ADVERTISEMENT

ಟಫ್ ಜತೆಗೆ ಸ್ಟೈಲಿಶ್

ಮಹೀಂದ್ರ ಟಿಯುವಿ 300

ದಯಾನಂದ ಎಚ್‌.ಎಚ್‌.
Published 30 ಸೆಪ್ಟೆಂಬರ್ 2015, 19:30 IST
Last Updated 30 ಸೆಪ್ಟೆಂಬರ್ 2015, 19:30 IST

ವಾಹನ ಪ್ರಪಂಚದಲ್ಲಿ ದಿನದಿನಕ್ಕೆ ಹೊಸ ಹೊಸ ಮಾದರಿಗಳು ರಸ್ತೆಗಿಳಿಯುತ್ತಲೇ ಇವೆ. ವಾಹನ ಮಾರುಕಟ್ಟೆಯಲ್ಲಿ ನಿನ್ನೆಗೆ ಹೊಸದೆನಿಸಿದ್ದ ಮಾದರಿ ನಾಳೆಗೆ ಹಳತು. ವಾಹನ ಮಾರುಕಟ್ಟೆಯಲ್ಲಿ ಪೈಪೋಟಿ ಹೆಚ್ಚಾಗಿರುವುದೂ ಇದಕ್ಕೆ ಕಾರಣ. 

ಗ್ರಾಹಕರನ್ನು ಸೆಳೆಯಲು ವಾಹನ ತಯಾರಿಕಾ ಕಂಪೆನಿಗಳು ಸಹ ಭಿನ್ನಭಿನ್ನ ಮಾದರಿಯ ವಾಹನಗಳನ್ನು ಬಿಡುಗಡೆ ಮಾಡುತ್ತಲೇ ಇವೆ. ಈಗ ಮಹೀಂದ್ರ ಕಂಪೆನಿಯು ಟಫ್‌ ಹಾಗೂ ಸ್ಟೈಲಿಶ್ ಆಗಿರುವ ಏಳು ಆಸನಗಳ ‘ಟಿಯುವಿ 300’ (ಟಫ್ ಯುಟಿಲಿಟಿ ವೆಹಿಕಲ್) ವಾಹನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಯುಟಿಲಿಟಿ ವೆಹಿಕಲ್ ಸರಣಿಯಲ್ಲಿ ಟಫ್ ಆಗಿರುವ ವಾಹನವನ್ನು ಪರಿಚಯಿಸುವ ಮೂಲಕ ಮಹೀಂದ್ರ ಕಂಪೆನಿ ಹೊಸ ಪೀಳಿಗೆಯ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ. ವಾಹನದ ಹೊರಮೈ ಟಫ್ ಆಗಿರುವ ಹಾಗೂ ಒಳಭಾಗ ಸ್ಟೈಲಿಶ್ ಆಗಿರುವ ಟಿಯುವಿಯನ್ನು ಕಂಪೆನಿ ಏಳು ಮಾದರಿ ಹಾಗೂ ಆರು ಬಣ್ಣಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಯುದ್ಧ ಬಳಕೆಯ ವಾಹನಗಳಿಂದ ಪ್ರೇರಣೆಗೊಂಡು ಟಫ್ ಆಗಿರುವ ಟಿಯುವಿ ತಯಾರಿಸಿರುವುದಾಗಿ ಹೇಳಿಕೊಂಡಿರುವ ಕಂಪೆನಿ ವಾಹನದ ಸ್ಟೈಲಿಶ್‌ ವಿನ್ಯಾಸದ ಕಡೆಗೂ ಹೆಚ್ಚು ಒತ್ತುಕೊಟ್ಟಿದೆ.

ಟಿಯುವಿ 1493 ಸಿ.ಸಿ. ಸಾಮರ್ಥ್ಯದ 2–ಸ್ಟೇಜ್ ಟರ್ಬೊಚಾರ್ಜರ್ ‘ಎಂಹಾಕ್’ ಡೀಸೆಲ್ ಎಂಜಿನ್ ಹೊಂದಿದೆ. ಇದರ ಹೊರಮೈ ಕಠಿಣವಾದ ಸ್ಟೀಲ್‌ನಿಂದ ತಯಾರಿಸಲಾಗಿದೆ. ಹಿಂದಿನ ಎಕ್ಸ್‌ಯುವಿ ಸರಣಿಗಿಂತ ಭಿನ್ನ ಹಾಗೂ ನವೀನವಾಗಿರುವ ಹೊರ ವಿನ್ಯಾಸ ಹೊಂದಿರುವ ಟಿಯುವಿ ಹೆಚ್ಚು ಗ್ರೌಂಡ್ ಕ್ಲಿಯರನ್ಸ್ ಹೊಂದಿದೆ. ಇದರಿಂದ ನಗರ ಪ್ರದೇಶಗಳಲ್ಲಷ್ಟೇ ಅಲ್ಲ ಗುಡ್ಡಗಾಡು ಪ್ರದೇಶದಲ್ಲೂ ಟಿಯುವಿ ಉತ್ತಮವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಸ್ಪೋರ್ಟಿ ಅಲಾಯ್ ವ್ಹೀಲ್, ಸ್ಟಾಟಿಕ್ ಬೆಂಡಿಂಗ್ ಹೆಡ್‌ಲ್ಯಾಂಪ್ ಹೊಂದಿರುವ ಟಿಯುವಿ ಮೌಲ್ಡೆಡ್ ಕವರ್‌ನ ಮೌಂಟೆಡ್ ಸ್ಪೇರ್ ವ್ಹೀಲ್ ಜತೆಗೆ ಲಭ್ಯವಿದೆ. ಟಫ್ ಜತೆಗೆ ಸುರಕ್ಷತೆಗೆ ಹೆಚ್ಚು ಒತ್ತು ನೀಡಿರುವ ಟಿಯುವಿಯಲ್ಲಿ ಫ್ರಂಟ್ ಕ್ರಾಷ್ ಸೆನ್ಸಾರ್ ಇದೆ. ಜತೆಗೆ ಮುಂದಿನ ಎರಡೂ ಆಸನಗಳ ಎದುರಿಗೆ ಏರ್‌ಬ್ಯಾಗ್ ರಕ್ಷೆಯೂ ಇದೆ. ಇದಲ್ಲದೆ ಸುರಕ್ಷತೆಯ ಬಗ್ಗೆ ಎಚ್ಚರಿಕೆ ಕೊಡುವ ಆಡಿಯೊ ಅಸಿಸ್ಟ್ ಕೂಡಾ ಟಿಯುವಿಯಲ್ಲಿದೆ.

ಸ್ಟೈಲಿಶ್ ಒಳ ವಿನ್ಯಾಸ
ಹೊರಗಿನಿಂದ ಟಫ್ ಆಗಿ ಕಾಣುವ ಟಿಯುವಿ ಒಳ ವಿನ್ಯಾಸ ಹೆಚ್ಚು ಸ್ಟೈಲಿಶ್ ಆಗಿದೆ. ಹಿಂದಿನ ಎರಡು ಫೋಲ್ಡಬಲ್ ಆಸನಗಳನ್ನು ಬಿಟ್ಟರೆ ಉಳಿದ ಐದು ಆಸನಗಳು ಆರಾಮದಾಯಕವಾಗಿವೆ. ಚಾಲಕರ ಆಸನ ಎತ್ತರ ಹೊಂದಾಣಿಕೆಯ ಆಯ್ಕೆ ಹೊಂದಿದೆ. ಆಸನಗಳು ಹಾಗೂ ಒಳವಿನ್ಯಾಸ ಐಷಾರಾಮಿ ಕಾರುಗಳ ಮಾದರಿಯಲ್ಲಿರುವುದು ಈ ವಾಹನದ ವಿಶೇಷ. ಆಧುನಿಕ ತಂತ್ರಜ್ಞಾನದ ಆಡಿಯೊ ಅಸಿಸ್ಟ್ ಹಾಗೂ ಸೌಂಡ್ ಸಿಸ್ಟಮ್ ಈ ಟಿಯುವಿಯಲ್ಲಿದೆ. 2–ಡಿನ್ ಆಡಿಯೊ, ಬ್ಲೂಟೂತ್, ಯುಎಸ್‌ಬಿ ಹೊಂದಿರುವ ಟಿಯುವಿ ಟ್ವಿನ್ ಪಾಡ್ ಇನ್‌ಸ್ಟ್ರುಮೆಂಟ್ ಕ್ಲಷ್ಟರ್ ಹೊಂದಿದೆ. ಟಫ್‌ ಜತೆಗೆ ಸ್ಟೈಲಿಶ್‌ ಆಗಿರುವ ಟಿಯುವಿಯ ಒಳ ವಿನ್ಯಾಸ ಯುವ ಪೀಳಿಗೆಯ ಜತೆಗೆ ಕುಟುಂಬದ ಎಲ್ಲರಿಗೂ ಮೆಚ್ಚುಗೆಯಾಗುವಂತಿದೆ.

ಹೆದ್ದಾರಿ ಜತೆಗೆ ಕಚ್ಚಾ ರಸ್ತೆಗೂ ಹೊಂದಿಕೊಳ್ಳುವಂತೆ ಈ ಟಿಯುವಿ ರೂಪಿಸಿರುವುದರಿಂದ ಹದಗೆಟ್ಟ ರಸ್ತೆಯಲ್ಲೂ ಇದರ ಕಾರ್ಯಕ್ಷಮತೆ ಉತ್ತಮವಾಗಿರಲಿದೆ. ಟಿಯುವಿ ಸರಣಿಯ ಏಳು ಮಾದರಿಗಳ ಜತೆಗೆ ಅಡ್ವೆಂಚರ್‌ ವಿನ್ಯಾಸದ ಆಯ್ಕೆಯೂ ಇದೆ. ಟಫ್‌ ಜತೆಗೆ ಅಡ್ವೆಂಚರ್‌ ಸ್ಪರ್ಶ ಸಿಕ್ಕರೆ ಈ ಟಿಯುವಿ ಯುದ್ಧಭೂಮಿಯ ಸಮರ ವಾಹನವನ್ನು ಹೋಲುತ್ತದೆ. ವಾಹನ ಕೊಳ್ಳುವ ಮುನ್ನ ಗ್ರಾಹಕರು ತಮ್ಮ ಅಗತ್ಯ ಹಾಗೂ ಆಸಕ್ತಿಗೆ ತಕ್ಕಂತೆ ವಿನ್ಯಾಸ ಬದಲಿಸಿಕೊಳ್ಳುವ (ಪರ್ಸನಲೈಸೇಷನ್‌) ಆಯ್ಕೆಯನ್ನು ಈಗಿನ ಬಹುತೇಕ ವಾಹನ ತಯಾರಿಕಾ ಕಂಪೆನಿಗಳು ನೀಡುತ್ತಿವೆ. ಅದೇ ರೀತಿ ಮಹೀಂದ್ರ ಕಂಪೆನಿ ಕೂಡಾ ತನ್ನ ಗ್ರಾಹಕರಿಗೆ ಟಿಯುವಿಯಲ್ಲಿ ಪರ್ಸನಲೈಸೇಷನ್‌ ಆಯ್ಕೆ ನೀಡಿದೆ. ವಿನ್ಯಾಸದ ಆಕ್ಸಸರೀಸ್‌ ಕೂಡುವಿಕೆ ಹಾಗೂ ಕಳೆಯುವಿಕೆಗೆ ತಕ್ಕಂತೆ ವಾಹನದ ಬೆಲೆಯಲ್ಲೂ ಏರಿಳಿತವಾಗಲಿದೆ.

ಟಿ4, ಟಿ4+, ಟಿ6, ಟಿ6+, ಟಿ6+ ಎಎಂಟಿ, ಟಿ8 ಮತ್ತು ಟಿ8 ಎಎಂಟಿ ಮಾದರಿಯ ಟಿಯುವಿ ಬೋಲ್ಡ್ ಬ್ಲಾಕ್, ಮೋಟನ್ ಆರೆಂಜ್, ಮೆಜೆಸ್ಟಿಕ್ ಸಿಲ್ವರ್, ಡೈನಮೊ ರೆಡ್, ವರ್ವ್ ಬ್ಲೂ, ಗ್ಲೇಷರ್ ವೈಟ್ ಬಣ್ಣಗಳಲ್ಲಿ ಲಭ್ಯವಿದೆ. ಟಿಯುವಿ ಸರಣಿಯ ಆರಂಭಿಕ ಬೆಲೆ ₹ 6.9 ಲಕ್ಷ.        

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.