ADVERTISEMENT

ಈ ಸಮಯ ಸಂತೋಷಮಯ

ಪ್ರಮೋದ ಜಿ.ಕೆ
Published 23 ಏಪ್ರಿಲ್ 2014, 19:30 IST
Last Updated 23 ಏಪ್ರಿಲ್ 2014, 19:30 IST

ಹೈದರಾಬಾದ್‌ನಲ್ಲಿ ನಡೆದ ರಣಜಿ ಫೈನಲ್‌ ಪಂದ್ಯದಲ್ಲಿ ಕರ್ನಾಟಕ ಪ್ರಶಸ್ತಿ ಗೆದ್ದಾಗ ‘ನಿಮ್ಮ ತಂಡದ ಯಶಸ್ಸಿಗೆ ಬಹುಮುಖ್ಯ ಕಾರಣ ಏನು’ ಎಂದು ಆಟಗಾರರನ್ನು ಪ್ರಶ್ನಿಸಿದ್ದಾಗ ‘ಆತ್ಮೀಯ ಗೆಳೆಯನಂತಿರುವ ವಿಡಿಯೊ ಅನಲಿಸ್ಟ್‌ ಸಂತೋಷ್‌ ನೀಡಿದ ಸಹಕಾರ’ ಎಂದು ಉತ್ತರಿಸಿದ್ದರು. ಆಟಗಳ ವಿಡಿಯೊ ವಿಶ್ಲೇಷಣೆ ಈಗ ಒಂದು ವಿಶೇಷ ವಿಭಾಗವಾಗಿಯೇ ಬೆಳೆದು ನಿಂತಿದೆ. ಆಟಗಾರರ ಪ್ರತಿಚಲನೆಯನ್ನೂ ನಿಖರವಾಗಿ ಮತ್ತು ಸ್ಪಷ್ಟವಾಗಿ ದಾಖಲಿಸಬಲ್ಲ ವಿಡಿಯೊ ತಂತ್ರಜ್ಞಾನದ ಜೊತೆ ಜೊತೆಗೇ ಈ ವಿಶ್ಲೇಷಣೆಯೂ ಬೆಳೆದು ಬಂದಿದೆ.

ಕರ್ನಾಟಕ ಕ್ರಿಕೆಟ್‌ ತಂಡ ಎಲ್ಲಿಯೇ ಇರಲಿ, ಅಲ್ಲಿ ಆಟಗಾರರ ಜೊತೆ ಸಹಾಯಕ ಸಿಬ್ಬಂದಿ ಇದ್ದೇ ಇರುತ್ತಾರೆ. ಅದರಲ್ಲಿ ಆಟಗಾರರು ಅಭ್ಯಾಸದಲ್ಲಿ ತೊಡಗಿದ್ದರೂ, ಪಂದ್ಯವನ್ನು ಆಡುತ್ತಿದ್ದರೂ ವಿಡಿಯೊ ವಿಶ್ಲೇಷಣೆಕಾರ ಜೊತೆಯಲ್ಲಿಯೇ ಇರುತ್ತಾರೆ. ರಾಜ್ಯ ತಂಡ ಈ ಸಲದ ದೇಶಿಯ ಕ್ರಿಕೆಟ್‌ನಲ್ಲಿ ರಣಜಿ ಟ್ರೋಫಿ ಗೆದ್ದುಕೊಂಡಿದೆ.

15 ವರ್ಷಗಳ ಬಳಿಕ ಈ ಸಾಧನೆ ಮಾಡಿದೆ. ಜೊತೆಗೆ ಇರಾನಿ ಕಪ್‌ನಲ್ಲೂ ಚಾಂಪಿಯನ್‌ ಆಗಿದೆ. ಇದೇ ಮೊದಲ ಬಾರಿಗೆ ವಿಜಯ ಹಜಾರೆ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದೆ. ರಾಜ್ಯ ತಂಡದ ಈ ಸಾಧನೆಗೆ ಆಟಗಾರರ ಶ್ರಮ ಒಂದು ಕಾರಣವಾದರೆ, ವಿಡಿಯೊ ವಿಶ್ಲೇಷಣೆಕಾರರಾಗಿ ಕೆಲಸ ಮಾಡಿದ ಸಂತೋಷ್‌ ಅವರ ಪಾತ್ರ ಮಹತ್ವದ್ದಾಗಿದೆ.

ಸಂತೋಷ್‌ ಹುಟ್ಟಿದ್ದು ಕನಕಪುರದಲ್ಲಿ. ಎಂಜಿನಿಯರಿಂಗ್‌ ಪದವಿ ಮುಗಿಸಿದ ನಂತರ ಎಲ್ಲರಂತೆ ಐಟಿ ಕಂಪೆನಿಗಳ ಕದತಟ್ಟಿ ನೌಕರಿ ಹುಡುಕುವ ಕೆಲಸ ಮಾಡದೇ ಆಸಕ್ತಿಯ ಕ್ಷೇತ್ರ ಕ್ರಿಕೆಟ್‌ನಲ್ಲಿ ಬದುಕು ಕಟ್ಟಿಕೊಂಡರು. ರಾಜ್ಯ ತಂಡದ ಯಶಸ್ಸಿನಲ್ಲಿ ಇವರೂ ಪಾಲುದಾರರು. ಹೀಗಾಗಿ ಬೇರೆ ಬೇರೆ ತಂಡಗಳ ಆಟಗಾರರು ಸಂತೋಷ್‌ಗೆ ಸಾಕಷ್ಟು ಪರಿಚಿತ. ಬಹುತೇಕ ಕ್ರಿಕೆಟಿಗರು ಹೆಸರಿಟ್ಟು ಗೌರವದಿಂದ ಕರೆಯುತ್ತಾರೆ. ತಾಂತ್ರಿಕ ಕೌಶಲ ಮತ್ತು ಸೂಕ್ಷ್ಮತೆಗಳ ಬಗ್ಗೆ ಆಟಗಾರರಿಗೆ ಮಾಹಿತಿ ನೀಡುವ ಜೊತೆಗೆ, ಬ್ಯಾಟ್ಸ್‌ಮನ್‌ ಅಥವಾ ಬೌಲರ್‌ಗಳ ಪ್ರದರ್ಶನ ಮಟ್ಟದಲ್ಲಿ ಸುಧಾರಣೆ ಕಾಣಲು ಕಾರಣರಾಗಿದ್ದಾರೆ. ಕ್ರೀಡೆಯಲ್ಲಿ ವಿಡಿಯೊ ವಿಶ್ಲೇಷಣೆಯ ಮಹತ್ವದ ಕುರಿತು ಅವರೊಂದಿಗೆ ನಡೆಸಿದ ಸಂದರ್ಶನ ಇಲ್ಲಿದೆ.

* ತಂಡದ ಪ್ರದರ್ಶನ ಮಟ್ಟ ಹೆಚ್ಚಿಸುವಲ್ಲಿ ವಿಡಿಯೊ ವಿಶ್ಲೇಷಣೆ ಪಾತ್ರ ಏನು?
ಕ್ರಿಕೆಟನ್ನೇ ಉದಾಹರಣೆಯಾಗಿಟ್ಟುಕೊಳ್ಳೋಣ. ಬ್ಯಾಟ್ಸ್‌ಮನ್‌ ಪದೇ ಪದೇ ಒಂದೇ ರೀತಿ ಔಟ್‌ ಆಗುತ್ತಿದ್ದರೆ ಚೆಂಡನ್ನು ಎದುರಿಸುವಲ್ಲಿ ಎಲ್ಲಿ ವಿಫಲನಾಗುತ್ತಿದ್ದಾನೆ ಎನ್ನುವುದನ್ನು ತಿಳಿದುಕೊಳ್ಳಬಹುದು. ಬ್ಯಾಟ್‌ ಹಿಡಿಯುವ ಮತ್ತು ನಿಲ್ಲುವ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಅಗತ್ಯವಿದೆಯೇ? ಎನ್ನುವುದನ್ನು ಪತ್ತೆ ಮಾಡಲು ವಿಡಿಯೊ ವಿಶ್ಲೇಷಣೆ ನೆರವಾಗುತ್ತದೆ. ಹಿಂದಿನ ಪಂದ್ಯಗಳಲ್ಲಿ ಮಾಡಿದ ತಪ್ಪುಗಳ ವಿಡಿಯೊ ತುಣುಕುಗಳನ್ನು ನೋಡಿ ಮುಂದಿನ ಪಂದ್ಯದ ವೇಳೆಗೆ ಸರಿಪಡಿಸಿಕೊಳ್ಳಬಹುದು. ಅದೇ ರೀತಿ ಬೌಲರ್‌ಗಳಿಗೂ ವಿಡಿಯೊ ವಿಶ್ಲೇಷಣೆ ಸಹಾಯಕವಾಗುತ್ತದೆ.

* ವಿಡಿಯೊ ವಿಶ್ಲೇಷಣೆ ಆಟಗಾರರಿಗೆ ಹೇಗೆ ನೆರವಾಗುತ್ತದೆ?
ಒಬ್ಬ ಆಟಗಾರ ಮೇಲಿಂದ ಮೇಲೆ ವೈಫಲ್ಯಕ್ಕೆ ಒಳಗಾಗುತ್ತಿದ್ದರೆ ವಿಡಿಯೊ ವಿಶ್ಲೇಷಣೆಯಿಂದ ಅದನ್ನು ತಿದ್ದಿಕೊಳ್ಳಬಹುದು. ಗಾಯಗೊಂಡ ಆಟಗಾರ ಸರಿಯಾಗಿ ಚೇತರಿಸಿಕೊಂಡಿದ್ದಾನೋ ಇಲ್ಲವೊ ಎನ್ನುವುದು ಕೂಡಾ ಇದರಿಂದ ಗೊತ್ತಾಗುತ್ತದೆ. ಹಿಂದಿನ ಪಂದ್ಯದಲ್ಲಿ ಬ್ಯಾಟಿಂಗ್/ಬೌಲಿಂಗ್‌ ಶೈಲಿ ಹೇಗಿತ್ತು? ಶತಕ ಗಳಿಸಿದ ಪಂದ್ಯದಲ್ಲಿ ಆಡಿದ್ದು ಹೇಗೆ? ದೌರ್ಬಲ್ಯ ಏನು? ಎದುರಾಳಿ ತಂಡದ ಬಲ ಏನು? ಹೀಗೆ ಅನೇಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬಹುದು. 

ADVERTISEMENT

* ವಿಡಿಯೊ ವಿಶ್ಲೇಷಣೆಕಾರನಾಗಲು ಬೇಕಾದ ಅರ್ಹತೆಗಳೇನು?
ನಿರ್ದಿಷ್ಟವಾಗಿ ಇಂಥದ್ದೇ ಓದಿರಬೇಕು ಎನ್ನುವ ಅರ್ಹತೆಯೇನೂ ಇಲ್ಲ. ಯಾವ ಕ್ರೀಡೆಯಲ್ಲಿ ವಿಡಿಯೊ ವಿಶ್ಲೇಷಣೆಕಾರನಾಗಿ ಕೆಲಸ ಮಾಡಬೇಕೆನ್ನುವ ಆಸಕ್ತಿ ಇರುತ್ತದೆಯೋ ಆ ಕ್ರೀಡೆಯ ನಿಯಮಾವಳಿಗಳ ಬಗ್ಗೆ ತಿಳಿದಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಆಟದ ಬಗ್ಗೆ ಪ್ರೀತಿ ಇರಬೇಕು.

* ವಿಡಿಯೊ ವಿಶ್ಲೇಷಣೆಕಾರನಿಗೆ ಬೇಡಿಕೆ ಹೇಗಿದೆ?
ಭಾರತದಲ್ಲಿ ಕ್ರೀಡೆಗಳು ಸಾಕಷ್ಟು ಮುನ್ನೆಲೆಗೆ ಬರುತ್ತಿವೆ. ಚೀನಾ, ಮಲೇಷ್ಯಾ ಹಾಗೂ ಅಮೆರಿಕದ ಅಥ್ಲೀಟ್‌ಗಳು ಮತ್ತು ಈಜುಪಟುಗಳು ಹೆಚ್ಚು ತಂತ್ರಜ್ಞಾನ ಬಳಸಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಭಾರತ ಭರವಸೆಯ ಹೆಜ್ಜೆಗಳನ್ನು ಹಾಕುತ್ತಿದೆ. ಆದ್ದರಿಂದ ವಿಡಿಯೊ ವಿಶ್ಲೇಷಣೆಕಾರನ ಬೇಡಿಕೆ ಹೆಚ್ಚುತ್ತಿದೆ. ಅದರಲ್ಲೂ ಕ್ರಿಕೆಟ್‌, ಫುಟ್‌ಬಾಲ್‌, ಬ್ಯಾಸ್ಕೆಟ್‌ಬಾಲ್‌, ಬ್ಯಾಡ್ಮಿಂಟನ್‌, ಈಜು ಕ್ರೀಡೆಗಳಲ್ಲಿ ಉತ್ತಮ ಬೇಡಿಕೆಯಿದೆ. ಬಹುತೇಕ ಕ್ರೀಡೆಗಳು ತಾಂತ್ರಿಕತೆಗೆ ಒತ್ತು ನೀಡುತ್ತಿವೆ. ಬೇಡಿಕೆ ಹೆಚ್ಚಿದಂತೆಲ್ಲಾ ಅವಕಾಶಗಳೂ ಹೆಚ್ಚಾಗುತ್ತಿವೆ.

* ಕರ್ನಾಟಕ ಕ್ರಿಕೆಟ್‌ ತಂಡ ರಣಜಿ, ಇರಾನಿ ಮತ್ತು ವಿಜಯ ಹಜಾರೆ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದೆ. ಇದರಲ್ಲಿ ವಿಡಿಯೊ ವಿಶ್ಲೇಷಣೆಕಾರನ ಪಾತ್ರವೇನು?
ಹಿಂದಿನ ಎರಡು ವರ್ಷಗಳಲ್ಲಿ ಕರ್ನಾಟಕ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲು ಕಂಡಿತ್ತು. ಆದ್ದರಿಂದ ಈ ಸಲದ ರಣಜಿ ಋತು ಆರಂಭವಾಗುವ ಮುನ್ನ ಎಲ್ಲಾ ಆಟಗಾರರು ತಮ್ಮ ಬ್ಯಾಟಿಂಗ್‌ ಮತ್ತು ಬೌಲಿಂಗ್‌್ ವಿಡಿಯೊಗಳನ್ನು ವೀಕ್ಷಿಸಿದ್ದರು. ಪ್ರತಿ ವರ್ಷವೂ ಕಾಡುವ ನಿರಾಸೆಯಿಂದ ಪಾರಾಗುವುದು ಹೇಗೆ ಎಂದು ಯೋಜನೆ ರೂಪಿಸಿದ್ದರು. ಯಾವ ಹಂತದಲ್ಲಿ ತಪ್ಪು ಮಾಡುತ್ತಿದ್ದೇವೆ ಎನ್ನುವುದನ್ನೂ ಗುರುತಿಸಿ ಆ ತಪ್ಪನ್ನು ತಿದ್ದಿಕೊಂಡರು. ಕೆಲ ಆಟಗಾರರು ವಿಡಿಯೊ ತುಣುಕುಗಳನ್ನು ಮನೆಗೆ ಕೊಂಡೊಯ್ದು ಸಾಕಷ್ಟು ಅಭ್ಯಾಸ ಮಾಡಿದರು. ಇದರಿಂದ ರಾಜ್ಯ ತಂಡಕ್ಕೆ ಉತ್ತಮ ಪ್ರದರ್ಶನ ತೋರಲು ಸಾಧ್ಯವಾಯಿತು.

* ವಿಡಿಯೊ ವಿಶ್ಲೇಷಣೆ ಯಾಕೆ ಖುಷಿ ನೀಡುತ್ತದೆ?
ಆರಂಭದಲ್ಲಿ ಇದರಲ್ಲಿ ಆಸಕ್ತಿ ಇರದೇ ಇದ್ದರೂ, ನಂತರ ನನ್ನ ಆಸಕ್ತಿಯೆಲ್ಲಾ ವಿಡಿಯೊ ವಿಶ್ಲೇಷಣೆಯತ್ತಲೇ ಬೆಳೆಯಿತು. ನನ್ನಂತೆ ಎಂಜಿನಿಯರಿಂಗ್ ಓದಿದವರು ಸಾಕಷ್ಟು ಜನರಿದ್ದಾರೆ. ಅವರೆಲ್ಲರಿಗಿಂತಲೂ ಭಿನ್ನವಾಗಿ ಬದುಕು ಸಾಗಿಸಬೇಕು ಎನ್ನುವ ಗುರಿ ನನ್ನದಾಗಿತ್ತು. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಆಟಗಾರರ ಜೊತೆ ಬೆರೆಯುತ್ತೇನೆ. ಆಟಗಾರರು ಚೆನ್ನಾಗಿ ಗೌರವ ನೀಡುತ್ತಾರೆ. ಅವರೊಂದಿಗೆ ಡ್ರೆಸ್ಸಿಂಗ್‌ ಕೊಠಡಿ ಹಂಚಿಕೊಳ್ಳುತ್ತೇನೆ. ಈ ನೌಕರಿಯಿಂದ ಮೊದಲು ಹೆಚ್ಚು ವೇತನ ಸಿಗುತ್ತಿರಲಿಲ್ಲವಾದರೂ, ಆತ್ಮತೃಪ್ತಿಯಂತೂ ಸಿಕ್ಕಿದೆ.

* ಎಂಜಿನಿಯರಿಂಗ್‌ ಓದಿಕೊಂಡು ಕ್ರಿಕೆಟ್‌ ಅಂಗಳದತ್ತ ಮುಖ ಮಾಡಿದ್ದೀರಿ. ಈಗಿಗಿಂತಲೂ ಇನ್ನು ಉತ್ತಮ ಸಾಧನೆ ಮಾಡಬಹುದಿತ್ತು ಎಂದು ಅನ್ನಿಸುತ್ತಿದೆಯಾ?
ಯಾವತ್ತಿಗೂ ಹಾಗೆ ಅನ್ನಿಸಿಲ್ಲ. ಸ್ಕೋರರ್‌ ಮತ್ತು ವಿಡಿಯೊ ವಿಶ್ಲೇಷಣೆಕಾರನಾಗಿ ಕೆಲಸ ಮಾಡಲು ಮುಂದಾದಾಗ ನನ್ನ ಕೆಲ ಸ್ನೇಹಿತರು ಹೀಯಾಳಿಸಿದ್ದರು. ‘ಎಂಜಿನಿಯರಿಂಗ್‌ ಓದಿ ಈ ಕೆಲಸ ಮಾಡುವ ಹಕೀಕತ್ತು ಏನಿದೆ’ ಎಂದು ಪ್ರಶ್ನಿಸಿದ್ದರು. ಈಗ ಅದೇ ಸ್ನೇಹಿತರು ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. ಆಟಗಾರರನ್ನು ಮಾತನಾಡಿಸುವ ಮತ್ತು ಅವರೊಂದಿಗೆ ಬೆರೆಯುವ ಅವಕಾಶ ನಿನಗೆ ಸಿಗುತ್ತದೆ. ಇಂಥ ಅವಕಾಶ ನಮಗಿಲ್ಲ ಎಂದು ಸ್ನೇಹಿತರು ಹೇಳುತ್ತಾರೆ. ಆಗ ಟೀಕಿಸಿದವರೇ ಈಗ ಮೆಚ್ಚುಗೆ ಮಾತುಗಳನ್ನಾಡುತ್ತಿದ್ದಾರೆ. ಇದಕ್ಕಿಂತ ಖುಷಿ ಇನ್ನೇನಿದೆ?

ಸ್ಕೋರರ್‌ ವಿಡಿಯೊ ಅನಲಿಸ್ಟ್‌ ಆದಾಗ!
ರಾಜ್ಯ ಕ್ರಿಕೆಟ್ ತಂಡಕ್ಕೆ ವಿಡಿಯೊ ವಿಶ್ಲೇಷಣೆಕಾರನಾಗಿ ಬಂದಿದ್ದು ಹೇಗೆ ಎನ್ನುವ ಸ್ವಾರಸ್ಯಕರ ಪ್ರಸಂಗವನ್ನು ಸಂತೋಷ್‌ ‘ಕಾಮನಬಿಲ್ಲು’ವಿನ ಮುಂದೆ ಬಿಚ್ಚಿಟ್ಟಿದ್ದಾರೆ.

ಬೆಂಗಳೂರಿನ ಯಲ್ಲಮ್ಮ ದಾಸಪ್ಪ ಕಾಲೇಜಿನಲ್ಲಿ ಎಂಜಿನಿಯರ್‌ ಓದು ಮುಗಿಸಿದಾಗ ಮುಂದೇನು ಎನ್ನುವ ಪ್ರಶ್ನೆ ಎದುರಿಗೆ ಬೆಟ್ಟದಂತೆ ನಿಂತಿತ್ತು. ಆಗ ರಾಜ್ಯ ಕ್ರಿಕೆಟ್‌ ಸಂಸ್ಥೆಯಲ್ಲಿ ಸ್ಕೋರರ್‌ ಆಯ್ಕೆಗಾಗಿ ಪರೀಕ್ಷೆ ನಡೆಯುತ್ತಿತ್ತು. ‘ನೀನು ಪರೀಕ್ಷೆಯಲ್ಲಿ ಪಾಸಾಗುವುದಿಲ್ಲ ಎನ್ನುವುದು ನನಗೆ ಚೆನ್ನಾಗಿ ಗೊತ್ತಿದೆ. ಆದರೂ, ಸುಮ್ಮನೆ ಹೋಗಿ ಪರೀಕ್ಷೆ ಬರೆದು ಬಾ’ ಎಂದು ಸ್ನೇಹಿತರೊಬ್ಬರು ಹೀಯಾಳಿಸಿ ಕಳುಹಿಸಿದ್ದರು. ಅವರ ಆ ವ್ಯಂಗ್ಯವನ್ನು ಗಂಭೀರವಾಗಿ ಪರಿಗಣಿಸಿ ಆ ಪರೀಕ್ಷೆ ಪಾಸಾಗಿದ್ದೆ.

ಅನಿರೀಕ್ಷಿತವಾಗಿ ಸಿಕ್ಕ ನೌಕರಿಯಿಂದ ಖುಷಿಪಟ್ಟೆ. ಕಾಲೇಜಿನಲ್ಲಿ ಓದುವಾಗಿನ ದಿನಗಳಲ್ಲಿ ಆಡಿದ್ದ ಕ್ರಿಕೆಟ್‌, ಬದುಕು ಕಟ್ಟಿಕೊಳ್ಳಲು ನೆರವಾಯಿತು. ಕ್ರಿಕೆಟ್‌ ಬಗ್ಗೆ ನನಗೆ ಬಾಲ್ಯದಿಂದಲೂ ಸಾಕಷ್ಟು ಆಸಕ್ತಿ ಇತ್ತು. ವಿಜಯಾ ಕ್ರಿಕೆಟ್‌ ಕ್ಲಬ್‌ ಪರ ಆಡಿದ್ದೆ. ವಿಕೆಟ್‌ ಕೀಪರ್‌ ಮತ್ತು ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಗುರುತಿಸಿಕೊಂಡಿದ್ದೆ.

ವಿದ್ಯಾರ್ಥಿ ಹಂತದಲ್ಲಿ ಕಲಿತುಕೊಂಡಿದ್ದ ಕ್ರಿಕೆಟ್‌ನ ಕೌಶಲಗಳು ಬದುಕಿಗೆ ಆಸರೆಯಾಯಿತು. ಐಪಿಎಲ್‌ ತಂಡಗಳಾಗಿದ್ದ ಡೆಕ್ಕನ್‌ ಜಾರ್ಜರ್ಸ್‌ ಮತ್ತು ಪುಣೆ ವಾರಿಯರ್ಸ್‌ ಪರ ವಿಡಿಯೊ ವಿಶ್ಲೇಷಣೆಕಾರನಾಗಿ ಕೆಲಸ ಮಾಡಿದ್ದೇನೆ. ಈಗಂತೂ ಈ ಕೆಲಸಕ್ಕೆ ಸಾಕಷ್ಟು ಬೇಡಿಕೆಯಿದೆ. ಸಂತೋಷ್‌ ಅವರ ಈ ಮೇಲ್ ವಿಳಾಸ: santhosh@sportingmindz.com

ವಿಡಿಯೊ ವಿಶ್ಲೇಷಣೆ ಮಹತ್ವ

ಕ್ರಿಕೆಟ್‌ ಅಂಗಳದಲ್ಲಿ ಬ್ಯಾಟ್ಸ್‌ಮನ್‌, ಬೌಲರ್‌, ಅಂಪೈರ್‌, ಪ್ರೇಕ್ಷಕ ಹೀಗೆ ಎಲ್ಲರನ್ನೂ ನೀವು ನೋಡಿರಬಹುದು. ಆದರೆ, ಯಾವುದೇ ಕ್ರೀಡೆಯಾಗಲಿ ಅಲ್ಲಿ ಆಟಗಾರ ಯಶಸ್ಸು ಕಾಣುವಲ್ಲಿ ವಿಡಿಯೊ ವಿಶ್ಲೇಷಣೆಕಾರನ ಪಾತ್ರ ಬಹುಮುಖ್ಯವಾಗಿರುತ್ತದೆ. ಆದರೆ, ಉಳಿದವರಂತೆ ವೇದಿಕೆ ಮೇಲೆ ಕಂಗೊಳಿಸುವ ಅವಕಾಶ ಆತನಿಗೆ ಸಿಗುವುದು ಅಪರೂಪ. ಆತ, ತೆರೆಯ ಹಿಂದಿನ ಕಲಾವಿದ. ತೆರೆಯ ಹಿಂದಿದ್ದುಕೊಂಡೇ ಎಲ್ಲವನ್ನೂ ನಿಭಾಯಿಸುತ್ತಾನೆ. ತಂಡದ ಪರಿಸ್ಥಿತಿಗೆ ತಕ್ಕಂತೆ ಆತನ ಕೆಲಸ.

ಕ್ರಿಕೆಟ್‌, ಫುಟ್‌ಬಾಲ್, ಬ್ಯಾಡ್ಮಿಂಟನ್‌, ಹಾಕಿ, ಟೆನಿಸ್‌, ಈಜು, ಕರಾಟೆ ಹೀಗೆ ಯಾವುದೇ ಕ್ರೀಡೆಯಲ್ಲಿ ಪರಿಣತಿ ಗಳಿಸಲು ವಿಡಿಯೊ ವಿಶ್ಲೇಷಣೆಕಾರನ ನೆರವು ಅಗತ್ಯ. ಕೆಲ ವರ್ಷಗಳ ಹಿಂದೆ ಹೀಗೊಂದು ಪ್ರತ್ಯೇಕ ಹುದ್ದೆ ಇರಲಿಲ್ಲ. ಕೋಚ್‌ಗಳು ಈ ಕೆಲಸವನ್ನು ನಿರ್ವಹಿಸುತ್ತಿದ್ದರು. ಈಗ ಕ್ರೀಡೆಗಳು ತಂತ್ರಜ್ಞಾನ ಅಳವಡಿಸಿಕೊಳ್ಳುವತ್ತ ಹೆಚ್ಚು ಆಸಕ್ತಿ ವಹಿಸುತ್ತಿವೆ. ಆದ್ದರಿಂದ ಪ್ರತಿ ಕ್ರೀಡೆಗೂ ಹಾಗೂ ಪ್ರತಿ ತಂಡದಲ್ಲೂ ವಿಡಿಯೊ ವಿಶ್ಲೇಷಣೆಕಾರ ಕಾಣಸಿಗುತ್ತಾನೆ.

ಕೆಲ ವರ್ಷಗಳ ಹಿಂದಿನ ಸಂಗತಿಯಿದು. ಸ್ಫೋಟಕ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹ್ವಾಗ್‌ ಸತತವಾಗಿ ಹಲವು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದರು. ಮರುದಿನ ಟೆಸ್ಟ್‌್ ಪಂದ್ಯವಿತ್ತು. ಹಿಂದಿನ ದಿನದ ರಾತ್ರಿಯೆಲ್ಲಾ ಹಳೆಯ ಪಂದ್ಯಗಳ ದೃಶ್ಯಾವಳಿಗಳನ್ನು ವೀಕ್ಷಿಸಿದ್ದರು. ನಂತರ ಅವರು ಶತಕ ಸಿಡಿಸಿದ್ದರು. ಸತತ ವೈಫಲ್ಯ ಅನುಭವಿಸಿದ್ದ ನೀವು ಶತಕ ಗಳಿಸಲು ಸಾಧ್ಯವಾಗಿದ್ದು ಹೇಗೆ ಎನ್ನುವ ಪ್ರಶ್ನೆಗೆ, ‘ನಮ್ಮ ತಂಡದ ವಿಡಿಯೊ ಅನಲಿಸ್ಟ್‌ ನೆರವಿನಿಂದ ನನ್ನ ಹಳೆಯ ಪಂದ್ಯಗಳ ವಿಡಿಯೊಗಳನ್ನು ನೋಡಿದೆ. ಪ್ರತಿ ಪಂದ್ಯದಲ್ಲಿ ಉತ್ತಮ ಆಟವಾಡಬೇಕಾದರೆ, ಹಿಂದಿನ ಪಂದ್ಯಗಳ ಆಟವೇ ಸ್ಫೂರ್ತಿಯಾಗುತ್ತದೆ’ ಎಂದು ಸೆಹ್ವಾಗ್‌ ಉತ್ತರ ನೀಡಿದ್ದರು.

ಇದು ಒಂದು ಉದಾಹರಣೆಯಷ್ಟೇ. ಗೌತಮ್‌ ಗಂಭೀರ್‌, ಸಚಿನ್‌ ತೆಂಡೂಲ್ಕರ್‌, ಚೇತೇಶ್ವರ ಪೂಜಾರ, ರಾಹುಲ್‌ ದ್ರಾವಿಡ್ ಹೀಗೆ ಪ್ರತಿಯೊಬ್ಬರು ವಿಡಿಯೊ ವಿಶ್ಲೇಷಣೆಕಾರನಿಗೆ ಬಲು ಹತ್ತಿರವಾಗಿದ್ದವರು. ತಮ್ಮ ಹಿಂದಿನ ಪಂದ್ಯಗಳಲ್ಲಿ ಮಾಡಿದ ತಪ್ಪುಗಳಿಂದ ಪಾಠ ಕಲಿಯುತ್ತಿದ್ದರು. ಕೇವಲ ಕ್ರಿಕೆಟ್‌ ಮಾತ್ರವಲ್ಲ. ಬೇರೆ ಬೇರೆ  ಕ್ರೀಡೆಗಳಲ್ಲಿಯೂ ವಿಡಿಯೊ ವಿಶ್ಲೇಷಣೆಯನ್ನು ಸಮರ್ಥವಾಗಿ ಬಳಸಿಕೊಳ್ಳಲಾಗುತ್ತಿದೆ. ಈ ವಿಷಯದಲ್ಲಿ ಚೀನಾ ಮತ್ತು ಅಮೆರಿಕ ಸಾಕಷ್ಟು ಮುಂದಿವೆ. ಆದ್ದರಿಂದ ಒಲಿಂಪಿಕ್ಸ್‌ನಂಥ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಈ ರಾಷ್ಟ್ರಗಳು ನೂರರ ಸನಿಹ ಪದಕ ಗೆಲ್ಲುತ್ತವೆ. ತಂತ್ರಜ್ಞಾನ ಬಳಸಿಕೊಂಡು ವೈಜ್ಞಾನಿಕವಾಗಿ ಅಭ್ಯಾಸ ಮಾಡುವಲ್ಲಿ ಅಮೆರಿಕ, ಚೀನಾ, ಬ್ರಿಟನ್‌, ರಷ್ಯಾ, ದಕ್ಷಿಣ ಕೊರಿಯಾ, ಜರ್ಮನಿ, ಫ್ರಾನ್ಸ್‌್್ ರಾಷ್ಟ್ರಗಳಿಗೆ ಅಗ್ರಸ್ಥಾನ. ಭಾರತದಲ್ಲಿ ವಿಡಿಯೊ ವಿಶ್ಲೇಷಣೆ ಹೆಚ್ಚಾಗಿ ಕ್ರಿಕೆಟ್‌ನಲ್ಲಿ ಮಾತ್ರ ಬಳಕೆಯಾಗು ತ್ತಿದೆ. ಆದ್ದರಿಂದ ಒಲಿಂಪಿಕ್ಸ್ ಬಂದಾಗಲೆಲ್ಲಾ ‘ಚೀನಾ ನೂರು ಭಾರತ ಮೂರು’ ಎಂದು ಟೀಕೆ ಎದುರಾಗುತ್ತಲೇ ಇರುತ್ತದೆ.

1948ರಲ್ಲಿ ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್‌ನ ಬಗ್ಗೆ ಗಮನ ಹರಿಸೋಣ. ಆಗಿನ್ನೂ ತಂತ್ರಜ್ಞಾನ ಹೆಚ್ಚು ಬಳಕೆಗೆ ಬಂದಿರಲಿಲ್ಲ. ಆದರೆ, ಅದೇ ಲಂಡನ್‌ನಲ್ಲಿ ಎರಡು ವರ್ಷಗಳ ಹಿಂದೆ ನಡೆದ ಒಲಿಂಪಿಕ್ಸ್‌ನಲ್ಲಿ ವಿಡಿಯೊ ವಿಶ್ಲೇಷಣೆಯನ್ನು ಸಾಕಷ್ಟು ಬಳಸಿಕೊಳ್ಳಲಾಗಿತ್ತು. ಮೊಬೈಲ್‌, ಸ್ಮಾರ್ಟ್‌ಫೋನ್‌ ಮೂಲಕವೂ ವಿಡಿಯೊ ವಿಶ್ಲೇಷಣೆ ಮಾಡಲಾಗಿತ್ತು.  

ಇದರ ಬಗ್ಗೆ ಭಾರತದಲ್ಲಿ ಇತ್ತೀಚಿಗೆ ಒಲವು ಹೆಚ್ಚಾಗುತ್ತಿದೆ. ವಿವಿಧ ವಯೋಮಿತಿಯೊಳಗಿನ ಕ್ರಿಕೆಟ್‌ ಟೂರ್ನಿಗಳಿಗೆ ವಿಡಿಯೊ ವಿಶ್ಲೇಷಣೆ ಮಾಡಲಾಗುತ್ತಿದೆ. ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ), ಚೆನ್ನೈ ಸೂಪರ್ ಕಿಂಗ್ಸ್‌ ಹೀಗೆ ಹಲವು ಕಡೆ ಕೆಲಸ ಮಾಡಿರುವ ಬೆಂಗಳೂರಿನ ಪ್ರಸನ್ನ ಈಗ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ವಿಡಿಯೊ ವಿಶ್ಲೇಷಣೆಕಾರ. ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದ ವಿಡಿಯೊ ವಿಶ್ಲೇಷಣೆಕಾರರಾಗಿ ಎ.ಆರ್‌. ಶ್ರೀಕಾಂತ್‌ ಸಾಕಷ್ಟು ಹೆಸರು ಮಾಡಿದ್ದಾರೆ.

ಕ್ರಿಕೆಟಿಗರ ಜೊತೆ ಗುರುತಿಸಿಕೊಳ್ಳಲು ಹಾಗೂ ತಂಡದ ಯಶಸ್ಸಿನಲ್ಲಿ ಭಾಗಿಯಾಗಲು ವಿಡಿಯೊ ವಿಶ್ಲೇಷಣೆ ಹುದ್ದೆ ಸಾಕಷ್ಟು ಅನುಕೂಲವಾಗಿದೆ. ಆದ್ದರಿಂದ, ಎಂಜಿನಿಯರಿಂಗ್‌ ಪದವೀಧರರ ಕಣ್ಣು ಹೊಸ ಅವಕಾಶಗಳನ್ನು ಹುಡುಕಾಡುತ್ತಿದೆ. ಯುವ ಜನತೆಯ ಹೊಸ ಟ್ರೆಂಡ್‌ ಇದು. ಭಾರತಕ್ಕಿಂತ ವಿದೇಶದಲ್ಲಿ ಇದಕ್ಕೆ ಸಾಕಷ್ಟು ಬೇಡಿಕೆಯಿದೆ. ಖ್ಯಾತನಾಮ ಆಟಗಾರರಂತೂ ಪ್ರತ್ಯೇಕ ವಿಡಿಯೊ ವಿಶ್ಲೇಷಣೆಕಾರರನ್ನು ನೇಮಿಸಿಕೊಳ್ಳುತ್ತಿದ್ದಾರೆ. ವಿದೇಶಗಳಲ್ಲಿ ಶಾಲಾ, ಕಾಲೇಜುಗಳಲ್ಲಿ, ಕ್ರೀಡಾಸಂಸ್ಥೆಗಳಲ್ಲಿ ವಿಡಿಯೊ ವಿಶ್ಲೇಷಣೆಗೆ ತುಂಬಾ  ಪ್ರಾಮುಖ್ಯ ಸಿಗುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.