ADVERTISEMENT

ರ‍್ಯಾಗಿಂಗ್‌ ತಡೆಗೆ ‘ಶಿಲ್ಪಾಸ್ತ್ರ’

​ಪ್ರಜಾವಾಣಿ ವಾರ್ತೆ
Published 15 ಜೂನ್ 2018, 12:54 IST
Last Updated 15 ಜೂನ್ 2018, 12:54 IST
ಶಿಲ್ಪಾಶೆಟ್ಟಿ
ಶಿಲ್ಪಾಶೆಟ್ಟಿ   

ದೇಶದಲ್ಲಿ ರ‍್ಯಾಗಿಂಗ್‌ ತಡೆ ಅಭಿಯಾನಕ್ಕೆ ಬಾಲಿವುಡ್‌ ನಟಿ ಶಿಲ್ಪಾಶೆಟ್ಟಿ ಅವರನ್ನು ಸಕ್ರಿಯವಾಗಿ ಬಳಸಿಕೊಳ್ಳಲು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಮತ್ತು ನ್ಯಾಷನಲ್‌ ಫಿಲಂ ಡೆವಲಪ್‌ಮೆಂಟ್‌ ಕಾರ್ಪೊರೇಷನ್ (ಎನ್‌ಎಫ್‌ಡಿಸಿ) ಮುಂದಾಗಿವೆ.

ರ‍್ಯಾಗಿಂಗ್‌ ದುಷ್ಪರಿಣಾಮಗಳ ಕುರಿತು ಮತ್ತು ತಡೆಗಟ್ಟಬೇಕಾದ ಅಗತ್ಯ ಕುರಿತು ಈ ಎರಡೂ ಸಂಸ್ಥೆಗಳು ಜತೆಗೂಡಿ ನಿರ್ಮಿಸಲಿರುವ ಕಿರುಚಿತ್ರ, ಜಾಹೀರಾತುಗಳಲ್ಲಿ ಶಿಲ್ಪಾಶೆಟ್ಟಿ ನಟಿಸಲಿದ್ದಾರೆ.

ಸ್ವಚ್ಛ ಭಾರತ ಅಭಿಯಾನ ಮತ್ತು ಸ್ವಚ್ಛ ಸರ್ವೇಕ್ಷಣಾ ಅಭಿಯಾನಕ್ಕೆ ಸಂಬಂಧಿಸಿದಂತೆ 2017ರಲ್ಲಿ ಬಾಲಿವುಡ್‌ ಪ್ರಸಿದ್ಧ ನಟರಾದ ಅಮಿತಾಭ್‌ ಬಚ್ಚನ್‌, ಸಲ್ಮಾನ್‌ ಖಾನ್‌ ಜತೆ ಶಿಲ್ಪಾಶೆಟ್ಟಿಯೂ ರಾಯಭಾರಿಯಾಗಿದ್ದರು.

ADVERTISEMENT

ಈ ಅಭಿಯಾನದ ವಿಡಿಯೊಗಳು ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲು ಸಾಕಷ್ಟು ನೆರವಾಗಿದ್ದವು. ಈ ಯಶಸ್ಸನ್ನು ಆಧರಿಸಿ ರ‍್ಯಾಗಿಂಗ್‌ ತಡೆಗೆ ಎನ್‌ಎಫ್‌ಡಿಸಿ ಚಿಂತಿಸಿತು. ಇದಕ್ಕೆ ಯುಜಿಸಿ ಸಮ್ಮತಿ ನೀಡಿದ್ದು, ಎರಡೂ ಸಂಸ್ಥೆಗಳು ಜಂಟಿಯಾಗಿ ಹೊಸ ಅಭಿಯಾನ ಕೈಗೊಳ್ಳಲಿವೆ.

ರ‍್ಯಾಗಿಂಗ್‌ ಪಿಡುಗಿಗೆ ಯಾವೊಬ್ಬ ವಿದ್ಯಾರ್ಥಿಯೂ ಬಲಿಯಾಗಬಾರದು. ಇದರಿಂದ ಯಾರೂ ವ್ಯಾಸಂಗ ತೊರೆಯಬಾರದು. ಈ ಪಿಡುಗನ್ನೇ ನಾಶಪಡಿಸಬೇಕು ಎಂದರೆ, ಅದರ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು ಎಂಬ ನಿರ್ಧಾರಕ್ಕೆ ಈ ಸಂಸ್ಥೆಗಳು ಬಂದಿವೆ. ಈ ನಿಟ್ಟಿನಲ್ಲಿ ಹೊಸ ಪ್ರಯತ್ನವನ್ನು ಅವು ಕೈಗೊಂಡಿವೆ.

ಶಿಲ್ಪಾ ಶೆಟ್ಟಿ ಯೋಗಪಟು. ಅವರು ಯೂತ್‌ ಐಕಾನ್‌ ಸಹ ಹೌದು. ಅವರ ನಟನೆಯ ಜಾಹೀರಾತುಗಳು ಯುವ ಮನಸಿನ ಮೇಲೆ ಪರಿಣಾಮ ಬೀರುತ್ತವೆ. ಸಾಮಾಜಿಕ ಕಾಳಜಿಯ ಈ ಕಿರುಚಿತ್ರಗಳಲ್ಲಿ ಯುವ ಜನರನ್ನು ಸಕಾರಾತ್ಮಕ ಚಿಂತನೆಯತ್ತ ಸೆಳೆಯಲು, ತಮಾಷೆಗಾಗಿಯಾಗಲೀ, ಕಿರುಕುಳಕ್ಕಾಗಲೀ ರ‍್ಯಾಗಿಂಗ್‌ ಮಾಡಬಾರದು ಎಂಬ ಸಂದೇಶ ಒಳಗೊಂಡಿರುತ್ತವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.