ADVERTISEMENT

‘ಕೆ.ಆರ್‌.ಪೇಟೆ’ ಟು ‘ಕಾಮಿಡಿ ಕಿಲಾಡಿ’

ಸುಮಲತಾ ಎನ್, ಪದ್ಮನಾಭ ಭಟ್ಟ
Published 11 ಜನವರಿ 2017, 19:30 IST
Last Updated 11 ಜನವರಿ 2017, 19:30 IST
‘ಕೆ.ಆರ್‌.ಪೇಟೆ’ ಟು ‘ಕಾಮಿಡಿ ಕಿಲಾಡಿ’
‘ಕೆ.ಆರ್‌.ಪೇಟೆ’ ಟು ‘ಕಾಮಿಡಿ ಕಿಲಾಡಿ’   

ಜೀ ಕನ್ನಡದ ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮದ ಮೂಲಕ ನಗಿಸುತ್ತಾ ಮನೆ ಮಾತಾಗಿರುವವರು ಶಿವರಾಜ್ ಕೆ. ಆರ್. ಪೇಟೆ. ಹಾಸ್ಯ ಕಲಾವಿದನಾಗಿ ಹೆಸರು ಮಾಡುವ ಹಂಬಲ ಹೊತ್ತಿರುವ ಶಿವರಾಜ್, ಕೆ.ಆರ್.ಪೇಟೆಯಿಂದ ‘ಕಾಮಿಡಿ ಕಿಲಾಡಿ’ಯವರೆಗಿನ ದಾರಿಯನ್ನು ನೆನೆಸಿಕೊಂಡಿದ್ದಾರೆ.

* ಚಿಕ್ಕವರಿದ್ದಾಗಲೇ ನಗಿಸಿ ಬೆನ್ನು ತಟ್ಟಿಸಿಕೊಂಡಿದ್ದಿರಂತೆ?
ಎಸ್ಸೆಸ್ಸೆಲ್ಸಿ, ಪಿಯುಸಿ ಓದುವಾಗಲೇ ಸ್ನೇಹಿತರ ಜೊತೆ ಹಾಸ್ಯ ಮಾಡುತ್ತಿದ್ದೆ. ಕಾಲೇಜು ವಾರ್ಷಿಕೋತ್ಸವದ ಬಹುತೇಕ ಕಾರ್ಯಕ್ರಮಗಳಲ್ಲೂ ನಾನಿರುತ್ತಿದ್ದೆ. ಸ್ಟ್ಯಾಂಡ್‌ ಅಪ್‌ ಕಾಮಿಡಿ ಶುರು ಮಾಡಿದ್ದು ಪದವಿ ಓದುವಾಗ. ನಾನೇ ಕೆಲವು ಸ್ಕಿಟ್‌ಗಳನ್ನು ಮಾಡುತ್ತಿದ್ದೆ. ಕ್ಯಾಂಪ್‌ಗಳಲ್ಲೂ ನನ್ನ ಹಾಸ್ಯ ಕಾರ್ಯಕ್ರಮ ಇರುತ್ತಿತ್ತು.

ಕಾಲೇಜು ದಿನಗಳಲ್ಲಿ ಟೇಪ್‌ರೆಕಾರ್ಡರ್, ಕ್ಯಾಸೆಟ್‌ಗಳಲ್ಲಿ ಮಾತುಗಾರ ಮಲ್ಲಣ್ಣನಂಥ ಕೆಲವು ಹಾಸ್ಯದ ಝಲಕ್‌ಗಳನ್ನು ಒಂದೂ ಬಿಡದೆ ಕೇಳುತ್ತಿದ್ದೆ. ಜನಪದಗೀತೆ, ಚಿತ್ರಗೀತೆ, ಭಾವಗೀತೆ, ವೇಷಭೂಷಣ, ಏಕಪಾತ್ರಾಭಿನಯ ಎಲ್ಲದರಲ್ಲೂ ನಾನಿರುತ್ತಿದ್ದೆ. ಪ್ರಿನ್ಸಿಪಾಲರು ಮೆಚ್ಚಿಕೊಂಡು ಭೇಷ್ ಎನ್ನುತ್ತಿದ್ದರು.

* ಮೊದಲ ಬಾರಿ ಬಣ್ಣ ಹಚ್ಚಿದ್ದು ಯಾವಾಗ?
ಮೊದಲು ಬಣ್ಣ ಹಚ್ಚಿದ್ದು ನನ್ನ ತಂದೆ ನಿರ್ದೇಶಿಸಿದ್ದ ನಾಟಕದಲ್ಲಿ. ನನ್ನ ತಂದೆ ನಾಟಕದ ಮೇಷ್ಟ್ರು. ಅವರೇ ನನ್ನ ಮೊದಲ ಗುರು. ಅವರ ನಿರ್ದೇಶನದ ನಾಟಕದಲ್ಲಿ ಸತ್ಯರಸನ ಮಗ ಚತುರನ ಪಾತ್ರ ಮಾಡಿದ್ದೆ. ಆಗ ನಾನಿನ್ನೂ ಏಳನೇ ಕ್ಲಾಸು. ಇಡೀ ರಾತ್ರಿ ನಡೆಯುವ ನಾಟಕದಲ್ಲಿ ಎರಡೂವರೆ ಗಂಟೆಯ ಪಾತ್ರ ನನ್ನದು.

* ಊರು  ಬಿಟ್ಟು ಸೀದಾ ಬಾಂಬೆಗೆ ಬಸ್‌ ಹತ್ತಿದ್ದೇಕೆ?
ನಾವು ಏಳು ಜನ ಮಕ್ಕಳು. ಡಿಗ್ರಿ ನಂತರ ನನಗೆ ಓದಲಾಗಲಿಲ್ಲ. ಹೊಂಗೆ ಆರಿಸಿ, ಒಣಗಿಸಿ ಸಂತೆಯಲ್ಲಿ ಮಾರುವುದು ಸೇರಿದಂತೆ ಹಲವು ಚಿಕ್ಕ ಪುಟ್ಟ ಕೆಲಸ ಮಾಡುತ್ತಿದ್ದೆವು.

ಜೀವನ ಸಾಗುವುದು ಕಷ್ಟವಿತ್ತು. ಸೀದಾ ಬಾಂಬೆಗೆ ಹೋದೆ. ಅಲ್ಲಿ ಸಪ್ಲೈಯರ್‌ ಆದೆ. ಮತ್ತೆ ಊರು ಕರೆಯಿತು. ಒಂದು ಡಾಬಾದಲ್ಲಿ ಕ್ಯಾಷಿಯರ್ ಕೆಲಸಕ್ಕೆ ಸೇರಿದೆ.ಕಂಪೆನಿಗಳಲ್ಲಿ ಮಾರ್ಕೆಟಿಂಗ್‌ನಲ್ಲಿ ಕೆಲಸ ಮಾಡಿದೆ. ಮನಸಲ್ಲಿ ನಟನೆಯ ಕನಸು ತಣ್ಣಗೆ ಕುಳಿತಿತ್ತು. ಹನ್ನೆರಡು ವರ್ಷ ಕಳೆದೇ ಹೋಯಿತು.

* ಈ ಹನ್ನೆರಡು ವರ್ಷದ ಮಹತ್ವ ಏನು?
ನನ್ನ ಜೀವನದಲ್ಲಿ ಹನ್ನೆರಡು ಎಂಬುದು ತುಂಬಾ ಮುಖ್ಯ. ಏಕೆಂದರೆ 12 ವರ್ಷಗಳ ಏಳುಬೀಳಿನ ನಂತರ ಇಂದು ಇಲ್ಲಿದ್ದೇನೆ. ನನ್ನ ಹನ್ನೆರಡು ವರ್ಷಗಳ ಕನಸಿದು.

* ‘ಕಾಮಿಡಿ ಕಿಲಾಡಿ’ಗೆ ಬಂದದ್ದು ಹೇಗೆ?
ನಾನು ವಾಹಿನಿಯೊಂದರಲ್ಲಿ ಕಾರ್ಯಕ್ರಮಕ್ಕೆ ಹಿನ್ನೆಲೆ ಧ್ವನಿ ನೀಡುತ್ತೇನೆ. ಹೀಗೆ ‘ಕಾಮಿಡಿ ಕಿಲಾಡಿಗಳು’ ಆಡಿಷನ್ ಇರುವ ವಿಷಯ ತಿಳಿದು ­ಹೋದೆ. 40–50 ನಿಮಿಷ ಪರೀಕ್ಷೆ ನಡೆಯಿತು. ಕೊನೆಗೆ ‘ಆಯ್ಕೆಯಾಗಿದ್ದೀರ ನಾಳೆಯಿಂದ ರಿಹರ್ಸಲ್’ ಎಂದು ಫೋನ್‌ ಬಂತು. ಮೊದಲ ಸಲ ವೇದಿಕೆ ನೋಡಿದಾಗ ತುಂಬಾ ಖುಷಿ ಆಯಿತು. ಮೊದಲ ಪ್ರದರ್ಶನವೂ ನನ್ನದೇ ಆಗಿತ್ತು.

* ಆರ್ಕೆಸ್ಟ್ರಾಗಳಲ್ಲೂ ಹೆಸರುವಾಸಿಯಾಗಿದ್ದಿರಲ್ಲ?
ಆರ್ಕೆಸ್ಟ್ರಾದಲ್ಲಿ ಕೆಲ ಕಾಲ ಕೆಲಸ ಮಾಡಿದೆ. ನಾಲ್ಕು ಗಂಟೆ ಕಾರ್ಯಕ್ರಮದಲ್ಲಿ ಸಮಯಕ್ಕೆ ತಕ್ಕಂತೆ ಏನಾದರೂ ಹೇಳುವ, ಜನರನ್ನು ಹಿಡಿದಿಟ್ಟುಕೊಳ್ಳುವ, ನಗಿಸುವ ಛಾತಿ ಇರಬೇಕು. ಅದಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದೆ.

ಬೇರೆ  ಬೇರೆ ಹಾಸ್ಯ ಕಾರ್ಯಕ್ರಮಗಳನ್ನು ನೋಡುತ್ತಿದ್ದೆ. ಇರುವುದಕ್ಕಿಂತ ಬೇರೆಯಾಗಿ ಮಾಡಿ ನನ್ನನ್ನು ನಾನು ಗುರುತಿಸಿಕೊಳ್ಳಲು ದಾರಿ ಯಾವುದು ಎಂದು ಯೋಚಿಸುತ್ತಿದ್ದೆ. 20 ಸೆಕೆಂಡುಗಳಲ್ಲಿ  ಹೇಳಿ ಮುಗಿಸುವುದನ್ನು 2 ನಿಮಿಷ ಮಾಡಿಕೊಂಡು ಅಷ್ಟೂ ಹೊತ್ತು ನಗಿಸಲು ಹೇಗೆ ಸಾಧ್ಯ ಎಂದು ತಯಾರಿ ಮಾಡಿಕೊಳ್ಳುತ್ತಿದ್ದೆ.

* ಹುಡುಗಿ ಪಾತ್ರದಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಿದ್ದೀರಿ. ಎಲ್ಲಾದರೂ ಎಡವಿದ್ದುಂಟಾ?
ಅದೊಂದು ಸರ್ಕಸ್‌. ಮೊದಲ ಬಾರಿ ಚೂಡಿದಾರ ಹಾಕಿ ಮಂಡ್ಯ ಭಾಷೆ ಮಾತಾಡಲು ಕೊಟ್ಟಿದ್ದರು. ಮಂಡ್ಯಭಾಷೆ ಹೇಗೂ ಬಾಯಿಗೆ ಕಟ್ಟಿಕೊಂಡ ಹಾಗಿದೆಯಲ್ಲ, ಅದು ತುಂಬಾ ಚೆನ್ನಾಗಿ ಒಪ್ಪಿತ್ತು.

ಹುಡುಗಿ ಪಾತ್ರಕ್ಕಿಂತ, ಹುಡುಗಿ ವೇಷ ಹಾಕಿಕೊಂಡು ಅಲ್ಲೇ ಬದಿಯ ಸೋಫಾ ಮೇಲೆ ಕುಳಿತುಕೊಳ್ಳುವಾಗ ಮಜಾ ಇರುತ್ತದೆ. ವೇಷ ಹುಡುಗಿಯದ್ದಾಗಿದ್ದರೂ ಅಲ್ಲಿ ಕುಳಿತು ನೋಡುವಾಗ ಪಾತ್ರದಲ್ಲಿರುವುದಿಲ್ಲವಲ್ಲ, ಹೇಗೇಗೋ ಕುಳಿತುಕೊಳ್ಳುತ್ತಿದ್ದೆ. ಪದೇ ಪದೇ ಬಂದು ಸರಿಯಾಗಿ ಕುಳಿತುಕೊಳ್ಳಿ ಎಂದು ಹೇಳುತ್ತಲೇ ಇರುತ್ತಿದ್ದರು.

* ಯೋಗರಾಜ್ ಭಟ್ ಅವರನ್ನು ತುಂಬಾ ಅನುಕರಿಸುತ್ತೀರಿ?
ನಾನು ಒಂದಿಬ್ಬರು ಮೂವರನ್ನು ಅನುಕರಿಸಬಲ್ಲೆ. ಪಕ್ಕಾ ದೇಹ ಭಾಷೆ ಇರುವಂತೆ ಮಿಮಿಕ್ರಿ ಮಾಡಿ ಥೇಟ್‌ ಅವರಂತೇ ಕಾಣಿಸಬೇಕು ಎಂದು ಮಾಡಿದ್ದು ಭಟ್ಟರೊಬ್ಬರನ್ನೇ.

ಭಟ್ಟರನ್ನು ನೇರವಾಗಿ ನೋಡಿದ್ದು ಹಾಗೂ ಅವರ ಮಾತುಗಳನ್ನು ಕೇಳಿದ್ದು ಕಾಮಿಡಿ ಕಿಲಾಡಿಯಲ್ಲಿ. ಈ ಮುಂಚೆ ಅವರ, ‘ಹೇಳಿಬಿಡು ಹುಡುಗಿ ನೀ ನನಗೆ ಕೊಟ್ಟದ್ದು ತಿಳಿ ನೀಲಿ ಕನಸ, ಬರಿ ಪೋಲಿ ಕನಸ’ ಇದೆಯಲ್ಲ, ಆ ಸಾಲನ್ನು ತುಂಬ ಸಲ ಕೇಳುತ್ತಿದ್ದೆ. ಆ ಸಾಲುನನಗೆ ತುಂಬಾ ಇಷ್ಟ. ಈ ಸಾಲುಗಳನ್ನು ಅವರ ಧ್ವನಿಯಲ್ಲಿ ಹೇಳುವುದನ್ನು ಕಲಿತಿದ್ದೆ.

ಅವರು ಒತ್ತಕ್ಷರ, ಅಲ್ಪಪ್ರಾಣ, ಮಹಾಪ್ರಾಣಕ್ಕೆ ತುಂಬಾ ಒತ್ತು ಕೊಟ್ಟು, ಅಚ್ಚ ಕನ್ನಡದಲ್ಲಿ ಮಾತನಾಡುವುದನ್ನು ಗಮನಿಸಿದ್ದೆ. ನಡೆಯುವ ಶೈಲಿ ನೋಡಲು ತುಂಬಾ ವಿಡಿಯೊ ಹುಡುಕಿದೆ. ಅದು ಮಾತ್ರ ಎಲ್ಲೂ ಸಿಗಲಿಲ್ಲ. ಕ್ಯಾರಾವಾನ್‌ನಿಂದ ಇಳಿದು ಸೆಟ್‌ಗೆ ಬರುವುದನ್ನು ಮರೆಯಲ್ಲಿ ನಿಂತು ನೋಡಿಕೊಂಡೆ. ಸ್ಟೇಜ್ ಮೇಲೆ ಬಂದಾಗ ಅವರ ಶೈಲಿ, ತಲೆ ಕೆರೆದುಕೊಳ್ಳುವುದು, ತಲೆ ಅಲ್ಲಾಡಿಸುವುದು ಎಲ್ಲವನ್ನೂ ನೋಡಿ ಕಲಿತೆ.

* ಕಾಮಿಡಿ ಮಾಡುವುದಕ್ಕೂ ಕಾಮಿಡಿ ಪೀಸ್ ಆಗುವುದಕ್ಕೂ ಏನು ವ್ಯತ್ಯಾಸ?
ಕಾಮಿಡಿ ಮಾಡಿ ನಗುತ್ತೇವೆ, ನಗಿಸುತ್ತೇವೆ. ಪ್ರೇಕ್ಷಕರು, ತೀರ್ಪುಗಾರರು ಆ ಕ್ಷಣ ನಕ್ಕರೆ ನಾವು ಕಾಮಿಡಿಯನ್‌. ನಾವು ಕಾಮಿಡಿ ಮಾಡಿಯೂ ಎದುರಿದ್ದವರು ನಗುತ್ತಿಲ್ಲ ಎಂಬುದು ಗೊತ್ತಾದಾಗ ಕಾಮಿಡಿ ಪೀಸ್‌ಗಳಾಗುತ್ತೇವೆ.

* ಸಿನಿಮಾಗಳಲ್ಲಿ ನಟಿಸುವ ಅವಕಾಶ?
ಈ ಹಿಂದೆ ಸಿನಿಮಾವೊಂದಕ್ಕೆ ಸಹಾಯಕ ನಿರ್ದೇಶಕ ಆಗಿ ಕೆಲಸ ಮಾಡಿದ್ದೆ. ಮತ್ತೊಂದು ಸಿನಿಮಾದಲ್ಲಿ ಸಹಾಯಕನಾಗಿಯೂ ಇದ್ದೆ. ಅಭಿನಯವನ್ನೂ ಮಾಡಿದ್ದೆ. ಅದಿನ್ನೂ ಬಿಡುಗಡೆ ಆಗಿಲ್ಲ. ಇದೀಗ ‘ದಿ ವಿಲನ್’ ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ.

* ನಗುವುದು, ನಗಿಸುವುದು ಎಷ್ಟು ಮುಖ್ಯ?
ನಗುವುದು ನನಗೂ ಒಳ್ಳೆಯದು. ನಗಿಸಿದರೆ ಬೇರೆಯವರಿಗೂ ಒಳ್ಳೆಯದು. ನಾನೂ ನಕ್ಕು, ಅವರನ್ನೂ ನಗಿಸುತ್ತೇನೆ. ಒಟ್ಟಿನಲ್ಲಿ ಜೀವನದಲ್ಲಿ ಎಲ್ಲವನ್ನು ಮರೆತು ನಗುವುದು ಎಲ್ಲರಿಗೂ ಮುಖ್ಯ.

* ನಿಮ್ಮ ಕಾಮಿಡಿಗೆ ಎಷ್ಟು ಹುಡುಗಿಯರು ಬಿದ್ದಿದ್ದರು?
ಹಾಗೆ ಅಂದುಕೊಳ್ಳೋಕೆ ಮುನ್ನವೇ, ನನ್ನನ್ನು ನೋಡಿದಾಕ್ಷಣ ‘ಸಖತ್ತಾಗಿತ್ತಣ್ಣ ಕಾಮಿಡಿ’ ಅಂದುಬಿಡುತ್ತಿದ್ದರು. ಇನ್ನೇನು ಮಾಡಲು ಸಾಧ್ಯ?

* ಕೆ.ಆರ್‌.ಪೇಟೆ ಎಂಬುದೇ ನಿಮ್ಮ ಗುರುತಾಗಿದೆಯಲ್ಲ?
ಜನರು ನನ್ನನ್ನು ನೋಡಿ ಇವರು ‘ಕೆ.ಆರ್.ಪೇಟೆ ಅಲ್ಲವಾ’ ಎಂದು ಗುರುತಿಸುತ್ತಾರೆ. ದಾರಿಯಲ್ಲಿ ಸಿಕ್ಕಾಗ ‘ಸೂಪರ್ ಸಾರ್’ ಅನ್ನುತ್ತಾರೆ. ಆಗ ಸಾರ್ಥಕ ಅನ್ನಿಸುತ್ತದೆ. ನನ್ನೂರೇ ನನಗೆ ಗುರುತಾಗಿದೆ.

* ಕೆ.ಆರ್. ಪೇಟೆಯಿಂದ ಇಲ್ಲಿವರೆಗಿನ ಪಯಣದ ಬಗ್ಗೆ ಏನು ಹೇಳುತ್ತೀರಾ?
‘ಕಷ್ಟ ಆಯ್ತದೆ, ಹೇಳೋದು ತುಂಬಾ ಅದೆ’... ಸಾಕಷ್ಟು ಏಳುಬೀಳು, ಕಷ್ಟಗಳನ್ನು ದಾಟಿ ಇಲ್ಲಿಗೆ ಬಂದೆ. ಅಪ್ಪ ಅಮ್ಮನಿಗೆ ‘ಅವನು ನಿಮ್ಮ ಕೈ ಮೀರಿದ, ಯೋಚನೆ ಬಿಟ್ಟುಬಿಡಿ’ ಅಂದವರೆಲ್ಲಾ ಈಗ ಫೋನ್ ಮಾಡಿ ‘ನಮ್ಮುಡುಗನ ಪ್ರೋಗ್ರಾಂ’ ಎಂದು ಹೇಳುವಾಗ ಖುಷಿ ಅನ್ನಿಸುತ್ತದೆ. ನನ್ನ ಅಪ್ಪ ಅಮ್ಮನಿಗೆ ಹೊರಗಿನ ಪ್ರಪಂಚ ಗೊತ್ತಿಲ್ಲ. ‘ನಿಮ್ಮ ಮಗ ಚೆನ್ನಾಗಿ ಕಾಮಿಡಿ ಮಾಡ್ತಾನೆ’ ಎಂದು ಅವರಿಗೆ ಯಾರಾದರೂ ಹೇಳಿದಾಗ ಅವರ ಸಂತೋಷ ನೋಡಲು ಚೆಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.