ADVERTISEMENT

ನಡುಗುವ ಚಳಿಯಲ್ಲಿ ಹೊರಗೆ ಮಲಗುವ ಮಕ್ಕಳು

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2017, 19:30 IST
Last Updated 1 ಮಾರ್ಚ್ 2017, 19:30 IST
ನಡುಗುವ ಚಳಿಯಲ್ಲಿ ಹೊರಗೆ ಮಲಗುವ ಮಕ್ಕಳು
ನಡುಗುವ ಚಳಿಯಲ್ಲಿ ಹೊರಗೆ ಮಲಗುವ ಮಕ್ಕಳು   

ಒಂದಿಷ್ಟು ಚಳಿ ಹೆಚ್ಚಾದರೆ ಸಾಕು, ಪುಟ್ಟ ಮಕ್ಕಳಿಗೆ, ಅರೆಕಣ್ಣು ಮಾತ್ರ ಕಾಣುವಂತೆ ಪೂರ್ತಿ ಸ್ವೆಟರ್, ಸ್ಕಾರ್ಫ್‌ ಸುತ್ತಿ, ಹೊರಗೆಲ್ಲೂ ಬಿಡದೆ, ಬೆಚ್ಚಗಿರುವಂತೆ ನೋಡಿಕೊಳ್ಳುವುದು ನಮ್ಮ ರೂಢಿ. ಅದರಲ್ಲೂ, ಹುಟ್ಟಿ ಕೆಲವೇ ತಿಂಗಳಾಗಿದ್ದರೆ, ಇನ್ನೂ ಕಟ್ಟುನಿಟ್ಟು. ಆದರೆ ಸ್ವೀಡನ್‌ನಲ್ಲಿ ಹೀಗಲ್ಲ. ಮೈ ಥರಗುಟ್ಟಿಸುವ ಥಂಡಿ ವಾತಾವರಣದಲ್ಲೂ ಪುಟ್ಟ ಮಕ್ಕಳನ್ನು ಟ್ರಾಲಿಯಲ್ಲಿ ಹೊರಗೆ ಮಲಗಿಸಿ ಪೋಷಕರು ಮನೆ ಒಳಗೆ ಕಾಫಿ ಹೀರುತ್ತಾ ಕುಳಿತಿರುತ್ತಾರೆ.

ಊಟದ ನಂತರ ಸಣ್ಣ ನಿದ್ದೆ ಮಾಡುವ ಸಮಯದಲ್ಲಿ, ಮಕ್ಕಳನ್ನು ಬಟ್ಟೆಯಿಂದ ಸುತ್ತಿ ಟ್ರಾಲಿಯಲ್ಲಿ ಹೊರಗೆ ಮಲಗಿಸುವುದು ಇಲ್ಲಿ ರೂಢಿಯೇ ಆಗಿಬಿಟ್ಟಿದೆ. ಮನೆಗಳ ಬಾಲ್ಕನಿಯಲ್ಲೋ, ಗಾರ್ಡನ್‌ನಲ್ಲೋ ಟ್ರಾಲಿಗಳಲ್ಲಿ ಮಕ್ಕಳು ಮಲಗಿರುವುದು ಇಲ್ಲಿ ಸಹಜ ಸಂಗತಿ. ಕೆಫೆಟೇರಿಯಾ, ಮಳಿಗೆಗಳ ಹೊರಗೂ ಮಕ್ಕಳು ಮಲಗಿದ ಟ್ರಾಲಿಗಳ ಸಾಲೇ ಕಾಣುತ್ತದೆ.

ಇದೇನೂ ನೆನ್ನೆ ಮೊನ್ನೆಯ ಅಭ್ಯಾಸವಲ್ಲ. 1940ರಿಂದೀಚೆಗೆ ಅಲ್ಲಿ ಶಿಶುಮರಣ ಸಂಖ್ಯೆ ಏರಿಕೆಯಾದ ಮೇಲೆ ಹೀಗೆ ಮಲಗಿಸುವ ಪರಿಪಾಠ ಹೆಚ್ಚಾಗಿದೆ. ಮನೆಯಲ್ಲಿನ ಗಾಳಿಯ ಗುಣಮಟ್ಟದ ಕೊರತೆ ಶಿಶುಮರಣಕ್ಕೆ ಒಂದು ಕಾರಣ ಎಂದು ತಿಳಿದುಬಂದಿದ್ದರಿಂದ ಮಕ್ಕಳನ್ನು ಒಂದು ಗಂಟೆ ಅವಧಿಯಾದರೂ ಹೀಗೆ ಹೊರಗೆ ಮಲಗಿಸುವುದನ್ನು ರೂಢಿಸಿಕೊಂಡಿದ್ದಾರೆ. ಮಕ್ಕಳನ್ನು  ಥಂಡಿಯಲ್ಲಿ ಮಲಗಲು ಬಿಡುವುದು ಆರೋಗ್ಯಕರ ಎಂದು ಇಲ್ಲಿ ಭಾವಿಸಲಾಗುತ್ತದೆ. –30 ಡಿಗ್ರಿ ಸೆಲ್ಸಿಯಸ್‌ ವಾತಾವರಣದಲ್ಲೂ ಹೊರಗೆ ಇರಿಸುವ ಉದಾಹರಣೆಗಳು ಇವೆ. ಮಗು ಹುಟ್ಟಿದ 2 ವಾರದ ನಂತರ ಹೀಗೆ ಸ್ವಲ್ಪ ಚಳಿಯಲ್ಲಿ ಮಲಗಿಸುವುದನ್ನು ಅನುಸರಿಸುತ್ತಾರೆ.

ತಾಜಾ ಗಾಳಿಗೆ ತೆರೆದುಕೊಂಡಷ್ಟೂ ಮಕ್ಕಳು ಆರೋಗ್ಯಕರವಾಗಿ ಬೆಳೆಯುತ್ತಾರೆ. ಅವರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಜೊತೆಗೆ ನೆಗಡಿ, ಕೆಮ್ಮಿನಂಥ ಸಮಸ್ಯೆಗಳೂ ಬರುವುದಿಲ್ಲ ಎಂಬುದು ಹೊರಗೆ ಮಲಗಿಸಲು ಕಾರಣಗಳು. ಮನೆ ಒಳಗೆ ಮಕ್ಕಳು ಒಂದು ಗಂಟೆ ಅವಧಿ ಮಲಗಿದರೆ, ಹೊರಗೆ ಎರಡರಿಂದ ಮೂರು ಗಂಟೆ ಅವಧಿ ಆರಾಮಾಗಿ ನಿದ್ರಿಸುತ್ತವೆ ಎಂಬ ಅಂಶವೂ ಇದಕ್ಕೆ ಪ್ರೇರಣೆಯಾಗಿದೆ.

ಮನೆಯಲ್ಲಷ್ಟೇ ಅಲ್ಲ, ಡೇ ಕೇರ್ ಸೆಂಟರ್‌ಗಳಲ್ಲಿ, ಪ್ರಿ ಸ್ಕೂಲ್‌ಗಳಲ್ಲೂ ಮಕ್ಕಳು ಹೊರಗೆ ಥಂಡಿಯಲ್ಲಿ ಮಲಗಿ ನಿದ್ದೆಗೆ ಜಾರಿರುವುದನ್ನೂ ಕಾಣಬಹುದಂತೆ... 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.