ADVERTISEMENT

ಮತ್ತೆ ಬಂದ ಮೌಂಟ್ ಕಾರ್ಮೆಲ್ ಮೊಮ್ಮಗಳು

ಮಂಜುನಾಥ ರಾಠೋಡ
Published 8 ಆಗಸ್ಟ್ 2017, 19:30 IST
Last Updated 8 ಆಗಸ್ಟ್ 2017, 19:30 IST
ಮತ್ತೆ ಬಂದ ಮೌಂಟ್ ಕಾರ್ಮೆಲ್ ಮೊಮ್ಮಗಳು
ಮತ್ತೆ ಬಂದ ಮೌಂಟ್ ಕಾರ್ಮೆಲ್ ಮೊಮ್ಮಗಳು   

ಹೊಸ ವಿಡಿಯೊ ಹಾಡಿನ ಬಗ್ಗೆ ಹೇಳಿ?

ಇದು ಹಿಂದಿಯ ಹಾಡು. ‘ಜಾನೆ ಕಹಾ’ ಎಂದು ಇದರ ಹೆಸರು. ಈ ಹಾಡು ಸಾವಿನ ಕುರಿತಾದದ್ದು, ‘ಒನ್ ಟ್ರಿಕ್ ಫೋನಿ’ ಬ್ಯಾಂಡ್‌ ಅವರು ಹಾಡನ್ನು ಹೊರತರುತ್ತಿದ್ದಾರೆ. ಈ ಮುಂಚೆ ಪಾಪ್ ಶೈಲಿಯ ಹಾಡು ಹಾಡಿದ್ದ ನಾನು ಮೊದಲ ಬಾರಿ ಗಂಭೀರ ಶೈಲಿಯ ಹಾಡನ್ನು ಕಷ್ಟಪಟ್ಟು ಹಾಡಿದ್ದೇನೆ. ಹಾಡು  ಆಗಸ್ಟ್ 14ರಂದು ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಲಿದೆ.

ಹಾಡಿನ ಹಿಂದೆ ಯಾರಿದ್ದಾರೆ?

ADVERTISEMENT

‘ಸಿಂಪಲ್ಲಾಗೊಂದ್ ಲವ್ ಸ್ಟೋರಿ’, ‘ಬ್ಯೂಟಿಫುಲ್ ಮನಸುಗಳು’ ಖ್ಯಾತಿಯ ಸಂಗೀತ ನಿರ್ದೇಶಕ ಬಿ.ಜೆ.ಭರತ್ ಈ ಹಾಡಿಗೆ ರಾಗ ಸಂಯೋಜಿಸಿದ್ದಾರೆ. ಸಾಹಿತ್ಯ ಮತ್ತು ವಿಡಿಯೊ ನಿರ್ದೇಶನ ಬೆಂಗಳೂರಿನಲ್ಲೇ ನೆಲೆಸಿರುವ ಬೆಂಗಾಲಿ, ದೀಪಾಂಜನ್ ಸನ್ಯಾಲ್ ಅವರದು. ನನ್ನ ಮೊದಲ ವಿಡಿಯೊ ಹಾಡು ’ದಿಬ್ಬರದಿಂಡಿ’ಯನ್ನು ನಿರ್ದೇಶಿಸಿದ್ದು ಇವರೇ. ಹಿರಿಯ ಛಾಯಾಗ್ರಾಹಕ ಮಧು ಅಂಬಟ್ ಅವರ ಮಗ ದರ್ಶನ್ ಅಂಬಟ್ ಅವರು ಕ್ಯಾಮೆರಾ ಹಿಡಿದಿದ್ದಾರೆ ಇದು ಇವರ ಮೊದಲ ಪ್ರಯತ್ನ. ಉದಯ ಟಿವಿಯ ‘ಅವಳು’ ಧಾರಾವಾಹಿಯ ಪ್ರಮುಖ ಪಾತ್ರಧಾರಿ ರಾಕೇಶ್ ಮಯ್ಯ ವಿಡಿಯೊದಲ್ಲಿ ನನ್ನೊಂದಿಗೆ ನಟಿಸಿದ್ದಾರೆ.

ಹಿಂದಿ ಹಾಡು ಏಕೆ?

ಇದು ಉದ್ದೇಶಿತವಲ್ಲ. ಬೆಂಗಾಳಿಯವರಾದ  ದೀಪಾಂಜನ್ ಹಿಂದಿಯಲ್ಲಿ ಹಾಡು ಬರೆದಿದ್ದರು. ಮೂಲಭಾಷೆಯಲ್ಲೇ ಈ ಹಾಡನ್ನು ವಿಡಿಯೊ ಶೂಟ್ ಮಾಡಬೇಕೆಂದು ‘ಒನ್ ಟ್ರಿಕ್ ಫೋನಿ’ ತಂಡ ನಿರ್ಧರಿಸಿತು. ನಾನೇ ಹಾಡಬೇಕೆಂದು ಅವರು ಒತ್ತಾಯಿಸಿದ್ದರಿಂದ ಈ ಹಾಡಿನ ಭಾಗವಾಗುವ ಅವಕಾಶ ದೊರಕಿತು. ಹಿಂದಿ ಹಾಡಿನ ಮೂಲಕ ಹೆಚ್ಚು ಜನರನ್ನು ತಲುಪುವ ಉದ್ದೇಶವೂ ಇದರ ಹಿಂದಿದೆ. ಇದು ಸಣ್ಣ ಪ್ರಯತ್ನ ಅಷ್ಟೆ. ಈ ಹಾಡಿನ ಕನ್ನಡ ಅವತರಣಿಕೆಯೂ ತಯಾರಾಗಿದೆ.

ಈ ರೀತಿಯ ಒಂಟಿ ವಿಡಿಯೊ ಹಾಡುಗಳು ಲಾಭದಾಯಕ ಅಲ್ಲ ಅಲ್ಲವೇ?

ನಿಜ, ಆದರೆ ಲಾಭದ ಉದ್ದೇಶದಿಂದ ಈ ಕೆಲಸ ಮಾಡುತ್ತಿಲ್ಲ. ನಾವು ಮೊದಲ ಹಾಡನ್ನು ಬಹಳ ರಿಚ್ ಆಗಿ ಮಾಡಿದ್ದೆವು ಸಾಕಷ್ಟು ಖರ್ಚು ಕೂಡ ಮಾಡಿದ್ದೆವು. ನಮಗೆ ರಿಚ್ ಆದ ವಿಡಿಯೋ ಹಾಡು ನೀಡುವ ಆಸೆಯಿತ್ತು ಹಾಗಾಗಿ ಮಾಡಿದೆವು ಅಷ್ಟೆ. ಈಗ ಈ ಹಾಡು ಮಾಡುತ್ತಿರುವುದೂ ಕೂಡ ನಮ್ಮ ಪ್ರತಿಭೆಯ ಅನಾವರಣಕ್ಕೆ ಮತ್ತು ಸಂಗೀತದೆಡೆಗಿನ ಪ್ರೀತಿಗೆ ಅಷ್ಟೆ. ಆದರೆ ಈ ಬಾರಿ ಸ್ವಲ್ಪ ಕಡಿಮೆ ಖರ್ಚು ಮಾಡಿದ್ದೇವೆ.

ಆಲ್ಬಂ ಮಾಡಬಹುದಿತ್ತಲ್ಲಾ?

90ರ ದಶಕದಲ್ಲಿ ಆಲ್ಬಂಗಳಿಗಿದ್ದ ಜನಪ್ರಿಯತೆ ಈಗಿಲ್ಲ. ಈಗೆಲ್ಲಾ ಸಿನಿಮಾ ಹಾಡುಗಳದ್ದಷ್ಟೇ ಕಾರುಬಾರು. ಉತ್ತರ ಭಾರತದಲ್ಲಿ ಆಲ್ಬಂಗಳಿಗೆ ಒಳ್ಳೆ ಬೇಡಿಕೆ ಇದೆ. ಪಂಜಾಬ್‌ನಲ್ಲಿಯಂತೂ ಜನಪದ ಹಾಡುಗಳ ರೀಮಿಕ್ಸ್ ಮಾಡಿ ಹಾಡುವ ಹಾಡುಗಾರರು ಸೆಲೆಬ್ರಿಟಿಗಳೇ ಆಗಿದ್ದಾರೆ. ನಾವು ಆಲ್ಬಂ ಮಾಡುವ ಯೋಜನೆಯಲ್ಲಿದ್ದೇವೆ. ಮೊದಲ ಹಾಡಿನಂತೆ ಜನಪ್ರಿಯ ಜನಪದ ಹಾಡು ಹೆಕ್ಕಿ ಅದಕ್ಕೆ ಹೊಸತನದ ಸ್ಪರ್ಶ ನೀಡಿ ಅದನ್ನು ಆಲ್ಬಂ ರೂಪದಲ್ಲಿ ಬಿಡುಗಡೆ ಮಾಡುವ ಯೋಚನೆ ಇದೆ.

ಮೊದಲ ಹಾಡಿಗೆ ಒಳ್ಳೆ ಪ್ರತಿಕ್ರಿಯೆ ಬಂದಿತ್ತಲ್ಲವೇ?

ಹೌದು ನಾವು ನಿರೀಕ್ಷೆ ಮಾಡಿರಲೇ ಇಲ್ಲ. ಈವರೆಗೆ ‘ದಿಬ್ಬರದಿಂಡಿ’ ಹಾಡನ್ನು 13 ಲಕ್ಷಕ್ಕೂ ಹೆಚ್ಚು ಜನ ನೋಡಿದ್ದಾರೆ. ಉತ್ತಮವಾದುದನ್ನು ಜನ ಖಂಡಿತಾ ಇಷ್ಟಪಡುತ್ತಾರೆ. ಮೊದಲ ಹಾಡಿಗಿಂತಲೂ ಈ ಹಾಡು ಹೆಚ್ಚು ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ.

ಸಿನಿಮಾಗಳಲ್ಲಿ ಹಾಡುತ್ತಿದ್ದೀರಾ?

ಇಲ್ಲ, ‘ಕಡ್ಡಿಪುಡಿ’ ನಂತರ ಹಲವು ಅವಕಾಶ ಬಂದವು ಆದರೆ ನಾನೇ ನಿರಾಕರಿಸಿದೆ. ಇದಕ್ಕಾಗಿ ಮನೆಯವರಿಂದ ಬೈಸಿಕೊಂಡೆ ಕೂಡಾ. ನಾನು ವೃತ್ತಿಪರ ಹಾಡುಗಾರ್ತಿಯಲ್ಲ, ಸಂಗೀತ ಕಲಿತೂ ಇಲ್ಲ. ಅದು ನನ್ನ ಹವ್ಯಾಸವಷ್ಟೆ. ನನಗಿಂತಲೂ ಚೆನ್ನಾಗಿ ಹಾಡುವವರು ಚಿತ್ರರಂಗದಲ್ಲಿ ಸಾಕಷ್ಟು ಜನ ಇದ್ದಾರೆ. ಆದರೆ ‘ಕಡ್ಡಿಪುಡಿ’ ಚಿತ್ರದ ಹಾಡಿನಂತೆ ಭಿನ್ನ ದಾಟಿಯ ಹಾಡುಗಳಿಗೆ ಧ್ವನಿ ನೀಡುವ ಅವಕಾಶ ಬಂದರೆ,  ಮೊನ್ನೆ ‘ಆಪರೇಷನ್ ಅಲಮೇಲಮ್ಮ’ ಚಿತ್ರದ ‘ತಿಳಿ ಸಂಜೆ’ ಹಾಡು ಕೇಳಿದೆ ಆ ಹಾಡು ನಾನು ಹಾಡಬೇಕಿತ್ತಲ್ಲಾ ಎನಿಸಿತು.

ನಿಮ್ಮ ಫ್ಯಾಷನ್ ಡಿಸೈನಿಂಗ್ ವೃತ್ತಿ ಹೇಗೆ ನಡೆಯುತ್ತಿದೆ?

ಚೆನ್ನಾಗಿ ನಡೆಯುತ್ತಿದೆ ಈಗಷ್ಟೆ ಕಲರ್ಸ್ ಕನ್ನಡದ ‘ವೀಕೆಂಡ್ ವಿತ್ ರಮೇಶ್’ ಕಾರ್ಯಕ್ರಮ ಮುಗಿದಿದೆ. ಮತ್ತೊಂದು ಕಾರ್ಯಕ್ರಮಕ್ಕೆ ಡಿಸೈನ್ ಮಾಡುವಂತೆ ಅಲ್ಲಿಂದಲೇ ಆಹ್ವಾನ ಬಂದಿದೆ. ನಾನು ವಸ್ತ್ರವಿನ್ಯಾಸ ಮಾಡಿ
ರುವ ಶರಣ್ ಅಭಿನಯದ ‘ರ‍್ಯಾಂಬೊ2’ ಚಿತ್ರ ಬಿಡುಗಡೆಗೆ ತಯಾರಿದೆ. ದೀಪಾ ಸನ್ನಿಧಿ ನಟಿಸುತ್ತಿರುವ ಇನ್ನೂ ಹೆಸರಿಡದ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ನಿಖಿಲ್ ಕುಮಾರಸ್ವಾಮಿ ಅವರ ಚಿತ್ರದಲ್ಲೂ ಡಿಸೈನ್‌ ಮಾಡುತ್ತಿದ್ದೇನೆ. ಅದರ ಫೋಟೊ ಶೂಟ್ ಮುಗಿದಿದೆ ಚಿತ್ರೀಕರಣ ಪ್ರಾರಂಭವಾಗಬೇಕಿದೆ. ⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.