ADVERTISEMENT

ಭೋಜನದ ಮಜಾ...

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2017, 19:30 IST
Last Updated 22 ಫೆಬ್ರುವರಿ 2017, 19:30 IST
ಭೋಜನದ ಮಜಾ...
ಭೋಜನದ ಮಜಾ...   

ಬೆಟ್ಟದ ಮೇಲೆ ಟೀ ಕುಡಿಯಲು
ಚೀನಾದ ಟೀ ರುಚಿಯೇನೋ ಹೌದು. ಆದರೆ ಅಲ್ಲಿನ ಮೌಂಟ್ ಹೌಶಾನ್‌ನಲ್ಲಿನ ಟೀ ಹೌಸ್‌ನಲ್ಲಿ ಟೀ ಕುಡಿಯುವುದು ಮಾತ್ರ ಸಾಹಸವೇ. ಸಮುದ್ರ ಮಟ್ಟಕ್ಕಿಂತ 7087 ಅಡಿ ಎತ್ತರದಲ್ಲಿರುವ ಈ ಟೀ ಹೌಸ್‌ಗೆ ದಾರಿ ಎಂಬುದೇ ಇಲ್ಲ. ಕಡಿದಾದ ಬೆಟ್ಟ, ಜಾರುವ ಬಂಡೆಗಳಲ್ಲಿ ಎಂದೋ ಕಟ್ಟಿದ್ದ ಮರದ ಹಲಗೆಗಳೇ ಇಂದಿಗೂ ಹಾದಿ. ಆಯ ತಪ್ಪಿದರೆ ಪ್ರಪಾತಕ್ಕೆ ಬೀಳುವುದು ಗ್ಯಾರಂಟಿ . ಸರಳು ಹಿಡಿದೇ ಸಾಗಬೇಕು. ಧೈರ್ಯ ಇದ್ದವರಿಗಷ್ಟೇ ಇಲ್ಲಿ ಟೀ ಪ್ರಾಪ್ತಿ.

ಆಕಾಶದಲ್ಲಿ ಆಹಾರ ಸೇವಿಸಿ
ಗಾಳಿಯಲ್ಲಿ ತೇಲುತ್ತಾ ಊಟ ಮಾಡುವುದು ಯಾರಿಗಿಷ್ಟವಿಲ್ಲ? ಆ ಖುಷಿ ಪಡೆಯಲೆಂದೇ ಲಕ್ಷಗಟ್ಟಲೆ ಖರ್ಚು ಮಾಡುವವರಿದ್ದಾರೆ. ಇಂಥವರಿಗೆಂದೇ ಲಾಸ್ ವೇಗಸ್, ಲಂಡನ್, ಪ್ಯಾರಿಸ್‌ಗಳಲ್ಲಿ ‘ಡೈನಿಂಗ್ ಇನ್ ದಿ ಸ್ಕೈ’ ಪರಿಕಲ್ಪನೆಯಲ್ಲಿ ರೆಸ್ಟೊರೆಂಟ್‌ಗಳು ಹುಟ್ಟಿಕೊಂಡಿವೆ. 180 ಅಡಿ ಎತ್ತರಕ್ಕೆ ಫ್ಲೈಯಿಂಗ್ ಟೇಬಲ್ ಅನ್ನು ಎತ್ತರಿಸಿ ಅಲ್ಲಿ ಊಟ ಬಡಿಸಲಾಗುತ್ತದೆ. 360 ಡಿಗ್ರಿ ಪಕ್ಷಿ ನೋಟ ನೋಡುತ್ತಾ 22 ಮಂದಿ ಮನಸಾರೆ ಊಟ ಸವಿಯಬಹುದು.

ಮರದ ಮೇಲಿನ ಭೋಜನ
ವೃಕ್ಷಪ್ರೇಮಿಗಳಿಗೆ ಈ ‘ಯೆಲ್ಲೋ ಟ್ರೀ ಹೌಸ್’ ರೆಸ್ಟೊರೆಂಟ್ ಸಮರ್ಪಿತ. ನ್ಯೂಜಿಲೆಂಡ್‌ನ ಕಾಡಿನ ಮಧ್ಯೆ ದೊಡ್ಡ ಮರವೊಂದರಲ್ಲಿ ನಿರ್ಮಿಸಲಾಗಿರುವ ಮರದ ಮೇಲಿನ ಈ ರೆಸ್ಟೊರೆಂಟ್‌ನಲ್ಲಿ ಒಟ್ಟಿಗೆ 20 ಮಂದಿ ಕೂತು ಆಹಾರ ಸೇವಿಸಬಹುದು.  ಸುತ್ತಲಿನ ಹಸಿರನ್ನು ನೋಡುತ್ತಾ ತಿಂಡಿ ತಿನ್ನಬಹುದು.

ADVERTISEMENT

ಸಮುದ್ರದೊಂದಿಗೆ ಊಟೋಪಚಾರ
ಮಾಲ್ಡೀವ್ಸ್‌ನಲ್ಲಿನ ನೀರೊಳಗಿನ ‘ರಂಗಾಲಿ ಐಲೆಂಡ್ ರೆಸ್ಟೊರೆಂಟ್‌’ ವಿಶ್ವದ ‘ಮೊದಲ ನೀರಿನೊಳಗಿನ ರೆಸ್ಟೊರೆಂಟ್’ ಎಂದು ಕರೆಸಿಕೊಂಡಿದೆ. ಆಕ್ರಿಲಿಕ್ ಟನಲ್‌ನ 175 ಟನ್‌ನ ರೆಸ್ಟೊರೆಂಟ್ ಅನ್ನು ನೀರಿನಲ್ಲಿ16 ಅಡಿ ಆಳದಲ್ಲಿ ಇಳಿಬಿಡಲಾಗುತ್ತದೆ. ಗ್ರಾಹಕರಿಗೆ ಎಲ್ಲಾ ಭದ್ರತೆಯೊಂದಿಗೆ ಪ್ರವೇಶ ನೀಡುತ್ತಾ, ಒಳಗೆ 270 ಡಿಗ್ರಿ ಕೋನದ ಸಮುದ್ರದೊಳಗಿನ ನೋಟವನ್ನು ನೋಡಬಹುದು.

ಕತ್ತಲಲ್ಲಿ ಕರಗಲು

ದಿನವಿಡೀ ಕಂಪ್ಯೂಟರ್‌ ಸ್ಕ್ರೀನ್ ನೋಡುತ್ತಲೇ ಇರುವ ಮಂದಿಯನ್ನು ಗಮನದಲ್ಲಿಟ್ಟುಕೊಂಡೇ ವಿಭಿನ್ನ ಪರಿಕಲ್ಪನೆಯೊಂದಿಗೆ ಜರ್ಮನಿಯಲ್ಲಿ ಹುಟ್ಟಿಕೊಂಡ ‘ಅನ್‌ಸಿಚ್’ ಬಾರ್ ಇದು. ಸಂಪೂರ್ಣ ಕತ್ತಲೆಯಿಂದ ತುಂಬಿದ ಈ ರೆಸ್ಟೊರೆಂಟ್, ಹೊರ ಜಗತ್ತಿನ ಎಲ್ಲಾ ಜಂಜಾಟಗಳಿಂದ ದೂರ ಉಳಿದು ಕತ್ತಲಲ್ಲಿ ಕುಳಿತು ಊಟ ತಿನ್ನಲಿಕ್ಕೆಂದೇ ವಿಶೇಷವಾಗಿ ರೂಪಿತಗೊಂಡಿದೆ. ಇಲ್ಲಿ ಅಂಧರನ್ನು ಹಾಗೂ ದೃಷ್ಟಿದೋಷ ಇರುವ ಮಂದಿಯನ್ನೇ ವೇಟರ್ ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ. ಮೊಬೈಲ್ ಕೂಡ ಇಲ್ಲಿ ನಿಷೇಧ. ಶೌಚಾಲಯಕ್ಕೆ ಹೋಗಬೇಕೆಂದರೆ ಮಾತ್ರ  ನಿಮಗೆ ಸಹಾಯ ಸಿಗುತ್ತದೆ.

ಸಮರಕಲೆ ಬೆರೆತ ಸವಿಯೂಟ
ಹೊರನೋಟಕ್ಕೆ ಜಪಾನೀ ಶೈಲಿ ರೆಸ್ಟೊರೆಂಟ್‌ನಂತೆ ಗೋಚರಿಸಿದರೂ ಒಳಗೆ ಭಯದ ವಾತಾವರಣ ಇರುತ್ತದೆ. ಈ ನಿಂಜಾ ರೆಸ್ಟೊರೆಂಟ್‌ನ ಸುತ್ತು ಬಳಸಿನ ಸಂಕೀರ್ಣ ಜಾಗದಲ್ಲಿ ನುಗ್ಗಿ ಹೋಗಿ ನಿಮ್ಮ ಜಾಗದಲ್ಲಿ ಕೂತಿರೆಂದರೆ ಭಯಪಡಿಸಲೆಂದೇ ಕತ್ತಿವರಸೆ ತೋರುವ ಮಂದಿ ಇರುತ್ತಾರೆ. ಈ ರೆಸ್ಟೊರೆಂಟ್ ಇರುವುದು ನ್ಯೂಯಾರ್ಕ್‌ನಲ್ಲಿ.

ಗಣಿಯೊಳಗಿನನಿಶಾಚರಿಗಳ ಭೋಜನ
ಫಿನ್‌ಲೆಂಡ್‌ನಲ್ಲಿ ಗಣಿಯೊಳಗೆ ಈ ಮುರು ಪಾಪ್‌ಡೌನ್ ರೆಸ್ಟೊರೆಂಟ್‌ ನಿರ್ಮಿತಗೊಂಡಿರುವುದು. 280 ಅಡಿಯ ಆಳದಲ್ಲಿ ರೆಸ್ಟೊರೆಂಟ್ ಇದ್ದು, ಗ್ರಾಹಕರನ್ನು ಲಿಫ್ಟ್‌ನಲ್ಲಿ ಕೆಳಗೆ ಕರೆದುಕೊಂಡು ಹೋಗಲಾಗುತ್ತದೆ. ಜಗದ ಜಂಜಡಗಳನ್ನು ಹೊರಹಾಕಿ ನಿಶಾಚರಿಗಳಂತೆ ಇರುವ ಕಲ್ಪನೆಯಲ್ಲಿ ಇದು ರೂಪುಗೊಂಡಿದೆ.

ಜೈಲು, ಆಸ್ಪತ್ರೆ, ಹೋಟೆಲ್‌ ಎಲ್ಲ ಇಲ್ಲೇ...
ರೆಸ್ಟೊರೆಂಟ್ ಜೊತೆ ಆಸ್ಪತ್ರೆ, ಹೋಟೆಲ್, ಜೈಲು ಎಲ್ಲವನ್ನೂ ಒಟ್ಟಿಗೆ ನೋಡಬೇಕೆಂದರೆ ಈ ಅಲ್ಕಟ್ರಾಸ್‌ ರೆಸ್ಟೊರೆಂಟ್‌ಗೆ ಬರಬೇಕು. ಪ್ರವೇಶದಲ್ಲೇ ನಿಮ್ಮ ರಕ್ತದ ಗುಂಪನ್ನು ಇಲ್ಲಿ ನಮೂದಿಸಬೇಕು. ಒಳಗೆ ಹೋಗುತ್ತಿದ್ದಂತೆ  ನರ್ಸ್‌ ಬಟ್ಟೆ ತೊಟ್ಟವರು ನಿಮ್ಮನ್ನು ಕರೆದುಕೊಂಡು ಜೈಲಿನಂಥ ರೂಮಿಗೆ ಬಿಡುತ್ತಾರೆ. ಅಲ್ಲಿಗೇ ಎಲ್ಲ ಮುಗಿಯಲಿಲ್ಲ. ಮೆನು ನಿಮ್ಮ ಮುಂದೆ ಬರುತ್ತದೆ. ಅದೂ ಮಾಮೂಲಿನಂತಿರುವುದಿಲ್ಲ. ರುಂಡ, ದೇಹದ ಭಾಗಗಳನ್ನು ಹೋಲುವ ಪಾತ್ರೆಗಳಲ್ಲಿ ಊಟ ಬಡಿಸಿ ಇನ್ನಷ್ಟು ಭಯಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.