ADVERTISEMENT

‘ಮಳೆ ಬಂದರೆ ತಲೆ ಸ್ನಾನ ಮಾಡುವೆ’

ರಮೇಶ ಕೆ
Published 2 ಡಿಸೆಂಬರ್ 2016, 19:30 IST
Last Updated 2 ಡಿಸೆಂಬರ್ 2016, 19:30 IST
ನಟಿ ಶಿಲ್ಪಾ ಮಂಜುನಾಥ್‌
ನಟಿ ಶಿಲ್ಪಾ ಮಂಜುನಾಥ್‌   

ಮುಂಗಾರು ಮಳೆ 2 ಚಿತ್ರದ ಮೂಲಕ ಸಿನಿಮಾ ಕ್ಷೇತ್ರಕ್ಕೆ ಪ್ರವೇಶ ಮಾಡಿದ ರೂಪದರ್ಶಿ, ನಟಿ ಶಿಲ್ಪಾ ಮಂಜುನಾಥ್‌ ತಮಿಳು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.
ಎಂಜಿನಿಯರಿಂಗ್‌ ಓದಿರುವ ಇವರು, 2013ರಲ್ಲಿ ಮಿಸ್‌ ಕರ್ನಾಟಕ ಪ್ರಶಸ್ತಿ ಮುಡಿಗೇರಿಸಿಕೊಂಡವರು. ಸದ್ಯ ‘ರಂಗರಾಟೀನಂ’, ‘ಓಣಾನ್‌’, ‘ಯಮನ್‌’ ತಮಿಳು ಚಿತ್ರಗಳಲ್ಲಿ ಬ್ಯುಸಿ.

ಇವರ ಮೊದಲ ಸಿನಿಮಾ ‘ಮುಂಗಾರು ಮಳೆ 2’ ಹೇಳಿಕೊಳ್ಳುವಂಥ ಯಶಸ್ಸು ಕಾಣಲಿಲ್ಲ. ಈಗ ಕಾಲಿವುಡ್‌ ಅಂಗಳದಲ್ಲಿ ತಮ್ಮ ಪ್ರತಿಭೆ ಸಾಣೆ ಹಿಡಿಯಲು ಹೊರಟಿದ್ದಾರೆ.
ಸಿನಿ ಪಯಣದ ಬಗ್ಗೆ ಶಿಲ್ಪಾ ಆಡಿದ ಮಾತುಗಳು ಇಲ್ಲಿವೆ...

* ‘ಓಣಾನ್‌’ ಚಿತ್ರದಲ್ಲಿ ನಿಮ್ಮ ಪಾತ್ರವೇನು?
ಇದೊಂದು ಪಕ್ಕಾ ಗ್ರಾಮೀಣ ಸೊಗಡಿನ ಚಿತ್ರ. ನಾನಿರುವುದಕ್ಕೆ ವಿರುದ್ಧ ಪಾತ್ರ.  ಮಧ್ಯಮ ವರ್ಗದ ಹುಡುಗಿ ಅನುಭವಿಸುವ ಕಷ್ಟ ಸುಖ, ಆಕೆಯ ಬದುಕಿನಲ್ಲಿ ಆಗುವ ಸಂಘರ್ಷ ಚಿತ್ರದಲ್ಲಿದೆ. ಒಂದಿಷ್ಟೂ ಮೇಕಪ್‌ ಇಲ್ಲದೇ ಚಿತ್ರೀಕರಣ ಮಾಡಿದ್ದಾರೆ. ಮೂಗುತಿಯನ್ನು ಚುಚ್ಚಿದ್ದಾರೆ.

* ಚಿತ್ರದಲ್ಲಿ  ನಿಮಗೆ ವಿಶೇಷ ಎನಿಸಿದ್ದು?
ತಂಜಾವೂರು ಸಮೀಪದ ಹಳ್ಳಿಯೊಂದರಲ್ಲಿ ಚಿತ್ರೀಕರಣ ನಡೆದಿದೆ. ‘ಮುಂಗಾರು ಮಳೆ 2’ ರಲ್ಲಿ ಶಾರ್ಟ್ಸ್‌ ಹಾಕಿಕೊಂಡು ಮಾರ್ಡನ್‌ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ, ಅದರಲ್ಲಿ ನಾನು ಪಕ್ಕಾ ಬೆಂಗಳೂರಿನ ಹುಡುಗಿ. ಆದರೆ ಈ ಚಿತ್ರದಲ್ಲಿ ಅದಕ್ಕೆ ವಿರುದ್ಧವಾದ, ಸವಾಲಿನ ಪಾತ್ರ ಸಿಕ್ಕಿದೆ.  ಸಿನಿ ತಂಡದಲ್ಲಿ ಮಲಯಾಳಂ ಮೂಲದವರು ಇರುವುದು ಮತ್ತೊಂದು ವಿಶೇಷ. ಸೇನಾನ್‌ ಪೋಲಿಚ್ಚರಿ ಅವರು ಚಿತ್ರ ನಿರ್ದೇಶಿಸಿದ್ದಾರೆ.

* ಮಳೆ ಅಂದ್ರೆ ಏನು ನೆನಪಾಗುತ್ತದೆ?
ಚಿಕ್ಕ ವಯಸ್ಸಿನಿಂದ ನನಗೊಂದು ಚಾಳಿಯಿದೆ. ಅದೇನೆಂದರೆ ಮಳೆ ಬಂದರೆ ಸಾಕು ತಲೆಸ್ನಾನ ಮಾಡುತ್ತೇನೆ, ನಂತರ ಮನೆಯ ವರಾಂಡಾದಲ್ಲೋ ಅಥವಾ ಹೊರಗೆ ಹೋಗಿ ಮಳೆಯನ್ನು ನೋಡುತ್ತಾ ಕಾಫಿ ಕುಡಿಯುವುದು. ತಣ್ಣನೆ ಗಾಳಿ ಕಿವಿಗೆ ತಾಕುತ್ತಿರುವಾಗ ಕಾಫಿ ಹೀರುವುದೇ ಖುಷಿ.  ಮತ್ತೊಂದು ವಿಷಯವೆಂದರೆ ಬಿಡುವು ಸಿಕ್ಕಾಗ ಮಲಗುತ್ತೇನೆ.

* ನಿಮ್ಮ ಕೈಹಿಡಿಯುವ ಹುಡುಗ ಹೇಗಿರಬೇಕು?
ಆ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ. ಜೀವನದಲ್ಲಿ ಸಾಧಿಸಬೇಕಾದ್ದು ತುಂಬಾ ಇದೆ. ಇನ್ನೂ ಐದಾರು ವರ್ಷ ಕಳೆದ ಮೇಲೆ ಮದುವೆ ಮಾತು.

* ತಮಿಳು ಸಿನಿಮಾಗಳಲ್ಲೇ ಹೆಚ್ಚು ಅವಕಾಶ ಸಿಗುತ್ತಿವೆಯಲ್ಲಾ...
ಹೌದು, ‘ದೇವದಾಸ್‌ ಬ್ರದರ್ಸ್‌’ ಚಿತ್ರದ ನಟಿಯರ ಆಡಿಷನ್ ಬೆಂಗಳೂರಿನಲ್ಲಿ ನಡೆಯಿತು. ಆ ಚಿತ್ರಕ್ಕೆ ಆಯ್ಕೆಯಾದ ಮೇಲೆ ತಮಿಳಿನ ಮೂರು ಸಿನಿಮಾಗಳಿಗೆ ಅವಕಾಶ ಬಂತು. ‘ಓಣಾನ್’, ‘ಯಮನ್‌’ ಚಿತ್ರಗಳು ತೆರೆಗೆ ಬರಲು ಸಿದ್ಧವಾಗಿವೆ. ಕನ್ನಡದ ನಿರ್ದೇಶಕರು ಅವಕಾಶ ಕೊಡಬಹುದೆಂದು ಕಾಯುತ್ತಿದ್ದೇನೆ.

* ನಿಮ್ಮ ಮುಂದಿನ ಆಯ್ಕೆ ಮಾಡೆಲಿಂಗ್‌ ಅಥವಾ ಸಿನಿಮಾ?
ಸಿನಿಮಾ ರಂಗದಲ್ಲೇ ಹೆಸರು ಮಾಡಬೇಕು ಅಂದುಕೊಂಡಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.