ADVERTISEMENT

ಆಟೊ ಸಂತೆಯಲ್ಲಿ...

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2017, 19:30 IST
Last Updated 8 ನವೆಂಬರ್ 2017, 19:30 IST
ಆಟೊ ಸಂತೆಯಲ್ಲಿ...
ಆಟೊ ಸಂತೆಯಲ್ಲಿ...   

ಹೋಂಡಾ–6 ಮಾದರಿಗಳ ಬಿಡುಗಡೆ

ಜಪಾನ್‌ನ ಹೋಂಡಾ ಮೋಟಾರು ಕಂಪನಿ, ಮುಂದಿನ ಮೂರು ವರ್ಷಗಳಲ್ಲಿ ಭಾರತದಲ್ಲಿ ಆರು ಮಾದರಿಯ ಕಾರುಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

ಭಾರತದ ವಾಹನ ಮಾರುಕಟ್ಟೆಯಲ್ಲಿ ತನ್ನ ವ್ಯವಹಾರವನ್ನು ಇನ್ನಷ್ಟು ಗಟ್ಟಿಗೊಳಿಸುವ ಆಲೋಚನೆ ಇದರ ಹಿಂದಿರುವುದಾಗಿ ಹೇಳಿಕೊಂಡಿದೆ. ಸದ್ಯಕ್ಕೆ ಆರು ಮಾದರಿಗಳ ಪಟ್ಟಿ ಸಿದ್ಧಗೊಂಡಿದ್ದು, ಈ ಸಾಲಿನಲ್ಲಿ ಹೈಬ್ರಿಡ್ ಹಾಗೂ ಎಲೆಕ್ಟ್ರಿಕ್ ವಾಹನಗಳು ಇಲ್ಲವೆಂಬುದನ್ನೂ ಖಚಿತಪಡಿಸಿದೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ತಯಾರಿಕೆಯ ಬಗ್ಗೆ ಚರ್ಚೆಗಳು ಇನ್ನೂ ಮುಂದುವರಿದಿರುವ ಕಾರಣ ಸದ್ಯಕ್ಕೆ ಈ ಪಟ್ಟಿಯಲ್ಲಿ ಅವುಗಳಿಗೆ ಜಾಗ ನೀಡಿಲ್ಲ.

ADVERTISEMENT

‘ದೊಡ್ಡ ಮಟ್ಟದಲ್ಲಿ ಭಾರತದಲ್ಲಿ ಕಾರುಗಳನ್ನು ಬಿಡುಗಡೆ ಮಾಡುವ ಆಲೋಚನೆಯಿದೆ. ಆದರೆ ಇವ್ಯಾವುವೂ ಬ್ಯಾಟರಿ ಬೆಂಬಲಿತವಾಗಿರುವುದಿಲ್ಲ’ ಎಂದು ಹೇಳಿದ್ದಾರೆ ಕಂಪನಿಯ ಸಿಇಒ ಟಾಕಾಹೈರೊ ಹ್ಯಾಚಿಗೊ. ಜುಲೈನಿಂದ ಜಿಎಸ್‌ಟಿ ಬಂದಿರುವ ಕಾರಣ, ಹೈಬ್ರಿಡ್ ವಾಹನಗಳು ಸ್ವಲ್ಪ ದುಬಾರಿಯಾಗಿದ್ದು, ಭಾರತೀಯ ಮಾರುಕಟ್ಟೆಗೆ ಅನುಗುಣವಾಗಿ ಈ ವಾಹನಗಳನ್ನು ಹೊರತರುವುದಾಗಿ ಹೇಳಿಕೊಂಡಿದ್ದಾರೆ. ಇಲ್ಲಿನ ಎರಡು ಘಟಕಗಳಲ್ಲಿ ಹೊಸ ಮಾದರಿಗಳನ್ನು ಪೂರೈಸಲಾಗುವುದು ಎಂದೂ ಮಾಹಿತಿ ನೀಡಿದ್ದಾರೆ.

ಯಾವ ವಿಭಾಗದಲ್ಲಿ ವಾಹನ ಗಳು ತಯಾರುಗೊಳ್ಳಲಿವೆ ಎಂಬ ಕುರಿತು ಸ್ಪಷ್ಟ ಮಾಹಿತಿ ನೀಡಿಲ್ಲ.

**

ಬಂದಿದೆ ಹೆಕ್ಸಾ ಡೌನ್‌ಟೌನ್

ಟಾಟಾ ಮೋಟಾರ್ಸ್ ತನ್ನ ಹೆಕ್ಸಾ ಎಸ್‌ಯುವಿ ರೇಂಜ್‌ಗೆ ಹೊಸ ‘ಡೌನ್‌ಟೌನ್ ಅರ್ಬನ್ ಎಡಿಷನ್’ ಬಿಡುಗಡೆಗೊಳಿಸಿದೆ.

ಇದು 15 ಹೊಸ ಫೀಚರ್‌ಗಳನ್ನು ಒಳಗೊಂಡಿದ್ದು, ಆ್ಯಬ್ಸೊಲ್ಯೂಟ್ ಹಾಗೂ ಇಂಡಲ್ಜ್‌ ಎಂಬ ಎರಡು ಪ್ಯಾಕೇಜ್‌ಗಳಲ್ಲಿ ಲಭ್ಯವಿದೆ. ಫೀಚರ್‌ಗಳೊಂದಿಗೆ ಕಾಸ್ಮೆಟಿಕ್ ಪರಿಷ್ಕರಣಗಳನ್ನು ಹೊಂದಿದೆ.

ನಗರ ಜೀವನಶೈಲಿಯಿಂದ ಪ್ರೇರಿತಗೊಂಡು ಟಾಟಾ ಈ ವಾಹನವನ್ನು ಬಿಡುಗಡೆಗೊಳಿಸಿದೆ. ‘ನಮ್ಮ ಗ್ರಾಹಕರಿಗೆ ಅತ್ಯುತ್ಕೃಷ್ಟ ಚಾಲನಾ ಅನುಭವ ನೀಡಲು ಈ ಎಸ್‌ಯುವಿಯ ಅರ್ಬನ್ ಎಡಿಷನ್ ಬಿಡುಗಡೆಗೊಳಿಸಲಾಗುತ್ತಿದೆ. ಆನ್‌ ರೋಡ್, ಆಫ್ ರೋಡ್‌ನ ರೋಚಕ ಅನುಭವ ಇದರಿಂದ ದಕ್ಕಲಿದೆ’ ಎಂದು ಹೇಳಿದ್ದಾರೆ ಟಾಟಾ ಮೋಟಾರ್ಸ್‌ನ ಪ್ಯಾಸೆಂಜರ್ ವೆಹಿಕಲ್ ಬಿಸಿನೆಸ್‌ ಯುನಿಟ್‌ನ ಅಧ್ಯಕ್ಷ ಮಾಯಂಕ್ ಪರೀಕ್.

ಕ್ರೋಮ್ ಫಿನಿಶ್, ಫ್ರಂಟ್ ಗ್ರಿಲ್, ಸೈಡ್ ಕ್ಲಾಡಿಂಗ್, 16 ಇಂಚಿನ ಡೈಮಂಡ್ ಕಟ್ ಅಲಾಯ್ ಚಕ್ರಗಳನ್ನು ಹೊಂದಿದೆ. ಪ್ರೀಮಿಯಂ ಟ್ಯಾನ್ ಸೀಟ್ ಕವರ್‌ಗಳಿದ್ದು, ವೈರ್‌ಲೆಸ್ ಚಾರ್ಜರ್, ಬ್ಲೌಪಂಕ್ಟ್ ರಿಯರ್ ಸೀಟ್ ಎಂಟರ್‌ಟೇನ್ಮೆಂಟ್‌ ಪ್ಲೇಯರ್ , ಹೆಡ್ಸ್ ಅಪ್ ಡಿಸ್‌ಪ್ಲೇಗಳನ್ನೂ ಒಳಗೊಂಡಿದೆ. ಜೊತೆಗೆ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಅಳವಡಿಸಲಾಗಿದೆ. ಡೌನ್‌ಟೌನ್‌ ಬೆಲೆಯನ್ನು ₹ 12.18 ಲಕ್ಷ (ಎಕ್ಸ್‌ ಶೋರೂಂ, ದೆಹಲಿ) ನಿಗದಿಗೊಳಿಸಿದೆ.

**

ಪಲ್ಸರ್ ಎನ್‌ಎಸ್ 200ಗೆ ಎಬಿಎಸ್

ಬಜಾಜ್ ಆಟೊ ಲಿಮಿಟೆಡ್, ತನ್ನ ಎಂಟ್ರಿ ಲೆವೆಲ್ ಪರ್ಫಾರ್ಮೆನ್ಸ್ ಮೋಟಾರ್ ಸೈಕಲ್ ‘ಪಲ್ಸರ್ ಎನ್‌ಎಸ್ 200’ಅನ್ನು ಎಬಿಎಸ್ (ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ) ಬೆಂಬಲಿತವಾಗಿಸಿದೆ. ಬಜಾಜ್ ‘ಪಲ್ಸರ್ ಎನ್‌ಎಸ್ 200 ಎಬಿಎಸ್’ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದ್ದು, ₹1,09,715 (ಎಕ್ಸ್ ಶೋರೂಂ, ದೆಹಲಿ) ಬೆಲೆಯನ್ನು ನಿಗದಿಗೊಳಿಸಿದೆ.

ಗ್ರಾಹಕರ ಬೇಡಿಕೆ ಮೇರೆಗೆ, ಅದರಲ್ಲೂ ಯುವಜನರ ಮೆಚ್ಚುಗೆ ಗಳಿಸಿರುವ ಕಾರಣಕ್ಕೆ ಈ ಬೈಕ್‌ಗೆ ಎಬಿಎಸ್‌ ನೀಡಿರುವುದಾಗಿ ಕಂಪನಿ ತಿಳಿಸಿದೆ. ಇದು ಸ್ಟಾಂಡರ್ಡ್ ಬೈಕ್‌ಗಿಂತ ₹10,000 ಹೆಚ್ಚು ಬೆಲೆ ಹೊಂದಿದೆ. ಸಿಂಗಲ್ ಚಾನಲ್ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಆಗಿದ್ದು, ಇದರಿಂದ 2 ಕೆ.ಜಿ ಹೆಚ್ಚುವರಿ ತೂಕ ಹಾಗೂ 300 ಎಂಎಂ ಫ್ರಂಟ್ ಡಿಸ್ಕ್‌ ವಿಸ್ತರಿತವಾಗಿದೆ.‌ ಎಂಜಿನ್‌ ಹಾಗೂ ತಾಂತ್ರಿಕ ವಿಷಯದಲ್ಲಿ ಬದಲಾವಣೆಯಾಗಿಲ್ಲ. 199.5ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಇದ್ದು, 9,500ಆರ್‌ಪಿಎಂನಲ್ಲಿ 23.5 ಎಚ್‌ಪಿ ಹಾಗೂ 8000 ಆರ್‌ಪಿಎಂನಲ್ಲಿ 18.3ಎನ್‌ಎಂ ಶಕ್ತಿಯನ್ನು ಉತ್ಪಾದಿಸಲಿದೆ. 6 ಸ್ಪೀಡ್ ಗಿಯರ್ ಬಾಕ್ಸ್ ಜೊತೆಗಿದೆ. 1,363 ಎಂಎಂ ವೀಲ್ ಬೇಸ್, 167 ಎಂಎಂ ಗ್ರೌಂಡ್ ಕ್ಲಿಯರೆನ್ಸ್, 805 ಎಂಎಂ ಸೀಟ್ ಹೈಟ್‌ನಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.