ADVERTISEMENT

ಶ್ರೀಮಂತರಾಗಲು ಓದಲೇಬೇಕಂತೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2016, 19:30 IST
Last Updated 4 ಡಿಸೆಂಬರ್ 2016, 19:30 IST
ಶ್ರೀಮಂತರಾಗಲು  ಓದಲೇಬೇಕಂತೆ
ಶ್ರೀಮಂತರಾಗಲು ಓದಲೇಬೇಕಂತೆ   

ವಾರನ್‌ ಬಫೆಟ್‌ ಹೆಸರು ಯಾರಿಗೆ ತಾನೆ ಗೊತ್ತಿಲ್ಲ. ಪ್ರಪಂಚದ ಶ್ರೀಮಂತರ ಪಟ್ಟಿಯಲ್ಲಿ ಅವರಿಗೆ  ಮೂರನೆಯ ಸ್ಥಾನ. ಶ್ರೀಮಂತಿಕೆಯಲ್ಲಿ ಮಾತ್ರವಲ್ಲ ದಾನದ ವಿಚಾರದಲ್ಲೂ ಬಫೆಟ್‌  ನಂ.1.

ಹಣ ಗಳಿಸುವ ಬಗ್ಗೆ ವಾರನ್ ಬಫೆಟ್‌ ಅವರಿಂದ ಟಿಪ್ಸ್‌ಗಳನ್ನು ಕೇಳುವವರ ಸಂಖ್ಯೆ ಕಡಿಮೆಯೇನಿಲ್ಲ. ಹಣ ಗಳಿಸುವ ಮತ್ತು ಗಳಿಸಿದ ಹಣವನ್ನು ಯಾವುದರಲ್ಲಿ ಹೂಡಿಕೆ ಮಾಡಬೇಕೆನ್ನುವ ಕುರಿತು ಪ್ರತಿಯೊಬ್ಬರೂ ಓದಲೇ ಬೇಕಾದ 9 ಪುಸ್ತಕಗಳ ಪಟ್ಟಿಯನ್ನು ವಾರನ್ ಬಫೆಟ್ ಆಗಾಗ ಉದ್ಗರಿಸುತ್ತಿರುತ್ತಾರೆ. ಅಂಥ 9 ಪುಸ್ತಕಗಳ ಪರಿಚಯ ಇಲ್ಲಿದೆ.

ದಿ ಇಂಟಲಿಜೆಂಟ್‌ ಇನ್‌ವೆಸ್ಟರ್
ಬೆಂಜಮಿನ್‌ ಗ್ರಹಂ ಬರೆದಿರುವ ಈ ಪುಸ್ತಕವನ್ನು ಬಫೆಟ್‌ ತಮ್ಮ 19ನೇ ವರ್ಷದಲ್ಲಿ ಓದಿದ್ದರಂತೆ. ಈ ಪುಸ್ತಕ ಓದಿದ್ದು ತಮ್ಮ ಜೀವನದ ಅದೃಷ್ಟವೆಂದೇ ಬಫೆಟ್‌ ಹೇಳುತ್ತಾರೆ. ಏಕೆಂದರೆ ಈ ಪುಸ್ತಕ ಓದಿದ ಬಳಿಕವೇ ಅವರಿಗೆ ಬಂಡವಾಳ ಹೂಡಿಕೆ ಬಗ್ಗೆ ಒಂದು ಶಿಸ್ತು ಮೂಡಿತಂತೆ. ಬೆಲೆ ₹449.

ಸೆಕ್ಯುರಿಟಿ ಅನಾಲಿಸಿಸ್‌
ಬೆಂಜಮಿನ್ ಗ್ರಹಂ ಮತ್ತು ಡೇವಿಡ್‌ ಎಲ್‌. ಡೊಡ್‌ ಬರೆದಿರುವ ಈ ಕೃತಿ ಬಫೆಟ್‌ ಅವರಿಗೆ ಬಂಡವಾಳದ ದಾರಿ ತೋರಿಸಿದ ಕೃತಿ. ಈ ಕೃತಿಯಲ್ಲಿನ ಸಲಹೆ, ಸೂಚನೆಗಳನ್ನು ಬಫೆಟ್‌ 57 ವರ್ಷಗಳಿಂದಲೂ ಪಾಲಿಸುತ್ತಿದ್ದಾರಂತೆ. ಬೆಲೆ ₹823.

ಸ್ಟ್ರೆಸ್‌ ಟೆಸ್ಟ್‌
ಅಮೆರಿಕ ಖಜಾನೆಯ ಮಾಜಿ ಕಾರ್ಯದರ್ಶಿ ಟಿಮತಿ ಗಿತ್ನರ್  ಬರೆದಿರುವ ಈ ಕೃತಿಯನ್ನು ಕಂಪೆನಿಗಳಲ್ಲಿ ಕೆಲಸ ಮಾಡುವ ವ್ಯವಸ್ಥಾಪಕರು ತಪ್ಪದೇ ಓದಬೇಕಂತೆ. ₹520.
ದಿ ಎಸ್ಸೇಸ್ ಆಫ್‌ ವಾರನ್ ಬಫೆಟ್‌

ಉದ್ಯಮಿ ಬಫೆಟ್‌ ಹೇಗೆ ಯೋಚಿಸುತ್ತಾರೆ ಎಂಬುದನ್ನು ತಿಳಿಯಬಯಸುವಿರಾ? ಹಾಗಾದರೆ, ಬಫೆಟ್‌ ಅವರೇ ಬರೆದಿರುವ ‘ದಿ ಎಸ್ಸೇಸ್‌ ಆಫ್ ವಾರನ್ ಬಫೆಟ್‌’ ಕೃತಿಯನ್ನು  ಓದಿ. ಇದು ಕೃತಿಕಾರ ಬಫೆಟ್ ಅವರ ಹೆಮ್ಮೆಯೂ ಹೌದು. ₹565.

ಜಾಕ್‌ (ಸ್ಟ್ರೈಟ್‌ ಫ್ರಂ ದಿ ಗಟ್)
‘ವಿಶ್ವದ ಅತ್ಯಂತ ಕಠಿಣ ಬಾಸ್’ ಎಂದೇ ಕರೆಯಲಾಗುವ ಜಾಕ್ ವೆಲ್ಚ್‌ ಅವರ ಆತ್ಮಕಥನವನ್ನು ‘ಜಾಕ್‌’ ಕೃತಿ ಒಳಗೊಂಡಿದೆ. ಬಾಲ್ಯದಿಂದ ಹಿಡಿದು ದೊಡ್ಡ ಕಂಪೆನಿಯೊಂದರ ಜನರಲ್ ಎಲೆಕ್ಟ್ರಿಕಲ್ ಆಗಿ ರೂಪುಗೊಂಡ ಬಗ್ಗೆ ಜಾಕ್ ಈ ಕೃತಿಯಲ್ಲಿ ತಮ್ಮ ಅನುಭವ ಕಥನ ಬಿಚ್ಚಿಟ್ಟಿದ್ದಾರೆ.  ಜಾಕ್‌ನನ್ನು ಬಫೆಟ್‌ ‘ಸ್ಮಾರ್ಟ್, ಎನರ್ಜಿಟಿಕ್ ಮತ್ತು ಹ್ಯಾಂಡ್‌ ಆನ್’  ಎಂದು ಬಣ್ಣಿಸುತ್ತಾರೆ. ಬೆಲೆ ₹1143.

6.ದಿ ಔಟ್‌ಸೈಡರ್ಸ್‌
ತನ್ನ ಕಂಪೆನಿಯ ಷೇರುದಾರರಿಗೆ ಬಫೆಟ್ 2012ರಲ್ಲಿ ಬರೆದ ಪತ್ರದಲ್ಲಿ ಈ ಕೃತಿಯನ್ನು ಉಲ್ಲೇಖಿಸಿದ್ದರು. ಸಿಇಒಗಳು ಕಡ್ಡಾಯವಾಗಿ ಓದಲೇಬೇಕಾದ ಅಮೆರಿಕನ್ ಪುಸ್ತಕ ಎಂದು ಶಿಫಾರಸು ಮಾಡಿದ್ದರು. ಅಮೆರಿಕದ ಉತ್ತಮ ಪುಸ್ತಕಗಳ ಸಾಲಿನಲ್ಲಿ ಲೇಖಕ ವಿಲಿಯಂ ಥ್ರೋನ್‌ಡಿಕ್‌ ಅವರ ‘ದಿ ಔಟ್‌ ಸೈಡರ್ಸ್’ ಕೂಡಾ ಒಂದು ಎಂದು ಪೋರ್ಬ್ಸ್‌ ಪತ್ರಿಕೆ ಸಹ ಬಣ್ಣಿಸಿತ್ತು. ಬೆಲೆ ₹931.

ಬ್ಯುಸಿನೆಸ್‌ ಅಡ್ವೆಂಚರ್ಸ್‌
ಜಾನ್ ಬ್ರೂಕ್‌ ಬರೆದಿರುವ ‘ಬ್ಯುಸಿನೆಸ್ ಅಡ್ವೆಂಚರ್ಸ್’ ಕೃತಿಯಲ್ಲಿ ವಾಲ್‌ಸ್ಟ್ರೀಟ್‌ (ಅಮೆರಿಕನ್ ಷೇರುಪೇಟೆ) ಬಗ್ಗೆ 12 ಸುಂದರ ಕಥೆಗಳಿವೆ. 1991ರಲ್ಲಿ ಬಫೆಟ್‌ನನ್ನು ಬಿಲ್‌ಗೇಟ್ಸ್‌, ನಿಮ್ಮಿಷ್ಟದ ಪುಸ್ತಕ  ಯಾವುದು ಎಂದು ಕೇಳಿದಾಗ, ತಕ್ಷಣವೇ ಬಫೆಟ್‌ ತಮ್ಮ ಬಳಿ ಇದ್ದ ‘ಬ್ಯುಸಿನೆಸ್ ಅಡ್ವೆಂಚರ್ಸ್‌’ ಪುಸ್ತಕವನ್ನು   ಬಿಲ್‌ಗೇಟ್ಸ್ ಕೈಗಿತ್ತರಂತೆ. ಬೆಲೆ ₹294

ವೇರ್ ಆರ್ ದಿ ಕಸ್ಟಮರ್ಸ್‌ ಯಾಚ್ಸ್‌
ಬಂಡವಾಳದ ಹೂಡುವ ಕುರಿತು ಲೇಖಕ ಫ್ರೆಡ್‌ ಶ್ವೆಡ್‌ ತಮಾಷೆಯಾಗಿ ಬರೆದಿರುವ ಕೃತಿ ಇದು.  ಬಂಡವಾಳದ ಕುರಿತು ಹಗುರವಾಗಿಯೇ ಎಲ್ಲಾ ವಿಷಯಗಳನ್ನು ತಿಳಿಸುವ ಪುಸ್ತಕವಿದು ಎಂದು ಬಫೆಟ್‌ ಹೇಳುತ್ತಾರೆ. ಬೆಲೆ ₹1514

ದಿ ಲಿಟ್ಲ್‌ ಬುಕ್ ಆಫ್ ಕಾಮನ್‌ಸೆನ್ಸ್‌ ಇನ್ವೆಸ್ಟಿಂಗ್
ಈ ಕೃತಿಯ ಕರ್ತೃ ಜಾಕ್‌ಬೊಗ್ಲೆ. ಆರ್ಥಿಕ ಸಲಹೆಗಾರರು ತಪ್ಪದೇ ಓದಬೇಕಾದ ಕೃತಿ ಎಂದು ಬಫೆಟ್‌  ಶಿಫಾರಸು ಮಾಡುತ್ತಾರೆ. ಬೆಲೆ ₹1307.
(ಎಲ್ಲ ಪುಸ್ತಕಗಳು amazon.inನಲ್ಲಿ ಲಭ್ಯ)

ಬಫೆಟ್ ಬಗ್ಗೆ ಒಂದಿಷ್ಟು
ಪೂರ್ತಿ ಹೆಸರು: ವಾರನ್‌ ಎಡ್ವರ್ಡ್‌ ಬಫೆಟ್
ಹುಟ್ಟಿದ್ದು: ಅಮೆರಿಕದಲ್ಲಿ
ವೃತ್ತಿ: ಉದ್ಯಮಿ, ಬರ್ಕ್‌ಶೈರ್‌ ಹಾಥ್ ವೇ
ಕಂಪೆನಿಯ ಸಿಇಒ
ಆಸ್ತಿ ಮೌಲ್ಯ:  90.0 ಶತಕೋಟಿ ಡಾಲರ್
(₹4.8 ಲಕ್ಷ ಕೋಟಿ)
ರಾಜಕೀಯ: ಡೆಮಾಕ್ರಟಿಕ್ ಪಕ್ಷ 
ಪತ್ನಿ, ಮಕ್ಕಳು: ಇಬ್ಬರು ಪತ್ನಿಯರು,
ಮೂವರು ಮಕ್ಕಳು

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.