ADVERTISEMENT

‘ಅಸಾಧ್ಯ ಪಾತ್ರ’ ಮಾಡುವಾಸೆ

ವಿದ್ಯಾಶ್ರೀ ಎಸ್.
Published 19 ಅಕ್ಟೋಬರ್ 2016, 19:30 IST
Last Updated 19 ಅಕ್ಟೋಬರ್ 2016, 19:30 IST
‘ಅಸಾಧ್ಯ ಪಾತ್ರ’ ಮಾಡುವಾಸೆ
‘ಅಸಾಧ್ಯ ಪಾತ್ರ’ ಮಾಡುವಾಸೆ   

‘ಒಲವೇ ಮಂದಾರ’ ಸಿನಿಮಾ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟವರು ಶ್ರೀಕಿ. ನಂತರ ಬಿತ್ರಿ, ಗೋವಾ, ಪಾತರಗಿತ್ತಿ, ಲೂಸ್‌ಗಳು, ಬರ್ತ್‌ ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿದರು. ಇವರ ನಿರೀಕ್ಷೆಯಂತೆ ಸಿನಿಮಾ ಯಶಸ್ಸು ಕಂಡಿದ್ದು ಕಡಿಮೆಯೇ. ‘ಅವಕಾಶಗಳು ಸಾಕಷ್ಟಿವೆ. ಆದರೆ ಉತ್ತಮ ಕಥೆಯ ಹಂಬಲದಲ್ಲಿದ್ದೇನೆ’ ಎನ್ನುವ ನಟ ಶ್ರೀಕಾಂತ್, ತಮ್ಮ ಅನುಭವಗಳನ್ನು ‘ಕಾಮನಬಿಲ್ಲು’ ಜೊತೆ ಹಂಚಿಕೊಂಡಿದ್ದಾರೆ.

* ಸಿನಿಮಾದ ನಂಟು ಅಂಟಿಕೊಂಡಿದ್ದು ಹೇಗೆ?
ಬಾಲ್ಯದಿಂದಲೂ ನಟನಾಗುವ ಆಸೆಯಿತ್ತು. ಆಗಲೇ ಸಣ್ಣಪುಟ್ಟ ಮಿಮಿಕ್ರಿ ಮಾಡುತ್ತಿದ್ದೆ. ರಜನಿಕಾಂತ್‌ ರೀತಿ ಅಭಿನಯ ಮಾಡಿ ಮನೆಯವರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದೆ.

ಎಸ್ಸೆಸ್ಸೆಲ್ಸಿ ಮುಗಿದ ನಂತರ ಫೈನ್‌ ಆರ್ಟ್ಸ್‌ ಕಾಲೇಜಿಗೆ ಚಿತ್ರಕಲೆಯ ಅಧ್ಯಯನಕ್ಕೆಂದು ಸೇರಿಕೊಂಡೆ. ಆದರೆ ದಾರಿ ಬೇರೆ ಆಯಿತು. ಮುಂದೆ ಏನು ಎಂದುಕೊಳ್ಳುವಾಗಲೇ ಮಾಡೆಲಿಂಗ್‌ ಮಾಡುವ ಆಲೋಚನೆ ಹೊಳೆಯಿತು. ಈ ವಿಷಯದ ಕುರಿತು ಅಪ್ಪನೊಂದಿಗೆ ಚರ್ಚಿಸಿದೆ. ಆಗ ಅಪ್ಪ ನಟನಾಗುವಂತೆ ಸಲಹೆ ನೀಡಿದರು.

ನಟನಾ ತರಬೇತಿ ಪಡೆಯುವಂತೆ, ಯಾವುದಾದರೂ ನಾಟಕದಲ್ಲಿ ನಟಿಸುವಂತೆ ಸೂಚಿಸಿದರು. ಅದರಂತೆ, ನಾಟಕವೊಂದರಲ್ಲಿ ಅಭಿನಯಿಸಿದೆ. ನಟನಾ ತರಬೇತಿ ಪಡೆದೆ. ತರಬೇತಿ ಮುಗಿಯುತ್ತಿದ್ದಂತೆ ಒಳ್ಳೆ ಕಥೆಯುಳ್ಳ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತು.         

* ಯಾವ ಪಾತ್ರದಲ್ಲಿ ಮಿಂಚುವ ಆಸೆಯಿದೆ?
ಕಥೆಗೆ ಮಹತ್ವವಿರಬೇಕು, ಪ್ರೇಕ್ಷಕರನ್ನು ಆ ಕಥೆ ಆವರಿಸಿಕೊಳ್ಳುವಂತಿರಬೇಕು. ಇಂಥ ಪಾತ್ರ ಎಲ್ಲರಿಂದ ಸಾಧ್ಯವಿಲ್ಲ ಎನ್ನುವಂತಹ ಪಾತ್ರವಾಗಿರಬೇಕು. ಒಟ್ಟಿನಲ್ಲಿ ಸವಾಲು ಎನ್ನಿಸುವಂತಹ ಪಾತ್ರದಲ್ಲಿ ನಟಿಸುವ ಆಸೆಯಿದೆ.

* ನೀವೂ ನಕ್ಕು, ಬೇರೆಯವರನ್ನೂ ನಗಿಸುತ್ತೀರಂತೆ?
ಅನವಶ್ಯಕ ವಿಷಯಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ತಮಾಷೆಯಾಗಿರುವ ವ್ಯಕ್ತಿತ್ವ ನನ್ನದು.  ಶೂಟಿಂಗ್‌ ವೇಳೆ, ಮನೆ ಮಂದಿಯ ಜೊತೆಗೆ ಕೆಲವು ಸಿನಿಮಾ ಮಂದಿಯನ್ನು ಅನುಕರಣೆ ಮಾಡುವ ಮೂಲಕ ನಗಿಸುವ ಪ್ರಯತ್ನ ಮಾಡುತ್ತೇನೆ.

ನೆನೆಸಿಕೊಂಡು ಯಾವಾಗಲೂ ನಗುವ ಘಟನೆಯೆಂದರೆ, ಚಿಕ್ಕವನಿದ್ದಾಗ ನನ್ನ ತಂದೆ  ಏನೇ ಹೇಳಿದರೂ ಕೇಳುತ್ತಿದ್ದೆ. ಎಷ್ಟೇ ಕಷ್ಟ ಆದರೂ ಅವರು ಹೇಳಿದ ಎಲ್ಲ ಕೆಲಸವನ್ನೂ ಮಾಡುತ್ತಿದ್ದೆ. ಅವರು ಅವರ ಸ್ನೇಹಿತರ ಮುಂದೆ ನನ್ನನ್ನು ಕರೆದು ಏನಾದರೂ ಹೇಳಿ, ಅದನ್ನು ಮಾಡಿ ತೋರಿಸುವಂತೆ ಹೇಳುತ್ತಿದ್ದರು.

ನಾನು ತುಂಬಾ ಶಿಸ್ತಿನಿಂದ ಅದನ್ನೆಲ್ಲಾ ಮಾಡಿ ತೋರಿಸುತ್ತಿದ್ದೆ. ಮರ ಹತ್ತು ಎಂದರೆ ಸಾಕು ಪಟಪಟನೆ ತೆಂಗಿನ ಮರ ಏರುತ್ತಿದ್ದೆ.  ಆಗಿಲ್ಲವೆಂದರೂ ಕಷ್ಟಪಟ್ಟು ಮಾಡುತ್ತಿದ್ದೆ. ಕಂಬ ಹತ್ತು ಎಂದರೆ ಹತ್ತುತ್ತಿದ್ದೆ. ಅವರೆಲ್ಲಾ ನನ್ನ ನೋಡಿ ಮಜಾ ಮಾಡುತ್ತಿದ್ದರು. ಈಗ ನೆನೆದರೆ ನಗು ಬರುತ್ತದೆ. ಈಗ ಪ್ರಯತ್ನಪಟ್ಟರೂ ಹತ್ತಲು ನನಗೆ ಸಾಧ್ಯವಾಗುವುದಿಲ್ಲ.

* ಬಾಲ್ಯ ತರುವ ನೆನಪುಗಳೇನು?
ನನ್ನ ಬಾಲ್ಯ ತುಂಬಾ ಸುಂದರವಾಗಿತ್ತು. ಬಹಳಷ್ಟು ಸ್ನೇಹಿತರಿದ್ದರು. ಬೆಂಗಳೂರಿನ ನಾಗವಾರದಲ್ಲಿ ನಮ್ಮ ಮನೆ ಇತ್ತು. ಆಗೆಲ್ಲ ಈ ಪ್ರದೇಶ ಈಗಿನಷ್ಟು ಅಭಿವೃದ್ಧಿ ಹೊಂದಿರಲಿಲ್ಲ. ಹಾಗಾಗಿ ಮರ ಗಿಡ ಸಮೃದ್ಧವಾಗಿತ್ತು. ನಾವೆಲ್ಲ ಜೊತೆಯಾಗಿ ‘ಕ್ಯಾಟರ್‌ ಪಿಲ್ಲರ್‌’ ತೆಗೆದುಕೊಂಡು ಬೇಟೆಗೆ ಹೋಗುತ್ತಿದ್ದೆವು. ಮನೆಯ ಸಮೀಪದಲ್ಲಿಯೇ ಕಾಲುವೆ ಇತ್ತು. ಅಲ್ಲಿ ಮೀನು ಹಿಡಿಯಲು ಹೋಗುತ್ತಿದ್ದೆವು. ಆ ಸಂತೋಷ, ಸಂಭ್ರಮ ಈಗ ಸಿಗುವುದಿಲ್ಲ.  

* ಬಿಡುವಿನ ವೇಳೆಯಲ್ಲಿ ಏನೇನು ಮಾಡುತ್ತೀರಾ?
ನನಗೆ ಸಾಕು ಪ್ರಾಣಿಗಳೆಂದರೆ ತುಂಬಾ ಇಷ್ಟ. ಅವುಗಳೊಂದಿಗೆ ಕಾಲ ಕಳೆಯುತ್ತೇನೆ. ಅವುಗಳಿಗೆ ತರಬೇತಿ ಕೊಡುತ್ತೇನೆ. ಜೊತೆಗೆ ರುಚಿಕರವಾದ ಆಹಾರ ತಯಾರಿಸುತ್ತೇನೆ. ಕುಟುಂಬದವರೆಲ್ಲಾ ಅದನ್ನು ತಿಂದು ಸಂಭ್ರಮಿಸುತ್ತೇವೆ.

* ನೀವು ವಿಧೇಯ ವಿದ್ಯಾರ್ಥಿಯಾಗಿದ್ದವರಾ?
ಅಯ್ಯೋ ಖಂಡಿತ ಇಲ್ಲ. ತರಗತಿಯಲ್ಲಿ ಸಮಯ ಕಳೆದಿದ್ದಕ್ಕಿಂತ ಹೊರಗೆ ಕಾಲ ಕಳೆದದ್ದೇ ಹೆಚ್ಚು. ಪಾಠವನ್ನು ಕೇಳಿಸಿಕೊಂಡಿದ್ದಕ್ಕಿಂತ ಕ್ಯಾಂಟೀನ್‌ನಲ್ಲಿ ಹರಟೆ ಹೊಡೆದಿದ್ದೇ ಜಾಸ್ತಿ. ಮಳೆಗಾಲ ಬಂತೆಂದರೆ ಸಾಕು, ಕ್ಯಾಂಟೀನ್‌ನಲ್ಲಿ ಎಲ್ಲರಿಗೂ ಲೆಮನ್‌ ಟೀಯನ್ನು ನಾವೆಲ್ಲ  ಸ್ನೇಹಿತರು ಸೇರಿ ತಯಾರಿಸಿಕೊಡುತ್ತಿದ್ದೆವು. ಮಳೆ ಜೋರಾದರೆ ಕ್ಯಾಂಟೀನ್‌ ಸಿಬ್ಬಂದಿಗಳೇ ನಮ್ಮನ್ನು ಕರೆಸಿಕೊಂಡು ಟೀ ತಯಾರಿಸುವಂತೆ ಕೇಳಿಕೊಳ್ಳುತ್ತಿದ್ದರು.

ಆಗಾಗ್ಗೆ ನಂದಿ ಬೆಟ್ಟಕ್ಕೆ ಬೈಕ್‌ ರೈಡ್‌ ಹೋಗುತ್ತಿದ್ದೆವು. ಜೂನಿಯರ್‌ಗಳಿಗಂತೂ ಸಿಕ್ಕಾಪಟ್ಟೆತ್ತಿತ್ತು.   ರ‍್ಯಾಗಿಂಗ್‌ ಮಾಡುತ್ತಿದ್ದೆವು. ಆದರೆ ಯಾರಿಗೂ ತೊಂದರೆ ಕೊಡುತ್ತಿರಲಿಲ್ಲ. ಎಲ್ಲರಿಗೂ ಪುಕ್ಕಟೆ ಮನರಂಜನೆ ಸಿಗುತ್ತಿತ್ತು.
  
* ಸಿನಿಮಾ ಕ್ಷೇತ್ರಕ್ಕೆ ಬರದೇ ಇದ್ದಿದ್ದರೆ?
ನಮ್ಮದೇ ರಿಯಲ್‌ ಎಸ್ಟೇಟ್‌ ಇದೆ. ಅದರ ನಿರ್ವಹಣೆ ಮಾಡುತ್ತಿದ್ದೆ. 

* ಕಟ್ಟುಮಸ್ತು ದೇಹಕ್ಕಾಗಿ ವಿಪರೀತ ಕಸರತ್ತು ನಡೆಸುತ್ತೀರಂತೆ...
ಸಿನಿಮಾಕ್ಕೆ ಬರುವ ಮೊದಲು ಸಣ್ಣಗಿದ್ದೆ. ಇಲ್ಲಿ ಸದೃಢ ಮೈಕಟ್ಟು ಅಗತ್ಯ. ಹಾಗಾಗಿ ಪ್ರತಿದಿನ ಎರಡೂವರೆ ಗಂಟೆ ದೇಹ ದಂಡಿಸುತ್ತೇನೆ. ಡಯೆಟ್‌ ಕೂಡ ಮಾಡುತ್ತೇನೆ.ಹಾಗಂತ ಬಾಯಿಗೆ ಕಡಿವಾಣ ಹಾಕುವುದಿಲ್ಲ. ಎಷ್ಟೇ ಕೊಬ್ಬಿನಂಶವಿರುವ ಆಹಾರ ಸೇವಿಸಿದರೂ ನಾನು ದಪ್ಪಗಾಗುವುದಿಲ್ಲ. ಇಷ್ಟವಿರುವುದನ್ನೆಲ್ಲಾ ತಿನ್ನುತ್ತೇನೆ.ಪ್ರೋಟಿನ್‌ಯುಕ್ತ ಆಹಾರಕ್ಕೆ ಹೆಚ್ಚಿನ ಮಹತ್ವ ನೀಡುತ್ತೇನೆ.

* ಮುಂದಿನ ಯೋಜನೆ?
ಸಾಕಷ್ಟು ಕಥೆಗಳನ್ನು ಕೇಳಿದ್ದೇನೆ. ಆದರೆ ಯಾವುದೂ ಇಷ್ಟವಾಗಿಲ್ಲ. ಕಟ್ಟುಮಸ್ತು ದೇಹಕ್ಕಾಗಿ ಕಸರತ್ತನ್ನು ನಡೆಸುತ್ತಿದ್ದೇನೆ. ನಮ್ಮ ಬ್ಯಾನರ್‌ನಲ್ಲಿಯೇ ಒಂದೊಳ್ಳೆ ಸಿನಿಮಾ ಮಾಡುವ ಯೋಜನೆಯಿದೆ.

* ಶೂಟಿಂಗ್‌ ವೇಳೆ ಹೇಗಿರುತ್ತೀರ?
ಹೆಚ್ಚಿನ ತಯಾರಿಯನ್ನೇನೂ ಮಾಡುವುದಿಲ್ಲ. ಆದರೆ ದುಃಖದ ಪಾತ್ರವಾದರೆ ದಿನವಿಡೀ ಅದೇ ಮೂಡ್‌ನಲ್ಲಿರುತ್ತೇನೆ. ಜಾಸ್ತಿ ಯಾರೊಂದಿಗೂ ಮಾತನಾಡದೆ, ನಗದೇ ಇರುತ್ತೇನೆ. ಏಕೆಂದರೆ ನನ್ನ ವ್ಯಕ್ತಿತ್ವಕ್ಕೆ ವಿರುದ್ಧವಾದ ಪಾತ್ರವದು. ಅದನ್ನು ನನ್ನೊಳಗೆ ಆಹ್ವಾನಿಸಿಕೊಳ್ಳಲು ಸ್ವಲ್ಪ ಕಸರತ್ತು ನಡೆಸುತ್ತೇನೆ. ಇನ್ನುಳಿದಂತೆ ಕಾಮಿಡಿ ಮತ್ತು ಬೇರೆ ಪಾತ್ರಗಳಾದರೆ ಹೆಚ್ಚೇನೂ ತಲೆಕೆಡಿಸಿಕೊಳ್ಳುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.