ADVERTISEMENT

ಮೈಮಾಟಕ್ಕಾಗಿ ತಾಪ್ಸಿ ‘ಜಲಕ್ರೀಡೆ’

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2018, 19:30 IST
Last Updated 15 ಮಾರ್ಚ್ 2018, 19:30 IST
ಮೈಮಾಟಕ್ಕಾಗಿ ತಾಪ್ಸಿ ‘ಜಲಕ್ರೀಡೆ’
ಮೈಮಾಟಕ್ಕಾಗಿ ತಾಪ್ಸಿ ‘ಜಲಕ್ರೀಡೆ’   

ಬಹುಭಾಷಾ ನಟಿ ತಾಪ್ಸಿ ಪನ್ನು ತನ್ನ ಫಿಟ್‌ನೆಸ್‌ ಬಗ್ಗೆ ಎಂದೂ ನಿರ್ಲಕ್ಷ್ಯ ಮಾಡುವವರಲ್ಲ. ಹಾಗಂತ ‘ಜೀರೊ ಸೈಜ್‌’ ಇವರಿಗೆ ಇಷ್ಟವಿಲ್ಲ. ಆರೋಗ್ಯಕರ ಜೀವನಶೈಲಿಗೆ ಇವರ ಆದ್ಯತೆ.

ದೇಹ ಸೌಂದರ್ಯ ಕಾಪಾಡಿಕೊಳ್ಳಲು ಹೊಸ ರೀತಿಯ ವ್ಯಾಯಾಮದ ಮೊರೆಹೋಗಿದ್ದಾರೆ ಇವರು. ಜಿಮ್‌ನಲ್ಲಿ ಕಸರತ್ತು ಮಾಡುವುದಕ್ಕಿಂತ ನೀರಿನಲ್ಲಿ ವ್ಯಾಯಾಮ ಮಾಡುವ ಹೈಡ್ರೊಪವರ್ ಫಿಟ್‌ನೆಸ್‌ ಮಂತ್ರದ ಮೊರೆ ಹೋಗಿದ್ದಾರೆ.

‘ಹೈಡ್ರೊಪವರ್ ವ್ಯಾಯಾಮ ಎಂಬ ಈ ಹೊಸ ಬಗೆಯ ಜಲಕ್ರೀಡೆಯಿಂದ ದೇಹ ಮತ್ತು ಮನಸ್ಸನ್ನು ಕ್ರಿಯಾಶೀಲವಾಗಿಸುತ್ತದೆ. ಉಸಿರಿಗೆ ಸಂಬಂಧಿಸಿದ ವ್ಯಾಯಾಮವೂ ಇದರಲ್ಲಿರುವುದರಿಂದ ದೇಹದ ಆಂತರಿಕ ಆರೋಗ್ಯವೂ ವೃದ್ಧಿ ಆಗುತ್ತದೆ’ ಎನ್ನುತ್ತಾರೆ ವರು.

ADVERTISEMENT

ಸಿನಿಮಾಕ್ಕೆ ಅಗತ್ಯವಿರುವಂತೆ ವರ್ಕೌಟ್‌ ದಿನಚರಿಯಲ್ಲಿಯೂ ಬದಲಾವಣೆ ಮಾಡಿಕೊಂಡಿದ್ದಾರೆ ತಾಪ್ಸಿ. ತೀರಾ ಅಗತ್ಯವೆನ್ನಿಸಿದಾಗ ಮಾತ್ರವೇ ಜಿಮ್‌ನಲ್ಲಿ ಹೆಚ್ಚು ಹೊತ್ತು ಕಸರತ್ತು ನಡೆಸುತ್ತಾರೆ. ನೃತ್ಯ, ಕ್ರೀಡೆ, ಸಮರ ಕಲೆಗಳ ಮೂಲಕ ಫಿಟ್‌ ಆಗಿರಲು ಪ್ರಯತ್ನಿಸುತ್ತಾರೆ.

ತಾಪ್ಸಿಗೆ ಸ್ಕ್ವಾಷ್‌ ಎಂದರೆ ಅಚ್ಚುಮೆಚ್ಚು. ಪ್ರತಿದಿನ 40 ನಿಮಿಷ ಇದಕ್ಕಾಗಿಯೇ ಮೀಸಲು. ಜುಂಬಾ ಕೂಡ ಅವರ ಫಿಟ್‌ನೆಸ್‌ ಚಟುವಟಿಕೆಯಲ್ಲಿ ಸ್ಥಾನ ಪಡೆದಿದೆ.

‘ಕಣ್ತುಂಬ ನಿದ್ದೆ ಇವರ ಆರೋಗ್ಯಕರ ಜೀವನ ಶೈಲಿ ಗುಟ್ಟು. ಪ್ರತಿದಿನ ಏಳು ಗಂಟೆ ನಿದ್ದೆ ಮಾಡುವುದು ಅಗತ್ಯ. ಒತ್ತಡ ಬದುಕಿಗೆ ವಿರಾಮ ನೀಡಲು ನಿದ್ದೆ ಉತ್ತಮ ಪರಿಹಾರ. ನಿಮ್ಮ ದೇಹ ಪ್ರಕಾರದ ಬಗ್ಗೆ ಅರಿವಿದ್ದರೆ, ಅದನ್ನು ರಕ್ಷಿಸುವುದು ಸುಲಭ’ ಎನ್ನುತ್ತಾರೆ ಇವರು.

ಆಹಾರದ ವಿಷಯದಲ್ಲಿಯೂ ತಾಪ್ಸಿ ಕಟ್ಟುನಿಟ್ಟು. ಎಣ್ಣೆ, ಝಂಕ್‌ ಫುಡ್‌ಗಳನ್ನು ಇಷ್ಟಪಡುವುದಿಲ್ಲ. ಗೋಧಿಗಿಂತ ಅನ್ನ ಒಳ್ಳೆಯದು. ಬೇಗ ಜೀರ್ಣವಾಗುತ್ತದೆ ಎನ್ನುವ ತಾಪ್ಸಿ ಪ್ರತಿದಿನ ಎರಡು ಹೊತ್ತು ಅನ್ನವನ್ನು ತಿನ್ನುತ್ತಾರೆ. ಹಸುವಿನ ಹಾಲಿನ ಬದಲು ಬಾದಾಮಿ ಹಾಲು ಸೇವಿಸುತ್ತಾರೆ. ದೇಹದಲ್ಲಿ ನೀರಿನಂಶ ಹೆಚ್ಚು ಇರುವಂತೆ ನೋಡಿಕೊಳ್ಳುವುದು ಅಗತ್ಯ ಎಂದು ಚೆನ್ನಾಗಿ ನೀರು ಕುಡಿಯುತ್ತಾರೆ. ಪ್ರೊಟೀನ್‌ಯುಕ್ತ ಆಹಾರಕ್ಕೆ ಆದ್ಯತೆ. ರಾಗಿ, ಸೋಯಾ, ಜೋಳ, ಅಕ್ಕಿ ಹಿಟ್ಟಿನಿಂದ ತಯಾರಿಸಿದ ಪರಾಟ ತಿನ್ನುತ್ತಾರೆ.

‘ಫಿಟ್‌ ಆಗಿರಬೇಕೆಂದು ಬಯಸುವವರು ದೇಹದ ಆರೈಕೆ ಮಾಡಿ, ಕಸರತ್ತಿನ ಹೆಸರಿನಲ್ಲಿ ದೇಹಕ್ಕೆ ಹಿಂಸೆ ಮಾಡಬೇಡಿ’ ಎಂಬ ಸಲಹೆ ಇವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.