ADVERTISEMENT

ಚಾರ್ಜಿಂಗ್‌ನ ನಾನಾ ರೂಪ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2018, 19:30 IST
Last Updated 21 ಮಾರ್ಚ್ 2018, 19:30 IST
ಚಾರ್ಜಿಂಗ್‌ನ ನಾನಾ ರೂಪ
ಚಾರ್ಜಿಂಗ್‌ನ ನಾನಾ ರೂಪ   

ಕ್ಯಾಮೆರಾ, ರ್‍ಯಾಮ್, ಸ್ಕ್ರೀನ್, ಪ್ರೊಸೆಸರ್‌ಗಳ ಸಾಮರ್ಥ್ಯವನ್ನು ತಾಳೆ ಹಾಕಿ ಹೊಸ ಸ್ಮಾರ್ಟ್‌ ಫೋನ್ ಖರೀದಿ ನಿರ್ಧಾರ ಅಂತಿಮಗೊಳಿಸುವುದು ಸಾಮಾನ್ಯ. ಆದರೆ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ವೇಗವಾಗಿ ಕಾರ್ಯನಿರ್ವಹಿಸುವ ವ್ಯವಸ್ಥೆಯಿದ್ದರೂ ಬ್ಯಾಟರಿ ಹೆಚ್ಚು ಕಾಲ ಉಳಿಯದ ಕಾರಣದಿಂದಲೇ ಎಷ್ಟೋ ಫೋನ್‍ಗಳನ್ನು ಗ್ರಾಹಕರು ಆಯ್ಕೆ ಪಟ್ಟಿಯಿಂದ ಹೊರಗಿಡುತ್ತಾರೆ. ಹಾಗಾಗಿಯೇ ಬಹುತೇಕ ಎಲ್ಲ ಸ್ಮಾರ್ಟ್‌ಫೋನ್ ಸಂಸ್ಥೆಗಳು ಅತಿ ವೇಗವಾಗಿ ಚಾರ್ಜ್ ಆಗುವ, ದೀರ್ಘ ಕಾಲ ಚಾರ್ಜ್ ಉಳಿಸಿಕೊಳ್ಳುವ ಅಥವಾ ಕಡಿಮೆ ಚಾರ್ಜ್ ಬಳಸುವ ತಂತ್ರಜ್ಞಾನ ಅಭಿವೃದ್ಧಿ ಕಡೆಗೆ ಗಮನ ನೀಡಿವೆ. ಪ್ರಸ್ತುತ ಫಾಸ್ಟ್ ಚಾರ್ಜಿಂಗ್, ವೈರ್‌ಲೆಸ್‌ ತಂತ್ರಗಳ ಜತೆಗೆ ಲೇಸರ್ ಜಾರ್ಜಿಂಗ್ ಸೇರ್ಪಡೆಯಾಗುತ್ತಿದೆ.

ಪ್ರಸ್ತುತ ಬಳಕೆಯಲ್ಲಿರುವ ಪ್ರತಿಯೊಂದು ಸ್ಮಾರ್ಟ್‍ಫೋನ್‍ನಲ್ಲೂ ಬ್ಯಾಟರಿ ಇದೆ. ಫೋನ್ ಕಾರ್ಯಾಚರಿಸಲು ಬ್ಯಾಟರಿ ಚಾರ್ಜ್ ಆಗಲೇಬೇಕು. ಅದಕ್ಕಾಗಿಯೇ ಕೆಲವೆಡೆ ಮೊಬೈಲ್ ಚಾರ್ಜಿಂಗ್ ಎಟಿಎಂಗಳ ಅಭಿವೃದ್ಧಿಯಾಗಿದೆ. ರೈಲ್ವೆ-ಬಸ್-ವಿಮಾನ ನಿಲ್ದಾಣಗಳಲ್ಲಿ ಚಾರ್ಜ್ ಮಾಡುವುದಕ್ಕಾಗಿಯೇ ಪ್ರತ್ಯೇಕ ಸ್ಥಳ, ಕೈನಲ್ಲಿ ಹಿಡಿದಿರುವಾಗ ಅಥವಾ ಓಡಾಡುತ್ತ ಅಂತರ್ಜಾಲದಲ್ಲಿ ಏನನ್ನೋ ಹುಡುಕುತ್ತಿರುವ ನಡುವೆಯೇ ಚಾರ್ಜ್ ಆಗಲು ಪವರ್ ಬ್ಯಾಂಕ್‌ಗಳೂ ಇವೆ.

ಇತ್ತೀಚೆಗೆ ನಾಸಿಕ್‍ನಿಂದ ಮುಂಬೈವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ಸಾವಿರಾರು ರೈತರಲ್ಲಿ ಕೆಲವರು ತಲೆ ಮೇಲೆ ಸೋಲಾರ್ ಫಲಕಗಳನ್ನೇ ಟೋಪಿಯಂತೆ ಇಟ್ಟು ಸಾಗಿದ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದವು. ಸೌರಶಕ್ತಿಯನ್ನೇ ಬಳಸಿ ಆ ಪ್ರತಿಭಟನಾಕಾರರು ತಮ್ಮ ಮೊಬೈಲ್ ಫೋನ್‍ಗಳನ್ನು ಚಾರ್ಜ್ ಮಾಡಿಕೊಳ್ಳುತ್ತಿದ್ದರು.

ADVERTISEMENT

ಗಂಟೆಗಟ್ಟಲೆ ಚಾರ್ಜಿಂಗ್ ಕೇಬಲ್ ಚುಚ್ಚಿಕೊಂಡು ಕೂರುವುದನ್ನು ತಪ್ಪಿಸಲು ಪರ್ಯಾಯ ಚಾರ್ಜಿಂಗ್ ಮಾರ್ಗವನ್ನು ಸಂಶೋಧಕರು ಹುಡುಕುತ್ತಲೇ ಇದ್ದಾರೆ.

ಒಂದು ಕಡೆ ಇಟ್ಟುಬಿಡಿ ಸಾಕು
ಕೊಠಡಿಗೆ ಬಂದ ಕೂಡಲೇ ಚಾರ್ಜ್ ಕೇಬಲ್‍ಗಾಗಿ ಹುಡುಕಾಡುವ ಅಗತ್ಯವಿಲ್ಲ. ಎದುರಿಗೆ ಅಥವಾ ಅಕ್ಕ-ಪಕ್ಕದಲ್ಲಿರುವ ಮೇಜಿನ ಮೇಲೆ ಮೊಬೈಲ್ ಇಟ್ಟುಬಿಡಿ ಸಾಕು. ಲೇಸರ್ ಉತ್ಸರ್ಜಕದಿಂದ ಹೊಮ್ಮುವ ಕಿರಣ ಮೊಬೈಲ್ ಬ್ಯಾಟರಿಯನ್ನು ಚಾರ್ಜ್ ಮಾಡಲು ಪ್ರಾರಂಭಿಸುತ್ತದೆ. ಅಕಸ್ಮಾತ್ ಯಾರಾದರು, ಇಲ್ಲ ಯಾವುದೇ ವಸ್ತು ಅಡ್ಡ ಬಂದ ಕೂಡಲೇ ಲೇಸರ್ ಹೊಮ್ಮುವಿಕೆ ಸ್ಥಗಿತಗೊಳ್ಳುವಂತೆ ಸುರಕ್ಷತಾ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ಸ್ಮಾರ್ಟ್‌ಫೋನ್‌ ಹಿಂಬದಿಗೆ ತೆಳುವಾದ ಪವರ್ ಸೆಲ್ ಅಳವಡಿಸಿ ಇದನ್ನು ಗಮನಿಸಲಾಗಿದೆ. ಲೇಸರ್‌ನಿಂದ ಶಕ್ತಿ ಪಡೆಯುವ ಸೆಲ್ ಮೊಬೈಲ್ ಚಾರ್ಜ್ ಮಾಡುತ್ತದೆ. ಸೆಲ್‍ನೊಂದಿಗೆ ತೆಳುವಾದ ಲೋಹದ ತಟ್ಟೆ ಇಟ್ಟಿರುವುದರಿಂದ ಲೇಸರ್‌ನಿಂದ ಉಂಟಾಗುವ ಶಾಖವನ್ನು ಚದುರುವಂತೆ ಮಾಡಿ ಬಿಸಿ ಹೆಚ್ಚದಂತೆ ತಡೆಯುತ್ತದೆ ಎನ್ನುತ್ತಾರೆ ವಾಷಿಂಗ್ಟನ್ ವಿವಿಯ ಸಹಪ್ರಾಧ್ಯಾಪಕ ಶ್ಯಾಮ್ ಗೊಲ್ಲಕೋಟ. ಪವರ್ ಸೆಲ್ ಮೇಲೆ ಬೀಳುವ ಕಿರಿದಾದ ಲೇಸರ್ ಕಿರಣ 2 ವ್ಯಾಟ್ ವಿದ್ಯುತ್ ಶಕ್ತಿ ಹರಿಸುತ್ತದೆ. ಹಾಗಾಗಿ ಯುಎಸ್‍ಬಿ ಕೇಬಲ್ ಮೂಲಕ ಚಾರ್ಜ್ ಆಗುವಷ್ಟೇ ವೇಗವಾಗಿ, ಈ ವೈರ್‌ಲೆಸ್‌ ವ್ಯವಸ್ಥೆ ಮೂಲಕ ಚಾರ್ಜ್ ಮಾಡಬಹುದಾಗಿದೆ.

ಒಂದು ಮೊಬೈಲ್‍ನಷ್ಟೇ ಸೀಮಿತ ಪರಿಧಿಯಲ್ಲಿ 14 ಅಡಿ ದೂರದಿಂದ ಲೇಸರ್ ಚಾರ್ಜಿಂಗ್ ನಡೆಯುತ್ತದೆ. ಲೇಸರ್ ಕಿರಣದ ಪರಿಧಿಯನ್ನು 100 ಚದರ ಸೆಂ.ಮೀ. ವಿಸ್ತರಿಸಿದರೆ 40 ಅಡಿ ದೂರದಿಂದಲೂ ಜಾರ್ಜಿಂಗ್ ಮಾಡಿಕೊಳ್ಳಬಹುದು.

ಚಾರ್ಜಿಂಗ್ ವಿಸ್ತಾರ
ಹೆಚ್ಚು ವಿದ್ಯುತ್ ಹರಿಯುವಿಕೆ ಮತ್ತು ಅಧಿಕ ವೋಲ್ಟೇಜ್ ನೀಡಿದರೆ ಬ್ಯಾಟರಿ ಬಹು ಬೇಗ ಚಾರ್ಜ್ ಆಗುತ್ತದೆ. ಆದರೆ, ಬ್ಯಾಟರಿ ವಿದ್ಯುತ್ ಸ್ವೀಕರಿಸುವ ಸಾಮರ್ಥ್ಯಕ್ಕೆ ಚಾರ್ಜ್ ನಿಯಂತ್ರಕದ ಚಿಪ್ ಮಿತಿ ಒಡ್ಡುತ್ತದೆ.

ಮನೆಯಲ್ಲಿ ಬಳಸುವ ಬಲ್ಬ್ 40 ವ್ಯಾಟ್ ವಿದ್ಯುತ್ ಬಳಸಿ ಉರಿಯುವ ಹಾಗೆ ಮೊಬೈಲ್ ಬ್ಯಾಟರಿಗೂ ನಿರ್ದಿಷ್ಟ ವೋಲ್ಟ್‌ ವಿದ್ಯುತ್ ಅಗತ್ಯವಿರುತ್ತದೆ. ಮೊಬೈಲ್ ಕಂಪನಿಗಳು ನೀಡುವ ಚಾರ್ಜರ್‌ಗಳು, ನಿರ್ದಿಷ್ಟವಾಗಿ ಹೇಳುವುದಾದರೆ ನೀಡಲಾಗಿರುವ ಯುಎಸ್‍ಬಿ ಆಧಾರದಲ್ಲಿ ಸ್ಮಾರ್ಟ್‌ಫೋನ್‌ ಚಾರ್ಜ್ ಆಗುವ ಅವಧಿ ನಿರ್ಧಾರವಾಗುತ್ತದೆ.

ಐಫೋನ್, ಸ್ಯಾಮ್‍ಸಂಗ್, ಎಲ್‍ಜಿ, ಶಿಯೋಮಿ... ಹೀಗೆ ಸಂಸ್ಥೆಗಳು ಪ್ರತ್ಯೇಕ ಯುಎಸ್‍ಬಿಗಳನ್ನು ಬಳಸುತ್ತಿವೆ. ಯುಎಸ್‍ಬಿ 1.0, 2.0, 3.0 ಮತ್ತು 3.1. ಯುಎಸ್‍ಬಿ 1.0 ಮತ್ತು 2.0 ರವಾನಿಸುವ ವಿದ್ಯುತ್ 2.5 ವ್ಯಾಟ್‍ನಷ್ಟು (0.5 ಆ್ಯಂಪ್ಸ್‌ನ 5 ವೋಲ್ಟ್ ವಿದ್ಯುತ್). ಮೊಟ್ಟೆಯಾಕಾರದ ಟೈಪ್- ಸಿ ಯುಎಸ್‍ಬಿ ಇದೀಗ ಹೆಚ್ಚು ಬಳಕೆ ಬರುತ್ತಿದೆ.

ಉತ್ಪಾದಕರು ಇದೇ ವಿನ್ಯಾಸದ ಕೇಬಲ್‍ನಲ್ಲಿ ಯುಎಸ್‍ಬಿ 2.0 ಮತ್ತು 3.1 ಎರಡೂ ಸಾಮರ್ಥ್ಯದ ಕೇಬಲ್‍ಗಳನ್ನು ಹೊರತರುತ್ತಿದ್ದಾರೆ. 3.1 ಯುಎಸ್‍ಬಿ ಮೂಲಕ 5 ಆ್ಯಂಪ್ಸ್‌ನ 20 ವೋಲ್ಟ್ಸ್(100 ವ್ಯಾಟ್) ವಿದ್ಯುತ್ ರವಾನೆಯಾಗುವುದರಿಂದ ಮೊಬೈಲ್‍ಗಿಂತಲೂ ಮ್ಯಾಕ್‍ಬುಕ್ ಪ್ರೊ, ಗೂಗಲ್‍ನ ಕ್ರೋಮ್‍ಬುಕ್ ಪಿಕ್ಸಲ್‍ನಂತಹ ಲ್ಯಾಪ್‍ಟಾಪ್ ಚಾರ್ಜಿಂಗ್‍ನಲ್ಲಿ ಬಳಕೆಯಾಗುತ್ತಿದೆ.

ಕ್ವಾಲ್‍ಕಮ್ ಕ್ವಿಕ್ ಚಾರ್ಜ್: ಮೊಬೈಲ್‍ಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಸ್ನ್ಯಾಪ್‍ಡ್ರ್ಯಾಗನ್ 820, 620, 430... ಇತರ ಮಾದರಿಯ ಚಿಪ್‍ಗಳು ಸ್ಯಾಮ್‍ಸಂಗ್ ಗ್ಯಾಲಕ್ಸಿ ನೋಟ್ 8, ಎಚ್‍ಟಿಸಿ ಯು ಅಲ್ಟ್ರಾ, ಎಲ್‍ಜಿ ವಿ30 ಫೋನ್‍ಗಳಲ್ಲಿ ಅಳವಡಿಸಲಾಗಿದೆ. ಈ ಎಲ್ಲ ಮೊಬೈಲ್‍ಗಳಲ್ಲಿಯೂ ಕ್ವಾಲ್‍ಕಮ್ ಕ್ವಿಕ್ ಚಾರ್ಜ್ ವ್ಯವಸ್ಥೆಯಿದೆ. ಬೇರೆ ಯಾವುದೇ ಫೋನ್‍ನಲ್ಲಿಯೂ ಇದನ್ನು ಅಳವಡಿಸಿಕೊಳ್ಳಲು ಅವಕಾಶವಿದೆ.

ಇದರಲ್ಲಿನ ಹೊಸ ಮಾದರಿ ಕ್ವಿಕ್ ಚಾರ್ಜ್ 4+ ಹೊಂದಿರುವ ಫೋನ್‍ಗಳು 15 ನಿಮಿಷಗಳಲ್ಲಿ ಶೇ 50ರಷ್ಟು ಚಾರ್ಜ್ ಹಾಗೂ ಕ್ವಿಕ್ ಚಾರ್ಜ್ 3.0 ಮಾದರಿಯಲ್ಲಿ 30 ನಿಮಿಷಗಳಲ್ಲಿ ಮೊಬೈಲ್ ಶೇ 50ರಷ್ಟು ಚಾರ್ಜ್ ಆಗುತ್ತದೆ. ಶೇ 100ರಷ್ಟು ಚಾರ್ಜ್ ಆಗಲು 1 ಗಂಟೆ 18 ನಿಮಿಷ ಸಾಕು.

ಒನ್‍ಪ್ಲಸ್‍ನ ‘ಡ್ಯಾಷ್’ ಮತ್ತು ಒಪ್ಪೊದ ‘ವೂಕ್’
ಚೀನಾ ಮೂಲದ ಒನ್‍ಪ್ಲಸ್ ಸಂಸ್ಥೆ ಬಳಸುತ್ತಿರುವ ಡ್ಯಾಷ್ ಚಾರ್ಜ್ ವ್ಯವಸ್ಥೆಯನ್ನು ಒಪ್ಪೊದಿಂದ ಪಡೆಯಲಾಗಿದ್ದು, ಇದು ವೂಕ್ (VOOC: Voltage Open Loop Multi-step Constant-Current Charging) ಆಧಾರಿತ ವ್ಯವಸ್ಥೆಯಾಗಿದೆ. ಒನ್‍ಪ್ಲಸ್‍ನ 5, 3 ಹಾಗೂ 3ಟಿ ಫೋನ್‍ಗಳು ಅತಿ ವೇಗವಾಗಿ ಚಾರ್ಜ್ ಆಗಲು ಇದೇ ಕಾರಣ. ಒಪ್ಪೊ ಹೇಳುವಂತೆ ವೂಕ್ ಇರುವ ಫೋನ್‍ಗಳು 30 ನಿಮಿಷಗಳಲ್ಲಿ ಶೇ 75ರಷ್ಟು ಚಾರ್ಜ್ ಆಗುತ್ತವೆ. ಆದರೆ, ಒನ್‍ಪ್ಲಸ್‍ನ ಡ್ಯಾಷ್ ಚಾರ್ಜ್ ವ್ಯವಸ್ಥೆಯಲ್ಲಿ 30 ನಿಮಿಷಗಳಲ್ಲಿ ಶೇ 60 ಹಾಗೂ ಪೂರ್ಣ ಚಾರ್ಜ್ ಆಗಲು 1 ಗಂಟೆ 15 ನಿಮಿಷ ಅಗತ್ಯವಿದೆ.

ಕೆಲವು ಸಂಸ್ಥೆಗಳು ನಡೆಸಿರುವ ಪರೀಕ್ಷೆಗಳಲ್ಲಿ ‘ಡ್ಯಾಷ್ ಚಾರ್ಜ್’ ಉಳಿದ ಎಲ್ಲ ವೇಗದ ಚಾರ್ಜ್ ವ್ಯವಸ್ಥೆಗಳಿಗಿಂತಲೂ 10 ನಿಮಿಷ ವೇಗವಾಗಿ ಚಾರ್ಜ್ ಮಾಡುತ್ತದೆ. ಹಾಗೂ ಫೋನ್‍ನಲ್ಲಿ ಹೆಚ್ಚು ಶಾಖ ಉತ್ಪತ್ತಿ ಮಾಡದೆ ಇರುವುದು ಗಮನಿಸಬೇಕಾದ ಅಂಶ ಎಂದು ವಿಶ್ಲೇಷಿಸಲಾಗಿದೆ.

ಸ್ಯಾಮ್‍ಸಂಗ್‍ನ ಅಡಾಪ್ಟೀವ್ ಫಾಸ್ಟ್ ಚಾರ್ಜಿಂಗ್
ಸ್ಯಾಮ್‍ಸಂಗ್‍ನ ಬಹುತೇಕ ಸ್ಮಾರ್ಟ್‍ಫೋನ್‍ಗಳಲ್ಲಿ ಇದೇ ವ್ಯವಸ್ಥೆ ಇದ್ದು, 2 ಆ್ಯಂಪ್ಸ್‌ನ 9ವೋಲ್ಟ್‌ ಗಳಷ್ಟು ಗರಿಷ್ಠ ವಿದ್ಯುತ್ ಹರಿಸುವಷ್ಟು ಸಮರ್ಥವಾಗಿದೆ. ಕ್ವಿಕ್ ಚಾರ್ಜಿಂಗ್ 3 ಅಥವಾ 4ರಷ್ಟು ವೇಗವಾಗಿ ಚಾರ್ಜ್ ಆಗದಿದ್ದರೂ, ಪರೀಕ್ಷೆಗಳ ಪ್ರಕಾರ 3000 ಎಂಎಎಚ್ ಬ್ಯಾಟರಿ 2 ಗಂಟೆಯಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ.

ಟರ್ಬೊ ಪವರ್: ಮೋಟೊರೋಲಾದ ಮೋಟೊ ಝಡ್2 ಫೋರ್ಸ್ ಮತ್ತು ಮೋಟೊ ಜಿ5 ಪ್ಲಸ್‍ನಲ್ಲಿ ಟರ್ಬೊಪವರ್ ಚಾರ್ಜಿಂಗ್ ವ್ಯವಸ್ಥೆಯಿದೆ. ಟರ್ಬೊಪವರ್ ಅಡಾಪ್ಟರ್ ಮೂರು ಮಾದರಿಗಳಲ್ಲಿ (15, 25 ಹಾಗೂ 30) ಲಭ್ಯವಿದೆ. ಕಂಪನಿಯ ಪ್ರಕಾರ ಟರ್ಬೊಪವರ್ 30ರಲ್ಲಿ ಹದಿನೈದು ನಿಮಿಷ ಚಾರ್ಜ್ ಮಾಡಿದರೆ 15 ಗಂಟೆಯಷ್ಟು ಬ್ಯಾಟರಿ ಕಾರ್ಯಾಚರಣೆಗೆ ಲಭ್ಯವಿರುತ್ತದೆ.

ಪಂಪ್ ಎಕ್ಸ್‌ಪ್ರೆಸ್‌: ತೈವಾನ್ ಮೂಲದ ಚಿಪ್ ಉತ್ಪಾದನಾ ಸಂಸ್ಥೆ ಮೀಡಿಯಾಟೆಕ್ ಪಂಪ್ ಎಕ್ಸ್‌ಪ್ರೆಸ್‌ ವ್ಯವಸ್ಥೆಯನ್ನು ಚಾರ್ಜಿಂಗ್‍ಗಾಗಿ ರೂಪಿಸಿದೆ. ಇದರ ಪ್ರಕಾರ, ಪಂಪ್ ಎಕ್ಸ್‌ಪ್ರೆಸ್‌ 3.0 ಸಾಧನಗಳು 20 ನಿಮಿಷಗಳಲ್ಲಿ ಶೇ 75ರಷ್ಟು ಚಾರ್ಜ್ ಆಗುತ್ತವೆ. ಇಷ್ಟೇ ಪ್ರಮಾಣದ ಚಾರ್ಜ್ ಆಗಲು ಪಂಪ್ ಎಕ್ಸ್‌ಪ್ರೆಸ್‌ 2.0+ ಸಾಧನಗಳಲ್ಲಿ ಮೂವತ್ತು ನಿಮಿಷ ಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.