ADVERTISEMENT

ಎಂಡೀವರ್‌

ಪ್ರತಿಸ್ಪರ್ಧಿಗಳಿಗಿಂತ ಒಂದು ಕೈ ಮೇಲು

ಜಯಸಿಂಹ ಆರ್.
Published 15 ಮಾರ್ಚ್ 2017, 19:30 IST
Last Updated 15 ಮಾರ್ಚ್ 2017, 19:30 IST
ಎಂಡೀವರ್‌
ಎಂಡೀವರ್‌   

ಫೋರ್ಡ್‌ ಇಂಡಿಯಾ ತನ್ನ ಎಸ್‌ಯುವಿ ಎಂಡೀವರ್‌ನ ಹೊಸ ಅವತರಣಿಕೆಯನ್ನು ಭಾರತದಲ್ಲಿ ಬಿಡುಗಡೆ ಮಾಡಿ ವರ್ಷವೇ ಕಳೆದಿದೆ. ತನ್ನ ವರ್ಗದಲ್ಲೇ ಉತ್ತಮ ವಾಹನವಾಗಿದ್ದರೂ ನೂತನ ಎಂಡೀವರ್‌ ನಿರೀಕ್ಷಿತ ಪ್ರಮಾಣದಲ್ಲಿ ಗ್ರಾಹಕರನ್ನು ಸೆಳೆದಿರಲಿಲ್ಲ.

ಎರಡು ಬೇರೆ ಬೇರೆ ಎಂಜಿನ್‌ಗಳಲ್ಲಿ ವಿವಿಧ ಅವತರಣಿಕೆಗಳು ನೂತನ ಎಂಡೀವರ್‌ನಲ್ಲಿ ಲಭ್ಯವಿವೆ. ಕಳೆದ ವರ್ಷಾಂತ್ಯದಲ್ಲಿ ಈ ಎಲ್ಲಾ ಅವತರಣಿಕೆಗಳ ಮೇಲೆ ಫೋರ್ಡ್‌ ಭಾರಿ ದರ ಕಡಿತ ಘೋಷಿಸಿತ್ತು.

ಇದರ ಜತೆಯಲ್ಲೇ ಎಂಡೀವರ್‌ ಅನ್ನು ಮಾರುಕಟ್ಟೆಯಲ್ಲಿ ಜನಪ್ರಿಯಗೊಳಿಸುವ ಉದ್ದೇಶದಿಂದ ದೇಶದಾದ್ಯಂತ ‘ಎಂಡೀವರ್‌ ಎಕ್ಸ್‌ಪೀರಿಯನ್ಸ್‌’ ಅಭಿಯಾನ ನಡೆಸುತ್ತಿದೆ. ಈಚೆಗೆ ಬೆಂಗಳೂರಿನಲ್ಲೂ ಫೋರ್ಡ್‌ ಈ ಅಭಿಯಾನ ಆಯೋಜಿಸಿತ್ತು. ಕಂಪೆನಿಯ ಆಹ್ವಾನದ ಮೇರೆಗೆ ‘ಪ್ರಜಾವಾಣಿ’ ಸಹ ಅಭಿಯಾನದಲ್ಲಿ ಭಾಗವಹಿಸಿತ್ತು.

ಯಾವುದೇ ವಿಭಾಗದಲ್ಲಿ ನೂತನ ಎಂಡೀವರ್‌ ಅನ್ನು ಹಳೆಯ ಎಂಡೀವರ್‌, ಎಂಡೀವರ್ ಹರಿಕೇನ್, ಎಂಡೀವರ್‌ ಹರಿಕೇನ್ ಗಿಯರ್‌ ಜತೆ ಹೋಲಿಸಲು ಸಾಧ್ಯವಿಲ್ಲ. ಇದರ ದೇಹದ ವಿನ್ಯಾಸ ತೀರಾ ಅತಿ ಅನಿಸದೆ, ಗಂಭೀರವಾಗಿ ಕಾಣುತ್ತದೆ. ಹಳೆಯ ಎಂಡೀವರ್‌ಗಳು ದೈತ್ಯವಾಗಿದ್ದರೂ, ಅದರ ಯಾವುದೇ ಸೀಟಿನಲ್ಲಿ ಕುಳಿತರೂ ಮನೆಯ ಸೋಫಾ ಮೇಲೆ ಕುಳಿತ ಅನುಭವವಾಗುತ್ತಿತ್ತು.

ವಾಹನ ಎತ್ತರವಾಗಿದ್ದರೂ ಸೀಟಿನ ಮಟ್ಟ ತೀರಾ ಕೆಳಗೆ ಇತ್ತು. ಹೀಗಾಗಿ ಚಾಲನೆ ಮತ್ತು ಪ್ರಯಾಣ ಎರಡೂ ಸಂದರ್ಭದಲ್ಲಿ ಎಸ್‌ಯುವಿಯ ಅನುಭವ ಆಗುತ್ತಿರಲಿಲ್ಲ. ಅದರಲ್ಲಿ ಕುಳಿತಿದ್ದಾಗ ಸರಿ ಸುಮಾರು ಹ್ಯಾಚ್‌ಬ್ಯಾಕ್‌ಗಳ ಸೀಟಿನಲ್ಲಿ ಕುಳಿತಂತಾಗುತ್ತಿತ್ತು.

ನೂತನ ಎಂಡೀವರ್ ಇದಕ್ಕೆ ವಿರುದ್ಧವಾದ ಅನುಭವ ನೀಡುತ್ತದೆ. ಚಾಲಕ ಮತ್ತು ಪ್ರಯಾಣಿಕರ ಸೀಟಿನಲ್ಲಿ ಕುಳಿತಾಗ ನಿಜಕ್ಕೂ ದೊಡ್ಡ ಟ್ರಕ್‌ನಲ್ಲಿ ಕುಳಿತಂತೆ ಕಾಣುತ್ತದೆ. ಹ್ಯಾಚ್‌ಬ್ಯಾಕ್‌, ಸೆಡಾನ್‌ಗಳೆಲ್ಲವೂ ಚಿಕ್ಕ ಕಾರ್‌ಗಳಂತೇ ಕಾಣುತ್ತವೆ. ಅವು ಮುಂದೆ ಇದ್ದಾಗ, ಅವುಗಳಾಚೆಗಿನ ದೃಶ್ಯವೂ ನಿಚ್ಚಳವಾಗಿ ಕಾಣುತ್ತದೆ.

ಒಳಾಂಗಣ ವಿನ್ಯಾಸ ಮತ್ತು ಸವಲತ್ತುಗಳು ಉತ್ತಮವಾಗಿವೆ. ಈ ವರ್ಗದ ಇತರ ದುಬಾರಿ ಎಸ್‌ಯುವಿಗಳಿಗಿಂತ ಹೆಚ್ಚಿನ ಸವಲತ್ತುಗಳು ಮತ್ತು ವಿಶಾಲವಾದ ಜಾಗ ನೂತನ ಎಂಡೀವರ್‌ನಲ್ಲಿದೆ.

ಮುಖ್ಯವಾಗಿ ನೂತನ ಎಂಡೀವರ್‌ ಸುಧಾರಣೆ ಆಗಿರುವುದು ಎಂಜಿನ್‌, ಗಿಯರ್‌ ಬಾಕ್ಸ್‌ ವಿಭಾಗದಲ್ಲಿ. ಇದು 2.2 ಲೀಟರ್‌ ಮತ್ತು 3.2 ಲೀಟರ್‌ ಸಾಮರ್ಥ್ಯದಲ್ಲಿ ಲಭ್ಯವಿದೆ. ‘ಎಂಡೀವರ್‌ ಎಕ್ಸ್‌ಪೀರಿಯನ್ಸ್’ನಲ್ಲಿ 3.2 ಲೀಟರ್‌ ಸಾಮರ್ಥ್ಯದ ಎಸ್‌ಯುವಿಗಳು ಮಾತ್ರ ಇದ್ದವು.

3.2 ಲೀಟರ್‌ ಎಂಡೀವರ್‌ನಲ್ಲಿ ಆರು ಫಾರ್ವರ್ಡ್‌ ಗಿಯರ್‌ಗಳ ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್ ಮಾತ್ರ ಲಭ್ಯವಿದೆ. ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್‌ನಲ್ಲಿ ಗಿಯರ್‌ ಬದಲಾವಣೆ ಅನುಭವಕ್ಕೆ ಬರುವುದಿಲ್ಲ. ತೀರಾ ಗಮನವಿರಿಸಿದಾಗ ಮಾತ್ರ  ಗಿಯರ್‌ಗಳು ಬದಲಾಗುತ್ತಿರುವುದು ಗೊತ್ತಾಗುತ್ತದೆ. ಗಿಯರ್ ಬದಲಾವಣೆ ಮಧ್ಯೆ ಜರ್ಕ್‌ ಇಲ್ಲ. ಈ ವಿಚಾರದಲ್ಲಿ ಫೋರ್ಡ್‌ ಎಂಜಿನಿಯರ್‌ಗಳು ಟಾರ್ಕ್‌ ಬ್ಯಾಂಡ್‌ ಮತ್ತು ಗಿಯರ್‌ ರೇಶಿಯೋವನ್ನು ಹದವಾಗಿ ಸಂಯೋಜನೆ ಮಾಡಿದ್ದಾರೆ.

ADVERTISEMENT

ರಸ್ತೆಯ ತಿರುವಿನಲ್ಲಿ ವೇಗದಲ್ಲೇ ತಿರುಗಿಸಿದರೂ ಎಂಡೀವರ್‌ ಹೆಚ್ಚು ಓಲಾಡುವುದಿಲ್ಲ. ಇದು ಚಾಲಕನ ಆತ್ಮವಿಶ್ವಾಸ ವೃದ್ಧಿಸುತ್ತದೆ. ಈ ವಿಚಾರದಲ್ಲಿ ಎಂಡೀವರ್‌ ತನ್ನ ಪ್ರತಿಸ್ಪರ್ಧಿ ಎಸ್‌ಯುವಿಗಳಿಗಿಂತ ಹಲವು ಪಾಲು ಮುಂದಿದೆ.

ಎಂಡೀವರ್‌ನಲ್ಲಿ ಭಿನ್ನ ಆಯ್ಕೆಯ ಡ್ರೈವ್‌ ಮೋಡ್‌ಗಳಿವೆ. ಸ್ಯಾಂಡ್‌ ಮೋಡ್‌ನಲ್ಲಿ ವಾಹನ ಕಡಿಮೆ ವೇಗದಲ್ಲಿ ಇದ್ದರೂ, ಎಂಜಿನ್‌ನ ಶಕ್ತಿ ಹೆಚ್ಚಿರಲಿದೆ. ಈ ಆಯ್ಕೆಯನ್ನು ಮರಳತೀರ, ಕೆಸರು ಮೊದಲಾದ ಎಡೆಯಲ್ಲೆಲ್ಲಾ ಬಳಸಬಹುದು. ಇಂತಹ ಸ್ಥಳಗಳಲ್ಲಿ ವೇಗವಾಗಿ ಚಲಾಯಿಸಿದರೂ ಎಂಡೀವರ್‌ ಅತ್ತಿತ್ತ ಸರಿದಾಡದಂತೆ, ಜಾರದಂತೆ ಸ್ಯಾಂಡ್‌ ಮೋಡ್‌ ತಡೆಯುತ್ತದೆ.

ಇನ್ನೊಂದು ರಾಕ್‌ ಮೋಡ್. ಅದು ಟಾರ್ಕ್‌ ಬ್ಯಾಂಡ್‌ ವಿನ್ಯಾಸವನ್ನು ಬದಲಿಸುತ್ತದೆ. ಟಾರ್ಕ್‌ ಬ್ಯಾಂಡ್‌ ಎಂದರೆ, ಎಂಜಿನ್‌ನ ಆರ್‌ಪಿಎಂ ರೇಂಜ್‌ನಲ್ಲಿ ಲಭ್ಯವಿರುವ ಟಾರ್ಕ್‌ ಅನ್ನು ಸೂಚಿಸುತ್ತದೆ.  ಸಾಮಾನ್ಯವಾಗಿ ಎಂಜಿನ್‌ ಕಡಿಮೆ ವೇಗದಲ್ಲಿ ಇದ್ದಾಗ ಟಾರ್ಕ್‌ ಕಡಿಮೆ ಇರುತ್ತದೆ. ಆರ್‌ಪಿಎಂ ಹೆಚ್ಚಿದಂತೆ ಟಾರ್ಕ್‌ ಹೆಚ್ಚುತ್ತದೆ. ಆರ್‌ಪಿಎಂ ತೀರಾ ಹೆಚ್ಚಾದಂತೆ ಟಾರ್ಕ್‌ ಪ್ರಮಾಣ ಇಳಿಯುತ್ತಾ ಹೋಗುತ್ತದೆ. ಒಟ್ಟಾರೆ ಆರ್‌ಪಿಎಂನ ವಿವಿಧ ವೇಗದಲ್ಲಿ ಗರಿಷ್ಠ ಟಾರ್ಕ್‌ ಲಭ್ಯವಿರುವ ಅಂತರವನ್ನು ಟಾರ್ಕ್‌ ಬ್ಯಾಂಡ್ ಎನ್ನಲಾಗುತ್ತದೆ.

ರಾಕ್‌ ಮೋಡ್‌ನಲ್ಲಿ ಎಂಜಿನ್‌ ಐಡಲ್‌ ವೇಗದಲ್ಲಿ ಇದ್ದಾಗಲೂ ಸಾಕಷ್ಟು ಟಾರ್ಕ್ ಲಭ್ಯವಿದೆ. ಜತೆಗೆ ಲೋ ಗಿಯರ್‌ ಆಯ್ಕೆ ಲಭ್ಯವಿದೆ. ಹೀಗಾಗಿ 35 ಡಿಗ್ರಿಯಷ್ಟು ಕಡಿದಾದ ದಿಬ್ಬವನ್ನೂ ಎಂಡೀವರ್‌ ಸುಲಭವಾಗಿ ಹತ್ತಿತು. ಜತೆಗೆ ಅಷ್ಟು ಕಡಿದಾದ ದಿಬ್ಬದಲ್ಲೂ ಸಂಪೂರ್ಣ ಬಲಕ್ಕೆ ತಿರುಗುವ ಸಾಹಸವನ್ನೂ ಮಾಡಿತು. ಅಂತಹ ಸಂದರ್ಭದಲ್ಲೂ ಚಾಲಕರಿಗಾಗಲೀ, ಪ್ರಯಾಣಿಕರಿಗಾಗಲೀ ಭಯವಾಗದಂತೆ ಎಂಡೀವರ್‌ ವರ್ತಿಸಿತು.

ಇನ್ನು 41 ಡಿಗ್ರಿಯಷ್ಟು ಕಡಿದಾದ ದಿಬ್ಬವನ್ನು ಇಳಿಯುವ ಸಾಹಸವೂ ಇತ್ತು. ಇದು ತೀರಾ ಕಡಿದಾಗಿದ್ದರಿಂದ ಮತ್ತು ಆ ದಿಬ್ಬದ ಮಣ್ಣು ತೀರಾ ಸಡಿಲವಾಗಿ ಇದ್ದುದ್ದರಿಂದ ಫೋರ್ಡ್‌ನ ತಜ್ಞ ಚಾಲಕರಿಗಷ್ಟೇ ಅದನ್ನು ಇಳಿಸುವ ಅವಕಾಶವಿತ್ತು. ಹೀಗಾಗಿ ಮಾಧ್ಯಮಗಳ ಪ್ರತಿನಿಧಿಗಳು, ತಜ್ಞರಿಗೆ ಸ್ಟೀರಿಂಗ್ ಬಿಟ್ಟುಕೊಡಬೇಕಾಯಿತು. ಎಂಡೀವರ್‌ನಲ್ಲಿ ಇನ್‌ಬಿಲ್ಟ್‌ ‘ಪಿಚ್‌ ಅಂಡ್ ರೋಲ್‌’ ಮೀಟರ್‌ ಇದೆ.

ಇದು ವಾಹನ ಏರುವ ಮತ್ತು ಇಳಿಯುವ ದಿಬ್ಬದ ಕೋನವನ್ನು ಲೆಕ್ಕ ಹಾಕುತ್ತದೆ. ಜತೆಗೆ ವಾಹನ ಎಡಕ್ಕೆ/ಬಲಕ್ಕೆ ಎಷ್ಟು ಕೋನದಷ್ಟು ಬಾಗಿದೆ ಎಂಬುದನ್ನೂ ತೋರಿಸುತ್ತದೆ. ಈ ದಿಬ್ಬವನ್ನು ಇಳಿಯುವಾಗ ಎಂಡೀವರ್‌ನಲ್ಲಿದ್ದ ಪಿಚ್‌ ಅಂಡ್ ರೋಲ್‌ ಮೀಟರ್‌ 41 ಡಿಗ್ರಿ ತೋರಿಸುತ್ತಿತ್ತು. ‘ಪ್ರಜಾವಾಣಿ’ ಬಳಿ ಇದ್ದ ಪಿಚ್‌ ಅಂಡ್‌ ರೋಲ್‌ ಮೀಟರ್‌ ಸಹ 41 ಡಿಗ್ರಿ ತೋರಿಸುತ್ತಿತ್ತು.

ಸ್ವಲ್ಪ ಎಚ್ಚರ ತಪ್ಪಿದರೂ, ಮುಂಭಾಗಕ್ಕೆ ಮಗುಚಿಕೊಳ್ಳುವ ಅಪಾಯವಿದ್ದ ಈ ಸಾಹಸವನ್ನೂ ಎಂಡೀವರ್‌ ಸುಲಭವಾಗಿ ಪೂರೈಸಿತು.
ಒಟ್ಟಿನಲ್ಲಿ ಎಂಡೀವರ್‌ ದೇಹದ ವಿನ್ಯಾಸ, ವಿಶಾಲತೆ, ಒಳಾಂಗಣ ವಿನ್ಯಾಸ, ಸವಲತ್ತುಗಳು, ಚಾಲನೆ, ಆಫ್‌ರೋಡ್‌ ಸಾಹಸ, ವೇಗದ ಚಾಲನೆ ಎಲ್ಲದರಲ್ಲೂ ತನ್ನ ಪ್ರತಿಸ್ಪರ್ಧಿ ಎಸ್‌ಯುವಿಗಳಿಗಿಂತ ಒಂದು ಹೆಜ್ಜೆ ಮುಂದೇ ಇದೆ.

ಜತೆಗೆ ಪ್ರತಿಸ್ಪರ್ಧಿಗಳ ಹೋಲಿಕೆಯಲ್ಲಿ ಅದರ ಬೆಲೆ ಗರಿಷ್ಠ ಶೇಕಡಾ 13ರಷ್ಟು ಅಗ್ಗ. ಆದರೆ, ಬಿಡಿ ಭಾಗಗಳ ಲಭ್ಯತೆ ಮತ್ತು ನಿರ್ವಹಣಾ ವೆಚ್ಚವನ್ನು ಫೋರ್ಡ್‌ ಹೇಗೆ ನಿಭಾಯಿಸುತ್ತದೆ ಎಂಬುದರ ಮೇಲೆ ಎಂಡೀವರ್‌ ಮಾರುಕಟ್ಟೆ ನಿರ್ಧಾರವಾಗಲಿದೆ. v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.