ADVERTISEMENT

ಈ ನೋವಿದ್ದರೂ ನಗುತ್ತೇನೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2018, 19:30 IST
Last Updated 19 ಜನವರಿ 2018, 19:30 IST
ಈ ನೋವಿದ್ದರೂ ನಗುತ್ತೇನೆ
ಈ ನೋವಿದ್ದರೂ ನಗುತ್ತೇನೆ   

ಕೆಲವನ್ನು ಕೆಲವರಿಂದ ಕಲಿಯಬೇಕು ಎನ್ನುವುದು ಕವಿವಾಣಿ. ಅದರಂತೆ ನಾವು ಬೇರೆಯವರಿಂದ ಕಲಿಯುವುದೇ ಜಾಸ್ತಿ. ಚಿಕ್ಕಂದಿನಲ್ಲಿ ಅಪ್ಪ ಅಮ್ಮನ ನೆರಳಲ್ಲಿ ಬೆಳೆವಾಗ ಅವರು ಹೇಳಿದಂತೆ ಕಲಿತಿರುತ್ತೇವೆ. ದೊಡ್ಡವರಾದಂತೆ ಒಪ್ಪು, ನೆಪ್ಪುಗಳು ಅರಿವಿಗೆ ಬಂದಾಗ ಬೇರೆಯವರಿಂದಲೂ ಕಲಿಯುತ್ತೇವೆ. ಕಲಿಯಲು ಇಂಥದ್ದೆ ವಯಸ್ಸು ಎಂಬುದಿಲ್ಲ. ಯಾವ ವಯಸ್ಸಿನಲ್ಲೂ ಇನ್ನೊಬ್ಬರ ಒಳ್ಳೆಯ ನಡವಳಿಕೆಗಳು ಅಥವಾ ಒಳ್ಳೆಯ ಮಾತುಗಳು ನಮ್ಮನ್ನು ಬದಲಿಸಬಲ್ಲುದು.

ಹಾಗೆಯೇ ನನಗೂ ಒಬ್ಬ ಮಹಾನುಭಾವರ ಮಾತಿನಿಂದ ನನ್ನ ಹಿಂದಿನದನ್ನು ತಿರುಗಿನೋಡಿ, ನನ್ನೊಳಗೆ ನಾನಾಗಿ ನಾನು ಏನು ಅನ್ನುವುದನ್ನು ತಿಳಿದುಕೊಂಡೆ.

ಈಗ್ಗೆ 4 ವರ್ಷದ ಹಿಂದೆ ನಾನು ಕೆಳಗೆ ಕುಳಿತುಕೊಳ್ಳಲು ಹೋಗಿ ಮಂಡಿಯ ಚಿಪ್ಪು ಏರ್‌ಲೈನ್‌ಕ್ರಾಕ್‌ ಆಯಿತು. ಆಗ ಡಾಕ್ಟರ್‌ಲ್ಲಿಗೆ ಹೋದಾಗ ಅವರು ನೀಕ್ಯಾಪ್‌ ಕೊಟ್ಟು 3 ತಿಂಗಳು ರೆಸ್ಟ್‌ನಲ್ಲಿ ಇರಲು ಹೇಳಿದರು. ಆದಾದ ಬಳಿಕವೂ ನನಗೆ ಹೆಚ್ಚಾಗಿ ಕಾಲು ನೋವು ಬರುತ್ತಲೇ ಇತ್ತು. ಜೊತೆಗೆ ಜಾಸ್ತಿ ನಡೆಯಲು ಆಗುತ್ತಿರಲಿಲ್ಲ. ಅಬ್ಬಾ ಎಷ್ಟು ನೋವು ಹೇಗಪ್ಪಾ ತಡೆಯೊದು ಎಂದುಕೊಳ್ಳುತ್ತಿದ್ದೆ.

ADVERTISEMENT

ಆಗ ನನಗೆ ತಕ್ಷಣ ಜ್ಞಾಪಕಕ್ಕೆ ಬಂದಿದ್ದು ರಾಜ್‌ಕುಮಾರ್‌ರವರು ಹೇಳಿದ ಮಾತುಗಳು ಅದು ಅವರು ‘ವರ್ಷದ ಕನ್ನಡಿಗ’ ಪ್ರಶಸ್ತಿಯನ್ನು ಸ್ವೀಕರಿಸುವಾಗ ಆಡಿದ ಮಾತುಗಳು. ಅವರಿಗೂ ವಯಸ್ಸಿಗನುಗುಣವಾಗಿ ಮಂಡಿ ನೋವು ಬಂದಿತ್ತು. ಅದನ್ನು ಕೆಲವರು ನೀವು ಸಿನೆಮಾದಲ್ಲಿ ಪೈಟಿಂಗ್‌ ಮಾಡುತ್ತಿದ್ದರಲ್ಲ. ಹಾಗಾಗಿ ಬಂದಿರಬೇಕು ಎಂದರಂತೆ. ಅದಕ್ಕೆ ರಾಜ್‌ಕುಮಾರ್‌ರವರು ಹೇಳಿದ್ದು ಹೀಗೆ ‘ಇದ್ದರೂ ಇರಬಹುದು ಇಲ್ಲ ಎಂದು ಹೇಳುವುದಿಲ್ಲ. ಹ್ಯಾಗೆ ಭಗವಂತ ಇಲ್ಲಿವರೆಗೆ ಸುಖಕೊಟ್ಟಿದ್ದಿಯೊ ಹಾಗೆ ಈ ಮಂಡಿನೋವು ಕೊಟ್ಟಿದ್ದಾನೆ.

ಅದನ್ನು ನಾನೂ ಯಾಕೆ ತಗೊಬಾರದು. ದೇವರು ಸುಖ ಕೊಟ್ಟಿದ್ದನ್ನು ತೆಗೆದುಕೊಂಡಿದ್ದೇನೆ. ಹಾಗೆಯೇ ಈ ದೈಹಿಕ ನೋವನ್ನು ತಗೊಬಾರದು? ನಾನೂ ಯಾರಿಗೆ ಅನ್ಯಾಯ ಮಾಡಿದ್ದೇನೊ, ಯಾವ ಕರ್ಮ ಮಾಡಿದ್ದೇನೊ. ಯಾಕೆ ನನಗೇ ಹೀಗೆ ಬರಬೇಕಿತ್ತು. ನಾನೂ ಏನೋ ಮಾಡಿರಬೇಕಪ್ಪ ಯಾರಿಗ್ಗೊತ್ತು. ನಿನ್ನನ್ನು ನೀನು ಸ್ವಲ್ಪ ತಿರಗಿ ನೋಡಿಕೊ.

ನಿನ್ನನ್ನು ನೀನು ನೋಡಿಕೊಂಡುಬಿಟ್ಟರೆ ಒಳ್ಳೆದು. ಅದಕ್ಕೆ ದೊಡ್ಡವರು ಹೇಳುತ್ತಾರೆ. ನನ್ನಲ್ಲಿ ನಾನಾಗಬೇಕು. ನನ್ನ ತಪ್ಪು, ಒಪ್ಪುಗಳ ಒಳ್ಳೆತನದ ಗುರುತು ಸಿಕ್ಕಿದಾಗ ನಾವು ಯಾವರೀತಿ ನಡೆದುಕೊಳ್ಳಬಹುದು ಅಂತ. ನನಗೆ ಇಷ್ಟು ದೈಹಿಕವಾಗಿ ನೋವಿದ್ದರೂ ಅದನ್ನು ನಾನು ಆನಂದವಾಗಿ ತೆಗೆದುಕೊಳ್ಳುತ್ತೇನೆ.’

ಎಂದ ಮಾತುಗಳು ನನಗೆ ಬಹಳ ಪ್ರಿಯವೆನಿಸಿತು. ಹೌದಲ್ಲವಾ, ನಾನೂ ಯಾರಿಗೂ ಅನ್ಯಾಯ ಮಾಡಿದ್ದಕ್ಕೋ ಅಥವಾ ಕರ್ಮಕ್ಕೊ ನನಗೂ ಈ ಮಂಡಿನೋವು ಬಂದಿರಬೇಕು ಎಂದುಕೊಂಡು ನಾನು ಅದನ್ನು ಹಾಗೆಯೇ ನನ್ನೊಳಗೆ ನಾನಾಗಿ ಈ ನೋವನ್ನು ಆನಂದದಿಂದಲೇ ತೆಗೆದುಕೊಂಡಿದ್ದೇನೆ. ಹಾಗಾಗಿಯೇ ನಾನು ಯಾವಾಗಲೂ ನಗುಮುಖದಿಂದಲೇ ಇರುತ್ತೇನೆ. ಕಾಲುನೋವು ಬಂದ ತಕ್ಷಣ ನನಗೆ ನೆನಪಾಗುವುದೇ ರಾಜ್‌ಕುಮಾರ್‌ರವರ ಮಾತುಗಳು. ಆ ಮಾತಿಗೆ ಅಷ್ಟು ಶಕ್ತಿ ಇದೆ. ಅವರ ಮಾತುಗಳನ್ನು ನಾನು ನನ್ನಲ್ಲಿ ಅಳವಡಿಸಿಕೊಂಡೆ.
–ಶುಭ. ಹೆಚ್‌.ಬಿ., ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.