ADVERTISEMENT

ಡಬ್ಬ ಒಡೆಯಬೇಕೆಂದರೆ ಜಾತ್ರೆಯೇ ಬರಬೇಕು

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 19:30 IST
Last Updated 19 ಜುಲೈ 2017, 19:30 IST

ನನ್ನ ಬಾಲ್ಯದ ದಿನಗಳವು. ಶಾಲೆಗೆ ಹೋಗುತ್ತಾ ಬಿಸಿಲು, ಮಳೆ, ಗಾಳಿಯನ್ನು ಆಸ್ವಾದಿಸುತ್ತಾ ಓರಗೆಯವರೊಂದಿಗೆ ಇಳಿ ಸಂಜೆವರೆಗೂ ಆಟವಾಡುತ್ತಾ ಮನೆಯಿಂದ ಬೈಗುಳದ ಕರೆ ಬಂದ ಮೇಲೆಯೇ ಮನೆ ತಲುಪುತ್ತಿದ್ದೆ.

ಮಾವಿನ ಕಾಯಿಯ ಕಾಲದಲ್ಲಿ ಮಾವಿನ ಮರದ ಸುತ್ತ, ಗೇರು ಬೀಜದ ಫಸಲಿನ ಸಂದರ್ಭ, ಗೇರು ಮರದ ಸುತ್ತ, ವರ್ಷದಲ್ಲಿ ಹಲವು ಬಾರಿ ತೊರೆಗಳಲ್ಲಿ ಸಿಗುವ ಮೀನಿಗಾಗಿ ಗಾಳ ಹಾಕುತ್ತಾ ರಜಾ ದಿನಗಳನ್ನು ಕಳೆಯುತ್ತಿದ್ದ ಸ್ವಚ್ಛಂದ ಬಾಲ್ಯವದು.ನಮ್ಮ ಬಾಲ್ಯದ ಸಂತಸಕ್ಕೆ ಇನ್ನೂ ಒಂದು ಸೇರ್ಪಡೆ ’ಜಾತ್ರೆ’. ನಮ್ಮೂರು ಅನಂತಾಡಿಯಲ್ಲಿ ಒಂದು ದೈವಸ್ಥಾನವಿತ್ತು. ವರ್ಷಕ್ಕೊಮ್ಮೆ ಅಲ್ಲಿ ಕಾಲಾವಧಿ ಜಾತ್ರೆ ‘ಮೆಚ್ಚಿಜಾತ್ರೆ’ಯೆಂದೇ ಪ್ರಸಿದ್ಧಿ.

ನಮ್ಮೂರಿಗೆ ಬಸ್ಸು ಬಂದದ್ದು ನೋಡಬೇಕಾದಲ್ಲಿ ಈ ಜಾತ್ರೆ ಬರಬೇಕು. ಬಗೆಬಗೆಯ ಆಟಿಕೆ, ಬಟ್ಟೆ ಬರೆಗಳು, ಸಿಹಿ ತಿಂಡಿ, ಹಣ್ಣು ಹಂಪಲು, ಕಂಪ್ಯೂಟರ್ ಜ್ಯೋತಿಷ್ಯ, ಪಾನಕ, ’ಗುಂಡುತಪಲೆ’ ಎಂಬ ದುಡ್ಡು ಸುಲಿಯುವ ಆಟ, ಸಿಡಿಮದ್ದಿನ ಪ್ರದರ್ಶನ, ಜೋಕಾಲಿಗಳು ನಮ್ಮೂರ ಜಾತ್ರೆಗೆ ಬಣ್ಣ ತುಂಬುತ್ತಿದ್ದವು.

ADVERTISEMENT

ಬೀಡಿ ಕಟ್ಟುತ್ತಿದ್ದ ನಮ್ಮ ಮನೆಯಲ್ಲಿ ಬಡತನವಿತ್ತು. ಒಂದು ರೂಪಾಯಿಗೂ ಭಾರಿ ತತ್ವಾರ. ನನ್ನಲ್ಲಿ ಒಂದು ಹಳೆಯ ನೈಸಿಲ್ ಪೌಡರಿನ ಡಬ್ಬ. ವರ್ಷದುದ್ದಕ್ಕೂ ಮನೆಯಿಂದ ಕೊಟ್ಟ, ರದ್ದಿ ಕಾಗದ ಮಾರಿ ಬಂದ, ಗೇರು ಮರದ ಬೀಜ ಮಾರಿ ಸಿಕ್ಕಿದ ಚಿಲ್ಲರೆ ಹಣವನ್ನು ಈ ಡಬ್ಬದಲ್ಲಿ ಹಾಕಿ ಗೋಡೆಗೆ ನೇತು ಹಾಕುತ್ತಿದ್ದೆ. ಹತ್ತು, ಇಪ್ಪತ್ತು ಪೈಸೆ, ನಾಲ್ಕಾಣೆ, ಎಂಟಾಣೆಗಳನ್ನು ಡಬ್ಬಕ್ಕೆ ಹಾಕುವುದೇ ಖುಷಿ. ಒಂದು ರೂಪಾಯಿ ಸಿಕ್ಕಿದರೆ ಸಂಭ್ರಮ.

ಈ ಡಬ್ಬ ಒಡೆದು ಲೆಕ್ಕ ಹಾಕುವ ದಿನ ಬರಬೇಕಾದರೆ, ನಮ್ಮೂರಿನ ’ಮೆಚ್ಚಿ ಜಾತ್ರೆ’ ಬರಬೇಕು. ಜಾತ್ರೆಯ ಮುನ್ನಾ ದಿನ ಡಬ್ಬ ತೆಗೆದು ನಾಣ್ಯಗಳನ್ನು ಲೆಕ್ಕ ಹಾಕುವ ಕುತೂಹಲವೇ ಬೇರೆ. ಈ ನಾಣ್ಯಗಳನ್ನು ಹತ್ತಿರದ ಅಂಗಡಿಗೆ ನೀಡಿ ನೋಟನ್ನಾಗಿ ಪರಿವರ್ತಿಸಿ ಮರುದಿನ ಜಾತ್ರೆಗೆ ಹೊರಡುತ್ತಿದ್ದೆ.

ಕೈಯಲ್ಲಿರುವ ಹಣ ಸೀಮಿತ. ಹೆಚ್ಚೆಂದರೆ 20–30 ರೂಪಾಯಿ. ಜಾತ್ರೆಗೆ ಹೋಗಿ ಯಾವುದನ್ನು ಕೊಳ್ಳುವುದು, ಯಾವುದನ್ನು ಬಿಡುವುದು ಎಂಬುದೇ ಕಗ್ಗಂಟು. ಅರ್ಥಶಾಸ್ತ್ರದ ಬೇಡಿಕೆ -ಬಯಕೆಗಳ ಸಿದ್ಧಾಂತ ಅಂದು ಅರಿವಿರಲಿಲ್ಲ. ಆದರೆ ಪದವಿಯಲ್ಲಿ ಅರ್ಥಶಾಸ್ತ್ರದ ಬಯಕೆ ಬೇಡಿಕೆಯ ಬಗ್ಗೆ ಓದುವಾಗ ಜಾತ್ರೆ ನೆನಪು ಸುಳಿದಾಡುತ್ತಿತ್ತು.

ಎಲ್ಲಾ ಆಟಿಕೆ, ತಿಂಡಿ ತಿನಿಸುಗಳು ಬೇಕೆಂಬ ಬಯಕೆ. ಆದರೆ ಬೆಲೆ ಕೇಳಿ ನಿರಾಶನಾಗುತ್ತಿದ್ದೆ. ಮಕ್ಕಳ ಕೈಯಲ್ಲಿ ಬಗೆಬಗೆ ಬಲೂನು ಕಂಡಾಗ, ಐಸ್‌ಕ್ರೀಂಗಳ ವ್ಯಾನ್‌ ಕಂಡಾಗ, ಕಂಪ್ಯೂಟರ್ ಜ್ಯೋತಿಷ್ಯಕಾರನ ಬಳಿ ಎರಡೂ ಕಿವಿಗೆ ಇಯರ್‌ಫೋನಿಟ್ಟು ಏನನ್ನೋ ಗುಟ್ಟಿನಲ್ಲಿ ಕೇಳಿಸುತ್ತಿರುವಾಗ ಅದನ್ನು ಕೇಳಬೇಕೆಂಬ ಆಸೆ, ಬಣ್ಣಬಣ್ಣದ ಮಿಠಾಯಿಗಳನ್ನು ಕಂಡಾಗ ಕೊಳ್ಳಬೇಕೆಂಬ ಆಸೆ.

ಈ ಆಸೆಗಣ್ಣಿನಿಂದಲೇ ಹತ್ತಾರು ಬಾರಿ ಜಾತ್ರೆಯಲ್ಲಿ ಸುತ್ತಾಡುವುದು, ಕುತೂಹಲದ ಕಣ್ಣಿನಿಂದ ನೋಡುವುದು, ಬೆಲೆ ಕೇಳುವುದು, ಮತ್ತೇ ಸುತ್ತಾಡುವುದು. ಜಾತ್ರೆಯಲ್ಲಿ ಹಲವು ಸುತ್ತು ಸುತ್ತಾಡಿದಾಗ ಆಗುತ್ತಿದ್ದ ಸುಸ್ತನ್ನು ಉಚಿತವಾಗಿ ಹಂಚುತ್ತಿದ್ದ ಮಜ್ಜ್ಜಿಗೆ, ಪಾನಕ ಪರಿಹರಿಸುತ್ತಿತ್ತು. ಮಧ್ಯಾಹ್ನದ ಹೊತ್ತು ಖರೀದಿ ಆರಂಭ.

ಎರಡು-ಮೂರು ಸ್ಟೀಲ್ ಲೋಟ, ಬಟ್ಟಲು, ಚಮಚ, ಒಂದೆರಡು ಆಟಿಕೆ ಖರೀದಿಸಿ ಮನೆಗೆ ಬರುತ್ತಿದ್ದೆ. ಒಂದಷ್ಟು ದಿನ ಅದೇ ಲೋಟ - ಬಟ್ಟಲಿನಲ್ಲಿ ನನ್ನೂಟ ಆಗುತ್ತಿತ್ತು. ಉಳಿದ ಚಿಲ್ಲರೆ ಹಣದಲ್ಲಿ ಒಂದಷ್ಟು ಕಡಲೆ ಮಿಠಾಯಿ, ಲಡ್ಡು ಖರೀದಿಸಿ ಮನೆಗೆ ಬರುತ್ತಿದ್ದೆ. ಮತ್ತೊಮ್ಮೆ ಕಡಲೆ ಮಿಠಾಯಿ ಕಾಣಬೇಕಾದರೆ, ಹೊಸ ಲೋಟ ಹಿಡಿಯಬೇಕಾದರೆ ಮಾರ್ಚ್ ಬರಬೇಕು, ಪೌಡರ್ ಡಬ್ಬ ಒಡೆಯಬೇಕು, ಜಾತ್ರೆಗೆ ಹೋಗಬೇಕು.

ಸುಮಾರು ಹದಿನೆಂಟು ವರುಷಗಳ ಬಳಿಕ ನಾನು ನನ್ನೂರ ಅದೇ ಜಾತ್ರೆಗೆ ನನ್ನ ಪುಟ್ಟ ಮಗನನ್ನು ಕರೆದುಕೊಂಡು ಹೋದೆ. ಚಿತ್ರಣ ಬದಲಾಗಿದೆ. ಜನಜಂಗುಳಿಯಿದೆ. ಹೊಸ ತಲೆಮಾರು ತುಂಬಿದೆ. ಈ ಬಾರಿ ಕಿಸೆಯಲ್ಲಿ ಹಣವಿತ್ತು. ಸುತ್ತಾಡುವ, ಖರೀದಿಸುವ ಮನಸ್ಸಿರಲಿಲ್ಲ ಅಷ್ಟೆ.

⇒-ಅಬ್ದುಲ್ ರಝಾಕ್ ಅನಂತಾಡಿ, ಬಂಟ್ವಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.