ADVERTISEMENT

ಫುಟ್‌ಬಾಲ್‌ ಆಟವಾಡಲು ಪೀಲೆ, ಮರಡೋನಾ ಆಗಿರಲೇಬೇಕಾ?

ರಾಹುಲ ಬೆಳಗಲಿ
Published 19 ಏಪ್ರಿಲ್ 2015, 19:30 IST
Last Updated 19 ಏಪ್ರಿಲ್ 2015, 19:30 IST

ಜೀವನದಲ್ಲಿ ಎಷ್ಟೇ ಖಿನ್ನತೆ ಆವರಿಸಿಕೊಂಡಿರಲಿ ಮತ್ತು ಓಡಾಡಲು ಆಗದಷ್ಟು ಅನಾರೋಗ್ಯವೇ ಕಾಡುತ್ತಿರಲಿ. ಅದ್ಯಾವುದನ್ನೂ ಅವರು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಇನ್ನೂ ನೇರವಾಗಿ ಹೇಳುವುದಾದರೆ, ‘ಆಕಾಶವು ಬೀಳಲಿ ಮೇಲೆ, ಭೂಮಿಯು ಬಾಯಿ ಬಿಡಲಿ ಇಲ್ಲೇ’ ಎಂಬ ಹಾಡಿನ ಸಾಲಿನಂತೆ ಅವರು ನಸುಕಿನಲ್ಲಿ 5.30 ಆಗುತ್ತಿದ್ದಂತೆಯೇ ಮೈದಾನಕ್ಕೆ ಹಾಜರಿರುತ್ತಾರೆ. ಅವರೆಲ್ಲರಿಗೂ ಇರುವ ಏಕೈಕ ಗುರಿ: ಫುಟ್‌ಬಾಲ್‌ ಆಡಬೇಕು!

ಹಾಗಂತ ಅವರಲ್ಲಿರುವ ಹೆಚ್ಚಿನ ಜನರು 30 ರಿಂದ 40ರ ಹರೆಯದವರಲ್ಲ. ಅವರಲ್ಲಿರುವ ಬಹುತೇಕ ಮಂದಿಯ ವಯಸ್ಸು 50 ರಿಂದ 80ರ ಆಸುಪಾಸಿನಲ್ಲಿದೆ. ಅವರಿಗೆ ಇರುವ ಏಕೈಕ ಆಸಕ್ತಿ ಮತ್ತು ಉದ್ದೇಶ: ಫುಟ್‌ಬಾಲ್ ಆಡಬೇಕು. ನೀವು ಇದನ್ನೇ ಯಾಕೆ ಆಡುತ್ತೀರಿ ಎಂದು ತಮಾಷೆಯಿಂದ ಕೇಳಲು ಯತ್ನಿಸಿದರೆ, ನಗುವಿನ ಜೊತೆ ಅವರಿಂದ ಚುಟುಕಾಗಿ ವ್ಯಕ್ತವಾಗುವ ಪ್ರಶ್ನೆ: ಫುಟ್‌ಬಾಲ್‌ ಆಡಲಿಕ್ಕೆ ಪೀಲೆ, ಮೆರಡೋನಾ ಆಗಿರಲೇಬೇಕಾ?

ಅವರ ಬಗ್ಗೆ ಇನ್ನಷ್ಟು ವಿಷಯಗಳನ್ನು ಕೆದಕುವುದು ಮುಂದುವರೆಸಿದಾಗ, ಒಂದೊಂದೇ ಅಂಶಗಳು ಬೆಳಕಿಗೆ ಬರತೊಡಗಿದವು. ಫುಟ್‌ಬಾಲ್‌ ಆಡಲು ಆರಂಭಿಸಿದ  ದಿನಗಳನ್ನು ಲೆಕ್ಕಾಚಾರ ಹಾಕತೊಡಗಿದ ಅವರ ಸ್ಮೃತಿಪಟಲ ನಿಂತಿದ್ದು 1983ಕ್ಕೆ. ‘ಸರ್‌ ಎಂ.ವಿಶ್ವೇಶ್ವರಯ್ಯ ಫುಟ್‌ಬಾಲ್‌ ಅಸೋಸಿಯೇಷನ್’ ಎಂಬ ಹೆಸರಿನಲ್ಲಿ  ಸಂಘ ಹುಟ್ಟು ಹಾಕಿ 32 ವರ್ಷಗಳಾದವು. ಒಂದು ದಿನವೂ ಫುಟ್‌ಬಾಲ್‌ ಆಡುವುದು ನಿಲ್ಲಿಸಿಲ್ಲ’ ಎಂದು ಸಂಘದ ಸದಸ್ಯರು ಹೆಮ್ಮೆಯಿಂದ ಹೇಳುತ್ತಾರೆ.

ಚಿಕ್ಕಬಳ್ಳಾಪುರದ ಫುಟ್‌ಬಾಲ್‌ ಪಟುಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ತಂಡಗಳನ್ನು ಪ್ರತಿನಿಧಿಸಿದ್ದಾರೆ.
1969ಕ್ಕೂ ಮುನ್ನ ಇಲ್ಲಿ ಕ್ಲಬ್‌ಗಳ ನಡುವೆ ಅಂತರ್‌ರಾಜ್ಯ ಮಟ್ಟದ ಫುಟ್‌ಬಾಲ್‌ ಪಂದ್ಯಾವಳಿ ನಡೆಯುತ್ತಿದ್ದವು. ಇಲ್ಲಿನ ಮೆರ್ಚಂಟ್ಸ್‌ ಫುಟ್‌ಬಾಲ್‌ ಕ್ಲಬ್‌, ಡೈನಾಮಿಕ್‌ ಫುಟ್‌ಬಾಲ್‌ ಕ್ಲಬ್‌, ಪ್ರೆಸಿಡೆನ್ಸಿ ಫುಟ್‌ಬಾಲ್‌ ಕ್ಲಬ್‌, ಜೈಭೀಮ ಫುಟ್‌ಬಾಲ್‌ ಕ್ಲಬ್‌ (ಜೆಬಿಎಫ್‌ಸಿ) ಮುಂತಾದವು ಹಲವು ಪಂದ್ಯಗಳಲ್ಲಿ ಜಯ ಸಾಧಿಸಿದ್ದವು. ಬೆಂಗಳೂರಿನ ಎಚ್‌ಎಂಟಿ, ಎಚ್‌ಎಎಲ್‌, ಬಿಇಎಲ್‌ ಸಂಸ್ಥೆಗಳ ಫುಟ್‌ಬಾಲ್‌ ಕ್ಲಬ್‌ಗಳನ್ನು ಮಣಿಸುವಲ್ಲಿ ಯಶಸ್ವಿಯಾಗಿದ್ದವು’ ಎಂದು ಮಾಜಿ ಗೋಲ್‌ಕೀಪರ್‌ ಖಲೀಲ್‌ ಉಲ್ಲಾ ಬೇಗ್ ಹೇಳುತ್ತಾರೆ.

ಫುಟ್‌ಬಾಲ್‌ ದಂತಕತೆ ಪೀಲೆ, ಮರಡೋನಾ ಅವರಷ್ಟೇ ಯಾಕೆ? ಇದೇ ಕ್ರೀಡಾಂಗಣದಲ್ಲಿ ಕರೀಮ್‌, ಲಕ್ಷ್ಮಿನಾರಾಯಣ, ಆಂಜನಪ್ಪ, ಲಕ್ಷ್ಮಯ್ಯ, ವೆಂಕಟರಮಣಪ್ಪ, ಕೆ.ಪಿ.ಶ್ರೀನಿವಾಸ್‌, ಕರೀಮ್‌, ಸಮೀಉಲ್ಲಾ, ಕುಮಾರ್‌, ರಾಜಣ್ಣ ಮುಂತಾದವರು ಫುಟ್‌ಬಾಲ್‌ ಆಟ ನೋಡಿ ಬೆರಗಾಗುತ್ತಿದ್ದೆವು.

ಮಳೆ, ಚಳಿ ಅಥವಾ ಬಿಸಿಲಿರಲಿ, ಪ್ರತಿ ದಿನ ನಸುಕಿನ 5.30 ರಿಂದ ಬೆಳಗಿನ 7ರವರೆಗೆ ಫುಟ್‌ಬಾಲ್‌ ಆಡುತ್ತೇವೆ. ಒಂದು ದಿನವೂ ತಪ್ಪಿಸಲ್ಲ. ಇದರಿಂದ ಆರೋಗ್ಯವೂ ಸುಧಾರಿಸಿಕೊಳ್ಳುತ್ತದೆ ಮತ್ತು ಮನಸ್ಸಿನಲ್ಲಿ ಹೊಸ ಚೈತನ್ಯ ಮೂಡುತ್ತದೆ ಎಂದು ಡಾ. ಆರ್.ರಾಜಶೇಖರ್‌ ವಿವರಣೆ ನೀಡುತ್ತಾರೆ.

ಡಾ. ಆರ್.ರಾಜಶೇಖರ್‌ (67), ರಾಮಸ್ವಾಮಿ (80), ಡಿ.ಎನ್.ಸುಬ್ಬರಾಯಪ್ಪ (72) ಮತ್ತಿತರ ಹಿರಿಯರೊಂದಿಗೆ ಖಾಸಗಿ, ಸರ್ಕಾರಿ ಸಂಸ್ಥೆಗಳಲ್ಲಿನ ಅಧಿಕಾರಿಗಳು, ಉದ್ಯೋಗಿಗಳು ಫುಟ್‌ಬಾಲ್‌ ಆಡುತ್ತಾರೆ. ನಮ್ಮ ಅಸೋಸಿಯೇಷನ್‌ನಲ್ಲಿ ಸದ್ಯಕ್ಕೆ 60 ಚೆಂಡುಗಳಿವೆ. ಆಗಾಗ್ಗೆ ಚೆಂಡುಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಫುಟ್‌ಬಾಲ್‌ ಆಟಗಾರರ ಸಂಖ್ಯೆಯೂ ಹೆಚ್ಚುತ್ತ ಸಾಗುತ್ತದೆ ಎಂದು ಸಂಘದ ಸದಸ್ಯರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.