ADVERTISEMENT

ಗ್ರಾಮಗಳ ಶಾಲೆಯಲ್ಲೀಗ ಇ–ಪಾಠ

ಗುರು ಪಿ.ಎಸ್‌
Published 25 ಜನವರಿ 2017, 19:30 IST
Last Updated 25 ಜನವರಿ 2017, 19:30 IST
ಗ್ರಾಮಗಳ ಶಾಲೆಯಲ್ಲೀಗ ಇ–ಪಾಠ
ಗ್ರಾಮಗಳ ಶಾಲೆಯಲ್ಲೀಗ ಇ–ಪಾಠ   

ಉನ್ನತ ವಿದ್ಯಾಭ್ಯಾಸಕ್ಕೋ, ಉದ್ಯೋಗಕ್ಕೋ ಅಥವಾ ಅನಿವಾರ್ಯತೆಗೋ ವಿದೇಶಕ್ಕೆ, ಹೊರ ರಾಜ್ಯಕ್ಕೆ ಹೋದ ಕನ್ನಡಿಗರು ಅನೇಕ. ಹೀಗೆ, ಹೋದ ಅನೇಕರಿಗೆ ಒಂದು ತುಡಿತ ಇರುತ್ತದೆ. ನನ್ನೂರಿಗೆ, ನನ್ನ ಜನಕ್ಕೆ ಯಾವುದಾದರೂ ರೀತಿಯಲ್ಲಿ ಸಹಾಯ ಮಾಡಬೇಕು, ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು.

ಇಂತಹ ಮನೋಭಾವ ಹೊಂದಿರುವವರಿಗೆ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ ಬೆಂಗಳೂರಿನ ಇ–ವಿದ್ಯಾಲೋಕ. ದೆಹಲಿ, ಕೋಲ್ಕತ್ತಾ ಅಲ್ಲದೆ, ಅಮೆರಿಕ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌ನಲ್ಲಿರುವ ಪ್ರತಿಭಾವಂತರ ಪ್ರತಿಭೆಯನ್ನು, ರಾಜ್ಯದ ಕುಗ್ರಾಮಗಳಲ್ಲಿರುವ ವಿದ್ಯಾರ್ಥಿಗಳಿಗೆ ಹಂಚುವ ಕೆಲಸವನ್ನು ಈ ಸಂಸ್ಥೆ ಮಾಡುತ್ತಿದೆ. ಧಾರವಾಡದ ವಿದ್ಯಾಪೋಷಕ ಸಂಸ್ಥೆಯೂ ಈ ಕಾರ್ಯಕ್ಕೆ ಕೈ ಜೋಡಿಸಿದೆ.

ವಿದೇಶ ಹಾಗೂ ಹೊರರಾಜ್ಯಗಳಲ್ಲಿರುವ ಅನೇಕರು, ರಾಜ್ಯದ ಗ್ರಾಮೀಣ ಭಾಗಗಳಲ್ಲಿರುವ ಸರ್ಕಾರಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕ ಪಾಠ ಬೋಧನೆ ಮಾಡುತ್ತಿದ್ದಾರೆ. ಈ ಡಿಜಿಟಲ್‌ ಕ್ಲಾಸ್‌ ರೂಂಗಳಲ್ಲಿ, ವೃತ್ತಿಯಲ್ಲಿ ಎಂಜಿನಿಯರ್‌, ವೈದ್ಯ, ವಿಜ್ಞಾನಿ ಮತ್ತಿತರ ಹುದ್ದೆಗಳಲ್ಲಿರುವವರು, ಮಕ್ಕಳಿಗೆ ಇಂಗ್ಲಿಷ್‌, ಗಣಿತ, ವಿಜ್ಞಾನ ವಿಷಯಗಳನ್ನು ಹೇಳಿಕೊಡುತ್ತಿದ್ದಾರೆ.

ಈ ಸೌಲಭ್ಯ ಪಡೆಯುತ್ತಿರುವವರಲ್ಲಿ ಧಾರವಾಡ ತಾಲ್ಲೂಕಿನ ಬೆನಕನಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳೂ ಇದ್ದಾರೆ. 2015ರ ಜೂನ್‌ನಿಂದ ಇಲ್ಲಿ ಡಿಜಿಟಲ್‌ ತರಗತಿ ಪಾಠ ಬೋಧನೆ ಪ್ರಾರಂಭವಾಗಿದೆ. ಬೆನಕನಕಟ್ಟಿಯೊಂದಿಗೆ, ಬಾಡ, ಮನಗುಂಡಿ, ಹನುಮಸಾಗರ ಹಾಗೂ ಮುಗದ ಶಾಲೆಗಳಲ್ಲಿ ಆನ್‌ಲೈನ್‌ ಪಾಠ ಬೋಧನೆ ಪ್ರಾರಂಭಿಸಲಾಯಿತು. ಈ ವರ್ಷ ಮತ್ತೆ ಹೆಚ್ಚುವರಿಯಾಗಿ ಕಲ್ಲೂರು, ನಿಗದಿ, ಮನಗುಂಡಿ, ಮರೆವಾಡ, ಉಪ್ಪಿನಬೆಟಗೇರಿ, ಹನಸೋಗೆ ಹಾಗೂ ಹೊಸದುರ್ಗದ ಗ್ರಾಮೀಣ ಶಾಲೆಗಳಲ್ಲಿ ಪ್ರಾರಂಭಿಸಲಾಗಿದೆ.

ಯಾವುದೇ ಶುಲ್ಕ ಪಡೆಯದೇ ಈ ಬೋಧಕರು, ಗ್ರಾಮೀಣ ಭಾಗದ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಇಲ್ಲಿ ಮಧ್ಯಾಹ್ನ 11 ಗಂಟೆಗೆ ಪಾಠ ಇದ್ದರೆ, ಅಮೆರಿಕದಲ್ಲಿ ಅವರು ರಾತ್ರಿ 11ಕ್ಕೆ ಬೋಧನೆ ಮಾಡುತ್ತಾರೆ. ಸಮಯದ ಅನನುಕೂಲತೆ ಇರುವಾಗಲೂ ಆಸಕ್ತಿ ಕಳೆದುಕೊಳ್ಳದೆ ಪಾಠ ಮಾಡುವುದು ಅವರ ಆಸಕ್ತಿಗೆ ಸಾಕ್ಷಿ.


ವಿಡಿಯೊ ಕ್ಲಿಪ್ಪಿಂಗ್‌ಗಳೇ ಅಧ್ಯಯನ ಸಾಮಗ್ರಿ
ಶಿಕ್ಷಕರು ಪಾಠ ಬೋಧನೆ ಮಾಡುವಾಗ ಒಂದು ಪಾಠಕ್ಕೆ ಸಂಬಂಧಿಸಿದಂತೆ ನಾಲ್ಕಾರು ಟೀಚಿಂಗ್, ಲರ್ನಿಂಗ್ ಮೆಟೀರಿಯಲ್ ಬಳಕೆ ಮಾಡಿದಾಗ್ಯೂ ಪರಿಣಾಮಕಾರಿ ಬೋಧನೆ ಆಗದೇ ಇರಬಹುದು. ಈ ಕಾರ್ಯಕ್ರಮದಡಿಯಲ್ಲಿ ಬಳಸುವ ವಿಡಿಯೊ ಕ್ಲಿಪ್ಪಿಂಗ್, ನಕಾಶೆಗಳು ಅತ್ಯಂತ ಪರಿಣಾಮಕಾರಿ ಅಧ್ಯಯನ ಸಾಮಗ್ರಿಯಾಗಿದೆ ಎಂದು ಹೇಳುತ್ತಾರೆ ಬೆನಕನಕಟ್ಟಿ ಶಾಲೆಯ ಹಿರಿಯ ಶಿಕ್ಷಕ ಸಹದೇವ ಬ್ಯಾಟಗೇರ.

ಇದಲ್ಲದೆ, ಆಯಾ ಶಾಲೆಯ ಶಿಕ್ಷಕರು ಮಾಡುವ ಸಮಾಜ ವಿಜ್ಞಾನ, ಪರಿಸರ ಅಧ್ಯಯನ, ಕನ್ನಡ ವಿಷಯಗಳಿಗೆ ಸಂಬಂಧಿಸಿದಂತೆ ಅಂತರ್ಜಾಲದಲ್ಲಿ ಮಕ್ಕಳಿಗೆ ಹೆಚ್ಚಿನ ಕುತೂಹಲಕಾರಿ ವಿಷಯಗಳನ್ನು ಸರಳವಾಗಿ ತಿಳಿದುಕೊಳ್ಳುವಂತೆ ವಿಡಿಯೊಗಳನ್ನು ತೋರಿಸಲಾಗುತ್ತದೆ.

ಮಕ್ಕಳ  ವಯೋಮಾನಕ್ಕೆ ತಕ್ಕಂತೆ,  ಪಾಠಕ್ಕೆ ಸಂಬಂಧಪಟ್ಟ ಅನೇಕ ವಿಡಿಯೊ ಕ್ಲಿಪ್ಪಿಂಗ್‌ಗಳ ನೆರವಿನಿಂದ ಬೋಧಿಸುವ ಮೂಲಕ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಒತ್ತು ನೀಡುತ್ತಾರೆ. ತರಗತಿಯ ಪಠ್ಯಕ್ರಮ, ವೇಳಾಪಟ್ಟಿಯಂತೆ ಡಿಜಿಟಲ್‌ ತರಗತಿಗಳನ್ನು ನಡೆಸಲಾಗುತ್ತದೆ. ಪಾಠ ಬೋಧನೆಗಿಂತ ಮುಂಚೆ ಮಕ್ಕಳ ಹಾಜರಿ, ಹಿಮ್ಮಾಹಿತಿ ಹಾಗೂ ದೃಢೀಕರಣ ಮಾಡಲಾಗುತ್ತದೆ. ತರಗತಿಯಲ್ಲಿಯ ಪ್ರತಿ ಮಗುವಿನ ಅಹವಾಲುಗಳನ್ನು ಹಾಗೂ ಪರಿಹಾರ ತರಗತಿಗಳನ್ನು ನಡೆಸಲಾಗುತ್ತದೆ.

ವಿದ್ಯಾರ್ಥಿಗಳಿಗೆ ಪ್ರೋತ್ಸಾಹ
ನಿಯಮಾನುಸಾರ ಎಲ್ಲ ಮಕ್ಕಳಿಗೂ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಿದ್ದು, ವರ್ಷದ ಕೊನೆಗೆ ‘ಉತ್ತಮ ಕೇಂದ್ರ’, ‘ಉತ್ತಮ ವಿದ್ಯಾರ್ಥಿ’, ‘ಉತ್ತಮ ವರ್ಗ ಸಹಾಯಕಿ’, ‘ಉತ್ತಮ ಸಂಸ್ಥೆ’ ಮುಂತಾದ ಪ್ರಶಸ್ತಿಗಳನ್ನು ನೀಡುವ ಮೂಲಕ ಬೋಧಕರಿಗೂ, ವಿದ್ಯಾರ್ಥಿಗಳಿಗೂ ಪ್ರೋತ್ಸಾಹ ನೀಡಲಾಗುತ್ತದೆ.

ಕಳೆದ ವರ್ಷ ದಕ್ಷಿಣ ಭಾರತದ ಮಟ್ಟದಲ್ಲಿ ಬೆನಕನಕಟ್ಟಿ ಶಾಲೆ ಉತ್ತಮ ಕೇಂದ್ರ ಪ್ರಶಸ್ತಿ ಪಡೆದಿದೆ. ಅಲ್ಲದೆ, ಇದೇ ಕೇಂದ್ರದ ಭಾರತಿ ರೇವಣ್ಣವರ, ವಿವೇಕಾನಂದ ರೇವಣ್ಣವರ, ಕಾವೇರಿ ಬಡಿಗೇರ ಉತ್ತಮ ವಿದ್ಯಾರ್ಥಿಗಳು ಹಾಗೂ ಸುಮಿತ್ರಾ ಪಾಟೀಲ ಅವರಿಗೆ ಉತ್ತಮ ವರ್ಗ ಸಹಾಯಕಿ ಪ್ರಶಸ್ತಿ ನೀಡಲಾಗಿದೆ.

ರಾಜ್ಯಕ್ಕೆ ಮಾತ್ರವೇ ಸೀಮಿತವಾಗಿರದೆ ದೇಶದ ಆಯ್ದ ರಾಜ್ಯಗಳಾದ ಆಂಧ್ರ ಪ್ರದೇಶ, ತಮಿಳುನಾಡು, ಕೇರಳ, ಜಾರ್ಖಂಡ್ ಇನ್ನಿತರ ರಾಜ್ಯಗಳಲ್ಲಿ ಏಕರೂಪತೆಯಿಂದ ನಡೆಯುತ್ತಿದೆ. ದೇಶದ ಎಲ್ಲ ವಿವಿಧ ರಾಜ್ಯಗಳ ವಿವಿಧ ಕೇಂದ್ರಗಳ ನಡುವೆ ಆಗಾಗ ಮುಖಾಮುಖಿ ಸಂದರ್ಶನ(ಕಾನ್ಫರೆನ್ಸ್‌) ನಡೆಸುತ್ತಾರೆ. ಇದರಿಂದ ನಮ್ಮ ರಾಜ್ಯದ ಗ್ರಾಮೀಣ ಶಾಲೆಗೂ ಇತರೆ ರಾಜ್ಯದ ಗ್ರಾಮೀಣ ಶಾಲೆಗಳಿಗೂ ಇರುವ ವ್ಯತ್ಯಾಸ, ಸ್ಥಿತಿ-ಗತಿ,ಆಚಾರ-ವಿಚಾರ ಮುಂತಾದ ಹಲವು ವಿಷಯಗಳನ್ನು ತಿಳಿಯಲು ಸಹಾಯವಾಗಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.

ಯುವ ಸಮೂಹಕ್ಕೆ ಉದ್ಯೋಗ
ಒಟ್ಟಾರೆ ಈ ಕಾರ್ಯಕ್ರಮದಿಂದ ಮಕ್ಕಳ ಹಾಜರಾತಿ, ಕಲಿಕಾವೇಗ, ಮಕ್ಕಳ ಆಸಕ್ತಿ ಹೆಚ್ಚಾಗಿದೆ. ಅಲ್ಲದೆ ಕಡಿಮೆ ಕಲಿತಿರುವ ಗ್ರಾಮೀಣ ಪ್ರದೇಶದ ಯುವಜನತೆಗೆ ಉದ್ಯೋಗ ದೊರಕಿದೆ. ವಿಶೇಷವಾಗಿ ತಂತ್ರಜ್ಞಾನ ಮಾಧ್ಯಮಗಳ ಬಳಕೆಗಳ ಬಗ್ಗೆ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲಾ ಮಕ್ಕಳಿಗೆ ಸರಳವಾಗಿ ಸಿಗುವಂತಾಗಿದೆ. ಇದರಿಂದ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯ ಮಕ್ಕಳೂ ಈ ವೈಜ್ಞಾನಿಕ ಜಗತ್ತಿನಲ್ಲಿ ಪೈಪೋಟಿ ಮಾಡುವಂತಾಗಿದೆ. ಖಾಸಗಿ ಶಾಲೆಗಳಿಗೆ ಸಮನಾಗಿ ಸರ್ಕಾರಿ ಶಾಲೆಗಳೂ ಶೈಕ್ಷಣಿಕ ಪ್ರಗತಿ ಸಾಧಿಸಲು ಸಾಧ್ಯವಾಗಿದೆ.

ಡಿಜಿಟಲ್‌ ಕ್ಲಾಸ್‌ ರೂಂಗೆ ₹2.65 ಲಕ್ಷ
ಒಂದು ಶಾಲೆಯಲ್ಲಿ ಡಿಜಿಟಲ್‌ ತರಗತಿ ಕೋಣೆ ನಿರ್ಮಿಸಲು ₹2.65 ಲಕ್ಷ ವೆಚ್ಚವಾಗುತ್ತದೆ. ಆದರೆ, ಮೂಲಸೌಲಭ್ಯಗಳಿಗೆ ₹65 ಸಾವಿರ ಮಾತ್ರ ಖರ್ಚು ಬರುತ್ತದೆ. ಅಂದರೆ, ವರ್ಷಕ್ಕೆ ಒಬ್ಬ ವಿದ್ಯಾರ್ಥಿಯ ಮೇಲೆ ₹ 4 ಸಾವಿರ ವೆಚ್ಚವಾಗುತ್ತದೆ ಎನ್ನುತ್ತಾರೆ ಇ–ವಿದ್ಯಾಲೋಕ ಸಿಇಓ ವೆಂಕಟ ಶ್ರೀರಾಮನ್‌. ಪಾಠ ಬೋಧಿಸಲು ಹೆಚ್ಚು ಸುಶಿಕ್ಷಿತರು ಅಥವಾ ಸ್ವಯಂ ಸೇವಕರು ಮುಂದೆ ಬಂದರೆ, ಇನ್ನೂ ಹೆಚ್ಚು ಶಾಲೆಗಳಲ್ಲಿ ಡಿಜಿಟಲ್‌ ತರಗತಿ ನೀಡಲು ಸಾಧ್ಯವಾಗುತ್ತದೆ ಎನ್ನುವುದು ಅವರ ಅಭಿಪ್ರಾಯ.

ಅವರ ಪ್ರಕಾರ, ದೇಶದ ಆರು ರಾಜ್ಯಗಳ 70 ಶಾಲೆಗಳಲ್ಲಿ ಸುಶಿಕ್ಷಿತರು ಈ ರೀತಿಯ ಡಿಜಿಟಲ್‌ ತರಗತಿ ತೆಗೆದುಕೊಳ್ಳುತ್ತಿದ್ದಾರೆ. ರಾಜ್ಯದ 24 ಶಾಲೆಗಳಲ್ಲಿ ಆನ್‌ಲೈನ್‌ ಮೂಲಕ ಶಿಕ್ಷಣ ನೀಡಲಾಗುತ್ತದೆ.

‘ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು, ಮುಖ್ಯವಾಗಿ ಶಿಕ್ಷಕರ ಕೊರತೆ ಇರುವ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಗಣಿತ, ವಿಜ್ಞಾನ ಹಾಗೂ ಇಂಗ್ಲಿಷ್‌ ಬೋಧಿಸಲಾಗುತ್ತದೆ. ಮಕ್ಕಳಿಗೆ ಬೋಧಿಸಲು ಸಿದ್ಧವಾಗಿರುವವರು ದೇಶದ ಅಥವಾ ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ, ಅವರಿಗೆ ಇ–ವಿದ್ಯಾಲೋಕ ವೇದಿಕೆ ಒದಗಿಸುತ್ತದೆ. ವೆಬ್‌ಸೈಟ್‌, ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಮೂಲಕ ಸುಶಿಕ್ಷಿತರನ್ನು (ವಾಲಂಟರಿಗಳನ್ನು ) ನಾವು ತಲುಪುತ್ತೇವೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಉಚಿತವಾಗಿ ನೀಡುವುದು ನಮ್ಮ ಆದ್ಯತೆ’ ಎಂದು ಅವರು ಹೇಳುತ್ತಾರೆ.

ಸದ್ಯಕ್ಕೆ 450 ಸುಶಿಕ್ಷಿತರು ತರಗತಿ ತೆಗೆದುಕೊಳ್ಳುತ್ತಿದ್ದಾರೆ. ಇವರಲ್ಲಿ 70 ಜನರು ರಾಜ್ಯದ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಸುಮಾರು 120 ಜನ ವಿದೇಶಗಳಿಂದಲೇ ತರಗತಿ ತೆಗೆದುಕೊಳ್ಳುತ್ತಿದ್ದಾರೆ. ಇ–ವಿದ್ಯಾಲೋಕ ಚಾರಿಟಬಲ್‌ ಟ್ರಸ್ಟ್‌, ಎಲ್‌ ಅಂಡ್‌ ಟಿ ಇನ್ಫೋಟೆಕ್‌, ಇನ್ಫೊಸಿಸ್‌ ಸೇರಿದಂತೆ ಹಲವು ಕಂಪೆನಿಗಳು ಈ ಕಾರ್ಯಕ್ರಮಕ್ಕೆ ದೇಣಿಗೆ ನೀಡಿವೆ ಎಂದರು ವೆಂಕಟ ಶ್ರೀರಾಮನ್‌.

ಪಾಠ ಮಾಡಲು ಮುಂದೆ ಬರಬೇಕು
‘ಇ–ವಿದ್ಯಾಲೋಕ ವೆಬ್‌ಸೈಟ್‌ ನೋಡುತ್ತಿದ್ದಾಗ, ಬಿಡುವಿನ ವೇಳೆಯಲ್ಲಿ ನನ್ನ ಜ್ಞಾನವನ್ನು ಮಕ್ಕಳೊಂದಿಗೆ ಹಂಚಿಕೊಳ್ಳಬಹುದಲ್ಲ ಎನಿಸಿತು. ಈ ಮೊದಲು ನಾನು, ನನ್ನ ಪತ್ನಿ ಇಂತಹ ಕಾರ್ಯಗಳಿಗೆ ದೇಣಿಗೆ ನೀಡಿದ್ದೆವು. ಆದರೆ, ನಮ್ಮ ಸಮಯ ಮತ್ತು ಜ್ಞಾನವನ್ನು ನೀಡುವುದು ಅದಕ್ಕಿಂತ ಮಹತ್ವದ್ದು ಎಂಬ ಕಾರಣದಿಂದ ನಾನು ತರಗತಿ ತೆಗೆದುಕೊಳ್ಳಲು ತೀರ್ಮಾನಿಸಿದೆ’ ಎನ್ನುತ್ತಾರೆ ದಕ್ಷಿಣ ಆಫ್ರಿಕಾದಲ್ಲಿರುವ ವಿಷ್ಣು ಬೋರಪ್ಪ.

ಧಾರವಾಡದ ಬೆನಕನಕಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯ ಐದನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ ಮತ್ತು ಇಂಗ್ಲಿಷ್‌ ವ್ಯಾಕರಣದ ತರಗತಿ ತೆಗೆದುಕೊಳ್ಳುತ್ತಾರೆ. ಗ್ರಾಮೀಣ ಭಾಗದ ಮಕ್ಕಳೊಂದಿಗೆ, ಕನ್ನಡದಲ್ಲಿ ಸಂಭಾಷಣೆ ನಡೆಸುವುದಕ್ಕೆ ಖುಷಿಯಾಗುತ್ತದೆ. ವಿದ್ಯಾರ್ಥಿಗಳೂ ಚುರುಕಾಗಿದ್ದಾರೆ.

ADVERTISEMENT

ತಮ್ಮ ಭಾಷೆಗೆ, ನಾಡಿಗೆ ಸಹಕಾರ ನೀಡುವ ಮನಸಿರುವ ವಿದ್ಯಾವಂತರು, ಗ್ರಾಮೀಣ ಭಾಗದ ಮಕ್ಕಳಿಗೆ ಪಾಠ ಬೋಧಿಸಲು ಮುಂದೆ ಬರಬೇಕು ಎಂದು ವಿಷ್ಣು ಹೇಳುತ್ತಾರೆ.  ಇದೇ ರೀತಿ ಶೋಭಾ ರಂಗನಾಥ, ಡಿ. ಪ್ರಭಾಕರ್‌, ಎಸ್‌. ಗುರುದೇವ, ಅರ್ಪಣಾ, ಲಕ್ಷ್ಮಿ ರಂಗನಾಥ ಅವರು ಬೆನಕನಕಟ್ಟಿ ಶಾಲೆಯ ಮಕ್ಕಳಿಗೆ ಆನ್‌ಲೈನ್‌ನಲ್ಲಿ ತರಗತಿ ತೆಗೆದುಕೊಳ್ಳುತ್ತಾರೆ.
ಆಸಕ್ತರು www.evidyaloka.org ವೆಬ್‌ಸೈಟ್‌ ಅಥವಾ 080-40903939 ದೂರವಾಣಿ ಸಂಖ್ಯೆ ಸಂಪರ್ಕಿಸಬಹುದು.  

ಸಮಾಜ ಸೇವೆಗೆ ಅವಕಾಶ
ಆನ್‌ಲೈನ್‌ನಲ್ಲಿ ಪಾಠ ಮಾಡುವುದು ಹೊಸ ಅನುಭವ. ಶಿಕ್ಷಣ ಎಲ್ಲ ಪ್ರಗತಿಯ ಬೆನ್ನೆಲುಬು. ಒಬ್ಬ ಮನುಷ್ಯನಿಗೆ ಅನ್ನ ಕೊಟ್ಟು ಸೇವೆ ಮಾಡಬಹುದು, ಅದು ಅವನ ಒಂದು ದಿನದ ಸಮಸ್ಯೆy ಪರಿಹಾರವಾಗುತ್ತದೆ. ಆದರೆ ಶಿಕ್ಷಣವು ಒಬ್ಬ ವ್ಯಕ್ತಿಗೆ ಜೀವನವನ್ನು ಕೊಡುತ್ತದೆ. ಸಮಾಜ ಸೇವೆಯನ್ನು ಮಾಡಲು ಒಂದು ಉತ್ತಮ ಅವಕಾಶ ಈ ಮೂಲಕ ನನಗೆ ಸಿಕ್ಕಿದೆ.
–ನಂದಿನಿ, ಆನ್‌ಲೈನ್‌ ಶಿಕ್ಷಕಿ, ಬೆಂಗಳೂರು

*
ಉತ್ತಮ ಫಲಿತಾಂಶ
ವಿದ್ಯಾರ್ಥಿಗಳಿಗೆ ಇಂಗ್ಲಿಷ್‌, ವಿಜ್ಞಾನ, ಗಣಿತ ಬೋಧನೆ ಮಾಡುತ್ತಿರುವುದರಿಂದ ಉತ್ತಮ ಫಲಿತಾಂಶ ಬರುತ್ತಿದೆ. ಆನ್‌ಲೈನ್‌ ತರಗತಿ ನಡೆಸಲು ವರ್ಗ ಸಹಾಯಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಇರುವ ಹೆಣ್ಣು ಮಕ್ಕಳಿಗೆ ಕೆಲಸ ಸಿಕ್ಕಿದೆ. ದೇಶ-ವಿದೇಶಗಳಿಂದ ಪಾಠ ಮಾಡುವವರು ಅಲ್ಲಿನ ಪರಿಸರದ ಬಗ್ಗೆಯೂ ಹೇಳುವುದರಿಂದ ಸಾಮಾನ್ಯ ಜ್ಞಾನ ಹೆಚ್ಚಾಗುತ್ತದೆ.
ಸುಮಿತ್ರಾ ಪಾಟೀಲ, ಆನ್‌ಲೈನ್‌ ವರ್ಗ ಸಹಾಯಕಿ

*
ಮನೆಪಾಠದ ಅವಶ್ಯಕತೆಯಿಲ್ಲ
ಅಂತರ್ಜಾಲ ಪಾಠ ಬೋಧನೆಯಿಂದ ನಮಗೆ ತುಂಬಾ ಸಹಾಯವಾಗಿದೆ. ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವೂ ಪೈಪೋಟಿ ನೀಡಲು ಸಾಧ್ಯವಾಗಿದೆ. ಟ್ಯೂಷನ್‌ಗೆ  ಪಟ್ಟಣಕ್ಕೆ ಹೋಗುವ ಅನಿವಾರ್ಯತೆ  ಇತ್ತು. ಈಗ ಆ ಅಗತ್ಯವಿಲ್ಲ. ಪರೀಕ್ಷೆಗಳಲ್ಲಿಯೂ ಉತ್ತಮ ಅಂಕ ಗಳಿಸಲು ಸಾಧ್ಯವಾಗಿದೆ.
–ಭಾರತಿ ರೇವಣ್ಣವರ, ವಿದ್ಯಾರ್ಥಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.