ADVERTISEMENT

ಬದಲಾಗುತ್ತಿರುವ ರೇನ್‌ಕೋಟ್‌ಗಳು

ವಿದ್ಯಾಶ್ರೀ ಎಸ್.
Published 15 ಸೆಪ್ಟೆಂಬರ್ 2017, 19:30 IST
Last Updated 15 ಸೆಪ್ಟೆಂಬರ್ 2017, 19:30 IST
ಬದಲಾಗುತ್ತಿರುವ ರೇನ್‌ಕೋಟ್‌ಗಳು
ಬದಲಾಗುತ್ತಿರುವ ರೇನ್‌ಕೋಟ್‌ಗಳು   

ಮಳೆಗಾಲದಲ್ಲಿ ಮಕ್ಕಳಿಗೆ ರೇನ್‌ಕೋಟ್‌ ಧರಿಸಿ ಶಾಲೆಗೆ ಹೋಗುವುದೇ ಸಂಭ್ರಮ. ಬಣ್ಣ, ಬಣ್ಣದ ರೇನ್‌ಕೋಟ್‌ನಲ್ಲಿ ಮಕ್ಕಳು ಇನ್ನಷ್ಟು ಮುದ್ದಾಗಿ ಕಾಣುತ್ತಾರೆ. ದೊಡ್ಡವರಿಗೆ ತಮ್ಮ ಉಡುಪು, ವಯಸ್ಸಿಗೆ ತಕ್ಕಂತೆ ಯಾವ ಬಗೆಯ ರೇನ್‌ ಕೋಟ್‌ ಖರೀದಿಸಬೇಕೆಂಬ ಚಿಂತೆ. ಮಳೆಗಾಲ ಬಂತೆಂದರೆ ರೇನ್‌ಕೋಟಿನ ಹಲವು ಪ್ರಸಂಗಗಳು ತೆರೆದುಕೊಳ್ಳುತ್ತವೆ.

ಹಿಂದೆಲ್ಲ ಮೈ ಪೂರ್ತಿ ಮುಚ್ಚುವಂತಹ ಪ್ಲಾಸ್ಟಿಕ್‌ ರೇನ್‌ಕೋಟ್‌ಗಳು ಮಾತ್ರವೇ ಸಿಗುತ್ತಿತ್ತು. ಅದಕ್ಕೂ ಹಿಂದೆ ಗೊರಬು, ಕಂಬಳಿಯನ್ನು ಅಡಿಯಿಂದ, ಮುಡಿವರೆಗೂ ಬಿಟ್ಟು ಮಳೆಯಿಂದ ರಕ್ಷಣೆ ಪಡೆಯುತ್ತಿದ್ದರು. ಈಗಲೂ ಮಲೆನಾಡು, ಕರಾವಳಿಯಲ್ಲಿ ಗೊರಬು ಧರಿಸಿ ಕೃಷಿ ಮಾಡುವವರು ಕಾಣಿಸುತ್ತಾರೆ. 1836ರಲ್ಲಿ ಸ್ಕಾಟ್‌ಲ್ಯಾಂಡ್‌ನ ಎಂಜಿನಿಯರ್‌ ಚಾರ್ಲ್ಸ್‌ ಮ್ಯಾಕಿನ್‌ಟೊಷ್‌ ಎನ್ನುವವರು ಮೊದಲ ಬಾರಿಗೆ ರಬ್ಬರ್‌ ಮತ್ತು ಬಟ್ಟೆಯಿಂದ ಮಾಡಿದ ರೇನ್‌ಕೋಟ್‌ ಕಂಡುಹಿಡಿದರು. ಈ ಕಾರಣಕ್ಕೆ ಬ್ರಿಟನ್‌ನಲ್ಲಿ ರೇನ್‌ಕೋಟ್‌ಗೆ ಮ್ಯಾಕ್ಸ್‌ ಅಥವಾ ಮ್ಯಾಕಿನ್‌ಟೊಷ್‌ ಎಂದು ಕರೆಯುತ್ತಾರೆ.

ಈಗ ಫ್ಯಾಷನ್‌ ಜಗತ್ತಿನಲ್ಲಿ ರೇನ್‌ಕೋಟ್‌ಗಳು ವೈವಿಧ್ಯ ಪಡೆದುಕೊಂಡಿದೆ. ಕಾಲೇಜು, ಕ್ರೀಡೆ, ಕಚೇರಿ... ಹೀಗೆ ಸ್ಥಳಗಳಿಗೆ ಹೊಂದುವಂತೆ ಇದರ ವಿನ್ಯಾಸದಲ್ಲಿಯೂ ಬದಲಾವಣೆ ಆಗಿದೆ. ನಾಯಿ, ಬೆಕ್ಕಿನ ರೇನ್‌ಕೋಟ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ವರುಣನ ಆರ್ಭಟಕ್ಕೆ ಮೈ ನೆನೆಯದಂತೆ ರಕ್ಷಿಸುವ ರೇನ್‌ಕೋಟ್‌ಗಳ ಹೊರ ಮೈ ರಬ್ಬರ್‌, ಪ್ಲಾಸ್ಟಿಕ್ ಅಥವಾ ಚರ್ಮದ್ದಾಗಿರುತ್ತದೆ. ಒಳಮೈ ಲಿನನ್‌, ಕಾಟನ್‌, ಉಣ್ಣೆಯಿಂದ ತಯಾರಿಸಲಾಗುತ್ತದೆ.

ADVERTISEMENT

ಇನ್ನು ಯಾವ ಬಗೆಯ ರೇನ್‌ಕೋಟ್ ಖರೀದಿಸಬೇಕು ಎಂಬ ಗೊಂದಲ ಇದ್ದಿದ್ದೆ. ನೀವು ರೇನ್‌ಕೋಟ್‌ ತೆಗೆದುಕೊಳ್ಳುವಾಗ ಉದ್ದದ ಕೋಟ್‌ಗೆ ಆದ್ಯತೆ ನೀಡಿ. ರೆಕ್ಸಿನ್‌ ಕೋಟ್‌ ನಿಮ್ಮ ಆಯ್ಕೆಯಾಗಿರಲಿ. ಕಾಲೇಜು ಹುಡುಗಿಯರಿಗೆ ಟ್ರೆಂಚ್‌ ಕೋಟ್‌ ಹೊಂದುತ್ತದೆ. ಹಿಂದೆಲ್ಲ ಮಿಲಿಟರಿಯವರು ಇದನ್ನು ಬಳಸುತ್ತಿದ್ದರು. ಆದರೆ ಇದರ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಉಣ್ಣೆಯ ಬಟ್ಟೆಯಿಂದ ಇದನ್ನು ತಯಾರಿಸಲಾಗಿದ್ದು, ಧರಿಸಿದಾಗ ಆರಾಮವೆನ್ನಿಸುತ್ತದೆ.

ರಿವರ್ಸೆಬಲ್‌ ಕೋಟ್‌ಗಳು ಈಗ ಹೆಚ್ಚು ಪ್ರಚುರತೆ ಗಳಿಸಿದೆ. ಕೋಟನ್ನು ಹಿಂದೆ, ಮುಂದೆ ಹಿಂದೆ ಮಾಡಿ ಹಾಕಿಕೊಳ್ಳುವ ಆಯ್ಕೆಯಿರುವುದೇ ಇದರ ಜನಪ್ರಿಯತೆಗೆ ಕಾರಣ. ಹಿಂದೆ ಒಂದು ಮುಂದೆ ಒಂದು ಬಣ್ಣವಿರುತ್ತದೆ. ಕೊಟ್ಟ ಕಾಸಿಗೆ ಎರಡು ಕೋಟ್‌ ಬಂದಂತಾಗುತ್ತದೆ. ಕ್ಯಾಶುವಲ್‌ ಮತ್ತು  ಫಾರ್ಮಲ್‌ ಎರಡು ಬಗೆಯ ಉಡುಪಿಗೂ ಇದು ಹೊಂದುತ್ತದೆ.

ಪೊನ್ಚೊ ರೇನ್‌ ಕೋಟ್‌ಗಳು ಬಹಳ ಸಮಯದಿಂದಲೂ ಇದೆ. ಇದರಲ್ಲಿ ರೆಕ್ಕೆಯಂತೆ ಕಾಣುವ ವಿನ್ಯಾಸಕ್ಕೆ ಬೇಡಿಕೆ ಇದೆ. ಆದರೆ ಇದು ಫ್ಯಾಷನೆಬಲ್‌ ಎನಿಸಿಕೊಂಡಿಲ್ಲ. ಸೀರೆ ಹಾಕಿಕೊಳ್ಳುವಾಗ ಸೆಂಟರ್‌ ಸ್ಲಿಟ್ಸ್‌ ಇರುವ ರೇನ್‌ಕೋಟ್‌ ನಿಮ್ಮ ಆಯ್ಕೆಯಾಗಲಿ. ಇದು ನಡೆಯುವಾಗ ಕಷ್ಟವಾಗುವುದಿಲ್ಲ. ಸೀರೆ ಉಡುವವರು ಆದಷ್ಟು ತಿಳಿ ಬಣ್ಣದ ರೇನ್‌ಕೋಟ್‌ ತೆಗೆದುಕೊಳ್ಳಿ. ಇಲ್ಲವಾದರೆ ದೇಸಿ ಲುಕ್‌ಗೆ ಹೊಂದುವುದಿಲ್ಲ.

ಸ್ಪೋರ್ಟ್‌ಅಪ್‌ ರೇನ್‌ ಕೋರ್ಟ್‌ಗಳು ಕಾಲೇಜು ಹುಡುಗ, ಹುಡುಗಿಯರಿಗೆ ಚೆನ್ನಾಗಿ ಒಪ್ಪುತ್ತದೆ. ಅಡಿಡಾಸ್‌ ಮತ್ತು ನಿಕ್‌ ಕಂಪೆನಿಯ ಸ್ಪೋರ್ಟ್‌ ಅಪ್‌ ರೇನ್‌ಕೋಟಿನಲ್ಲಿ ಹಲವು ಆಯ್ಕೆಗಳಿವೆ. ಪುರುಷರು ಆದಷ್ಟು ಗಾಢ ಬಣ್ಣದ ಕಪ್ಪು, ಕಂದು, ಕಾಫಿ ಬಣ್ಣದ ಕೋಟ್‌ ಧರಿಸಿ. ಕಾಲೇಜು ಹುಡುಗರಿಗಾಗಿ ಫಂಕಿ ನೋಟ ನೀಡುವ ಕೋಟ್‌ಗಳು ಸಿಗುತ್ತವೆ. ಹುಡುಗರು ನಿಯಾನ್‌ ಕಲರ್‌ ಬಳಸದಿರುವುದು ಒಳ್ಳೆಯದು.

ಮಕ್ಕಳಿಗೆ ಗಾಢಬಣ್ಣದ ಜೊತೆಗೆ ಕಾಮಿಕ್ಸ್‌ ಪ್ರಿಂಟ್‌ ಇರುವಂತಹ ಕೋಟ್‌ಗಳು ಇಷ್ಟವಾಗುತ್ತವೆ. ಈ ಬಗೆಯ ಕೋಟ್‌ಗಳಲ್ಲಿ ಅವರು ಇನ್ನಷ್ಟು ಮುದ್ದಾಗಿ ಕಾಣುತ್ತಾರೆ. ಹಾಗೆಯೇ ಕ್ಯಾಪ್‌ ಇರುವ ಕೋಟನ್ನೇ ಖರೀದಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.