ADVERTISEMENT

ಬಾಲಿವುಡ್‌ನಲ್ಲಿ ಒಂಟಿ ತಾಯಂದಿರು

ಮಂಜುನಾಥ ರಾಠೋಡ
Published 17 ಫೆಬ್ರುವರಿ 2017, 19:30 IST
Last Updated 17 ಫೆಬ್ರುವರಿ 2017, 19:30 IST
ಸುಷ್ಮಿತಾ ಸೇನ್‌
ಸುಷ್ಮಿತಾ ಸೇನ್‌   

ತಂದೆಯ ಸ್ಥಾನವನ್ನೂ ತಾಯಿಯೇ ತುಂಬಿ ಮಕ್ಕಳನ್ನು ಸಶಕ್ತವಾಗಿ ಸಾಕಿ ಬೆಳೆಸಿದ ಉದಾಹರಣೆಗಳು ನಮ್ಮ ಸುತ್ತಮುತ್ತ ಸಾಕಷ್ಟು ಸಿಗುತ್ತವೆ. ಯಾವುದೋ ಕಾರಣಕ್ಕೆ ಪತಿಯಿಂದ ಬೇರಾಗಿ ಒಬ್ಬರೇ ಮಕ್ಕಳನ್ನು ಸಾಕಿದ ಸಿಂಗಲ್‌ ಮದರ್‌ಗಳು ಬಾಲಿವುಡ್‌ನಲ್ಲಿಯೂ ಸಾಕಷ್ಟು ಮಂದಿ ಇದ್ದಾರೆ.

*
ಸುಷ್ಮಿತಾ ಸೇನ್‌
ತನ್ನ 25ನೇ ವಯಸ್ಸಿನಲ್ಲಿ ಹೆಣ್ಣು ಮಗುವೊಂದನ್ನು ದತ್ತು ಪಡೆಯಲು ಮುಂದಾಗಿದ್ದ ಸುಷ್ಮಿತಾ ಸೇನ್ ಇದಕ್ಕಾಗಿ ಸಾಕಷ್ಟು ಹೋರಾಟ ಮಾಡಬೇಕಾಯಿತು.
ಮದುವೆಯಾಗದೇ ಮಗು ದತ್ತು ಪಡೆಯಲು ಕಾನೂನು ತೊಡಕಿದ್ದ ಕಾರಣ, ತಮ್ಮ ಆಸೆ ಈಡೇರಿಸಿಕೊಳ್ಳಲು ನ್ಯಾಯಾಲಯದಲ್ಲಿ ಹೋರಾಡಬೇಕಾಯಿತು. 2000ನೇ ಇಸವಿಯಲ್ಲಿ ಕೊನೆಗೂ ತಾಯಿಯಾದರು ಸುಷ್ಮಿತಾ. ಮಗಳ ಹೆಸರು ರೂನಿ. 2010ರಲ್ಲಿ ಮತ್ತೆ ಮೂರು ತಿಂಗಳ ಹೆಣ್ಣು ಮಗುವೊಂದನ್ನು ಸುಷ್ಮಿತಾ ದತ್ತು ಪಡೆದು ಎರಡನೇ ಬಾರಿಗೆ ಅಮ್ಮನಾದರು.

*
ರವೀನಾ ಟಂಡನ್‌
ತಮ್ಮ 21ನೇ ವಯಸ್ಸಿನಲ್ಲಿ ರವೀನಾ 11 ಹಾಗೂ 8 ವರ್ಷದ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ಪಡೆದಿದ್ದರು. 2004ರಲ್ಲಿ ಅನಿಲ್ ತಂಡಾನಿ ಅವರನ್ನು ಮದುವೆಯಾಗುವವರೆಗೂ ಇಬ್ಬರು ಮಕ್ಕಳಿಗೂ ‘ಸಿಂಗಲ್ ಮದರ್‌’ ಆಗಿದ್ದರು. ಮದುವೆ ನಂತರ ಎರಡು ಮಕ್ಕಳನ್ನು ಹೆತ್ತ ರವೀನಾ ಇದೀಗ ಒಟ್ಟು ನಾಲ್ಕು ಮಕ್ಕಳ ಹೆಮ್ಮೆಯ ತಾಯಿ.

*
ಕರಿಷ್ಮಾ  ಕಪೂರ್
ಸಂಜಯ್‌ರೊಂದಿಗೆ ಮದುವೆಯಾಗಿದ್ದ ಕರಿಷ್ಮಾಗೆ ಇಬ್ಬರು ಮಕ್ಕಳು. 2016ರಲ್ಲಿ ದಂಪತಿ ವಿಚ್ಛೇದನ ಪಡೆದರು. ಇದೀಗ ಕರಿಷ್ಮಾ ‘ಸಿಂಗಲ್ ಮದರ್’.

*
ಅಮೃತಾ ಸಿಂಗ್
ಸೈಫ್‌ ಅಲಿ ಖಾನ್‌ ಅವರ ಮಾಜಿ ಪತ್ನಿ ಅಮೃತಾ ಸಿಂಗ್‌ ಇಬ್ಬರು ಮಕ್ಕಳ ತಾಯಿ. ಕರೀನಾಳನ್ನು ಸೈಫ್ ಅಲಿ ಖಾನ್ ಮದುವೆಯಾದ ಬಳಿಕ ಎರಡೂ ಮಕ್ಕಳಿಗೆ ಅಮೃತಾ ಅವರೇ ತಂದೆಯ ಸ್ಥಾನವನ್ನೂ ತುಂಬಿದ್ದಾರೆ.

*
ಸಾರಿಕಾ
ಕಮಲ್‌ಹಾಸನ್‌ ತಮ್ಮ ಎರಡನೇ ಹೆಂಡತಿ ಸಾರಿಕಾರಿಗೆ 2004ರಲ್ಲಿ ವಿಚ್ಛೇದನ ನೀಡಿದರು. ಆ ವೇಳೆಗೆ ಎರಡು ಹೆಣ್ಣುಮಕ್ಕಳ ತಾಯಿಯಾಗಿದ್ದ ಸಾರಿಕಾ ತಂದೆಯ ಕೊರತೆ ಕಾಡದಂತೆ ಕಾಳಜಿ ವಹಿಸಿ ಮಕ್ಕಳನ್ನು ಬೆಳೆಸಿದರು. ಸಾರಿಕಾರ ಮೊದಲ ಮಗಳು ಶೃತಿ ಹಾಸನ್. ಬಿಗ್‌ ಬಿ ಅಮಿತಾಭ್‌ ಬಚ್ಚನ್‌ ಹಾಗೂ ತಮಿಳು ನಟ ಧನುಷ್ ಅವರೊಂದಿಗೆ ಮೊದಲ ಚಿತ್ರದಲ್ಲಿಯೇ ತೆರೆ ಹಂಚಿಕೊಂಡಿದ್ದ ಅಕ್ಷರಾ ಹಾಸನ್ ಎರಡನೇ ಮಗಳು.

*
ಬಬಿತಾ
ಕರಿಷ್ಮಾ ಮತ್ತು ಕರೀನಾ ಕಪೂರ್‌ ಅವರು ಇನ್ನೂ ಬಾಲ್ಯದಲ್ಲಿರುವಾಗಲೇ ತಾಯಿ ಬಬಿತಾ ಮತ್ತು ರಣಧೀರ್ ಕಪೂರ್ ಬೇರೆಯಾದರು. ಏಕಾಂಗಿಯಾಗಿಯೇ ಇಬ್ಬರು ಮುದ್ದು ಮಕ್ಕಳ ಆರೈಕೆ ಮಾಡಿ ಬೆಳೆಸಿದರು.

ADVERTISEMENT

*
ನೀನಾ ಗುಪ್ತಾ
80ರ ದಶಕದಲ್ಲಿ ತನ್ನ ಅಭಿನಯ ಪ್ರತಿಭೆಯಿಂದ ಸಾಕಷ್ಟು ಹೆಸರು ಗಳಿಸಿದ್ದ ನಟಿ ನೀನಾ ಗುಪ್ತಾ ಕೆಲಕಾಲ ವೆಸ್ಟ್‌ ಇಂಡೀಸ್‌ ಕ್ರಿಕೆಟ್ ಪಟು ಸರ್‌ ವಿವಿಯನ್ ರಿಚರ್ಡ್ಸ್‌ ಜೊತೆಗೆ ಸಹಜೀವನ ನಡೆಸಿದ್ದರು. ಮದುವೆಯಾಗದೆಯೇ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ನಂತರದ ದಿನಗಳಲ್ಲಿ ಏಕಾಂಗಿಯಾಗಿಯೇ ಮಗಳನ್ನು ಸಾಕಿ ಬೆಳೆಸಿದರು ನೀನಾ. ಆಕೆಯೇ ಈಗ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್‌ ಎನಿಸಿಕೊಂಡಿರುವ ಮಸಾಬಾ.

*
ಹನಿ ಇರಾನಿ
ಪ್ರಖ್ಯಾತ ಚಿತ್ರ ಸಾಹಿತಿ ಜಾವೇದ್‌ ಅಖ್ತರ್ ಅವರೊಂದಿಗೆ 1978ರಲ್ಲಿ  ನಟಿ, ಚಿತ್ರತಥೆ ಬರಹಗಾರ್ತಿ ಹನಿ ಇರಾನಿ ಬೇರೆಯಾದಾಗ ಮಗಳಿಗೆ 8 ವರ್ಷ ಮಗನಿಗೆ 4 ವರ್ಷ. ಕಸೂತಿ ಕೆಲಸ ಮಾಡುತ್ತಾ ಮಕ್ಕಳನ್ನು ಸಾಕುತ್ತಿದ್ದರು ಇರಾನಿ. ನಂತರ ಅದೃಷ್ಟ ಒದಗಿ ಬಂದು ಯಶ್‌ ಚೋಪ್ರಾ ಅವರು ತಮ್ಮ ಚಿತ್ರಕ್ಕೆ ಚಿತ್ರಕಥೆ ಬರೆಯಲು ಆಹ್ವಾನಿಸಿದ ಮೇಲೆ ಬದುಕು ಸುಧಾರಿಸಿತು. ಅಷ್ಟರಲ್ಲಾಗಲೇ ಸಾಕಷ್ಟು ನೋವು ಅನುಭವಿಸಿದ್ದರು.

ಕಷ್ಟದ ದಿನಗಳಲ್ಲಿಯೂ ಎದೆಗುಂದದೆ ಒಂಟಿಯಾಗಿ ಮಕ್ಕಳನ್ನು ಸಾಕಿ ಸಲಹಿದ್ದ ಇವರ ಬದುಕು ಸಾಕಷ್ಟು ಒಂಟಿ ತಾಯಂದಿರಿಗೆ ಮಾನಸಿಕ ಬಲ ತುಂಬಿತು. ಪ್ರಸ್ತುತ ಬಾಲಿವುಡ್‌ನಲ್ಲಿ ತಮ್ಮ ಪ್ರತಿಭೆಯಿಂದ ಸದ್ದು ಮಾಡುತ್ತಿರುವ ಜೋಯಾ ಅಖ್ತರ್ ಹಾಗೂ ಫ್ರಾಹಾನ್‌ ಅಖ್ತರ್ ಇವರ ಮಕ್ಕಳೇ.

*
ಸೂಸಾನೆ
ಹೃತಿಕ್‌ ರೋಷನ್ ಅವರೊಂದಿಗೆ 17 ವರ್ಷಗಳ ವೈವಾಹಿಕ ಜೀವನ ಅಂತ್ಯಗೊಂಡ ಬಳಿಕ ಇಬ್ಬರು ಮಕ್ಕಳ  ಜವಾಬ್ದಾರಿಯನ್ನು ಸೂಸಾನೆ ಏಕಾಂಗಿಯಾಗಿ  ನಿಭಾಯಿಸುತ್ತಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.