ADVERTISEMENT

ಸ್ವಚ್ಛವಾಗಿರಲಿ ಅಡುಗೆಮನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2017, 19:30 IST
Last Updated 7 ಫೆಬ್ರುವರಿ 2017, 19:30 IST
ಸ್ವಚ್ಛವಾಗಿರಲಿ ಅಡುಗೆಮನೆ
ಸ್ವಚ್ಛವಾಗಿರಲಿ ಅಡುಗೆಮನೆ   

ಮನೆ ಹೊರಗಿನಿಂದ ಮಾತ್ರವಲ್ಲ ಒಳಗಿಂದಲೂ ಸ್ವಚ್ಛವಾಗಿದ್ದಲ್ಲಿ ಮಾತ್ರ ಸುಂದರವಾಗಿರಬಲ್ಲದು.

ಅಡುಗೆಮನೆಯ ಸ್ವಚ್ಛತೆಗೆ ಹೆಚ್ಚಿನ ಗಮನ ಹರಿಸಬೇಕಾದದ್ದು ಅಗತ್ಯ. ಸಾಮಾನ್ಯವಾಗಿ ಅಡುಗೆ ಮನೆಯನ್ನು ಗೃಹಿಣಿಯರೇ ಸ್ವಚ್ಛವಾಗಿರಿಸಿ ಕೊಳ್ಳಬೇಕೆಂದು ಅನೇಕರು ಭಾವಿಸುತ್ತಾರೆ. ಆದರೆ, ಮನೆಯ ಎಲ್ಲಾ ಸದಸ್ಯರೂ ಕೈಗೂಡಿಸಿದಲ್ಲಿ ಮಾತ್ರ ಅಡುಗೆಮನೆ ಸದಾ ಸ್ವಚ್ಛವಾಗಿರಬಲ್ಲದು. ಅಡುಗೆಮನೆ ಇಡೀ ಮನೆಯ ಆತ್ಮವಿದ್ದಂತೆ ಅದು ಸ್ವಚ್ಛವಾಗಿದ್ದಲ್ಲಿ ಮಾತ್ರ ಮನೆಮಂದಿಯ ಆರೋಗ್ಯ ಚೆನ್ನಾಗಿರಬಲ್ಲದು.

ನಿಮ್ಮ ಅಡುಗೆಮನೆಯನ್ನು ಸ್ವಚ್ಛವಾಗಿರಿಸಿಕೊಳ್ಳುವ ಬಗ್ಗೆ ಇಲ್ಲಿವೆ ಕೆಲ ಉಪಯುಕ್ತ ಟಿಪ್ಸ್‌ಗಳು.

ಅಡುಗೆಕಟ್ಟೆ
ಹಗಲಿರಲಿ, ರಾತ್ರಿಯಿರಲಿ ಅಡುಗೆಕೆಲಸ ಮುಗಿದ ಬಳಿಕ ಅಡುಗೆ ಕಟ್ಟೆಯನ್ನು ಸ್ವಚ್ಛವಾಗಿಡುವುದನ್ನು ಮರೆಯದಿರಿ. ಡಿಟರ್ಜೆಂಟ್‌ ಕರಗಿಸಿದ ನೀರಿನಲ್ಲಿ ಬಟ್ಟೆಯನ್ನು ಅದ್ದಿ ಅಡುಗೆ ಮನೆಯ ಕಟ್ಟೆಯನ್ನು ಸ್ವಚ್ಛಗೊಳಿಸಿ. ಎಣ್ಣೆಯ ಜಿಡ್ಡು, ಕಲೆಗಳ ನಿವಾರಣೆಗಾಗಿ ಸೋಪಿನ ನೀರನ್ನು ಸಿಂಪಡಿಸಿ ಹತ್ತು ನಿಮಿಷ ಬಿಟ್ಟು, ಬ್ರಶ್‌ನಿಂದ ತಿಕ್ಕಿ ನಂತರ ಬಟ್ಟೆಯಿಂದ ಒರೆಸಿ ಸ್ವಚ್ಛಗೊಳಿಸಿ.

ಗ್ಯಾಸ್ ಸ್ಟೌ
ಅಡುಗೆ ಮಾಡುತ್ತಿರುವಾಗ ಗ್ಯಾಸ್ ಸ್ಟೌ ಮೇಲೆ ಏನಾದರೂ  ಬೀಳುವುದು ಮಾಮೂಲು. ನಿಧಾನವಾಗಿ ಗ್ಯಾಸ್‌ ಸ್ಟೌ ಸ್ವಚ್ಛಗೊಳಿಸಿದರಾಯಿತು ಎಂದು ಹಾಗೆಯೇ ಬಿಡಬೇಡಿ. ಸ್ಟೌ ಮೇಲೆ ಏನಾದರೂ  ಬಿದ್ದ ತಕ್ಷಣವೇ ಆ ಸ್ಥಳವನ್ನು ಬಟ್ಟೆಯಿಂದ ಒರೆಸಿ ತೆಗೆಯಿರಿ. ಇದರಿಂದ ಕಲೆ ಜಿಗುಟಾಗುವುದನ್ನು ತಡೆಯಬಹುದು ಅಷ್ಟೇ ಅಲ್ಲ ಸ್ಟೌ ಹಾಳಾಗುವುದನ್ನೂ ತಪ್ಪಿಸಬಹುದು.

ADVERTISEMENT

ಅಡುಗೆಯ ಕೆಲಸಗಳು ಮುಗಿದ ಬಳಿಕ ಇಡೀ ಗ್ಯಾಸ್ ಸ್ಟೌ ಅನ್ನು ಸ್ವಚ್ಛಗೊಳಿಸಿ. ಸ್ಟೌನ ಮೇಲೆ ನೀರಿನಂಶ ಬೀಳದಂತೆ ಎಚ್ಚರವಹಿಸಿ. ಅಕಸ್ಮಾತ್ ನೀರು ಬಿದ್ದಲ್ಲಿ ಒಣಬಟ್ಟೆಯಿಂದ ಒರೆಸಿ. ಒಲೆಯ ಮೇಲೆ ತೇವಾಂಶ ಇರುವಾಗಲೇ ಸ್ಟೌ ಹಚ್ಚದಿರಿ.

ಸಿಂಕ್‌
ಅಡುಗೆ ಮಾಡಿದ ಬಳಿಕ ಪಾತ್ರೆಗಳನ್ನು, ಊಟ ಮಾಡಿದ ಬಳಿಕ  ತಟ್ಟೆಗಳನ್ನು ಹಾಗೇ ಸಿಂಕ್‌ನಲ್ಲಿ ಬಿಡಬೇಡಿ. ಅದರಲ್ಲೂ ಅಪ್ಪಿತಪ್ಪಿಯೂ ರಾತ್ರಿ ಹೊತ್ತು ಸಿಂಕ್‌ನಲ್ಲಿ ಪಾತ್ರೆಗಳನ್ನು ಉಳಿಸಬೇಡಿ. ರಾತ್ರಿ ಹೊತ್ತು ಜಿರಲೆಗಳು ಓಡಾಡಿ, ಪಾತ್ರೆಗಳ ಸಂದಿಗಳಲ್ಲಿ ಸೂಕ್ಷ್ಮವಾಗಿ ಮೊಟ್ಟೆ ಇಡಬಹುದು. ಕೆಲವೊಮ್ಮೆ ಪಾತ್ರೆ ತೊಳೆದರೂ ಈ ಮೊಟ್ಟೆಗಳು ಹಾಗೇ ಉಳಿಯುವ ಸಾಧ್ಯತೆ ಇರುತ್ತದೆ. ಇದರಿಂದ ಅನಾರೋಗ್ಯ ಕಟ್ಟಿಟ್ಟ ಬುತ್ತಿ.

ಬಾಟಲಿ, ಜಾರ್, ಬಾಕ್ಸ್‌
ತಿಂಗಳಿಗೊಮ್ಮೆಯಾದರೂ ಆಹಾರ ಪದಾರ್ಥಗಳನ್ನು ಇಡುವ  ಬಾಟಲಿ, ಜಾರ್ ಅಥವಾ ಬಾಕ್ಸ್‌ ಅನ್ನು ಸೋಪಿನ  ನೀರಿನಲ್ಲಿ ನೆನೆಸಿ ತೊಳೆಯಿರಿ. ತೊಳೆದ ಬಳಿಕ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ. ಆಹಾರ ಪದಾರ್ಥಗಳನ್ನು ಸ್ವಚ್ಛಗೊಳಿಸಿ ಬಾಟಲಿ, ಜಾರ್‌ಗಳೊಳಗೆ ಹಾಕಬೇಕು.

ಸ್ಪೂನ್ ಸ್ಟ್ಯಾಂಡ್‌
ಚಮಚೆಗಳು ಕೈಗೆ ಸಿಗುವಂತಿರಲಿ ಎಂದು ಸ್ಪೂನ್‌ ಸ್ಟ್ಯಾಂಡ್‌ಗಳನ್ನು ಬಳಸುತ್ತಾರೆ. ಕೆಲವರಿಗೆ ಲೋಟ ಅಥವಾ ಮಗ್‌ನೊಳಗೆ ಚಮಚೆಗಳನ್ನು ಹಾಕಿಡುವ ರೂಢಿ ಇರುತ್ತದೆ. ಆಗಾಗ ಲೋಟ, ಮಗ್‌ಗಳಿಂದ ಚಮಚೆಗಳನ್ನು ಸಂಪೂರ್ಣವಾಗಿ ಹೊರಗೆ ತೆಗೆದು, ತೊಳೆಯಿರಿ. ಲೋಟ್‌ ಮತ್ತು ಮಗ್‌ಗಳ ತಳದಲ್ಲಿ ನೀರು ನಿಂತು ಪಾಚಿಗಟ್ಟಿರುವುದನ್ನು ಬಿಸಿನೀರಿನಲ್ಲಿ ಸ್ವಚ್ಚಗೊಳಿಸಬೇಕು.

ಜೋಡಣೆ
ಪಾತ್ರೆಗಳನ್ನು ಜೋಡಿಸಿಡುವ ಸ್ಟ್ಯಾಂಡ್‌ಗಳನ್ನೂ ತಿಂಗಳಿಗೊಮ್ಮೆ ತೊಳೆಯಿರಿ. ನೀರಿನಂಶ ಉಳಿಯದಂತೆ ಒಣಬಟ್ಟೆಯಿಂದ ಒರೆಸಿ. ಸ್ವಚ್ಛಗೊಳಿಸಿದ ಪಾತ್ರೆ, ಬಾಕ್ಸ್, ಬಾಟಲಿಗಳನ್ನು ದಿನನಿತ್ಯದ ಅಡುಗೆ ಕೆಲಸಕ್ಕೆ ಒದಗುವಂತೆ ಜೋಡಿಸಿಟ್ಟುಕೊಳ್ಳಿ. ಅನಗತ್ಯವಾದ ಸಾಮಾನುಗಳನ್ನು ಪ್ಲಾಸ್ಟಿಕ್ ಬ್ಯಾಗ್‌ಗಳಲ್ಲಿ ಕಟ್ಟಿ ಅಟ್ಟದ ಮೇಲಿಡಿ. ಅಗತ್ಯಬಿದ್ದಾಗ ಮಾತ್ರ ಅವುಗಳನ್ನು ಬಳಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.