ADVERTISEMENT

ಆರಾಮಕ್ಕೆ ಮಿನಿ ಎಸ್‌ಯುವಿ

ಟಯೋಟಾ ಇಟಿಯೋಸ್ ‌ಕ್ರಾಸ್‌

ನೇಸರ ಕಾಡನಕುಪ್ಪೆ
Published 27 ಆಗಸ್ಟ್ 2014, 19:30 IST
Last Updated 27 ಆಗಸ್ಟ್ 2014, 19:30 IST

ಭಾರತೀಯರಿಗೆ ಮಿನಿ ಎಸ್‌ಯುವಿಗಳ ಬಗ್ಗೆ ಪ್ರೀತಿ ತುಂಬಾ ಹೆಚ್ಚಾದಂತಿದೆ. ಇದಕ್ಕೆ ಇಂಬು ನೀಡುವಂತೆ ತಿಂಗಳಿಗೆ ಒಂದರಂತೆ ಮಿನಿ ಎಸ್‌ಯುವಿಗಳು ಬಿಡುಗಡೆ ಆಗುತ್ತಲೇ ಇವೆ. ದೇಶ- ವಿದೇಶಗಳ ಕಾರ್‌ ಕಂಪೆನಿಗಳು ಉತ್ಸುಕರಾಗಿ ಕಾರ್‌ಗಳನ್ನು ಬಿಡುಗಡೆ ಮಾಡುತ್ತಲೇ ಇವೆ. ಕೆಲವು ಸಂಪೂರ್ಣ ಹೊಸ ಕಾರ್‌ಗಳಾದರೆ, ಇನ್ನೂ ಕೆಲವು ಒಂದಿಷ್ಟು ಬದಲಾವಣೆಗಳೊಂದಿಗೆ ಬಿಡುಗಡೆಯಾದ ಹೊಸ ವಾಹನಗಳು. ಅಂತಹ ಬದಲಾವಣೆಗಳನ್ನು ಹೊತ್ತು ಬಿಡುಗಡೆಯಾಗಿರುವ ಹೊಸ ಮಿನಿ ಎಸ್‌ಯುವಿ- ಟಯೋಟಾ ಇಟಿಯೋಸ್‌ ಕ್ರಾಸ್‌.

ವಾಸ್ತವದಲ್ಲಿ ಟಯೋಟಾ ಇಟಿಯೋಸ್‌ ಕ್ರಾಸ್‌ ಸಂಪೂರ್ಣ ಹೊಸ ಮಿನಿ ಎಸ್‌ಯುವಿ ಏನಲ್ಲ. ಇಟಿಯೋಸ್‌ ಲಿವಾ ಕಾರ್‌ಗೆ ಕೇವಲ ಪ್ಲಾಸ್ಟಿಕ್‌ ಆವರಣವನ್ನು ನೀಡುವ ಮೂಲಕ ಗಡಸು ಸ್ವರೂಪವನ್ನು ನೀಡಲಾಗಿದೆಯಷ್ಟೇ. ಆದರೆ, ದೇಹವನ್ನು ಕೊಂಚ ಎತ್ತರಿಸಿ, ಮಿನಿ ಎಸ್‌ಯುವಿಗೆ ತಕ್ಕಂತೆ ಬದಲಾಯಿಸಲಾಗಿದೆ.

ಉತ್ತಮ ನೋಟ
ಇಟಿಯೋಸ್‌ ಲಿವಾನಂತೆಯೇ ಕ್ರಾಸ್‌ ಕಾಣುವುದಾದರೂ, ಇದು ಪಕ್ಕಾ ಎಸ್‌ಯುವಿ. ಎಸ್‌ಯುವಿಗಳಲ್ಲೇ ಕ್ರಾಸ್‌ ಓವರ್‌ಎಂಬ ಪಂಗಡ ಇದೆ. ಇವು ಸಂಪೂರ್ಣ ಆಫ್‌ ರೋಡ್‌ ಸಹ ಅಲ್ಲದ, ಸ್ಟ್ರೀಟ್‌ ವೆಹಿಕಲ್‌ಗಳೂ ಅಲ್ಲದ, ಮಧ್ಯದ ಪೈಕಿಯ ವಾಹನಗಳು. ಅದಕ್ಕಾಗೇ ಈ ರೀತಿಯ ವಾಹನಗಳಿಗೆ ದೇಹದ ಸುತ್ತಲೂ ಉಂಗುರದಂತೆ ಒಂದು ಪ್ಲಾಸ್ಟಿಕ್‌ ಪಟ್ಟಿ ನೀಡಲಾಗಿರುತ್ತದೆ. ಇದು ವಾಹನದ ದೇಹ ಡೆಂಟ್‌ ಆಗದಂತೆ ರಕ್ಷಣೆ ನೀಡುತ್ತದೆ. ಸಾಮಾನ್ಯವಾಗಿ ಮ್ಯಾಟ್‌ಫಿನಿಷ್‌ (ಹೊಳಪಿಲ್ಲದ್ದು) ಇರುವುದರಿಂದ ನೋಡಲು ಗಡುಸಾದ ನೋಟವನ್ನು ನೀಡುತ್ತದೆ. ಅದೇ ರೀತಿ ಕ್ರಾಸ್‌ನಲ್ಲೂ ನೀಡಲಾಗಿದೆ.

ಇದಕ್ಕೆ ಪೂರಕವಾಗಿ ಕ್ರಾಸ್‌ನಲ್ಲಿ, ಅದ್ಭುತ ರೂಫ್‌ ರೇಲಿಂಗ್‌ ನೀಡಲಾಗಿದೆ. ಇದು ಲಗೇಜ್‌ ಇಟ್ಟುಕೊಳ್ಳಲು ಅನುಕೂಲಕರವಾಗಿದೆ. ಜತೆಗೆ, ರೇಲಿಂಗ್‌ಗೆ ಸೈಕಲ್‌ ಅಡಾಪ್ಟರ್‍ ಅವಕಾಶ ಕೊಟ್ಟಿರುವುದು ವಿಶೇಷ. ಮಾರುಕಟ್ಟೆಯಲ್ಲಿ ಸಿಗುವ ಸೈಕಲ್‌ ಅಡಾಪ್ಟರ್‌ ಕೊಂಡು ಕಾರ್‌ನ ಮೇಲೆ ಅಳವಡಿಸಿಕೊಂಡರೆ ಸಾಕು, ಒಂದು ಪೂರ್ಣ ಪ್ರಮಾಣದ ಸೈಕಲ್‌ ಅನ್ನು ಕಾರ್‌ನ ಮೇಲೆ ನಿಲ್ಲಿಸಿಕೊಳ್ಳಬಹುದು.

ಕ್ರಾಸ್‌ಗೆ 15 ಇಂಚಿನ ಅಲಾಯ್‌ ವ್ಹೀಲ್‌ ಇದೆ. ಕಾರ್‌ನ ಬಂಪರ್‌ಗಳೆರಡೂ ವಿಶೇಷವಾಗಿದ್ದು, ರೋಬಸ್ಟ್‌ ನೋಟ ನೀಡಲು ಸಹಕಾರಿಯಾಗಿವೆ. ಎದುರಿನ ಬಂಪರ್‌, ಹೆಡ್‌ಲೈಟ್‌ಗಳ ಮೇಲೆ ವಿಸ್ತರಿಸಿ, ಬಾನೆಟ್‌ವರೆಗೂ ಇದೆ. ಇದು ಸದ್ಯಕ್ಕೆ ಬೇರಾವ ಮಿನಿ ಎಸ್‌ಯುವಿಯಲ್ಲೂ ಇಲ್ಲ. ಹಿಂದಿನ ಬಂಪರ್‌ ಸಹ ಬಲಿಷ್ಠವಾಗಿದೆ. ಕಾರ್‌ನ ಎರಡೂ ಬದಿಗಳ ರನಿಂಗ್‌ ಬೋರ್ಡ್‌‌ನಲ್ಲಿ ಇಟಿಯಾಸ್ ಕ್ರಾಸ್‌ ಎಂಬ ಕೆತ್ತನೆಯ ರೂಪದ ರಚನೆ ಇರುವುದೂ ವಿಶೇಷ.

ಎಂಜಿನ್‌, ಸಾಮರ್ಥ್ಯ
ಪೆಟ್ರೋಲ್‌ ಹಾಗೂ ಡೀಸೆಲ್‌ ಎರಡೂ ಅವತರಣಿಕೆಗಳಲ್ಲಿ ಕ್ರಾಸ್‌ ಲಭ್ಯವಿದೆ. 1.5 ಲೀಟರ್‌ ಪೆಟ್ರೋಲ್‌ ಎಂಜಿನ್‌, 1.4 ಲೀಟರ್‌ ಡೀಸೆಲ್‌ ಎಂಜಿನ್‌ ಅವಕಾಶವಿದೆ. ಎರಡೂ ಎಂಜಿನ್‌ಗಳೂ ಮಧ್ಯಮ ಗಾತ್ರದ ಉತ್ತಮ ಎಂಜಿನ್‌ಗಳು. ಈಗಾಗಲೇ ಸಾಬೀತಾಗಿರುವ ಲಿವಾ ಕಾರ್‌ನಲ್ಲೂ ಇದೇ ಎಂಜಿನ್‌ ಇದೆ. ಆಫ್‌ರೋಡ್‌ಗೆ ಬೇಕಾಗುವ 4x4 ಡ್ರೈವ್‌ ವ್ಯವಸ್ಥೆ ಇರುವುದರಿಂದ ಗಡಸುತನವೂ ಸಿಗುತ್ತದೆ.

ಉತ್ತಮ 67 ಬಿಎಚ್‌ಪಿ ಶಕ್ತಿಯಿದ್ದು, ಕಾರ್‌ಪೆಪ್ಪಿ ಎನಿಸಿಕೊಳ್ಳುತ್ತದೆ. ಆದರೆ, ಈ ಎರಡೂ ಅವತರಣಿಕೆಗಳ ದೊಡ್ಡ ಕೊರತೆ ಎಂದರೆ, ಎಂಜಿನ್‌ ಕಂಪಾರ್ಟ್‌ಮೆಂಟ್‌ ಸರಿಯಾಗಿ ಇನ್ಸುಲೇಟ್‌ ಆಗದಿರುವುದು. ಅಂದರೆ, ಎಂಜಿನ್‌ನ ಸದ್ದು ಹೆಚ್ಚಾಗಿ ಪ್ಯಾಸೆಂಜರ್‌ ಕಂಪಾರ್ಟ್‌ಮೆಂಟ್‌ಗೆ ಸೋರುತ್ತದೆ. ಹಾಗಾಗಿ, ನಿಶ್ಶಬ್ದ ವಾತಾವರಣ ಕಾರ್‌ನಲ್ಲಿ ಕಡಿಮೆಯಿದೆ. ಇದನ್ನು ಸರಿಪಡಿಸುವತ್ತ ಟಯೋಟಾ ಕಾರ್ಯಪ್ರವೃತ್ತವಾಗಬೇಕು.

ಇನ್ನು, ಕಾರ್‌ನ ಐಷಾರಾಮಿತನ ಉತ್ತಮವಾಗಿದೆ. ಶ್ರೇಷ್ಠ ಸಸ್ಪೆನ್ಷನ್‌ ವ್ಯವಸ್ಥೆ ಇದ್ದು, ಕುಲುಕಾಟ ಅತ್ಯಂತ ಕಡಿಮೆಯಿದೆ. ಕಾರ್‌ನ ಸ್ಟೀರಿಂಗ್‌ ಚೆನ್ನಾಗಿದೆ. ಆದರೆ, ಕೊಂಚ ಚುರುಕುತನ ಕಡಿಮೆ ಅನ್ನಬಹುದು. ಮಿನಿ ಎಸ್‌ಯುವಿ ಆದ ಕಾರಣ, ಪವರ್‌ ಸ್ಟೀರಿಂಗ್‌ ಉತ್ತಮವಾಗಿ ಸ್ಪಂದಿಸಲೇಬೇಕು. ಆದರೂ, ತೆಗೆದುಹಾಕುವಂತಹ ಕೆಟ್ಟದಾಗೇನೂ ಇಲ್ಲ. ಬಳಸಿದಂತೆ ಹೊಂದಿಕೊಳ್ಳಬಹುದು.

ಇನ್ನು, ಕ್ರಾಸ್‌ನಲ್ಲಿ ಪಿಯಾನೊ ಬ್ಲಾಕ್ ಡ್ಯಾಷ್‌ಬೋರ್ಡ್‌, ಅತ್ಯುತ್ತಮ ಮೀಟರ್‌ ಕನ್ಸೋಲ್‌, ಎರಡು ಬಣ್ಣಗಳ ಸೀಟ್‌ ಇದೆ. 5 ಮಂದಿ ಆರಾಮಾಗಿ ಕೂರಬಹುದು. 2ಡಿನ್‌ ಮ್ಯೂಸಿಕ್‌ ಸಿಸ್ಟಂ ಹಾಗೂ ಹವಾನಿಯಂತ್ರಣ ವ್ಯವಸ್ಥೆಯೂ ಉತ್ತಮವಾಗೇ ಇದೆ. ಇದು ಇಟಿಯೋಸ್‌ ಲಿವಾಗಿಂತ 60 ಸಾವಿರ ರೂಪಾಯಿ ಹೆಚ್ಚು ಬೆಲೆ ಹೊಂದಿದೆ. ಆದರೆ, ರೆನೊ ಡಸ್ಟರ್‌ ಹಾಗೂ ಫೋರ್ಡ್‌ ಇಕೋ ಸ್ಪೋರ್ಟ್‌ಗಿಂತಲೂ ಕಡಿಮೆ ಬೆಲೆಯಿದೆ. ಇವೆರಡೂ ಮಿನಿ ಎಸ್‌ಯುವಿಗಿಂತಲೂ ಚಿಕ್ಕದಾಗಿದೆ. ಟಯೋಟಾ ಇಟಿಯೋಸ್‌ ಕ್ರಾಸ್‌ನ ಬೆಲೆ (ಬೆಂಗಳೂರು ಎಕ್ಸ್ ಶೋರೂಂ) 5.76 ದಿಂದ 7.5 ಲಕ್ಷ ರೂಪಾಯಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.