ADVERTISEMENT

ಒಳಗಿನ ಯಾತ್ರೆಯ ಹಾದಿ

ಬೆಳದಿಂಗಳು

ಸೃಜನಾನಂದ
Published 4 ಮಾರ್ಚ್ 2015, 19:30 IST
Last Updated 4 ಮಾರ್ಚ್ 2015, 19:30 IST

ತೀರ್ಥ ಕ್ಷೇತ್ರಗಳಿಗೆ ಪ್ರಯಾಣ ಬೆಳೆಸುವ ಪರಿಪಾಠವೊಂದು ಎಲ್ಲಾ ಧರ್ಮಗಳಲ್ಲಿಯೂ ಇದೆ. ಇಂಥ ಯಾತ್ರೆಗಳೀಗ ವಾಣಿಜ್ಯ ಕಾರಣಗಳಿಂದ ಪ್ರವಾಸಗಳಾಗಿ ಬದಲಾಗಿಬಿಟ್ಟಿವೆ ಎಂಬುದು ಮತ್ತೊಂದು ಸತ್ಯ. ಅದನ್ನು ಬದಿಗಿಟ್ಟು ತೀರ್ಥ ಯಾತ್ರೆಗಳನ್ನು ಅರ್ಥ ಮಾಡಿಕೊಳ್ಳಲು ಹೊರಟರೆ ಅವು ನಮ್ಮೊಳಗೆ ತರುವ ಬದಲಾವಣೆಗಳು ತಿಳಿಯುತ್ತವೆ.

ಅಯ್ಯಪ್ಪನ ದರ್ಶನಕ್ಕಾಗಿ ಶಬರಿಮಲೆಗೆ ಹೊರಡುವವರು ಕೈಗೊಳ್ಳುವ ವ್ರತ, ಹಜ್ ಯಾತ್ರಿಕರು ಕೈಗೊಳ್ಳುವ ವ್ರತಗಳೆಲ್ಲವೂ ಹಲವು ಬಗೆಯಲ್ಲಿ ಒಳಗಿನ ಹುಡುಕಾಟಗಳು. ನಿರ್ದಿಷ್ಟ ಶಿಸ್ತಿಗೆ ಒಳಪಟ್ಟು ಒಂದಷ್ಟು ಕಾಲ ಬದುಕುವುದು ಕೇವಲ ಭೌತಿಕವಾದ ಬದಲಾವಣೆಯಷ್ಟೇ ಅಲ್ಲ. ಮಾತಿನ ಮೇಲೆ, ಆಲೋಚನೆಯ ಮೇಲೆ ಹೀಗೆ ಲೌಕಿಕವಾದ ಎಲ್ಲವುದರ ಮೇಲೂ ಒಂದು ನಿಯಂತ್ರಣ ಇಟ್ಟುಕೊಂಡು ಕೆಲ ಕಾಲ ಬದುಕುವ ಕ್ರಿಯೆಯಲ್ಲಿಯೇ ತೀರ್ಥ ಯಾತ್ರೆಯ ಅರ್ಥ ಅಡಗಿದೆ. ಈ ವ್ರತದ ಅಂತ್ಯದಲ್ಲಿ ಸಿಗುವ ದರ್ಶನ ಕೇವಲ ದೇವರ ವಿಗ್ರಹದ ದರ್ಶನವಷ್ಟೇ ಅಲ್ಲ. ಅದು ನಮ್ಮದೇ ಒಳಗನ್ನು ನಾವು ಕಾಣುವ ಕ್ರಿಯೆಯೂ ಹೌದು ಅಥವಾ ನಮ್ಮೊಳಗಿನ ದೇವರನ್ನು ನಾವೇ ಕಂಡುಕೊಳ್ಳುವ ಬಗೆ ಇದು.

ಇದನ್ನು ಸಾಧಿಸುವುದಕ್ಕೆ ಒಂದು ಯಾತ್ರೆಯೇಕೆ. ಕುಳಿತಲ್ಲಿಯೇ ಇದು ಸಾಧ್ಯವಿಲ್ಲವೇ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು. ಇದನ್ನು ಅಸಾಧ್ಯ ಎಂದು ಯಾರೂ ಹೇಳಿಲ್ಲ. ಆದರೆ ನಮ್ಮ ಲೌಕಿಕ ಬದುಕನ್ನು ಹೀಗೆ ಯಾತ್ರೆಯ ನೆಪವಿಲ್ಲದೆ ನಾವು ಶಿಸ್ತಿಗೆ ಒಳಪಡಿಸುತ್ತೇವೆಯೇ ಎಂಬ ಪ್ರಶ್ನೆ ಕೇಳಿಕೊಂಡರೆ ಯಾತ್ರೆಯೇಕೆ ಎಂಬುದು ಅರ್ಥವಾಗುತ್ತದೆ.

ಕುಮಾರಸ್ವಾಮಿ ನವಿಲನ್ನೇರಿ ಲೋಕಕ್ಕೆ ಸುತ್ತಿಬರುವ ಹೊತ್ತಿಗೆ ಅಲ್ಲಿಯೇ ಇದ್ದ ತಂದೆ ತಾಯಿಗೆ ಪ್ರದಕ್ಷಿಣೆ ಹಾಕಿ ಅದನ್ನೇ ಸಾಧಿಸಿದ ಗಣಪತಿಯ ದೃಷ್ಟಾಂತ ಹೇಳುವುದೂ ಇದನ್ನೇ. ನಮ್ಮ ನಮ್ಮ ಮಾನಸಿಕತೆಯ ಮಟ್ಟದಲ್ಲಿ ಯಾತ್ರೆಗಳನ್ನು ಸಾಧಿಸಬಹುದು. ಸರ್ವಲೋಕ ಪ್ರದಕ್ಷಿಣೆ ಎಂಬುದು ಇದ್ದಲ್ಲಿಯೇ ಸಾಧ್ಯವಾಗಬಹುದು ಅಥವಾ ಸರ್ವಲೋಕವನ್ನೂ ತಲುಪುವ ಮೂಲಕವೂ ಸಾಧ್ಯವಾಗಬಹುದು. ಎರಡೂ ನಿಜವೇ. ನಾವು ಯಾವುದನ್ನು ಸಾಧಿಸುವ ಹಂತದಲ್ಲಿದ್ದೇವೆ ಎಂಬುದಿಲ್ಲಿ ಮುಖ್ಯವಾಗುತ್ತದೆ.
ತೀರ್ಥಯಾತ್ರೆಯ ಬಹುಮುಖ್ಯ ಅಂಶ ಯಾತ್ರೆಯ ಸಂಕಲ್ಪ. ಇದೊಂದು ಪ್ರವಾಸವಷ್ಟೇ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳುವ ಕ್ರಿಯೆಯಲ್ಲಿ ಉಳಿದೆಲ್ಲವೂ ಇದೆ. ಕೇವಲ ಪ್ರವಾಸವಷ್ಟೇ ಆಗಿಬಿಟ್ಟರೆ ಅದರಲ್ಲಿ ತೀರ್ಥಯಾತ್ರೆಯ ಫಲವನ್ನು ಅರ್ಥಾತ್ ಒಳಗಿನ ಯಾತ್ರೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಅದೇನಿದ್ದರೂ ಒಂದು ಸಾಮಾನ್ಯ ಪ್ರಯಾಣ ಮಾತ್ರ. ಇದನ್ನು ಅಸಾಮಾನ್ಯಗೊಳಿಸುವುದು ನಮ್ಮ ಸಂಕಲ್ಪಗಳು. ಪ್ರತಿಯೊಂದು ಕ್ರಿಯೆಯಲ್ಲೂ ನಮ್ಮೊಳಗನ್ನು ಕಾಣುವ ಪ್ರಯತ್ನವನ್ನು ನಾವು ಆರಂಭಿಸಿದರೆ ಅದುವೇ ಕರ್ಮಯೋಗವಾಗಿಬಿಡುತ್ತದೆ. ‘ಕಾಯಕವೇ ಕೈಲಾಸ’ ಎಂಬ ವಚನ ಧ್ವನಿಸುವುದು ಇದನ್ನೇ.

ಎಲ್ಲಾ ಕ್ರಿಯೆಗಳೂ ಒಳಗಿನ ಶೋಧನೆಗೆ ಸಹಾಯ ಮಾಡುತ್ತವೆ ಎಂಬುದನ್ನು ನಮ್ಮ ಅನೇಕ ಋಷಿಗಳು, ಸಂತರು, ತತ್ವಜ್ಞಾನಿಗಳು ಹಲವು ಉದಾಹರಣೆಗಳ ಮೂಲಕ ನಮಗೆ ತೋರಿಸಿಕೊಟ್ಟಿದ್ದಾರೆ. ಇವುಗಳನ್ನು ನಾವು ತೆರೆದ ಕಣ್ಣಿನಿಂದ ಕಾಣಬೇಕಷ್ಟೇ. ಒಗಟು, ತಮಾಷೆ ಇತ್ಯಾದಿಗಳಂಥ ತೀರಾ ಲೌಕಿಕವೆನ್ನಿಸುವ ಪಠ್ಯ ಅತಿದೊಡ್ಡ ಅಧ್ಯಾತ್ಮಿಕ ಹೊಳಹನ್ನು ನೀಡುವ ಸಾಧ್ಯತೆಯನ್ನು ನಾವೆಲ್ಲವೂ ನೋಡಿದ್ದೇವಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.