ADVERTISEMENT

ಸೂರ್ಯ ಇವರ ಸ್ವತ್ತಂತೆ!

ಪೃಥ್ವಿರಾಜ್ ಎಂ ಎಚ್
Published 19 ಮೇ 2017, 19:30 IST
Last Updated 19 ಮೇ 2017, 19:30 IST
ಏಂಜಲೀಸ್ ಡುರಾನ್‌
ಏಂಜಲೀಸ್ ಡುರಾನ್‌   

ನಕ್ಷತ್ರಗಳು, ಸೂರ್ಯ, ಚಂದ್ರ ಭೂಮಿ, ಆಕಾಶ, ನೀರು, ಗಾಳಿ, ಅಗ್ನಿ ಇವೆಲ್ಲವೂ ಯಾರಿಗೆ ಸೇರಿದ್ದು ಎಂದು ಯಾರಾದರೂ ಕೇಳಿದರೆ, ಇದೆಂಥಾ ಪ್ರಶ್ನೆ ಅವು ಎಲ್ಲರಿಗೂ ಸೇರಬೇಕಾದ್ದು ಎಂದು ಯಾರಾದರೂ ಹೇಳುತ್ತಾರೆ.

ಆದರೆ, ಇನ್ನು ಮುಂದೆ ಈ ಪ್ರಶ್ನೆಗೆ ಸ್ವಲ್ಪ ಹುಷಾರಾಗಿ ಉತ್ತರಿಸಬೇಕಾಗುತ್ತದೆ. ಏಕೆಂದರೆ ಈಗಾಗಲೇ ಹಲವು ನಕ್ಷತ್ರಗಳನ್ನು ಕೆಲವರು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.
ನಮ್ಮ ಸೌರವ್ಯೂಹದ ಸೂರ್ಯನೂ ಈ ಸಾಲಿಗೆ ಸೇರ್ಪಡೆಯಾಗಿದ್ದು, ‘ಸೂರ್ಯ ನನ್ನ ಸ್ವತ್ತು’ ಎಂದು ಏಂಜಲೀಸ್ ಡುರಾನ್‌ (49) ಎಂಬ  ಸ್ಪಾನಿಷ್‌ ಮಹಿಳೆಯೊಬ್ಬರು ವಾದಿಸುತ್ತಿದ್ದಾರೆ.

ಅವರವರ ಹುಚ್ಚು ಅವರಿಗೆ ಆನಂದ. ಅವರು ಹೇಳಿದ ಮಾತ್ರಕ್ಕೆ ಸೂರ್ಯ ಅವರ ಸ್ವತ್ತಾಗುವನೇ ಎಂದು ಸುಮ್ಮನಾಗಬೇಡಿ, ಏಕೆಂದರೆ ಆ ಮಹಿಳೆ ಸೂರ್ಯ ತನಗೆ ಸೇರಿದ್ದು ಎಂಬುದನ್ನು ದೃಢೀಕರಿಸಲು ನೋಟರಿ ಸಹ ಮಾಡಿಸಿದ್ದಾರೆ! 

ADVERTISEMENT

‘ಡುರಾನ್‌ ಅವರು ನಮ್ಮ ಸೌರವ್ಯೂಹದ ಕೇಂದ್ರಭಾಗದಲ್ಲಿರುವ ಸ್ಪೆಕ್ಟ್ರಲ್‌ ಟೈಪ್ ಜಿ2 ನಕ್ಷತ್ರವಾದ ಸೂರ್ಯನ ಮಾಲೀಕರು. ಇದು ಭೂಮಿಯಿಂದ ಸುಮಾರು 149,600,000  ಕಿ.ಮೀ ದೂರದಲ್ಲಿದೆ ಎಂದು ದಾಖಲೆ ಪತ್ರದಲ್ಲಿ ಸ್ಥಳೀಯ ಸರ್ಕಾರಿ ಸಂಸ್ಥೆ ದೃಢೀಕರಿಸಿದೆ.

‘ಸೂರ್ಯನ ಮೇಲೆ ಸಂಪೂರ್ಣ ಹಕ್ಕು ನನ್ನದೇ. ಸೂರ್ಯನನ್ನು ಉಪಯೋಗಿಸುವ ಕಾನೂನುಬದ್ಧ ಹಕ್ಕು ನನಗೆ ಮಾತ್ರ ಇದೆ. ಇನ್ನು ಮುಂದೆ ಯಾರಾದರೂ ಸೂರ್ಯನ ಬೆಳಕು, ಶಾಖವನ್ನು ಉಪಯೋಗಿಸಿಕೊಳ್ಳಬೇಕೆಂದರೆ  ತೆರಿಗೆ ಕಟ್ಟಬೇಕು’ ಎಂದೂ ಅವರು ಹೇಳಿದ್ದಾರೆ.

ಇತ್ತೀಚೆಗಷ್ಟೇ ಸ್ಪೇನ್‌ನ ಕೈಗಾರಿಕಾಭಿವೃದ್ಧಿ ಇಲಾಖೆಯ ಅಧಿಕಾರಿಗಳನ್ನು ಭೇಟಿ ಮಾಡಿ ಸೂರ್ಯ ನನಗೆ ಸೇರಿರುವುದರಿಂದ ಜನರಿಂದ ತೆರಿಗೆ ಸಂಗ್ರಹಿಸಿಕೊಡಬೇಕು ಎಂದು ವಿನಂತಿಸಿಕೊಂಡಿದ್ದಾರೆ. ಬಂದ ಹಣದಲ್ಲಿ ಶೇ 50ರಷ್ಟು ಸರ್ಕಾರದ ವಾರ್ಷಿಕ ಬಜೆಟ್‌ಗೆ, ಶೇ 20ರಷ್ಟು ಸ್ಪೇನ್‌ ರಾಷ್ಟ್ರೀಯ ಪಿಂಚಣಿ ನಿಧಿಗೆ, ಶೇ 10ರಷ್ಟು ಸಂಶೋಧನೆಗಳಿಗೆ, ಶೇ 10ರಷ್ಟು ಬಡತನ ನಿರ್ಮೂಲನೆಗೆ ನೀಡಿ,  ಉಳಿದ ಹಣವನ್ನು ತಮ್ಮ ಬಳಿ ಉಳಿಸಿಕೊಳ್ಳುವುದಾಗಿ ಡುರಾನ್ ತಿಳಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.