ADVERTISEMENT

ಕಡಿಮೆ ಬೆಲೆಯ ಸಲೂನ್

ಜಾಗ್ವಾರ್ ಎಕ್ಸ್‌ಎಫ್ ಏರೊ ಸ್ಪೋರ್ಟ್ಸ್

ಜಯಸಿಂಹ ಆರ್.
Published 22 ಜುಲೈ 2015, 19:30 IST
Last Updated 22 ಜುಲೈ 2015, 19:30 IST

ನಷ್ಟದ ಹಾದಿ ಹಿಡಿದಿದ್ದ ಬ್ರಿಟಿಷ್ ಐಷಾರಾಮಿ ಕಾರು ಮತ್ತು ಎಸ್‌ಯುವಿ ತಯಾರಿಕಾ ಕಂಪೆನಿ ಜಾಗ್ವಾರ್ ಅಂಡ್ ಲ್ಯಾಂಡ್ ರೋವರ್‌ ಅರ್ಥಾತ್ ಜೆಎಲ್‌ಆರ್‌ ಅನ್ನು ಟಾಟಾ ಸಂಸ್ಥೆ ಕೊಂಡುಕೊಂಡ ಮೇಲೆ ಲಾಭದ ಹಾದಿಗೆ ಮರಳಿದ್ದು ಸುಮ್ಮನೆ ಅಲ್ಲ. ಈಗಾಗಲೇ ಸಾಬೀತಾಗಿರುವ ಅತ್ಯುತ್ತಮ ವಾಹನಗಳನ್ನು ಹೊಂದಿದ್ದರೂ ಕಳಪೆ ಸರ್ವೀಸಿಂಗ್ ಮತ್ತು ಗ್ರಾಹಕರಿಗೆ ವಿಪರೀತ ತಲೆ ನೋವಾಗಿದ್ದ ವಿಪರೀತದ ಎಲೆಕ್ಟ್ರಿಕಲ್  ಸಿಸ್ಟಂಗಳು ಜೆಎಲ್‌ಆರ್‌ ಉತ್ಪನ್ನಗಳಿಂದ ಗ್ರಾಹಕರು ದೂರ ಉಳಿಯುವಂತೆ ಮಾಡಿದ್ದವು.

ಲ್ಯಾಂಡ್‌ ರೋವರ್ ಉತ್ಪನ್ನಗಳಿಗೆ ಪ್ರಬಲ ಸ್ಪರ್ಧಿಯಾಗಿರುವ ಟೊಯೊಟಾದ ಲ್ಯಾಂಡ್‌ ಕ್ರೂಸರ್ ಮತ್ತು ರೇಂಜ್ ರೋವರ್, ಡಿಸ್ಕವರಿ, ಡಫೆಂಡರ್‌ಗಳ ಬಗ್ಗೆ ‘ಲ್ಯಾಂಡ್ ರೋವರ್ ವಿಲ್ ಡ್ರೈ ಆಫ್ಟರ್ ತ್ರೀ ಇಯರ್ಸ್ ಬಟ್ ಯುವರ್ ಗ್ರ್ಯಾಂಡ್ ಸನ್ ವಿಲ್‌ ಡ್ರೈವ್ ಲ್ಯಾಂಡ್ ಕ್ರೂಸರ್’ ಎಂಬ ಕುಹಕ ಚಾಲ್ತಿಯಲ್ಲಿತ್ತು.

ಲ್ಯಾಂಡ್ ರೋವರ್ ಮತ್ತು ಜಾಗ್ವಾರ್‌ಗಳ ಎಲೆಕ್ಟ್ರಿಕಲ್ ಸಿಸ್ಟಂಗಳು ಕೈಕೊಟ್ಟರೆ ಅವು ಗುಜರಿಗೆ ಹೋಗುವುದೇ ಒಳಿತು ಎನ್ನುವಷ್ಟು ಮಾರಾಟದ ನಂತರದ ಸೇವೆ ಕಳಪೆಯಾಗಿತ್ತು. ಟಾಟಾ ಈ ಕಂಪೆನಿಯನ್ನು ಖರೀದಿಸಿದ ಮೇಲೆ ಮೊದಲು ಮಾಡಿದ ಕೆಲಸ ಜೆಎಲ್‌ಆರ್‌ನ ಸರ್ವೀಸಿಂಗ್ ಜಾಲವನ್ನು ಸದೃಢಪಡಿಸಿದ್ದು. ಅರ್ಧ ಕೋಟಿ ಬೆಲೆಗೆ ಮಾರಾಟವಾಗುತ್ತಿದ್ದ ಜೆಎಲ್‌ಆರ್‌ಗಳ ಉತ್ಪನ್ನಗಳನ್ನು ಮೇಲ್ದರ್ಜೆಗೇರಿಸಿದ್ದು ಒಂದು ಸಣ್ಣ ಮ್ಯಾಜಿಕ್ ಮಾಡಿತ್ತು.

ಆನಂತರವೇ ಭಾರತದಲ್ಲೂ ಜೆಎಲ್‌ಆರ್ ಮೊದಲಿಗಿಂತಲೂ ಹೆಚ್ಚು ಸದ್ದು ಮಾಡಲಾರಂಭಿಸಿತು. ಭಾರತ ಮೂಲದ ಮಾತೃ ಸಂಸ್ಥೆಯ ಒಡೆತನದಲ್ಲಿದ್ದರೂ ಭಾರತೀಯರನ್ನೇ ಗಮನದಲ್ಲಿಟ್ಟುಕೊಂಡು ಒಂದು ಸಲೂನ್ ಅಥವಾ ಎಸ್‌ಯುವಿಯನ್ನು ರೂಪಿಸುವತ್ತ ಜೆಎಲ್‌ಆರ್ ಚಿಂತಿಸಿರಲಿಲ್ಲ. ಆದರೆ ಈಗ ಆ ಅಪವಾದವನ್ನೂ ತೊರೆದು ಜಾಗ್ವಾರ್ ಕೈಗೆಟುಕುವ ಬೆಲೆಯಲ್ಲಿ ಒಂದು ಲಕ್ಷುರಿ ಸಲೂನ್ ಅನ್ನು ನಮ್ಮ ರಸ್ತೆಗೆ ಇಳಿಸಿದೆ. ಕೈಗೆಟುಕುವ ಬೆಲೆ ಎಂದರೆ 20–30 ಲಕ್ಷ ಎಂದು ಯೋಚಿಸುವುದು ಬೇಡ.

ನಮ್ಮಲ್ಲಿ ಈಗ ಲಭ್ಯವಿರುವ ಲಕ್ಷುರಿ ಸಲೂನ್‌ಗಳ ಬೆಲೆ ಸರಿ ಸುಮಾರು ರೂ 80 ಲಕ್ಷದಿಂದ ಆರಂಭವಾಗುತ್ತದೆ. ಆದರೆ ಜಾಗ್ವಾರ್ ಈಗ ಹೊರ ತಂದಿರುವ ಸಲೂನ್ ಲಕ್ಷುರಿಯಾಗಿದ್ದರೂ ಅದರ ಆರಂಭಿಕ ಬೆಲೆ ರೂ 56 ಲಕ್ಷ. ಅದರ ಹೆಸರು ಎಕ್ಸ್‌ಎಫ್ ಏರೊ ಸ್ಪೋರ್ಟ್ಸ್.

ಎಕ್ಸ್‌ಎಫ್ ಏರೊ ಸ್ಪೋರ್ಟ್ಸ್ ಕುರಿತು ಮಾತನಾಡುವ ಮೊದಲು ಒಂದು ಲಕ್ಷುರಿ ಸಲೂನ್ ಹೇಗಿರಬೇಕೆಂಬುದರತ್ತ ನೋಡೋಣ. ಎಂಟೂ ದಿಕ್ಕಿನಲ್ಲಿ ಹೊಂದಿಸಬಹುದಾದ ಸೀಟ್‌ಗಳು, ಮನೆಯ ಸೋಫಾದಲ್ಲಿ ಕುಳಿತು ನಿದ್ದೆ ಬರಿಸುವಷ್ಟು ಆರಾಮದಾಯಕತೆ... ಹಳ್ಳಕೊಳ್ಳಗಳ ರಸ್ತೆಯ ಪಯಣವನ್ನು ಸೀಟಿಗೆ ವರ್ಗಾಯಿಸದಷ್ಟು ಸೂಕ್ಷ್ಮವಾದ ಸಸ್ಪೆನ್ಷನ್, ಎಂಜಿನ್ ಸದ್ದಿರಲಿ ಹೊರಗಿನ ಸದ್ದನ್ನೂ ಒಳಗೆ ಬಿಡದಷ್ಟು ಪ್ರಬಲವಾದ ಇನ್ಸುಲೇಟ್, ಸ್ಪೋರ್ಟಿ ಗಿಯರ್ ಬಾಕ್ಸ್‌, ಅದಕ್ಕೆ ಹೊಂದುವಂತಹ ಪ್ರಚಂಡ ಎಂಜಿನ್, ಅದಕ್ಕೆ ಲಗಾಮು ಹಾಕಲು ಪ್ರಬಲ ಬ್ರೇಕಿಂಗ್, ಇಎಸ್‌ಪಿ, ಎಬಿಡಿ, ಕ್ರೂಸ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಅಸಿಸ್ಟ್, ಲಕ್ಷುರಿ ವಿಮಾನಕ್ಕಿಂತಲೂ ಐಷಾರಾಮದ ಒಳಾಂಗಣ, ಅತ್ಯಾಧುನಿಕ ಮ್ಯೂಸಿಕ್ ಮತ್ತು ವಿಷುಯಲ್  ಸಿಸ್ಟಂ... ಹೀಗೆ ಪಟ್ಟಿ ಮುಂದುವರೆಯುತ್ತಾ ಹೋಗುತ್ತದೆ. ಹೀಗಾಗಿ ಈ ವರ್ಗದ ಕಾರುಗಳನ್ನು ಸೆಡಾನ್ ಎಂದು ಕರೆದರೆ ತಪ್ಪಾಗುತ್ತದೆ.

ಜಾಗ್ವಾರ್ ಸಹ ಎಕ್ಸ್‌ಜೆ ಸರಣಿ ಮತ್ತು ಎಕ್ಸ್‌ಎಫ್ ಸರಣಿಯ ಸಲೂನ್‌ಗಳನ್ನು ಭಾರತದಲ್ಲೇ ನೇರವಾಗಿ ಮಾರಾಟ ಮಾಡುತ್ತಿದೆ. ಹೆಚ್ಚು ಐಷಾರಾಮದ ಈ ಸಲೂನ್‌ಗಳ ಬೆಲೆ ಗರಿಷ್ಠ ರೂ ಒಂದು ಕೋಟಿಗೂ ಮೀರುತ್ತದೆ. ಆದರೆ ಪ್ರವೇಶ ಮಟ್ಟದ ಸಲೂನ್ ಜಾಗ್ವಾರ್ ಬತ್ತಳಿಕೆಯಲ್ಲಿರಲಿಲ್ಲ. ಪ್ರತಿಸ್ಪರ್ಧಿಗಳಾದ ಮರ್ಸಿಡೆಸ್ ಬೆಂಜ್, ಆಡಿ, ಬಿಎಂಡಬ್ಲ್ಯು ಕುಟುಂಬದ ಸಲೂನ್‌ಗಳು ಈ ವರ್ಗದಲ್ಲಿ ಅಧಿಪತ್ಯ ಸಾಧಿಸಿದ್ದವು.

ಎಕ್ಸ್‌ಎಫ್‌ ಏರೊ ಸ್ಪೋರ್ಟ್ಸ್ ಅನ್ನು ಕಳೆದ ತಿಂಗಳು ನಮ್ಮ ಮಾರುಕಟ್ಟೆಗೆ ಪರಿಚಯಿಸವುದರ ಮೂಲಕ ಈ ವರ್ಗದಲ್ಲೂ ತನ್ನ ಅದೃಷ್ಟ ಪರೀಕ್ಷಿಸಲು ಜಾಗ್ವಾರ್ ಮುಂದಡಿಯಿಟ್ಟಿದೆ.

ಮೊದಲು ಇದರ ಎಂಜಿನ್ ಮತ್ತು ಸಾಮರ್ಥ್ಯವನ್ನು ಗಮನಿಸೋಣ. ಏರೊ ಸ್ಪೋರ್ಟ್ಸ್‌ನಲ್ಲಿರುವುದು 2,179 ಸಿ.ಸಿ ಅರ್ಥಾತ್ 2.2 ಲೀಟರ್ ಡೀಸೆಲ್ ಎಂಜಿನ್ ಇದರಲ್ಲಿದೆ. ಈ ಎಂಜಿನ್ 2000 ಆರ್‌ಪಿಎಂನಲ್ಲಿ 450 ಎನ್‌ಎಂ ಟಾರ್ಕ್ ಮತ್ತು 3500 ಆರ್‌ಪಿಎಂನಲ್ಲಿ 188 ಬಿಎಚ್‌ಪಿ ಶಕ್ತಿ ಉತ್ಪಾದಿಸುತ್ತದೆ. ಕೇವಲ 210 ಎನ್‌ಎಂ ಟಾರ್ಕ್ ಉತ್ಪಾದಿಸುವ ಪುಂಟೊದ ವೇಗವರ್ಧನೆಯನ್ನು ಪರಿಗಣಿಸಿದರೆ 450 ಎನ್‌ಎಂ ಟಾರ್ಕ್ ಕೊಡುವ ಎಕ್ಸ್‌ಎಫ್‌ನ ಶಕ್ತಿ ಎಷ್ಟಿರಬಹುದು ಎಂಬುದನ್ನು ಅಂದಾಜಿಸಬಹುದು.

ವಿವಿಧ ಮೋಡ್‌ಗಳನ್ನು ಉಳ್ಳ ಜಾಗ್ವಾರ್ ಡ್ರೈವ್ ಸೆಲೆಕ್ಟರ್ ವ್ಯವಸ್ಥೆ ಇರುವ 8 ಸ್ಪೀಡ್‌ ಗಿಯರ್‌ಗಳ ಆಟೊ ಮ್ಯಾಟಿಕ್  ಟ್ರಾನ್ಸ್‌ಮಿಷನ್ ಅನ್ನು ಈ ಎಂಜಿನ್‌ಗೆ ಜೋಡಿಸಲಾಗಿದೆ. 0 ಇಂದ 100 ಕಿ.ಮೀ ವೇಗ ಮುಟ್ಟಲು ಈ ಸಲೂನ್‌ಗೆ ಕೇವಲ 8.5 ಸೆಕೆಂಡ್‌ ಸಾಕು. ಸಾಕಷ್ಟು ಶಕ್ತಿ ಇದ್ದರೂ ಸುರಕ್ಷತೆ ದೃಷ್ಟಿಯಿಂದ ಎಕ್ಸ್‌ಎಫ್ ಸರಣಿಯ ಸಲೂನ್‌ಗಳಲ್ಲಿ ಗರಿಷ್ಠ ವೇಗವನ್ನು ಗಂಟೆಗೆ 250 ಕಿ.ಮೀಗೆ ಮಿತಿಗೊಳಿಸಲಾಗಿದೆ.

ಅಲ್ಲದೆ ಒದ್ದೆಯಾದ ಮತ್ತು ಜಾರುವ ನೆಲದಲ್ಲಿ ಚಲಾಯಿಸಲು ವಿಂಟರ್ ಮೋಡ್ ಹಾಗೂ ವೇಗ-ಮೋಜಿನ ಚಾಲನೆಗೆ ಸ್ಪೋರ್ಟ್ಸ್ ಮೋಡ್ ಆಯ್ಕೆ ನೀಡುವ ಜಾಗ್ವಾರ್ ಡ್ರೈವ್ ಸೆಲೆಕ್ಟರ್‌ ವ್ಯವಸ್ಥೆ ಇದರಲ್ಲಿದೆ. ಜತೆಗೆ ಕ್ರೂಸ್ ಕಂಟ್ರೋಲ್ ಇದೆ. ಇನ್ನು ಸುರಕ್ಷತೆಗಾಗಿ 6 ಏರ್ ಬ್ಯಾಗ್‌ಗಳು. ಪಾದಚಾರಿಗಳು ಮತ್ತು ಇತರ ವಸ್ತುಗಳಿಗೆ ಗುದಿಯದಂತೆ ಎಚ್ಚರ ವಹಿಸುವ ಪೆಡಸ್ಟ್ರಿಯನ್ ಕಾಂಟ್ಯಾಕ್ಟ್ ಸಿಸ್ಟಂ ಇದರಲ್ಲಿದೆ.

ಇನ್ನು ಇದರಲ್ಲಿರುವ ಸೌಲಭ್ಯಗಳತ್ತ ಗಮನ ಹರಿಸೋಣ. ಪ್ರತೀ ಬಾರಿ ರೇರ್ ವ್ಯೂ ಮಿರರ್‌ಗಳನ್ನು ಹೊಂದಿಸುವುದು ಎಂತಹ ತಲೆ ನೋವಿನ ಕೆಲಸ ಎಂಬುದು ಚಾಲಕರಿಗೆ ಗೊತ್ತಿರುವ ಸಂಗತಿ. ಮೋಟರ್‌ ಆಪರೇಟೆಡ್ ಮಿರರ್‌ಗಳಿದ್ದರೂ ಅದು ತಲೆನೋವಿನ ಕೆಲಸವೇ ಸರಿ. ಜತೆಗೆ ನಮ್ಮ ಎತ್ತರಕ್ಕೆ, ಕೂರುವ ಶೈಲಿಗೆ ಅನುಕೂಲವಾಗುವಂತೆ ಸ್ಟೀರಿಂಗ್ ವ್ಹೀಲ್ ಹೊಂದಿಸುವುದೂ (ಅದು ಪದೇ ಪದೇ ಬೇರೆ ಬೇರೆ ಮಂದಿ ಕಾರು ಚಲಾಯಿಸುವಂತಿದ್ದರೆ) ತಲೆ ನೋವೇ ಸರಿ. ಏರೊ ಸ್ಪೋರ್ಟ್ಸ್‌ನಲ್ಲಿ ಮಿರರ್‌ ಮತ್ತು ಸ್ಟೀರಿಂಗ್ ಅನ್ನು ಒಮ್ಮೆ ಹೊಂದಿಸಿ ಪ್ರಿ ಸೆಟ್ ಮಾಡಿದರಾಯಿತು. ಇತರರು ಬಳಸಿದರೂ ಪ್ರಿ ಸೆಟ್ಟಿಂಗ್ ಮೂಲಕ ಅವುಗಳನ್ನು ಕ್ಷಣ ಮಾತ್ರದಲ್ಲಿ ಹೊಂದಿಸಬಹುದು.

ಜಾಗ್ವಾರ್ ಮ್ಯೂಸಿಕ್ ಸಿಸ್ಟಂ, 7 ಇಂಚಿನ ಪರದೆ, ನ್ಯಾವಿಗೇಷನ್ ಸಿಸ್ಟಂ, ಟೆಲಿವಿಷನ್ ಟ್ಯೂನರ್, ಮೀಡಿಯಾ ಇಂಟರ್‌ಫೇಸ್ ಹೀಗೆ ಇದರಲ್ಲಿರುವ ಮಲ್ಟಿಮೀಡಿಯಾ ಸೌಲಭ್ಯಗಳ ಪಟ್ಟಿ ಬೆಳೆಯುತ್ತದೆ. ಏರ್‌ ಫಿಲ್ಟರ್‌ನೊಂದಿಗೆ ಕ್ಲೈಮೇಟ್ ಕಂಟ್ರೋಲ್, ರೈನ್ ಸೆನ್ಸಿಂಗ್ ವೈಫರ್‌ಗಳು.

ಡೈನಮಿಕ್ ಸೆನ್ಸಿಂಗ್ ಹೆಡ್‌ಲ್ಯಾಂಪ್‌ಗಳು ಏರೊ ಸ್ಪೋರ್ಟ್ಸ್‌ನಲ್ಲಿವೆ. ದರ್ಜಿಯೇ ಕುಳಿತು ಹೊಲಿದ ಲೆದರ್ ಫಿನಿಷಿಂಗ್ ಡ್ಯಾಷ್‌ಬೋರ್ಡ್ ಮತ್ತು ಇಂಟೀರಿಯರ್ ಇದರಲ್ಲಿದೆ. ಒಂದರ್ಥದಲ್ಲಿ ಇದು ಹ್ಯಾಂಡ್ ಮೇಡ್. ಎಕ್ಸ್‌ಟೀರಿಯರ್‌ನಲ್ಲೂ ಏರೊ ಸ್ಪೋರ್ಟ್ಸ್ ಇತರ ಎಕ್ಸ್ಎಫ್‌ಗಳಿಗಿಂತ ವಿಶಿಷ್ಟವಾಗಿ ನಿಲ್ಲುತ್ತದೆ. ಇದಕ್ಕೆಂದೇ ವಿನ್ಯಾಸ ಮಾಡಿದ ಆರ್ ಲೋಗೊ, ಕ್ರೋಮ್ ಅಂಚುಳ್ಳ ದೊಡ್ಡ ಗ್ರಿಲ್, ವಿಶಿಷ್ಟ ಬಂಪರ್ ಹಾಗೂ ಹೆಡ್‌ಲ್ಯಾಂಪ್ ಏರೊ ಸ್ಪೋರ್ಟ್ಸ್‌ಗೆ ಮೊನಚು ನೋಟವನ್ನು ನೀಡಿವೆ. ರೇರ್ ಸ್ಪಾಯ್ಲರ್‌ ಇದರಲ್ಲಿದೆ.

ಒಂದು ಪರಿಪೂರ್ಣ ಪ್ಯಾಕೇಜ್‌ನೊಂದಿಗೆ ಪ್ರವೇಶಮಟ್ಟದ ಸಲೂನ್ ವರ್ಗಕ್ಕೆ ಪ್ರವೇಶಿಸಿರುವ ಜಾಗ್ವಾರ್‌ನ ಕಡಿಮೆ ಬೆಲೆಯ ತಂತ್ರ ಫಲಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.