ADVERTISEMENT

ಬೆನ್ನಿ ಬೆನ್ನು ತಟ್ಟಿದ ರೆಹಮಾನ್

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2017, 19:30 IST
Last Updated 10 ಮಾರ್ಚ್ 2017, 19:30 IST
ಬೆನ್ನಿ ದಯಾಳ್
ಬೆನ್ನಿ ದಯಾಳ್   

2006ರ ಸೆಪ್ಟೆಂಬರ್ 11ಕ್ಕೆ ಬೆನ್ನಿ ದಯಾಳ್ ಕೆಲಸಕ್ಕೆ ಸೇರಬೇಕಿತ್ತು. ಅವರಿಗೆ ಕೆಲಸ ನೀಡಿದ್ದ  ಬಿಪಿಒ ಕಂಪೆನಿಯ ಮಾನವ ಸಂಪನ್ಮೂಲ ವಿಭಾಗದವರು ಸೆಪ್ಟೆಂಬರ್ 3ಕ್ಕೇ ಸೇರುವಂತೆ ಫೋನ್ ಕರೆ ಮಾಡಿದರು.

ಒಲ್ಲದ ಮನಸ್ಸಿನಿಂದಲೇ ಆ ಕೆಲಸಕ್ಕೆ ಬೆನ್ನಿ ಸೇರಿದರು. ಅವರ ಉಸಿರು ಸಂಗೀತ. ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ (ಎಂಸಿಸಿ) ಬೆನ್ನಿ ಎಸ್5 ಎಂಬ ಬ್ಯಾಂಡ್ ಕಟ್ಟಿಕೊಂಡಿದ್ದರು. ವೇದಿಕೆ ಏರಿದರೆಂದರೆ ಚೆನ್ನೈನ ಗಲ್ಲಿ ಗಲ್ಲಿಗಳಿಂದ ಹುಡುಗ-ಹುಡುಗಿಯರು ಕೇಳಲು ಜಮೆಯಾಗುತ್ತಿದ್ದರು. ಪಾಶ್ಚಿಮಾತ್ಯ ಸಂಗೀತವನ್ನು ದಕ್ಷಿಣ ಭಾರತದ ಸಂಗೀತಕ್ಕೆ ಒಗ್ಗಿಸಿ ಬೆನ್ನಿ ಮಾಡುತ್ತಿದ್ದ ‘ಫ್ಯೂಷನ್’ ಪ್ರಯೋಗಗಳಿಗೆ ಅಭಿಮಾನಿಗಳೂ ಇದ್ದರು.

ಕಾಲೇಜು ಓದು ಮುಗಿಯಿತು. ಸಂಗೀತ ನಿರ್ದೇಶಕರ ಬಳಿಗೆ ಬೆನ್ನಿ ಎಡತಾಕಲು ಆರಂಭಿಸಿದರು. ಯಾರಾದರೂ ‘ಕೋರಸ್’ನಲ್ಲಾದರೂ ಹಾಡುವ ಅವಕಾಶ ಕೊಟ್ಟರೆ ಸಾಕು ಎಂದು ಅಂಗಲಾಚಿದರು. ಅವರು ಕದ ತಟ್ಟಿದ ಸ್ಟುಡಿಯೊಗಳಿಗೆ ಲೆಕ್ಕವಿಲ್ಲ. ಎ.ಆರ್. ರೆಹಮಾನ್ ಅವರನ್ನು ಭೇಟಿ ಮಾಡುವ ಯತ್ನಕ್ಕೆ ಮಾತ್ರ ಅವರು ಕೈಹಾಕಿರಲಿಲ್ಲ. ಅದು ದುರ್ಲಭ ಎಂದೇ ಭಾವಿಸಿದ್ದರು.

ಸೌದಿ ಅರೇಬಿಯಾದಲ್ಲಿ ಕೆಲಸಕ್ಕಿದ್ದ ಅಪ್ಪನಿಗೆ ಹೃದಯಾಘಾತವಾಯಿತು. ಆಸ್ಪತ್ರೆ ಖರ್ಚು ಹೊಂದಿಸಲು ಸಹಜವಾಗಿಯೇ ಮನೆಯವರು ಪರದಾಡಿದರು. ಚೆನ್ನೈಗೆ ಬಂದು ನೆಲೆಸಿದ ಅಪ್ಪ, ಇನ್ನು ಮೊದಲಿನಂತೆ ದುಡಿಯುವ ಸ್ಥಿತಿಯಲ್ಲಿ ಇರಲಿಲ್ಲ. ಬೆನ್ನಿಯ ಅಣ್ಣ ಆಗಿನ್ನೂ ಕೆಲಸಕ್ಕೆ ಸೇರಿ, ತಮ್ಮ ಬದುಕು ರೂಪಿಸಿಕೊಳ್ಳ ತೊಡಗಿದ್ದರು.

ಸಂಗೀತವನ್ನೇ ವೃತ್ತಿಯಾಗಿಸಿಕೊಳ್ಳಬೇಕೆಂಬ ಬೆನ್ನಿ ಬಯಕೆ ಈಡೇರುವ ಲಕ್ಷಣಗಳು ಕಾಣಲಿಲ್ಲ. ಅದಕ್ಕೇ ಅವರು ಬಿಪಿಒ ಕೆಲಸಕ್ಕೆ ಸೇರುವ ನಿರ್ಧಾರ ತೆಗೆದುಕೊಂಡಿದ್ದು. ಅದಕ್ಕೆ ಮೊದಲು ಒಂದು ವರ್ಷ ಅವರು ಸಿನಿಮಾ ಹಿನ್ನೆಲೆ ಗಾಯಕ ಆಗಬೇಕೆಂದು ಪ್ರಯತ್ನಿಸಿದ್ದರು. ಅದು ಫಲ ಕೊಟ್ಟಿರಲಿಲ್ಲ.

ಬಿಪಿಒ ಕೆಲಸಕ್ಕೆ ಸೇರಿ ಕೆಲವು ದಿನಗಳಾಗಿತ್ತಷ್ಟೆ. ಒಂದು ದಿನ ಎ.ಆರ್. ರೆಹಮಾನ್ ಸ್ಟುಡಿಯೊದಿಂದ ಫೋನ್ ಕರೆ ಬಂತು. ಒಂದು ಗೀತೆ ಹಾಡುವ ಅವಕಾಶ. ಆ ದಿನ ರಾತ್ರಿ ಬೆನ್ನಿ ಆಡಿಷನ್ ಕೊಟ್ಟರು. ‘ಎಸ್ಎಸ್’ ಸಂಗೀತದ ಚಾನೆಲ್‌ನಲ್ಲಿ ಬೆನ್ನಿ ಹಾಡಿದ್ದ ಗೀತೆಗಳನ್ನು ಕೇಳಿ ರೆಹಮಾನ್ ಮೆಚ್ಚಿಕೊಂಡಿದ್ದರು. ಒಂದು ಅವಕಾಶ ಕೊಡೋಣ ಎಂದು ಅವರಾಗಿಯೇ ನಿರ್ಧರಿಸಿದ್ದು ಬೆನ್ನಿ ಬದುಕಿಗೆ ದೊಡ್ಡ ತಿರುವು ಕೊಟ್ಟಿತು.

ತಮಿಳು ಚಿತ್ರಗಳ ಒಂದೆರಡು ಗೀತೆಗಳಿಗೆ ಬೆನ್ನಿ ದನಿಯಾದರು. ‘ಅಳಗಿಯ ತಮಿಳ್ ಮಗನ್’ ತಮಿಳು ಚಿತ್ರದ ಹಾಡು ಸೂಪರ್ ಹಿಟ್ ಆಯಿತು. ‘ಜಾನೆ ತು ಯಾ ಜಾನೇನಾ’ ಹಿಂದಿ ಚಿತ್ರದ ‘ಪಪ್ಪು ಕಾಂಟ್ ಡಾನ್ಸ್ ಸಾಲಾ’ ಕೇಳಿ ಹೆಜ್ಜೆ ಹಾಕಿದವರ ಸಂಖ್ಯೆಯೂ ದೊಡ್ಡದು. ಕೇರಳ ಸಂಸ್ಕೃತಿಯ ಅಪ್ಪ-ಅಮ್ಮನ ಮಗ ಬೆನ್ನಿ ಬದುಕು ಬದಲಾದದ್ದು ಹಾಗೆ.

‘ಕೆಲಸಕ್ಕೆ ತಡವಾಗಿ ಹೋಗಬೇಡ. ಕೆಲಸ ಬಿಟ್ಟು ಬರಲೂಬೇಡ. ಹಾಡು, ಕೆಲಸ ಎರಡರಲ್ಲಿ ಒಂದನ್ನು ಆರಿಸಿಕೊಳ್ಳುವ ಸಮಯ ಬಂದಿದೆ’ ಎಂದು ರೆಹಮಾನ್ ಒಮ್ಮೆ ಕಿವಿಮಾತು ಹೇಳಿದರು. ಅದನ್ನು ಕೇಳಿದ ಮರುದಿನವೇ ಬೆನ್ನಿ ಕೆಲಸಕ್ಕೆ ರಾಜೀನಾಮೆ ಕೊಟ್ಟುಬಿಟ್ಟರು.

ADVERTISEMENT

ಆ ಸುದ್ದಿ ಕೇಳಿದ ರೆಹಮಾನ್ ಕೈಕುಲುಕಿದ್ದರು. ರೆಹಮಾನ್ ಈ ಪ್ರತಿಭಾವಂತ ಹುಡುಗನಿಗೆ ಕೈಕೊಡಲಿಲ್ಲ. ಬೆನ್ನಿ ಹಾಡುಗಾರರಾಗಿ ಬೆಳೆದರು. ಕಛೇರಿ ಕೊಡುವುದನ್ನೂ ಮುಂದುವರಿಸಿದರು. ಅವರ ಬ್ಯಾಂಡ್‌ನ ಹಳೆ ಸದಸ್ಯರು ಆಗೀಗ ಸೇರುತ್ತಲೇ ಇರುತ್ತಾರೆ. ಈಗ ಯಾರಾದರೂ ಹೊಸ ಹುಡುಗ ಅವಕಾಶ ಕೊಡಿಸುವಂತೆ ಬೆನ್ನಿ ಬಳಿಗೆ ಬಂದರೆ ತಮ್ಮದೇ ಹೋರಾಟದ ದಿನಗಳು ಅವರ ಕಣ್ಮುಂದೆ ಬರುತ್ತವೆ.

‘ಬತ್ತಮೀಸ್ ದಿಲ್ ಮಾನೇನ ಮಾನೇನ’ ಹಾಡನ್ನು ತನ್ನಂತೆಯೇ ಇನ್ನೊಬ್ಬ ಹುಡುಗ ಅನುಕರಿಸಿ ಹಾಡಿದರೆ, ಬೆನ್ನಿ ಹೃದಯ ತುಂಬಿ ಬರುತ್ತದೆ.
-ಎನ್ವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.