ADVERTISEMENT

20ರ ಹುಡುಗನ ವಿಜಯ ಪತಾಕೆ

ವಿಶಾಖ ಎನ್.
Published 21 ಆಗಸ್ಟ್ 2017, 19:30 IST
Last Updated 21 ಆಗಸ್ಟ್ 2017, 19:30 IST
ಅಲೆಗ್ಸಾಂಡರ್ ಜ್ವೆರೆವ್ ಜೂನಿಯರ್‌
ಅಲೆಗ್ಸಾಂಡರ್ ಜ್ವೆರೆವ್ ಜೂನಿಯರ್‌   

ಈ ವರ್ಷದ ಮೊದಲ ತಿಂಗಳು. ಆಸ್ಟ್ರೇಲಿಯಾ ಓಪನ್ ಟೆನಿಸ್ ಗ್ರ್ಯಾಂಡ್ ಸ್ಲ್ಯಾಮ್ ಮೂರನೇ ಸುತ್ತಿನ ಪಂದ್ಯ. ಪುರುಷರ ಸಿಂಗಲ್ಸ್. ಸ್ಪೇನ್ ಹುರಿಯಾಳು ರಫೆಲ್ ನಡಾಲ್ ಒಂದು ಕಡೆ. ಆರೂವರೆ ಅಡಿ ಎತ್ತರದ, ಸಣ್ಣ ದೇಹದ ಹುಡುಗ ಅಲೆಗ್ಸಾಂಡರ್ ಜ್ವೆರೆವ್ ಜೂನಿಯರ್ ಇನ್ನೊಂದು ಕಡೆ.

ಜರ್ಮನ್ನರಿಗೆ ಕೆಚ್ಚು ಹೆಚ್ಚೇ ಇರುತ್ತದೆ ಎಂದು ನಡಾಲ್ ಅರ್ಥ ಮಾಡಿಕೊಂಡ ದಿನವದು. ನಾಲ್ಕು ತಾಸು 6 ನಿಮಿಷದ ಪಂದ್ಯದಲ್ಲಿ 19 ವರ್ಷದ ಹುಡುಗ ಮೂವತ್ತರ ಆಟಗಾರನ ಕಸುವನ್ನೆಲ್ಲ ಪರೀಕ್ಷೆಗೆ ಒಡ್ಡಿದ.

ನಡಾಲ್ ವಿಜಯದ ‘ಅಂಕ’ ಹೀಗಿತ್ತು: 4-6, 6-3, 6-7 (5-7), 6-3, 6-2. ಜ್ವೆರೆವ್ ಜೂನಿಯರ್ ರಕ್ತದಲ್ಲೇ ಟೆನಿಸ್ ಇದೆ. ಅವರಪ್ಪನದ್ದೂ ಅದೇ ಹೆಸರು. ಅವರು ಅಲೆಗ್ಸಾಂಡರ್ ಜ್ವೆರೆವ್ ಸೀನಿಯರ್.

ADVERTISEMENT

ರಷ್ಯಾ ಪರವಾಗಿ ಟೆನಿಸ್ ಆಡಿದ್ದವರು. ಅಮ್ಮ ಇರಿನಾ ಕೂಡ ಟೆನಿಸ್ ಆಟದಲ್ಲಿ ರಷ್ಯಾ ಪ್ರತಿನಿಧಿಸಿದ್ದವರೇ. ಅಣ್ಣ ಮಿಶಾ ಜ್ವೆರೆಟ್ ಕೂಟ ಟೆನಿಸ್ ಆಟಗಾರನೇ ಹೌದು. ಗಾಲ್ಫ್ ಹುಚ್ಚು ಹತ್ತಿಸಿಕೊಂಡಿದ್ದ ಜ್ವೆರೆವ್, ಆ ಆಟಕ್ಕಿಂತ ರಕ್ತಗತವಾಗಿ ಬಂದಿದ್ದ ಟೆನಿಸ್ ನೆಚ್ಚಿಕೊಂಡಿದ್ದು ಸಹಜವೇ.

ಮೊನ್ನೆ, ತನಗಿಂತ 16 ವರ್ಷ ದೊಡ್ಡ ಪ್ರಾಯದ ರೋಜರ್ ಫೆಡರರ್ ಅವರನ್ನು ಸೋಲಿಸಿದ್ದು ಇದೇ ಹುಡುಗ. ರೋಜರ್ಸ್ ಕಪ್ ಫೈನಲ್ಸ್‌ನಲ್ಲಿ 6-3, 6-4 ಸೆಟ್ ಗಳಿಂದ 20 ವಯಸ್ಸಿನ ಜ್ವೆರೆವ್ ಗೆಲುವು ಸಾಧಿಸಿದರು. 2007ರಲ್ಲಿ ಜೋಕೋವಿಕ್ ನಂತರ ಇಷ್ಟು ಚಿಕ್ಕ ಪ್ರಾಯದ ಯಾವ ಆಟಗಾರನೂ ವಿಶ್ವ ಟೆನಿಸ್ ರ‍್ಯಾಂಕಿಂಗ್‌ ಪಟ್ಟಿಯಲ್ಲಿ 10ನೇ ಸ್ಥಾನದ ಪರಿಧಿಯೊಳಗೆ ಪ್ರವೇಶಿಸಿರಲಿಲ್ಲ. ಆ ಕೊರತೆಯನ್ನು ಜರ್ಮನಿಯ ಹುಡುಗ ನೀಗಿಸಿದರು.

ಗ್ರೌಂಡ್ ಸ್ಟ್ರೋಕ್ ಹೊಡೆಯುವುದರಲ್ಲಿ ನಿಸ್ಸೀಮ ಜ್ವೆರೆವ್. ಬಾಲಕರ ತಂಡದಲ್ಲಿ ಆಡಿದಾಗಿನಿಂದಲೂ ಅದೇ ವಿಶೇಷ. 2013ರ ಅಕ್ಟೋಬರ್ ನಿಂದ 2014ರ ಜೂನ್ ವರೆಗೆ ಜೂನಿಯರ್ ಆಟಗಾರನಾಗಿ ಮೊದಲ ಸ್ಥಾನ ಕಾಯ್ದುಕೊಂಡರು. ಆಗ ಆಡಿದ ಪಂದ್ಯಗಳಲ್ಲಿ 95ರಲ್ಲಿ ಗೆಲುವು ಸಂದಿತ್ತು. ಸೋತಿದ್ದು 35ರಲ್ಲಿ.

ಈ ವರ್ಷ ಹುಡುಗನಿಗೆ ಶುಕ್ರದೆಸೆ. ಇಟಾಲಿಯನ್ ಓಪನ್ ಟೆನಿಸ್ ಫೈನಲ್ಸ್‌ನಲ್ಲಿ ನೊವಾಕ್ ಜೋಕೊವಿಕ್ ಅವರನ್ನು ಮಣಿಸಿ ಗಮನ ಸೆಳೆದಿದ್ದರು. ಅದನ್ನು ನೋಡಿದ್ದ ಫೆಡರರ್, ‘ಹುಡುಗನ ಆಟದಲ್ಲಿ ಕಸುವಿದೆ’ ಎಂದು ಶ್ಲಾಘಿಸಿದ್ದರು. ಈಗ ಅದೇ ಹುಡುಗನಿಂದ ಸೋಲುಣಿಸಿಕೊಂಡ ಅನುಭವ ಫೆಡರರ್ ಅವರದ್ದಾಯಿತು.

‘ನನಗೆ ಸ್ನಾಯು ನೋವಿನ ಹೊರತಾಗಿ ಬೇರೆ ಯಾವ ಅನುಭವವೂ ಆಗಲಿಲ್ಲ. ಇಪ್ಪತ್ತರ ಹುಡುಗನಲ್ಲಿ ಸಹಜವಾಗಿಯೇ ದೇಹದ ಕಸುವು ಚೆನ್ನಾಗಿರುತ್ತದೆ. ಅವನ ಗ್ರೌಂಡ್ ಸ್ಟ್ರೋಕ್‌ಗಳು, ಏಸ್‌ಗಳೇ ಇದಕ್ಕೆ ಉದಾಹರಣೆ. ಇಂಥ ಸೋಲುಗಳಿಂದಲೂ ನಾವು ಕಲಿಯುತ್ತಿರುತ್ತೇವೆ’-ಫೆಡರರ್ ನೀಡಿದ್ದ ಈ ಪ್ರತಿಕ್ರಿಯೆ ಜ್ವೆರೆವ್ ಅವರಿಗೆ ಮೆಚ್ಚುಗೆಯ ಸರ್ಟಿಫಿಕೇಟ್ ಕೂಡ ಹೌದು.

ಹಾಗೆ ನೋಡಿದರೆ ಈ ವರ್ಷ ಫೆಡರರ್ ಅವರಿಗೆ ಪೆಟ್ಟು ಕೊಡುವಷ್ಟು ಶಕ್ತವಾದ ಮೂರನೇ ಸೋಲು ಇದಾಗಿತ್ತು. ಅನುಭವದ ಜೊತೆಗೇ ಟೆನಿಸ್ ವೇಗ ಎದುರಿಸುತ್ತಾ ಬಂದಿರುವ ಸ್ವಿಟ್ಜರ್ಲೆಂಡ್ ಆಟಗಾರನ ಮಣಿಸಿರುವುದು ಜ್ವೆರೆವ್ ವೃತ್ತಿಬದುಕಿನ ಪ್ರಮುಖ ತಿರುವು.

‘ನಾನು ಟೆನಿಸ್‌ನಲ್ಲಿ ಯಾವತ್ತೂ ಎದುರಾಳಿಯ ಪೂರ್ವಾಪರದ ಕುರಿತು ತಲೆಕೆಡಿಸಿಕೊಂಡವನಲ್ಲ. ಆ ದಿನ ನಿರ್ದಿಷ್ಟ ಪಂದ್ಯದಲ್ಲಿ ಹೇಗೆ ಆಡುತ್ತೇವೆ ಎನ್ನುವುದಷ್ಟೆ ಮುಖ್ಯ. ಫೆಡರರ್ ಸರ್ವ್‌ಗಳು ತೀವ್ರವಾಗಿರಲಿಲ್ಲ. ಅದು ನನಗೆ ವರದಾನವಾಯಿತು. ಈ ವರ್ಷ ಟೆನಿಸ್ ನಲ್ಲಿ ನನ್ನ ಕನಸುಗಳು ಸಾಕಾರಗೊಳ್ಳುತ್ತಿವೆ. ಮುಂದೆ ಇನ್ನಷ್ಟು ದಿಗ್ಗಜರ ಸೋಲಿಸಿ, ಅನುಭವ ಗಟ್ಟಿ ಮಾಡಿಕೊಳ್ಳಬೇಕು’- ಜ್ವೆರೆವ್ ಈ ಮಾತಿನಲ್ಲಿ ಇಣುಕುವುದು ಭರ್ತಿಯಾಗಿರುವ ಅವರ ಆತ್ಮವಿಶ್ವಾಸ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.