ADVERTISEMENT

ಮಹಾಬ್ರಾಹ್ಮಣ

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 19:30 IST
Last Updated 11 ಜನವರಿ 2017, 19:30 IST
ಮಹಾಬ್ರಾಹ್ಮಣ
ಮಹಾಬ್ರಾಹ್ಮಣ   

ಕನ್ನಡ ಸಾಹಿತ್ಯಲೋಕ ಕಂಡ ವಿಶಿಷ್ಟ ಬರಹಗಾರರಲ್ಲಿ ದೇವುಡು ನರಸಿಂಹಶಾಸ್ತ್ರಿ ಕೂಡ ಒಬ್ಬರು. ಅರವತ್ತರ ದಶಕದ ತನಕ ಕನ್ನಡ ಸಾಹಿತ್ಯದಲ್ಲಿ ‘ಜನಪ್ರಿಯ’ ಎಂಬ ಪ್ರಕಾರವೊಂದರ ಶೋಧನೆಯಾಗಿರಲಿಲ್ಲ. ಎಲ್ಲರೂ ಜನರನ್ನು ತಲುಪುವುದಕ್ಕಾಗಿಯೇ ಬರೆಯುತ್ತಿದ್ದರು.

ಜನಪ್ರಿಯವಾಗಿರುವುದು ಒಂದು ಕೊರತೆ ಅಥವಾ ಕೀಳರಿಮೆಯಾಗಿ ಯಾರನ್ನೂ ಕಾಡಿರದ ಕಾಲಘಟ್ಟವದು. ಸಂಸ್ಕೃತದಲ್ಲಿ ಉನ್ನತ ಅಧ್ಯಯನ ನಡೆಸಿದ್ದ ದೇವುಡು ಅವರ ಜ್ಞಾನದ ಹರವು ವಿಸ್ತಾರವಾದುದು. ಈ ಕಾರಣದಿಂದಾಗಿಯೇ ಅವರ ಕೃತಿಗಳಲ್ಲಿ ಮನಸ್ಸಿಗೆ ಮುದನೀಡುವ ಕಥೆಯ ಜೊತೆಯಲ್ಲಿ ಸುಪ್ತವಾಗಿ ಒಂದು ತಾತ್ವಿಕತೆಯನ್ನು ದಾಟಿಸುವ ಪ್ರಯತ್ನವೂ ಇರುತ್ತಿತ್ತು. ಇವರ ಮಹಾಬ್ರಾಹ್ಮಣ ಕೃತಿಯನ್ನೂ ಇದೇ ದೃಷ್ಟಿಯಿಂದ ನೋಡಬಹುದು.

ಇದು ಕೇವಲ ವಸಿಷ್ಠ ಮತ್ತು ವಿಶ್ವಾಮಿತ್ರರೆಂಬ ಇಬ್ಬರು ಋಷಿಗಳ ನಡುವಣ ಸಂಘರ್ಷದ ಕಥೆಯಲ್ಲ. ಕ್ಷತ್ರಿಯನಾಗಿದ್ದ ವಿಶ್ವಾಮಿತ್ರ ತನ್ನ ಛಲದಿಂದಲೇ ಬ್ರಹ್ಮತ್ವವನ್ನು ಪಡೆದುಕೊಳ್ಳುವ ಕಥೆಯಾಗಿಯೂ ಇದನ್ನು ಕಾಣಬಹುದು. ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ಪ್ರಕಟವಾದ ಕೃತಿ ಇದು. ಇದರ ಮುನ್ನುಡಿಯಲ್ಲೆ ಪ್ರಸ್ತಾಪವಾಗಿರುವ ಕೆಲವು ಕುತೂಹಲಕಾರಿ ಅಂಶಗಳಿವೆ.

‘ಬ್ರಾಹ್ಮಣ ವಿರೋಧ’ ಎಂಬುದೂ ಒಂದು ತಾತ್ವಿಕತೆಯಾಗಿದ್ದ ಕಾಲಘಟ್ಟದಲ್ಲಿ ಈ ಕಾದಂಬರಿ ಹೊರಬರುತ್ತಿರುವುದಕ್ಕೆ ಸಂಬಂಧಿಸಿದಂತೆ ಈ ಮಾತುಗಳಿವೆ. ಒಂದು ಕಾಲಘಟ್ಟದ ಸಾಮಾಜಿಕ ಚಳವಳಿಗಳನ್ನು ಪ್ರಬುದ್ಧರು ಹೇಗೆ ಗ್ರಹಿಸಿದ್ದರು ಎಂಬುದಕ್ಕೆ ದೇವುಡು ಅವರ ಮಾತುಗಳು ಸಾಕ್ಷಿಯಾಗುತ್ತವೆ. ನಿರ್ದಿಷ್ಟ ಜಾತಿಯೊಂದನ್ನು ಸಮರ್ಥಿಸಿಕೊಳ್ಳುತ್ತೇನೆ ಎಂಬುದಕ್ಕಿಂತ ಹೆಚ್ಚಾಗಿ ನಿರ್ದಿಷ್ಟ ಜೀವನ ವಿಧಾನವೊಂದನ್ನು ಸಮರ್ಥಿಸುತ್ತೇನೆ ಎಂಬುದು ಅವರ ನಿಲುವಾಗಿತ್ತು ಎಂಬಂತೆ ಕಾಣಿಸುತ್ತದೆ.

ವರ್ಣಗಳೊಳಗೆ ಒಂದು ಮೇಲ್ಮುಖ ಚಲನೆ ಸಾಧ್ಯ ಎಂಬುದನ್ನು ಸಾಬೀತು ಮಾಡುವುದಕ್ಕಾಗಿಯೇ ಅವರು ಈ ಕಾದಂಬರಿಯನ್ನು ಬರೆದಂತೆ ಕಾಣಿಸುತ್ತದೆ. ಈ ಕೃತಿಯ ಕುರಿತು ಈಗಲೂ ಸಾಕಷ್ಟು ಚರ್ಚೆಗಳು ನಿರ್ದಿಷ್ಟ ವಲಯಗಳಲ್ಲಿ ನಡೆಯುವುದುಂಟು. ಆ ವಲಯಗಳಿಂದ ಚರ್ಚೆಗಳನ್ನು ಹೊರಗೆ ತರಬೇಕಾದ ಅಗತ್ಯವೂ ಇದೆ. ಈ ಕೃತಿ ಈಗ ಆರ್ಕೈವ್ ತಾಣದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು ಲಭ್ಯ. ಆಸಕ್ತರು ಇಲ್ಲಿರುವ ಲಿಂಕ್ ಬಳಸಬಹುದು:http://bit.ly/2jtK2jR

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.