ADVERTISEMENT

ಬೇಗ ಹುಟ್ಟಿದವರು ಸಮಾಜ ವಿಮುಖಿಗಳು

​ಪ್ರಜಾವಾಣಿ ವಾರ್ತೆ
Published 29 ಜುಲೈ 2015, 19:30 IST
Last Updated 29 ಜುಲೈ 2015, 19:30 IST

ಎಲ್ಲಾ ಕೆಲಸಕ್ಕೂ ತೀರಾ ಅವಸರ ಮಾಡುವವರನ್ನು ಏಳು ತಿಂಗಳಿಗೆ ಹುಟ್ಟಿದವನು ಎಂದು ತಮಾಷೆ ಮಾಡುವುದು ಸಾಮಾನ್ಯ. ಹಾಗೆಂದು ಏಳೆಂಟು ತಿಂಗಳಿಗೆ ಅಂದರೆ, ಅವಧಿಗೂ ಮುನ್ನವೇ ಹುಟ್ಟಿದವರ ಸ್ವಭಾವ ತರಾತುರಿಯದ್ದು ಎಂಬುದು ನಿಜವೇನಲ್ಲ. ಆದರೆ, ಅವಧಿಪೂರ್ವ ಜನಿಸಿದವರು ಬೆಳೆದಂತೆ ಸಮಾಜದಿಂದ ದೂರ ಸರಿಯುವ ವ್ಯಕ್ತಿತ್ವ ಹೊಂದಿರುತ್ತಾರಂತೆ.

ಅವಧಿಪೂರ್ವ ಜನಿಸಿದವರಲ್ಲಿ ಸ್ವಲೀನತೆ, ನರವಿಕೃತಿ, ಅಂತರ್ಮುಖತೆ ಮತ್ತು ಅಪಾಯಗಳನ್ನೆದುರಿಸಲು ಹಿಂಜರಿಯುವ ವ್ಯಕ್ತಿತ್ವದಂತಹ ಸಮಸ್ಯೆಗಳು ಕಾಣಿಸಬಹುದು. ಆದರೆ ಅವುಗಳಿಗಿಂತಲೂ ಅದು ಅವರ ಸಾಮಾಜಿಕ ಸಂಬಂಧಗಳ ಮೇಲೆ ಹೆಚ್ಚು ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎನ್ನುತ್ತದೆ ಹೊಸ ಅಧ್ಯಯನವೊಂದು.

ಸಾಮಾಜಿಕ ಸಂಬಂಧವನ್ನು ಸೃಷ್ಟಿಸಿಕೊಳ್ಳಲು ಮತ್ತು ಅದನ್ನು ನಿಭಾಯಿಸುವಲ್ಲಿ ನಮ್ಮ ವೈಯಕ್ತಿಕ ಸ್ವಭಾವ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲಿಯೂ ವಯಸ್ಕರಾದಂತೆ ಅದರ ಹೊಣೆಗಾರಿಕೆಯೂ ಹೆಚ್ಚುತ್ತದೆ ಎನ್ನುತ್ತಾರೆ ವಾರ್ವಿಕ್‌ ವಿಶ್ವವಿದ್ಯಾಲಯದ ಮೆಡಿಕಲ್‌ ಸ್ಕೂಲ್‌ನ ಪ್ರೊಫೆಸರ್‌ ಡೈಟರ್‌ ವೋಲ್ಕ್‌. ಅಧ್ಯಯನದ ನೇತೃತ್ವ ವಹಿಸಿದ್ದ ಅವರಿಗೆ ಅತಿ ಬೇಗನೆ ಜನಿಸುವ ಮತ್ತು ಕಡಿಮೆ ತೂಕದ ಮಗು ಬೆಳೆದಂತೆ ತಮ್ಮ ಕುಟುಂಬದವರು, ಸ್ನೇಹಿತರು ಮತ್ತು ಸಂಗಾತಿಗಳೊಂದಿಗೆ ಸಾಮಾಜಿಕ ಸಂಬಂಧವನ್ನು ನಿಭಾಯಿಸುವಲ್ಲಿ ಕಷ್ಟಪಡುತ್ತಾರೆ. ಹೀಗಾಗಿ ಸಾಮಾಜಿಕವಾಗಿ ಹಂತಹಂತವಾಗಿ ದೂರವಾಗುತ್ತಾರೆ ಎಂದಿದ್ದಾರೆ.

1985–86ರ ಅವಧಿಯಲ್ಲಿ 32 ವಾರಗಳಿಗೂ ಮುನ್ನ ಜನಿಸಿದ ಮತ್ತು 1.5 ಕೆ.ಜಿಗಿಂತ ಕಡಿಮೆ ತೂಕ ಹೊಂದಿದ್ದವರನ್ನು ಅವರು ಅಧ್ಯಯನಕ್ಕೆ ಒಳಪಡಿಸಿದ್ದಾರೆ. ಅವರ ಸಾಮಾಜಿಕ ವರ್ತನೆ, ಸಂಬಂಧಗಳನ್ನು ಕಟ್ಟಿಕೊಳ್ಳುವ ಪರಿಯು ಅಷ್ಟೊಂದು ಗಾಢವಾಗಿರುವುದಿಲ್ಲ ಎಂಬುದನ್ನು ಅವರು ಕಂಡುಕೊಂಡಿದ್ದಾರೆ. ಇದರ ಮೇಲೆ ಯಾವುದೇ ನಿರ್ದಿಷ್ಟ ಲಿಂಗ, ಶಿಕ್ಷಣ ಅಥವಾ ಜೀವನ ಆದಾಯದ ಪ್ರಭಾವವೇನೂ ಇಲ್ಲ. ಬೆಳೆದಂತೆ ಅವರು ಸಾಮಾಜಿಕ ಸಂಗತಿಗಳಿಂದ ವಿಮುಖರಾಗುವ ಅಪಾಯಗಳೇ ಹೆಚ್ಚು ಎನ್ನುತ್ತದೆ ಅಧ್ಯಯನ.

ಮಗು ಗರ್ಭದಲ್ಲಿ ಇರುವಾಗಲೇ ಉಂಟಾಗಿರಬಹುದಾದ ಒತ್ತಡ ಅಥವಾ ಅತಿಯಾಗಿ ನಿರ್ಬಂಧಿಸುವ, ಕಾಳಜಿ ತೋರುವ ಪೋಷಕರೂ ಮಕ್ಕಳು ಮುಂದೆ ಸಮಾಜದಿಂದ ದೂರ ಸರಿಯಲು ಕಾರಣವಾಗಬಲ್ಲರು. ಈ ಹಿಂದಿನ ಅಧ್ಯಯನಗಳು ಅವಧಿಗೂ ಮುನ್ನ ಜನಿಸಿದ ಮಕ್ಕಳು ಓದಿನಲ್ಲಿ ಅಷ್ಟಾಗಿ ತೊಡಗಿಕೊಳ್ಳುವುದಿಲ್ಲ, ಎಲ್ಲಾ ಚಟುವಟಿಕೆಗಳಿಂದ ದೂರವಿರುವುದೇ ಹೆಚ್ಚು ಎಂದು ಹೇಳಿದ್ದವು. ಇಂತಹ ಮಕ್ಕಳನ್ನು ಪೋಷಕರೇ ಬಾಲ್ಯದಿಂದ ಹೆಚ್ಚು ಸಮಾಜದೊಂದಿಗೆ ಬೆರೆಸುವ ಮತ್ತು ಕ್ರಿಯಾಶೀಲರನ್ನಾಗಿರಿಸುವ ಮೂಲಕ ತಿದ್ದಬಹುದು ಎನ್ನುತ್ತಾರೆ ವೋಲ್ಕ್‌.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT