಿ ಅಭಿನಯಿಸುತ್ತೇವೆ. ಎಲ್ಲರೂ ಒಂದೇ ಕುಟುಂಬದವರಂತೆ ಇದ್ದೇವೆ.

* ಮುಂದಿನ ಯೋಜನೆ?
ಸದ್ಯ ಚಲನಚಿತ್ರವೊಂದರಲ್ಲಿ ಅಭಿನಯಿಸಿದ್ದೇನೆ. ಚಿತ್ರೀಕರಣವೂ ಮುಗಿದಿದೆ. ಕಿರುತೆರೆ ಮತ್ತು ಹಿರಿತೆರೆ ಈ ಎರಡನ್ನೂ ನಾನು ಸಮಾನವಾಗಿ ಕಾಣುತ್ತೇನೆ. ಉತ್ತಮ ಕಥೆ ಮತ್ತು ಪಾತ್ರ ಇವೆರಡು ಮಾತ್ರ ಮುಖ್ಯ. ಇಷ್ಟು ಕಡಿಮೆ ಅವಧಿಯಲ್ಲಿ ವೀಕ್ಷಕರು ನನಗೆ ಸ್ಟಾರ್‌ ಪಟ್ಟ ತಂದುಕೊಟ್ಟಿದ್ದಕ್ಕೆ, ಪ್ರೋತ್ಸಾಹಿಸಿದ್ದಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.