ADVERTISEMENT

ಬಾಹುಬಲಿಯಂತಿರಲಿ ಗಂಡ!

​ಪ್ರಜಾವಾಣಿ ವಾರ್ತೆ
Published 28 ಮೇ 2017, 19:30 IST
Last Updated 28 ಮೇ 2017, 19:30 IST
ಬಾಹುಬಲಿಯಂತಿರಲಿ ಗಂಡ!
ಬಾಹುಬಲಿಯಂತಿರಲಿ ಗಂಡ!   

ಎಲ್ಲಾ ಹೆಣ್ಣು ಮಕ್ಕಳ ಹೃದಯ ಕದ್ದಿದೆ ಬಾಹುಬಲಿಯ ಪಾತ್ರ. ಅದರಲ್ಲೂ ದೇವಸೇನಾ ಗಂಡನಾದ ಅಮರೇಂದ್ರ ಬಾಹುಬಲಿ ಮಾದರಿ ಗಂಡ. ದೇವಸೇನಾ ಮೇಲಿನ ಗೌರವ, ಪ್ರೀತಿ, ಕಾಳಜಿ ನೋಡಿ ಸಿಕ್ಕರೆ ಇಂಥ ಗಂಡ ಸಿಗಬೇಕು ಎನ್ನುವಂತಾಗಿದೆ. ಇಂದಿನ ಹುಡುಗಿಯರಿಗೆ ಏಕೆ ಗಂಡನಾಗಿ ಅಮರೇಂದ್ರ ಬಾಹುಬಲಿ ಇಷ್ಟ? ಇಲ್ಲಿದೆ ಹಲವು ಕಾರಣಗಳು.

‘ತಾಯಿಯ ಮಗ’ನಾದರೂ ಹೆಂಡತಿಗೆ ಬೆಂಬಲ: ‘ದೇವಸೇನಾ ಮೇಲೆ ಯಾರಾದರೂ ಖಡ್ಗ ಎತ್ತಿದರೆ ಬಾಹುಬಲಿ ಖಡ್ಗ ಮಾತನಾಡುತ್ತದೆ...’ ಈ ಡೈಲಾಗ್ ಬಂದಾಗ ಚಿತ್ರಮಂದಿರದಲ್ಲಿ ಹುಡುಗಿಯರ ಸಿಳ್ಳೆ, ಚಪ್ಪಾಳೆ ಸೂರು ಮುಟ್ಟುತ್ತದೆ.

ಅಮ್ಮನ ಮುದ್ದಿನ ಮಗನಾದರೂ ಹೆಂಡತಿಗೆ ಬೆಂಬಲವಾಗಿ ನಿಲ್ಲುತ್ತಾನೆ. ದೇವಸೇನಾ ಸತ್ಯವನ್ನೇ ಹೇಳುತ್ತಿರುವುದರಿಂದ, ರಾಜ ಮಾತೆಯೊಂದಿಗೆ ವಾದಿಸುತ್ತಿದ್ದರೂ, ಹೆಂಡತಿಯನ್ನು  ಬೆಂಬಲಿಸುತ್ತಾನೆ.

ನಿನ್ನಂತೆ ನೀನಿರು: ಅಮರೇಂದ್ರ ಬಾಹುಬಲಿ ನಾನೊಬ್ಬ ರಾಜನೆಂದು ಹೇಳಿ ದೇವಸೇನಾಳನ್ನು ಸುಲಭವಾಗಿ ಮದುವೆಯಾಗಬಹುದಿತ್ತು. ಆದರೆ ‘ನನ್ನ ವ್ಯಕ್ತಿತ್ವವನ್ನು ಆಕೆ ಮೆಚ್ಚಬೇಕು, ನನ್ನ ರಾಜ್ಯ, ಹಣವನ್ನಲ್ಲ’ ಎಂದು ಸರಳವಾಗೇ ಇರುತ್ತಾನೆ. ಇಂದಿನ ಹುಡುಗಿಯರು ಇಂತಹ ಸರಳತೆಯನ್ನೇ ಮೆಚ್ಚುವುದು. ಹಣ, ಅಧಿಕಾರವನ್ನಲ್ಲ.

ಕುಟುಂಬದ ಮೇಲಿನ ಗೌರವ: ಮಹಿಷಮತಿ ಸಾಮ್ರಾಜ್ಯದ ಅರಸ ಎಂದು ತಿಳಿದ ಕೂಡಲೇ ಎಲ್ಲರೂ ಅಮರೇಂದ್ರ ಬಾಹುಬಲಿ ಎದುರು ತಲೆ ಬಾಗುತ್ತಾರೆ. ಆಗ ದೇವಸೇನಾ ಕುಟುಂಬದವರನ್ನು ಮೇಲೆ ಎಬ್ಬಿಸಿ ‘ಸಂಬಂಧಿಕರ ನಡುವೆ ರಾಜತ್ವವಿಲ್ಲ. ನೀವು ನನಗಿಂತ ದೊಡ್ಡವರು’ ಎಂದು ಹೇಳುತ್ತಾನೆ. ಹೆಣ್ಣುಮಕ್ಕಳಿಗೂ ಇದೇ ಅಲ್ವೇ ಬೇಕಿರುವುದು. ಹೆಂಡತಿಯನ್ನಷ್ಟೇ ಅಲ್ಲ ಆಕೆಯ ಕುಟುಂಬವನ್ನೂ ಗೌರವಿಸಬೇಕು.

ಬೇಕೆಂದಾಗ ಹೆಂಡತಿಯ ಬಳಿ ಇರಬೇಕು: ದೋಣಿ ಹತ್ತುವ ಸಂದರ್ಭದಲ್ಲಿ ದೇವಸೇನಾ ಆಯತಪ್ಪಿ ಬೀಳುತ್ತಾಳೆ ಆಗ ದೋಣಿಯಲ್ಲಿದ್ದ ಬಾಹುಬಲಿ ತಕ್ಷಣ ನೀರಿಗಿಳಿದು ದೋಣಿಗೂ ಸೇತುವೆಗೂ ಅಡ್ಡಲಾಗಿ ಕೈ ಹಿಡಿದು ನಿಲ್ಲುತ್ತಾನೆ. ದೇವಸೇನಾ ಆತನ ಭುಜದ ಮೇಲೆ ನಡೆದು ದೋಣಿಯಲ್ಲಿ ಕೂರುತ್ತಾಳೆ. ಈ ದೃಶ್ಯದಲ್ಲಿ ಅದೆಷ್ಟು ಸಿಳ್ಳೆ, ಚಪ್ಪಾಳೆ ಬಂದವೋ! ರಾಜನಾದರೆ ಏನು ಹೆಂಡತಿಗೆ ಅಗತ್ಯವಿದ್ದಾಗ ರಕ್ಷಣೆಗೆ,  ಸಹಾಯಕ್ಕೆ  ಗಂಡನ ತೋಳು ಇರಬೇಕಲ್ಲವೇ?



ಯಾವುದೇ ತ್ಯಾಗಕ್ಕೂ ಸಿದ್ಧ: ಅಮರೇಂದ್ರ ಬಾಹುಬಲಿ ಮಹಿಷಮತಿ ಸಾಮ್ರಾಜ್ಯದ ರಾಜ ಎಂದು ರಾಜಮಾತಾ ಘೋಷಿಸಿರುತ್ತಾಳೆ. ಆದರೆ ದೇವಸೇನಾಳನ್ನು ಮದುವೆಯಾಗಲು ರಾಜನ ಸ್ಥಾನವನ್ನು ತ್ಯಾಗ ಮಾಡಿ ಸೇನಾಪತಿಯಾಗುತ್ತಾನೆ. ನಿಜವಾಗಿ ಪ್ರೀತಿಸುವ ಹುಡುಗ ಎಂಥ ತ್ಯಾಗಕ್ಕೂ ಸಿದ್ಧನಾಗಿರುತ್ತಾನೆ ಎನ್ನುವುದನ್ನು ಬಾಹುಬಲಿ ತೋರಿಸುತ್ತಾನೆ.

ಮಧ್ಯೆ ಬಾಯಿಹಾಕದೇ ಇರುವುದು: ಅಮರೇಂದ್ರ ಬಾಹುಬಲಿಯಿಂದ ಹೇಗೆ ರಾಜನ ಸ್ಥಾನವನ್ನು ಕಸಿದು ಬೇರೆಯವರಿಗೆ ಕೊಡಲಾಯಿತು ಎಂಬ ಬಗ್ಗೆ ದೇವಸೇನಾ, ಶಿವಗಾಮಿ ವಾದ ಮಾಡುವಾಗ ಬಾಹುಬಲಿ ಏನೂ ಮಾತನಾಡದೆ ಮೌನವಾಗಿರುತ್ತಾನೆ. ಹೀಗೇ ದೇವರಂತೆ ಸುಮ್ಮನಿರುವ ಗಂಡನೇ ಅಲ್ಲವಾ ಬೇಕಿರುವುದು.

ಸ್ನೇಹ ಜೀವಿ: ಕುಮಾರ, ದೇವಸೇನಾ ಸೋದರ ಮಾವ. ಅಮರೇಂದ್ರ ಬಾಹುಬಲಿಗಿಂಥ ಮೊದಲು ದೇವಸೇನಾಳನ್ನು ಪ್ರೀತಿಸುತ್ತಿರುತ್ತಾನೆ. ಈ ವಿಚಾರ ಗೊತ್ತಿದ್ದರೂ ಬಾಹುಬಲಿ ಆತನೊಂದಿಗೆ ಉತ್ತಮ ಗೆಳೆಯನಾಗುತ್ತಾನೆ. ದೇವಸೇನಾ ಜತೆ ಮದುವೆಯಾದ ಮೇಲೂ ಕುಮಾರ ಮತ್ತು ಬಾಹು ಸಂಬಂಧ ಚೆನ್ನಾಗೇ ಇರುತ್ತದೆ. ನನ್ನ ಹೆಂಡತಿ ಎನ್ನುವ ಕಾರಣಕ್ಕೆ ಬೇರಾವ ಗಂಡಸಿನೊಂದಿಗೆ ಗೆಳತಿಯಾಗಿರಬಾರದು ಎನ್ನುವ ಮನಸ್ಥಿತಿ  ಬಾಹುಬಲಿಗೆ ಇಲ್ಲ.

ಹೆಂಡತಿಯ ಗೌರವ ಮುಖ್ಯ: ಮಹಿಳೆಯೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುವ ಯಾವುದೇ ವ್ಯಕ್ತಿಯನ್ನು ಕ್ಷಮಿಸಬಾರದು ಎನ್ನುವುದು ಬಾಹುಬಲಿ ತತ್ವ. ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುವ ಬಲ್ಲಾಳನ ಕಡೆಯ ಸೇನಾಧಿಕಾರಿಯೊಬ್ಬನ ಕೈ ಬೆರಳನ್ನು ಕತ್ತರಿಸಿಹಾಕುತ್ತಾಳೆ ದೇವಸೇನಾ. ಇದರಿಂದ ಕೋಪಗೊಂಡ ಬಲ್ಲಾಳ ದೇವಸೇನಾಳನ್ನು ಬಂಧಿಸಿ ರಾಜಸಭೆಗೆ ಕರೆತರುತ್ತಾನೆ. ಬಾಹುಬಲಿಗೆ ಈ ವಿಷಯ ತಿಳಿದು ನೀನು ಕೈ ಕತ್ತರಿಸಬಾರದಿತ್ತು. ತಲೆಯನ್ನೇ ತೆಗೆಯಬೇಕಿತ್ತು ಎನ್ನುತ್ತಾನೆ.

ಸುರಸುಂದರಾಂಗ ಬಾಹು: ಇಷ್ಟೆಲ್ಲಾ ಒಳ್ಳೆಯ ಗುಣಗಳಿದ್ದು ಬಾಹುಬಲಿಯಂಥ ಸುಂದರ, ಶಕ್ತಿವಂತ, ಬುದ್ಧಿವಂತನನ್ನು ಯಾವ ಹುಡುಗಿಯೂ ಬೇಡ ಎನ್ನಲಾರಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT