ADVERTISEMENT

ಜ್ಞಾನೋದಯದ ಸುಲಭ ಮಾರ್ಗ

ಸೃಜನಾನಂದ
Published 15 ಫೆಬ್ರುವರಿ 2017, 19:30 IST
Last Updated 15 ಫೆಬ್ರುವರಿ 2017, 19:30 IST

ನಾವು ಆಧುನಿಕರಾಗುತ್ತಾ ಹೋದಂತೆ ಎಲ್ಲವನ್ನೂ ವೈಜ್ಞಾನಿಕವಾಗಿ ಅರ್ಥಮಾಡಿಕೊಳ್ಳುತ್ತಿದ್ದೇವೆ. ಈ ವೈಜ್ಞಾನಿಕ ವಿಶ್ಲೇಷಣೆ ಮೂಲಕ ಎಲ್ಲದಕ್ಕೂ ನಾವೊಂದು ಸುಲಭದ ದಾರಿಯನ್ನು ಕಂಡುಕೊಂಡಿದ್ದೇವೆ ಎಂಬ ಭ್ರಮೆಯೂ ನಮ್ಮನ್ನು ಆವರಿಸಿಕೊಂಡಿದೆ. ಇದನ್ನು ಇಲ್ಲ ಎಂದರೆ ಅನೇಕ ವಿಜ್ಞಾನವಾದಿಗಳಿಗೆ ಕೋಪ ಬರುತ್ತದೆ. ಇವರ ಕೋಪವನ್ನು ನಾವು ಅರ್ಥ ಮಾಡಿಕೊಳ್ಳಬಹುದು.

ಏಕೆಂದರೆ ಅವರು ಕಾರ್ಯಕಾರಣಗಳ ಜಗತ್ತಿನಲ್ಲಿ ನಿರ್ದಿಷ್ಟ ಸೈದ್ಧಾಂತಿಕ ಚೌಕಟ್ಟಿನಲ್ಲಿ ನಿರ್ದಿಷ್ಟ ಬೆಳವಣಿಗೆಯೊಂದನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಶ್ಲೇಷಿಸಿ ನಿರ್ಧಾರಕ್ಕೆ ಬಂದಿರುತ್ತಾರೆ. ಅವರ ನಿರ್ಧಾರ ಎಲ್ಲಾ ರೀತಿಯಲ್ಲಿಯೂ ಸರಿಯೇ. ಇಲ್ಲಿರುವ ನಿರ್ದಿಷ್ಟತೆಯಲ್ಲಿ ಯಾವುದೇ ಒಂದನ್ನು ತೆಗೆದು ಹಾಕಿದರೂ ತಮ್ಮ ಲೆಕ್ಕಾಚಾರ ತಪ್ಪಾಗುತ್ತದೆ ಎಂಬುದರ ಅರಿವೂ ಅವರಿಗೆ ಇರುತ್ತದೆ.

ಈ ವೈಜ್ಞಾನಿಕತೆಯನ್ನು ದುರ್ಬಳಕೆ ಮಾಡಿಕೊಳ್ಳುವ ಮತ್ತೊಂದು ವರ್ಗವಿದೆ. ಈ ವರ್ಗವನ್ನು ಹೇಗೆಂದು ಹೆಸರಿಸುವುದು ಎಂದೇ ತಿಳಿಯುವುದಿಲ್ಲ. ವೈಜ್ಞಾನಿಕ ವಿಶ್ಲೇಷಣೆಯ ಪೂರ್ವಾರ್ಹತೆಯಾಗಿರುವ ‘ನಿರ್ದಿಷ್ಟತೆ’ಯನ್ನು ತೆಗೆದು ಹಾಕಿ ಇವರೊಂದು ಬಗೆಯ ವೈಜ್ಞಾನಿಕತೆಯನ್ನು ಪ್ರತಿಪಾದಿಸುತ್ತಾರೆ. ಇವರ ದುರ್ಬಳಕೆಯಲ್ಲಿ ಬಡವಾಗಿರುವುದು ಧ್ಯಾನ ಮತ್ತು ಅಧ್ಯಾತ್ಮ ಎಂಬ ಪರಿಕಲ್ಪನೆಗಳು.

ಒಂದು ಪುಸ್ತಕ ಓದಿ ಯೋಗಿಯಾಗಬಹುದು. ಒಂದು ಕೋರ್ಸ್ ಮಾಡಿ ಕುಂಡಲಿನಿಯನ್ನು ಜಾಗೃತಗೊಳಿಸಿಕೊಳ್ಳಬಹುದು ಎಂಬ ಬಗೆಯಲ್ಲಿ ಸಾಗುವ ಈ ವಾದಸರಣಿಗಳನ್ನು ಅಲ್ಲಗಳೆಯುವವರು ಅಧ್ಯಾತ್ಮ ವಿರೋಧಿಗಳೋ ಅಥವಾ ಧರ್ಮ ವಿರೋಧಿಗಳೋ ಆಗಿಬಿಡುವುದು ಮತ್ತೊಂದು ಚೋದ್ಯ. ಹಾಗಿದ್ದರೆ ಪುಸ್ತಕ ಓದಿ ಅಥವಾ ನಿರ್ದಿಷ್ಟ ಗುರುವಿನ ಶಿಷ್ಯತ್ವ ಸಂಪಾದಿಸಿ ಅಧ್ಯಾತ್ಮದ ಹಾದಿಯಲ್ಲಿ ಸಾಗಲು ಸಾಧ್ಯವಿಲ್ಲವೇ? ಖಂಡಿತಾ ಸಾಧ್ಯವಿದೆ.

ಅದರ ಅರ್ಥ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೋರ್ಸ್‌ಗಳು ಮತ್ತು ಜ್ಞಾನೋದಯದ ಭರವಸೆಯೊಂದಿಗೆ ಪುಸ್ತಕದಂಗಡಿಯ ಕಪಾಟಿನಲ್ಲಿ ರಾರಾಜಿಸುವ ಪುಸ್ತಕಗಳು ಇದನ್ನು ಮಾಡುತ್ತವೆ ಎಂದರ್ಥವಲ್ಲ.

ಒಂದನೇ ತರಗತಿಗೆ ಸೇರುತ್ತಲೇ ಹತ್ತನೇ ತರಗತಿಯಲ್ಲಿ ಕಲಿಯಬಹುದಾದ ವಿದ್ಯೆಗಳನ್ನೆಲ್ಲಾ ನಾವು ಗಳಿಸಲು ಸಾಧ್ಯವಿಲ್ಲ. ಇಂಥದ್ದನ್ನು ಸಾಧಿಸುವ ಕೆಲವು ಅಪರೂಪದ ಮೇಧಾವಿಗಳಿರುತ್ತಾರೆ. ಆದರೆ ಅದನ್ನು ಎಲ್ಲರಿಗೂ ಅನ್ವಯಿಸಲು ಸಾಧ್ಯವಿಲ್ಲ. ಈ ಮೇಧಾವಿಗಳ ಶಕ್ತಿಯ ಹಿಂದೆಯೂ ಒಂದು ಬಗೆಯ ಸಾಧನೆ ಇರುತ್ತದೆ. ಅದು ಗ್ರಹಿಕೆಯಲ್ಲಿ ಅವರಿಗೆ ಜನ್ಮದತ್ತವಾಗಿ ಲಭ್ಯವಾಗಿರುವ ಸಾಮರ್ಥ್ಯಗಳು. ಇವೆಲ್ಲವೂ ಅಸಾಮಾನ್ಯ ಉದಾಹರಣೆಗಳು ಮಾತ್ರ.

ಈ ಬಗೆಯ ಸುಲಭದ ಭ್ರಮೆಗೆ ಸಂಬಂಧಿಸಿದಂತೆ ಝೆನ್ ಮಾಸ್ಟರ್ ಒಬ್ಬರಿಗೆ ಸಂಬಂಧಿಸಿದ ದೃಷ್ಟಾಂತವೊಂದಿಗೆ. ಅವರ ಬಳಿ ಬರುವ ವಿದ್ಯಾರ್ಥಿಯೊಬ್ಬ ‘ನಾನು ಕಷ್ಟಪಟ್ಟು ಪ್ರಯತ್ನಿಸಿದರೆ ಎಷ್ಟು ಸಮಯದಲ್ಲಿ ಜ್ಞಾನೋದಯವಾಗಬಹುದು’ ಎಂಬ ಪ್ರಶ್ನೆ ಇಡುತ್ತಾನೆ. ಮಾಸ್ಟರ್ ಸಹಜವಾಗಿ ‘ಹತ್ತು ವರ್ಷಗಳು’ ಎನ್ನುತ್ತಾರೆ.

ಆ ಶಿಷ್ಯ ಅಲ್ಲಿಗೆ ಬಿಡುವುದಿಲ್ಲ ‘ಭಾರೀ ಕಷ್ಟಪಟ್ಟರೆ’ ಎನ್ನುತ್ತಾನೆ. ಮಾಸ್ಟರ್ ಉತ್ತರ ‘20 ವರ್ಷಗಳು’ ಎಂದಾಗುತ್ತದೆ. ಆತ ತನ್ನ ಕಷ್ಟಪಡುವ ಸಾಮರ್ಥ್ಯವನ್ನು ಹೇಳುತ್ತಾ ಹೋದಂತೆ ವರ್ಷಗಳು ಹೆಚ್ಚುತ್ತಲೇ ಹೋಗುತ್ತವೆ. ಈ ದೃಷ್ಟಾಂತ ಹೇಳುವ ಸತ್ಯ ಒಂದೇ. ಪ್ರತಿಯೊಂದಕ್ಕೂ ಅದರ ಸಹಜ ವೇಗವೊಂದಿದೆ. ಅದನ್ನು ಮೀರಲು ಹೊರಟರೆ ನಮ್ಮ ಪ್ರಯತ್ನ ವ್ಯರ್ಥವಾಗುತ್ತದೆ. ಗುರಿ ಸೇರುವ ಅವಧಿ ಹೆಚ್ಚಾಗುತ್ತಲೇ ಹೋಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT