ADVERTISEMENT

ಆಟೊ ಸಂತೆಯಲ್ಲಿ...

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2017, 19:30 IST
Last Updated 20 ಡಿಸೆಂಬರ್ 2017, 19:30 IST
ಆಟೊ ಸಂತೆಯಲ್ಲಿ...
ಆಟೊ ಸಂತೆಯಲ್ಲಿ...   

ವಿಶೇಷ ಬ್ಲಾಕ್‌ಪ್ಯಾಕ್ ಪಲ್ಸರ್

ವಿಶ್ವದಾದ್ಯಂತ ಒಂದು ಕೋಟಿ ಪಲ್ಸರ್‌ ಬೈಕ್‌ಗಳು ಮಾರಾಟಗೊಂಡ ನೆನಪಿಗಾಗಿ ಬಜಾಜ್‌, ವಿಶೇಷ ಬ್ಲಾಕ್‌ ಪ್ಯಾಕ್ ಪಲ್ಸರ್‌ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ಈ ಬ್ಲಾಕ್ ಪ್ಯಾಕ್‌, ಪಲ್ಸರ್ 150, 180 ಹಾಗೂ 220 ಎಫ್‌ನಲ್ಲಿ ಲಭ್ಯವಿದೆ. ಈ ಮೂರು ಬೈಕ್‌ಗಳಲ್ಲಿ ಮೂರು ಪ್ರಮುಖ ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ.

ಮೊದಲನೆಯದಾಗಿ ಕಪ್ಪು ಬಣ್ಣ. ಎರಡನೆಯದಾಗಿ ಮ್ಯಾಟೆ ಗ್ರೇ ಹೈಲೈಟ್, ಮೂರನೆಯದಾಗಿ ಬಿಳಿಯ ಅಲಾಯ್ ಚಕ್ರಗಳು. ಇನ್ನು ಕೊನೆಯದಾ‌ಗಿ ಸ್ಯಾಟಿನ್ ಕ್ರೋಮ್ ಫಿನಿಶ್ ಅನ್ನು ಎಕ್ಸಾಸ್ಟ್ ಕವರ್‌ಗೆ ನೀಡಿರುವುದು.

ADVERTISEMENT

ಬ್ಲಾಕ್‌ ಪ್ಯಾಕ್‌ನೊಂದಿಗೆ ಬಿಳಿಯ ಅಲಾಯ್‌ ವೀಲ್‌ಗಳು, ಫ್ಯುಯೆಲ್ ಟ್ಯಾಂಕ್‌ನ ಬದಿಯಲ್ಲಿ ಹೊಸ ಡೆಕಲ್‌ಗಳು, ಮ್ಯಾಟ್‌ ಗ್ರೇ ಹೈಲೈಟ್‌ನೊಂದಿಗೆ ಕಪ್ಪು ಪೇಂಟ್ ಫಿನಿಷ್ ನೀಡಿರುವುದು ಹೊಸ ವಿನ್ಯಾಸದಂತೆ ಗೋಚರಿಸುತ್ತದೆ.

ತಾಂತ್ರಿಕವಾಗಿ ಯಾವುದೇ ಬದಲಾವಣೆಯಾಗಿಲ್ಲ. 150 ಸಿಸಿ–14ಎಚ್‌ಪಿ–149ಸಿಸಿ ಮೋಟಾರು ಹೊಂದಿದ್ದು, 180ಗೆ 17 ಎಚ್‌ಪಿ 178.6ಸಿಸಿ ಮೋಟಾರು ಇರಲಿದೆ. 220 ಎಫ್‌, 20.9ಎಚ್‌ಪಿ, 220ಸಿಸಿ ಎಂಜಿನ್‌ನೊಂದಿಗೆ ಕಾರ್ಯ ನಿರ್ವಹಿಸಲಿದೆ. ಬೆಲೆಯಲ್ಲೂ ವ್ಯತ್ಯಾಸವಿಲ್ಲ. 150ಗೆ ₹ 76,723, 180ಗೆ ₹ 81,651 ಮತ್ತು 220Fಗೆ ₹ 93,683 (ಎಕ್ಸ್‌ ಶೋರೂಂ, ದೆಹಲಿ) ಬೆಲೆ ಇರಲಿದೆ.

ಸಂಗೀತಪ್ರಿಯರಿಗೆ ‘ಬೋಸ್ ಎಡಿಷನ್’

ಇತ್ತೀಚೆಗಷ್ಟೆ ಭಾರತದಲ್ಲಿ ಕ್ರಾಸ್‌ ಓವರ್ ಕ್ಯಾಪ್ಚರ್ ಬಿಡುಗಡೆಗೊಳಿಸಿದ್ದ ರೆನೊ ಇದೀಗ ಸಂಗೀತಪ್ರಿಯರಿಗಾಗಿ ಹೊಸ ಆವೃತ್ತಿಯನ್ನು ಹೊರತರುವ ಆಲೋಚನೆಯಲ್ಲಿದೆ. ಬೋಸ್‌ನ ಪ್ರೀಮಿಯಂ ಸೌಂಡ್ ಸಿಸ್ಟಂ ಹೊಂದಿದ್ದು, ಈ ಎಸ್‌ಯುವಿಯ ಅಂತಿಮ ಹಂತದ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಮುಂದಿನ ಏಪ್ರಿಲ್‌ಗೆ ಬಿಡುಗಡೆಗೊಳ್ಳುವ ಸೂಚನೆಯನ್ನೂ ನೀಡಿದೆ. ಇದನ್ನು ಬೋಸ್ ಎಡಿಷನ್ ಎಂದು ಕರೆಯಲಾಗಿದೆ.

ಸದ್ಯಕ್ಕೆ ರೆನೊ ಕ್ಯಾಪ್ಚರ್‌ನಲ್ಲಿ 7 ಇಂಚಿನ ಟಚ್‌ಸ್ಕ್ರೀನ್ ಇನ್ಫೊಟೇನ್ಮೆಂಟ್ ಸಿಸ್ಟಂ ಮತ್ತು ಹಿಂಭಾಗ, ಮುಂಭಾಗದಲ್ಲಿ ಆರ್ಕಮಿಸ್ ಟ್ಯೂನ್ ಸೌಂಡ್‌ ಸಿಸ್ಟಂ ಅನ್ನು ಅಳವಡಿಸಲಾಗಿತ್ತು. ಪ್ರೀಮಿಯಂ ಆಡಿಯೊ ಬ್ರ್ಯಾಂಡ್ ಆಗಿರುವ ಬೋಸ್ ಅನ್ನು ಉತ್ತಮ ಸಂಗೀತಾನುಭವ ನೀಡುವ ಉದ್ದೇಶದಿಂದ ಅಳವಡಿಸಲಾಗಿದೆ. ಈ ಬದಲಾವಣೆ ಮಾರ್ಕೆಟಿಂಗ್‌ ವಿಷಯವಾಗಿಯೂ ಸಹಾಯ ಮಾಡಲಿದೆ ಎಂಬ ಲೆಕ್ಕಾಚಾರವೂ ಕಂಪನಿಗಿದೆ.

ತಾಂತ್ರಿಕ ವಿಷಯವಾಗಿ ಹೇಳುವುದಾದರೆ, 1.5 ಲೀಟರ್ ಪೆಟ್ರೋಲ್ ಎಂಜಿನ್ ಇದ್ದು, ಗರಿಷ್ಠ 106 ಬಿಎಚ್‌ಪಿ ಹಾಗೂ 1.5 ಲೀಟರ್ ಡೀಸೆಲ್ ಎಂಜಿನ್ ಗರಿಷ್ಠ 110 ಬಿಎಚ್‌ಪಿ ಶಕ್ತಿಯನ್ನು ಉತ್ಪಾದಿಸಲಿದೆ. ಇದರೊಂದಿಗೆ ಪೆಟ್ರೋಲ್‌ಗೆ 5-ಸ್ಪೀಡ್ ಮ್ಯಾನ್ಯುಯಲ್ ಟ್ರಾನ್ಸ್‌ಮಿಷನ್ ಹಾಗೂ 6-ಸ್ಪೀಡ್ ಮ್ಯಾನ್ಯುಯಲ್ ಗಿಯರ್ ಬಾಕ್ಸ್ ಇರಲಿದೆ.

ಸೀಮಿತ ಆವೃತ್ತಿಯ ಮಾದರಿಗಳೊಂದಿಗೆ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿದ್ದು, ಸಂಗೀತ ಪ್ರಿಯರಿಗೆಂದೇ ವಿಶೇಷ ಮಾದರಿ ತರುತ್ತಿರುವುದು ಹೊಸ ಬೆಳವಣಿಗೆ. ಇದನ್ನು ಗ್ರಾಹಕರು ಹೇಗೆ ಸ್ವೀಕರಿಸು ತ್ತಾರೆ ಎಂಬುದನ್ನು ಕಾದು ನೋಡಬೇಕು ಎಂದು ಹೇಳಿಕೊಂಡಿದೆ ಕಂಪನಿ. ಈ ಹಿಂದಿನ ಆವೃತ್ತಿಗಿಂತ ಇದರ ಬೆಲೆ ₹ 25,000 ರೂಪಾಯಿ ಹೆಚ್ಚಿರಲಿದೆ.

ಇ–ವಿ ತರುವುದೇ ಯಮಾಹ?

ವಿದ್ಯುತ್ ಚಾಲಿತ ವಾಹನಗಳ ಭರಾಟೆ ಜೋರಾಗಿರುವ ಹಿನ್ನೆಲೆಯಲ್ಲೇ ಯಮಾಹಾ ಈ ಕುರಿತು ಭಾರತದಲ್ಲಿ ಅಧ್ಯಯನ ನಡೆಸುತ್ತಿರುವುದಾಗಿ ತಿಳಿಸಿದೆ. ಜಪಾನಿನ ವಾಹನ ತಯಾರಿಕಾ ಕಂಪನಿ ಯಮಾಹಾ, ವಿದ್ಯುತ್ ವಾಹನಗಳ ಕಾರ್ಯಸಾಧ್ಯತೆಯ ಅಧ್ಯಯನವನ್ನು ಹಮ್ಮಿಕೊಂಡಿದೆ.

ಈ ಅಧ್ಯಯನಗಳ ಆಧಾರದ ಮೇಲೆ ಇಲ್ಲಿ ಪವರ್ ಯುನಿಟ್‌ಗಳ ಹಾಗೂ ಬ್ಯಾಟರಿಗಳ ಉತ್ಪಾನೆಗೆ ಬಂಡವಾಳ ಹಾಕುವುದರ ಕುರಿತು ಚಿಂತನೆ ನಡೆಸುತ್ತಿರುವುದಾಗಿ ತಿಳಿಸಿದೆ. ಇದರೊಂದಿಗೆ ಕಂಬಶನ್ ಎಂಜಿನ್ ಇರುವ ಇತರೆ ವಾಹನಗಳನ್ನು ವಿದ್ಯುತ್ ವಾಹನವಾಗಿ ಪರಿವರ್ತಿಸುವ ಕುರಿತೂ ಆಲೋಚನೆ ನಡೆಸುತ್ತಿದೆ.

‘ಸದ್ಯಕ್ಕೆ ಕಾರ್ಯಸಾಧ್ಯತೆಯ ಅಧ್ಯಯನವನ್ನು ನಡೆಸುತ್ತಿದ್ದೇವೆ. ಈಗಾಗಲೇ ನಮ್ಮ ವಿದ್ಯುತ್ ವಾಹನಗಳು ಇನ್ನಿತರ ದೇಶಗಳಲ್ಲಿ ಇವೆ. ಅದನ್ನು ಭಾರತಕ್ಕೆ ಪರಿಚಯಿಸುವುದು ಕಷ್ಟದ ಕೆಲಸವಲ್ಲ. ಇದು ಸಂಪೂರ್ಣ ಬದಲಿಯಲ್ಲ.

ದೇಶದಲ್ಲಿ ನಮ್ಮ ಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಲು ಸಾಂಪ್ರದಾಯಿಕ ಎಂಜಿನ್ ಬೈಕ್‌ಗಳನ್ನೂ ಅಭಿವೃದ್ಧಿಪಡಿಸುವುವುದು, ಇದರೊಂದಿಗೆ ಅತ್ಯುತ್ಕೃಷ್ಟ ಎಂಜಿನ್‌ಗಳನ್ನು ತಯಾರಿಸುವ ಯೋಜನೆಗಳೂ ಇವೆ’ ಎಂದಿದ್ದಾರೆ ಯಮಾಹಾ ಮೋಟಾರು ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಜ ಯಾಸೌ ಇಶಿಹರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.