ADVERTISEMENT

ಬೆಚ್ಚಗಿರಲಿ ನಿಮ್ಮ ಸಾಕುಪ್ರಾಣಿ

ಪ್ರಾಣಿ ಸಂಗಾತಿ

ಮಂಜುಶ್ರೀ ಎಂ.ಕಡಕೋಳ
Published 6 ಫೆಬ್ರುವರಿ 2017, 19:30 IST
Last Updated 6 ಫೆಬ್ರುವರಿ 2017, 19:30 IST
ಬೆಚ್ಚಗಿರಲಿ ನಿಮ್ಮ  ಸಾಕುಪ್ರಾಣಿ
ಬೆಚ್ಚಗಿರಲಿ ನಿಮ್ಮ ಸಾಕುಪ್ರಾಣಿ   
ಚಳಿಗಾಲ ಬಂತೆಂದರೆ ಪ್ರಾಣಿಪ್ರಿಯರು ತುಸು ಆತಂಕ ಪಡುವುದು ಸಹಜ. ಮೈ ಕೊರೆವ ಚಳಿಯಲ್ಲಿ ಸಾಕುಪ್ರಾಣಿಗಳನ್ನು ನಿಭಾಯಿಸುವುದು ಕಷ್ಟ ಎಂಬುದು ಅವರ ಆತಂಕಕ್ಕೆ ಕಾರಣ.
 
ಪುಟ್ಟ ನಾಯಿ ಮರಿ ಮತ್ತು ಬೆಕ್ಕಿನ ಮರಿಗಳನ್ನು ಚಳಿಗಾಲದಲ್ಲಿ ಜೋಪಾನವಾಗಿ ನೋಡಿಕೊಳ್ಳುವುದು ಅಗತ್ಯ. 
 
ರಟ್ಟಿನ ಬಾಕ್ಸ್‌ಗಳಲ್ಲಿ ಸ್ವಚ್ಛವಾಗಿರುವ ಬಟ್ಟೆಯನ್ನು ಹಾಸಿ ಮರಿಗಳನ್ನು ಮಲಗಿಸಬಹುದು. ಆದರೆ, ಆ ಬಟ್ಟೆ ಪ್ರಾಣಿಗಳ ಮಲ–ಮೂತ್ರ ವಿಸರ್ಜನೆಯಿಂದ ಗಲೀಜಾಗದಂತೆ ನೋಡಿಕೊಳ್ಳಬೇಕು.
 
ಪ್ರಾಣಿಗಳ ಮೂತ್ರ ವಿಸರ್ಜನೆಯಿಂದ ಹಾಸಿಗೆ–ಹೊದಿಕೆಗಳಲ್ಲಿ ಫಂಗಸ್ ಸೋಂಕು ಉಂಟಾಗಿ, ಅವುಗಳಿಂದ ಸಾಕು ಪ್ರಾಣಿಗಳು ಅನಾರೋಗ್ಯಕ್ಕೀಡಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸ್ವಚ್ಛ ಮತ್ತು ಒಣಗಿದ ಬಟ್ಟೆಗಳನ್ನು ಬಳಸಬೇಕು ಎನ್ನುತ್ತಾರೆ ಪಶುವೈದ್ಯ ಡಾ.ರಮೇಶ್ ಬಿ.ಕೆ.
ರಟ್ಟಿನ ಬಾಕ್ಸ್ ಇಲ್ಲವೆಂದರೆ, ಗೋಣಿಚೀಲವನ್ನೂ  ಬಳಸಬಹುದು. ಆದರೆ, ಅದು ಒದ್ದೆಯಾಗದಂತೆ ಎಚ್ಚರವಹಿಸಬೇಕು.
 
ಚಳಿ ಎಂದು  ಸಾಕುಪ್ರಾಣಿಗಳನ್ನು ತಮ್ಮ ಹಾಸಿಗೆಯಲ್ಲಿ ಮಲಗಿಸಿಕೊಳ್ಳುವ ಅಭ್ಯಾಸ ಕೆಲವರಿಗೆ ಇರುತ್ತಾರೆ. ಆದರೆ, ಇದು ಪ್ರಾಣಿಗಳಿಗೂ, ಅವುಗಳ ಮಾಲೀಕರಿಗೂ ಒಳ್ಳೆಯದಲ್ಲ.
 
ನಿಮಗೆ ಎಷ್ಟೇ ಪ್ರೀತಿ ಇದ್ದರೂ ಸಾಕುಪ್ರಾಣಿಗಳಿಗೆ ಅವುಗಳದ್ದೇ ಆದ ಜಾಗ ಮೀಸಲಿಡಿ. ಮನುಷ್ಯರು ಮಲಗುವ ಹಾಸಿಗೆ ಮೇಲೆ ಪ್ರಾಣಿಗಳನ್ನು ಮಲಗಿಸುವುದರಿಂದ ಚರ್ಮರೋಗ, ಅಲರ್ಜಿಯಂಥ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ಡಾ.ರಮೇಶ್.
 
ಚಳಿಗಾಲದಲ್ಲಿ ಬಾಯಾರಿಕೆ ಆಗುವುದಿಲ್ಲವೆಂದು ಸಾಕುಪ್ರಾಣಿಗಳಿಗೆ ನೀರು ಕುಡಿಸದಿರುವುದು ಒಳ್ಳೆಯದಲ್ಲ. ನಿರ್ಜಲೀಕರಣ ಆಗದಂತೆ ತಡೆಯಲು ಪ್ರಾಣಿಗಳಿಗೆ ಆಗಾಗ ನೀರು ಕುಡಿಸಬೇಕು. ಪ್ರತಿ ಬಾರಿ ನೀರು ಅಥವಾ ಆಹಾರ ನೀಡಿದಾಗ ಅದು ತಾಜಾ ಆಗಿರಬೇಕು. 
 
ನಾಯಿಗಳಿಗೆ ಹದಿನೈದು ದಿನಗಳಿಗೊಮ್ಮೆ ಸ್ನಾನ ಮಾಡಿಸಬೇಕು. ಕಾರ್ಬಲಿಕ್ ಅಂಶ ಇಲ್ಲದಿರುವ ಸಾಬೂನುಗಳನ್ನು  ಬಳಸಬೇಕು. ಸಾಕು ಪ್ರಾಣಿಗಳಿಗಾಗಿಯೇ ಇರುವ ಸಾಬೂನು, ಶ್ಯಾಂಪೂಗಳನ್ನೇ ಬಳಸಬೇಕು. ಮನುಷ್ಯರು ಬಳಸುವ ಸಾಬೂನಿನಿಂದ ಸಾಕುಪ್ರಾಣಿಗಳ ಮೈತೊಳೆಯಬಾರದು. ಇದು ಪ್ರಾಣಿಗಳಲ್ಲಿ ಚರ್ಮರೋಗಕ್ಕೆ ಕಾರಣವಾಗಬಲ್ಲದು.
 
ಚಳಿಗಾಲದಲ್ಲಿ ಎಣ್ಣೆ ಮತ್ತು ಪ್ರೋಟೀನ್‌ಯುಕ್ತ ಆಹಾರಗಳನ್ನು ಪ್ರಾಣಿಗಳಿಗೆ ನೀಡುವುದು ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.