ADVERTISEMENT

‘ಮೂಡ್‌ಗೂ ಬಣ್ಣಕ್ಕೂ ನೇರ ನಂಟಿದೆ’

ಬಿಗ್‌ಬಾಸ್

ರೋಹಿಣಿ ಮುಂಡಾಜೆ
Published 6 ಜನವರಿ 2017, 19:30 IST
Last Updated 6 ಜನವರಿ 2017, 19:30 IST
ಶಾಮ್‌ ಭಾಟಿಯಾ
ಶಾಮ್‌ ಭಾಟಿಯಾ   

*ಬಿಗ್‌ಬಾಸ್‌ ಮನೆಯ ವಿನ್ಯಾಸಕ್ಕೆ ಎಷ್ಟು ಸಮಯ ಹಿಡಿಯಿತು? ಆ ಪ್ರಕ್ರಿಯೆ ಬಗ್ಗೆ ಸ್ವಲ್ಪ ಮಾಹಿತಿ ಕೊಡಿ.
ವಿನ್ಯಾಸ ಮಾಡಲು ಒಂದು ತಿಂಗಳು ಬೇಕಾಯಿತು. 18 ಜನರು ನಮ್ಮ ತಂಡದಲ್ಲಿದ್ದರು. ನನ್ನ ಜೊತೆಗೆ ಇನ್ನಿಬ್ಬರು ಆರ್ಕಿಟೆಕ್ಟ್‌ಗಳು ನಮ್ಮೊಂದಿಗೆ ಕೆಲಸ ಮಾಡಿದರು. ಬೆಂಗಳೂರು, ಮುಂಬೈನಿಂದ ಸಾಧ್ಯವಾದಷ್ಟು ಸಾಮಗ್ರಿಗಳನ್ನು ತರಿಸಿಕೊಂಡೆವು. ಆಗ ನಮ್ಮ ಕೈನಲ್ಲಿ ಉಳಿದದ್ದು 25 ದಿನ ಉಳಿದಿತ್ತು. ನೆಲ, ಗೋಡೆ, ನೀರು ಮತ್ತು ವಿದ್ಯುತ್‌ ಸಂಪರ್ಕ, ಒಳಚರಂಡಿ... ಎಲ್ಲವೂ ಅಷ್ಟರೊಳಗೆ ಮುಗಿಯಿತು.

*ನಿರ್ಮಾಣ ಕಾರ್ಯದಲ್ಲಿ ಎಷ್ಟು ಮಂದಿ ಇದ್ದರು?
200 ಮಂದಿ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. 100 ಮಂದಿ ಹಗಲು ಇರುಳು, ಉಳಿದವರು ಪಾಳಿಯಂತೆ  ಕೆಲಸ ಮಾಡಿದರು.
 
*ಈ ಹಿಂದೆ ಯಾವ ರಿಯಾಲಿಟಿ ಶೋಗಳಿಗೆ ಸೆಟ್‌ ವಿನ್ಯಾಸ ಮಾಡಿದ್ದೀರಿ?
ಹಿಂದಿಯ ಬಿಗ್‌ಬಾಸ್‌ 3, 4 ಮತ್ತು 5ರ ಸೆಟ್‌ ಮಾಡಿದ್ದು ನಾನೇ. ಕನ್ನಡದ ಬಿಗ್‌ಬಾಸ್‌ನ ಮೂರನೇ ಸೀಸನ್‌ನ ಸೆಟ್‌  ಮಾಡಿದ್ದೂ ನಾನೇ. ಇದೀಗ ನಾಲ್ಕನೇ ಸೀಸನ್‌ಗೂ ಕೆಲಸ ಮಾಡಿದೆ. ಉಳಿದಂತೆ   ಕಲರ್ಸ್‌ ಕನ್ನಡ ವಾಹಿನಿಯ ಸೂಪರ್‌ ಮಿನಿಟ್‌, ಮಜಾ ಟಾಕೀಸ್‌ ಅಲ್ಲದೆ, ಮುಂಬೈಯಲ್ಲಿ ಇಂಡಿಯನ್‌ ಐಡಲ್‌, ಇಂಡಿಯಾ ಟಾಲೆಂಟ್‌, ಇಂಡಿಯಾ ಡಾನ್ಸ್‌, ಮಾಸ್ಟರ್‌ ಶೆಫ್‌, ಹೈದರಾಬಾದ್‌ನ ಮಾ ಟಿ.ವಿ, ಸ್ಟಾರ್‌ ಸಮೂಹ ವಾಹಿನಿಯ ರಿಯಾಲಿಟಿ ಶೋಗಳು, ಕೇರಳದ ಮಲಯಾಳಂ ಮನೋರಮಾದ ವಾಹಿನಿ... ಹೀಗೆ ಕನಿಷ್ಠ 250 ರಿಯಾಲಿಟಿ ಶೋಗಳಿಗೆ ಸೆಟ್‌ ವಿನ್ಯಾಸ ಮಾಡಿದ್ದೇನೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಹೇಳುವುದಾದರೆ ದಕ್ಷಿಣ ಆಫ್ರಿಕಾ, ಕೆರಿಬಿಯನ್‌, ದುಬೈನಲ್ಲಿ ಸ್ಪೋರ್ಟ್ಸ್‌ ಸಿಟಿಯ ಸೆಟ್‌ ವಿನ್ಯಾಸ ಮಾಡಿದ್ದೇವೆ.

*ಒಂದು ಸೋಫಾ ವಿಶಿಷ್ಟವಾಗಿದೆ...
ಅದು ಎಲ್ಲರ ಮೆಚ್ಚುಗೆಯನ್ನೂ ಗಳಿಸಿದೆ. ವ್ಯಕ್ತಿ ವಿವಿಧ ಭಂಗಿಗಳಲ್ಲಿ ಕುಳಿತಾಗ, ಮಲಗಿದಾಗ ಆತನ  ಬೆನ್ನು ಮೂಳೆ ಹೇಗಿರುತ್ತದೆ ಎಂಬುದನ್ನು   ಥೀಮ್ ಆಗಿಟ್ಟುಕೊಂಡು ಆ ಸೋಫಾವನ್ನು ವಿನ್ಯಾಸ ಮಾಡಿದ್ದೇನೆ.  ಕಳೆಸ ಸೀಸನ್‌ಗಿಂತ ಈ ಬಾರಿ ಸ್ಪರ್ಧಿಗಳು ಹೆಚ್ಚು ಹೆಚ್ಚು ಕಾಲ ಅದರಲ್ಲಿ ಕುಳಿತಿರುವುದನ್ನು ನಾನು ಗಮನಿಸಿದ್ದೇನೆ.

*ಆ ಸೋಫಾದ ಬಣ್ಣವೂ ಸೇರಿದಂತೆ  ಒಟ್ಟಾರೆ ಬಿಗ್‌ಬಾಸ್‌ ಮನೆಯ ಬಣ್ಣ ಬಹಳ ಆಕರ್ಷಕವಾಗಿದೆ. ಬಣ್ಣಗಳ ಆಯ್ಕೆ ಬಗ್ಗೆ ವಿವರಿಸಿ
ಆಕರ್ಷಕ ಬಣ್ಣಗಳನ್ನು ಆಯ್ಕೆ ಮಾಡಿರುವುದು ನಿಜ. ಯಾಕೆಂದರೆ ಅಲ್ಲಿ  ವಿಭಿನ್ನ ಮನೋಭಾವದ ವ್ಯಕ್ತಿಗಳು ಇರಬೇಕಾದ ಕಾರಣ ಅವರ ಭಾವನೆಗಳನ್ನು ಕೆರಳಿಸದಂತಹ ಬಣ್ಣಗಳನ್ನು ಆಯ್ಕೆ ಮಾಡುವುದು ಅಗತ್ಯವಾಗಿತ್ತು. ಉದಾಹರಣೆಗೆ ಅವರು ಧರಿಸಿದ ಬಟ್ಟೆಯ ಬಣ್ಣದೊಂದಿಗೆ ಗೋಡೆ, ನೆಲ ಮತ್ತು ಒಳಾಂಗಣದ ಬಣ್ಣಗಳು ಮಂಕಾಗಬಾರದು. ಕಳೆದುಹೋಗಲೂ ಬಾರದು. ಯಾವುದೇ ಬಣ್ಣದ ಉಡುಪು ಧರಿಸಿದರೂ ಒಳಗಿನ ಮತ್ತು ಹೊರಗಿನ ಬಣ್ಣದೊಂದಿಗೆ ಹೊಂದಾಣಿಕೆ ಆಗುವಂತೆ ಮತ್ತೆ ಸಮೃದ್ಧವಾಗಿ ಕಾಣುವಂತೆ ಮಾಡುವುದು ನನ್ನ ಆಲೋಚನೆ ಆಗಿತ್ತು. ಅದಕ್ಕೆ ಚಿತ್ತಾಕರ್ಷಕ ಬಣ್ಣಗಳನ್ನು ಆಯ್ಕೆ ಮಾಡಿದೆ.

*ಇಂಡಿಗೊ ಬಗ್ಗೆ?
ಕಳದ ಬಾರಿ  ಹಳದಿ ಮತ್ತು ಗುಲಾಬಿ ಬಣ್ಣ ಬಳಸಿದ್ದೆ. ಇಂಡಿಗೊ ಅಂದ್ರೆ ಡೆನಿಮ್‌ನ ಬಣ್ಣ. ಅದು ಎಲ್ಲಾ ಬಟ್ಟೆಗಳಿಗೂ ಹೊಂದುವ ಉಡುಪು. ಹಾಗೆಯೇ ಇಂಡಿಗೊ, ಕ್ಯಾಮೆರಾದಲ್ಲಿ ತುಂಬಾ ಚೆನ್ನಾಗಿ ಕಾಣುತ್ತದೆ. 

ಮನೆಯೊಳಗಿರುವ ವ್ಯಕ್ತಿಗಳು ಯಾವುದೇ ಬಗೆಯ ಉಡುಪು ಧರಿಸಿದರೂ ಸೌಮ್ಯ ಬಣ್ಣಕ್ಕೆ ಮ್ಯಾಚ್‌ ಆಗುತ್ತದೆ. ಅಷ್ಟೇ ಅಲ್ಲ, ಟಿ.ವಿ. ಪರದೆಯಲ್ಲಿ ಇಂಡಿಗೊ ತುಂಬಾ ಸಮೃದ್ಧವಾಗಿ, ಚಿತ್ತಾಕರ್ಷಕವಾಗಿ ಕಾಣುತ್ತದೆ. ಪ್ರೇಕ್ಷಕರ ದೃಷ್ಟಿಯಿಂದ ಇದೂ ಮುಖ್ಯ ತಾನೇ. ಹಾಗಾಗಿ ಬಣ್ಣಗಳ ಆಯ್ಕೆ ತುಂಬಾ ತಲೆಕೆಡಿಸಿಕೊಂಡಿದ್ದೆ. ಸೆಟ್‌ ಬಗ್ಗೆ ಒಳ್ಳೆಯ ಅಭಿಪ್ರಾಯ ಬಂದಿರುವ ಕಾರಣ ನನ್ನ ಮತ್ತು ತಂಡದ ಶ್ರಮ ಸಾರ್ಥಕವಾಯ್ತು ಅಂತ ಅನಿಸುತ್ತದೆ.

*ರಿಯಾಲಿಟಿ ಶೋಗಳ ಯಶಸ್ಸಿನಲ್ಲಿ ಸೆಟ್‌ಗಳಿಗೆ ಅಷ್ಟೊಂದು ಮಹತ್ವವಿದೆಯೇ?
ಹೌದು. ಯಾಕೆಂದರೆ  ಈಗ ವೀಕ್ಷಕರಿಗೆ ಹಲವಾರು ರಿಯಾಲಿಟಿ ಶೋಗಳನ್ನು ನೋಡಬಹುದಾದ ಆಯ್ಕೆಗಳಿವೆ. ಕಲರ್ಸ್‌ ಕನ್ನಡದ ಶೋಗಳನ್ನೇ ಯಾಕೆ ನೋಡಬೇಕು ಎಂಬ ಪ್ರಶ್ನೆ ಬಂದಾಗ ಥೀಮ್‌, ಸ್ಪರ್ಧಿಗಳು, ತೀರ್ಪುಗಾರರು, ವೀಕ್ಷಕರನ್ನು ಹಿಡಿದಿಡುವ ಇತರ ಯಾವುದೇ ಆಕರ್ಷಣೆಗಳಷ್ಟೇ ಸೆಟ್‌ನ ವಿನ್ಯಾಸವೂ ಪ್ರಾಮುಖ್ಯವಾಗುತ್ತದೆ. ಸ್ಪರ್ಧಿಗಳು ಏನೇ ಮಾಡಿದರೂ ಆ ಸೆಟ್‌ ಅದಕ್ಕೆ ಪೂರಕವಾಗಿಲ್ಲದಿದ್ದರೆ ವ್ಯರ್ಥವಾಗುತ್ತದೆ. ವಿಷುವಲೈಸ್‌ ಮಾಡುವಲ್ಲಿ ಸೆಟ್‌ಗಳ ವಿನ್ಯಾಸ ಮಹತ್ವದ ಪಾತ್ರ ವಹಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.