ADVERTISEMENT

ಪರರಿಗಾಗಿ ಈ ಬದುಕು...

ಪೃಥ್ವಿರಾಜ್ ಎಂ ಎಚ್
Published 29 ಜುಲೈ 2015, 19:30 IST
Last Updated 29 ಜುಲೈ 2015, 19:30 IST

ಹಲೋ ಡಾಕ್ಟರ್‌ ಟೀಂ
‘ಹಲೋ ಡಾಕ್ಟರ್‌ 24x7’ ಇದು ಒಡಿಶಾದ ಯುವ ವೈದ್ಯರು ಕಟ್ಟಿದ ಸಂಸ್ಥೆ. ಈ ವೈದ್ಯಕೀಯ ಸೇವಾ ಸಂಸ್ಥೆ ಆರಂಭವಾಗಿದ್ದು 2010ರಲ್ಲಿ. ಕಳೆದ ಐದು ವರ್ಷಗಳಲ್ಲಿ ಭುವನೇಶ್ವರ ಮಹಾನಗರಕ್ಕೆ ಮಾತ್ರ ವೈದ್ಯಕೀಯ ಸೇವೆಯನ್ನು ಸೀಮಿತಗೊಳಿಸಲಾಗಿತ್ತು. ಇದೀಗ ಈ ಸೇವೆಯನ್ನು 12 ಜಿಲ್ಲೆಗಳಿಗೆ ವಿಸ್ತರಿಸಲಾಗಿದ್ದು, ದಿನದ 24 ಗಂಟೆಯೂ ಸೇವೆ ಲಭ್ಯವಿದೆ ಎನ್ನುತ್ತಾರೆ ಹಲೋ ಡಾಕ್ಟರ್‌ನ ಸಂಸ್ಥಾಪಕ ವೈದ್ಯ ಡಾ.ಲಲಿತ್‌ ಮಣಿಕ್‌. ಲಲಿತ್‌ ಮೂಲತಃ ಒಡಿಶಾದವರು. ವೈದ್ಯಕೀಯ ಪದವಿ ಪಡೆದ ಬಳಿಕ ಭುವನೇಶ್ವರದಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ವೃತ್ತಿ ಜೀವನ ಆರಂಭಿಸಿದರು.

   ಹಗಲು ರಾತ್ರಿಯ ವ್ಯತ್ಯಾಸವಿಲ್ಲದೆ ಎರಡು ವರ್ಷ ಬಡಜನರ ಸೇವೆ ಮಾಡಿದರು. ದುರ್ಬಲರು, ಅಂಗವಿಕಲರು ಮತ್ತು ವಯೋವೃದ್ಧರು ಆಸ್ಪತ್ರೆಗೆ ಬರುವಾಗ ಅನುಭವಿಸುತ್ತಿದ್ದ ತೊಂದರೆಯನ್ನು ಕಂಡು ಮರುಗಿದವರು. ನಾವೇಕೆ ದುರ್ಬಲರ ಮನೆಗೇ ಹೋಗಿ ಚಿಕಿತ್ಸೆ ನೀಡಬಾರದೆಂಬ ಆಲೋಚನೆ ಮಾಡಿದ ಡಾ.ಲಲಿತ್‌ ಈ ಬಗ್ಗೆ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿಯವರನ್ನು ಭೇಟಿ ಮಾಡಿ ಚರ್ಚಿಸುತ್ತಾರೆ. ಈ ಪ್ರಸ್ತಾವನೆಯನ್ನು ಕಾರ್ಯರೂಪಕ್ಕೆ ತರುವಂತೆ ಮನವಿ ಮಾಡುತ್ತಾರೆ. ಈ ಯೋಜನೆಯನ್ನು ನಾವು ರೂಪಿಸಲು ಸಾಧ್ಯವಿಲ್ಲ, ಇದನ್ನು ಸರ್ಕಾರ ಮಾಡಬೇಕು ಎಂದು ಆ ವೈದ್ಯಾಧಿಕಾರಿ ನಯವಾಗಿ ತಿರಸ್ಕರಿಸಿದ್ದರು. ಮುಂದೆ ದುರ್ಬಲರ ಮನೆ ಬಾಗಿಲಿಗೆ ತೆರಳಿ ಚಿಕಿತ್ಸೆ ನೀಡುವಂತಹ ‘ಹಲೋ ಡಾಕ್ಟರ್‌’ ವೈದ್ಯಕೀಯ ಸಂಸ್ಥೆಯನ್ನು ತೆರೆದರು.

20 ಲಕ್ಷ ರೂಪಾಯಿ ಬಂಡವಾಳದೊಂದಿಗೆ ಆರಂಭವಾದ ಈ ವೈದ್ಯಕೀಯ ಸಂಸ್ಥೆ ಇಂದು 12 ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ರೋಗಿಗಳು ಹಲೋ ಡಾಕ್ಟರ್‌ಗೆ ಫೋನ್‌ ಮಾಡಿದ ಕೂಡಲೇ ವೈದ್ಯರು ರೋಗಿಗಳು ಇರುವ ಸ್ಥಳಕ್ಕೆ ಬಂದು ಚಿಕಿತ್ಸೆ ನೀಡುತ್ತಾರೆ. ಇದಕ್ಕಾಗಿ ರೋಗಿಗಳು ಪ್ರಯಾಣ ಮತ್ತು ಚಿಕಿತ್ಸೆ ವೆಚ್ಚವನ್ನು ಭರಿಸಬೇಕಾಗುತ್ತದೆ. ವಯೋವೃದ್ಧರು, ಅಂಗವಿಕಲರು ಮತ್ತು ಗರ್ಭಿಣಿಯರಿಗೆ ಚಿಕಿತ್ಸೆ ವೆಚ್ಚದಲ್ಲಿ ರಿಯಾಯಿತಿ ನೀಡಲಾಗುತ್ತಿದೆ. ಪ್ರತಿ ದಿನ 400ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. 18 ಜನ ವೈದ್ಯರಿರುವ ತಂಡ ಚಿಕಿತ್ಸೆ ನೀಡಲು ಸದಾ ಸಿದ್ಧವಾಗಿರುತ್ತದೆ ಎನ್ನುತ್ತಾರೆ ಡಾ.ಲಲಿತ್‌.
www.hellodoctor24x7.com

***
 ಮೊಬಿಬಿಟ್‌ ತಂಡ

ಮಧ್ಯಪ್ರದೇಶದ ಇಂದೋರ್‌ನ ಪ್ರಮೋದ್‌ ಪಾಂಡೆ, ಅಲೋಕ್‌ ವಾಣಿ, ಜಿತೇಂದ್ರ ರಾಜಾರಾಮ್‌ ‘ಮೊಬಿಬಿಟ್‌’ ಎಂಬ ‘ಕುಟುಂಬ ರಕ್ಷಣೆ’ಯ ಮೊಬೈಲ್‌ ಅಪ್ಲಿಕೇಶನ್‌ ಅಭಿವೃದ್ಧಿಪಡಿಸುವ ಮೂಲಕ ದೇಶದ ಗಮನ ಸೆಳೆದಿದ್ದಾರೆ. ಇವರು ರೂಪಿಸಿರುವ ಈ ಮೊಬೈಲ್‌ ಅಪ್ಲಿಕೇಶನ್‌ ಅನ್ನು ಸುಮಾರು 1.5ಲಕ್ಷ ಜನ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಅಮೆರಿಕದಲ್ಲಿ ಭಾರಿ ಜನಪ್ರಿಯತೆ ಪಡೆದಿರುವ ‘life360’ ಆ್ಯಪ್‌ ಮಾದರಿಯಲ್ಲೇ ಇದನ್ನು ರೂಪಿಸಲಾಗಿದೆ. ದೂರದ ಊರುಗಳಲ್ಲಿ ಕೆಲಸ ಮಾಡುತ್ತಿರುವ ಅಥವಾ ಓದುತ್ತಿರುವ ಮಹಿಳೆಯರ ರಕ್ಷಣೆಗಾಗಿಯೇ ಇದನ್ನು ರೂಪಿಸಲಾಗಿದೆ ಎನ್ನುತ್ತಾರೆ ಪ್ರಮೋದ್‌ ಪಾಂಡೆ.

ಬಳಕೆದಾರರು ಮೊದಲು ಈ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು. ನಂತರ ಅವರ ಕುಟುಂಬದವರು ಹಾಗೂ ಗೆಳೆಯರ ಫೋನ್‌ ನಂಬರ್‌ಗಳನ್ನು ಈ ಆ್ಯಪ್‌ನಲ್ಲಿ ನೋಂದಣಿ ಮಾಡಬೇಕು. ಮೊಬಿಬಿಟಿ ಆ್ಯಪ್‌ ಅನ್ನು  ಗೂಗಲ್‌ ಮ್ಯಾಪ್‌ನಲ್ಲಿ ಟ್ರ್ಯಾಕ್‌ ಮಾಡಿರುವುದರಿಂದ ಬಳಕೆದಾರರು ಎಲ್ಲಿದ್ದಾರೆ, ಯಾವ ಸ್ಥಳದಲ್ಲಿದ್ದಾರೆ, ಯಾವ ರಸ್ತೆಯಲ್ಲಿ ಇದ್ದಾರೆ ಎಂಬುದನ್ನು ಎಸ್‌ಎಂಎಸ್‌ ಮೂಲಕ ಕುಟುಂಬದವರು ಮತ್ತು ಸ್ನೇಹಿತರಿಗೆ ನಿಖರವಾಗಿ ಮಾಹಿತಿ ರವಾನಿಸುತ್ತದೆ. ಈ ಆ್ಯಪ್‌ ಬಳಕೆಯಿಂದ ಪೋಷಕರು ದೂರದ ಊರಿನಲ್ಲಿರುವ ಮಗಳ ಚಿಂತೆ ಇಲ್ಲದೆ ನೆಮ್ಮದಿಯಾಗಿ ನಿದ್ದೆ ಮಾಡಬಹುದು ಎನ್ನುತ್ತಾರೆ ಪ್ರಮೋದ್‌.

   ಒಂದು ವೇಳೆ ತೊಂದರೆಗೆ ಸಿಲುಕಿದಾಗ ‘ಸಮಸ್ಯೆ’ ಬಟನ್‌ ಒತ್ತಿ ಹಿಡಿದರೆ ಸಾಕು ಪೋಷಕರು ಮತ್ತು ಸ್ನೇಹಿತರಿಗೆ ‘not safe’ ಎಂಬ ಮಾಹಿತಿ ರವಾನೆಯಾಗುತ್ತದೆ. ಸಂಬಂಧಪಟ್ಟವರು ಕೂಡಲೇ ಸ್ಥಳೀಯ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿ ತೊಂದರೆಗೆ ಸಿಲುಕಿದವರನ್ನು ರಕ್ಷಿಸಬಹುದು. ಈ ಆ್ಯಪ್‌ ಮೂಲಕ ಕಳ್ಳರು ಮತ್ತು ಅಪಹರಣಕಾರರನ್ನು ಸುಲಭವಾಗಿ ಹಿಡಿಯಬಹುದು. ಪ್ರಸ್ತುತ ಒಂದು ಲಕ್ಷಕ್ಕೂ ಹೆಚ್ಚು ಜನರು ಈ ಆ್ಯಪ್‌ ಬಳಕೆ ಮಾಡುತ್ತಿದ್ದಾರೆ. ಇದು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಉಚಿತವಾಗಿ ಲಭ್ಯವಿದೆ.
www.locatemap.in

***

ರೈತರ ಆಶಾಕಿರಣ ‘ಲೀಫ್‌’
ಇಂದು ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿವೆ. ರೈತರು ಬೆಳೆದ ಬೆಳೆಗೆ ಸರಿಯಾಗಿ ಬೆಲೆ ಸಿಗದೆ, ಮಾಡಿಕೊಂಡ ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದೇ ಕಾರಣಕ್ಕೆ, ರೈತರ ಬೆಳೆಗೆ ನಿಖರ ಬೆಲೆ ಸಿಗಬೇಕು ಎಂಬ ಸದುದ್ದೇಶದೊಂದಿಗೆ ‘ಲಾರೆನ್ಸ್‌ಡೆಲ್‌ ಆಗ್ರೋ ಪ್ರೋಸೆಸಿಂಗ್‌’ ಎಂಬ ಕಂಪೆನಿ ಆರಂಭವಾಗಿದೆ. ಇದರಿಂದ ಸುಮಾರು 3000ಕ್ಕೂ ಹೆಚ್ಚು ರೈತರ ಬದುಕು ಹಸನಾಗಿದೆ ಎಂದರೆ ತಪ್ಪಾಗಲಾರದು.

   ಕೇರಳ ಮೂಲದ ಪಾಲತ್‌ ವಿಜಯರಾಘವನ್‌ ಕಟ್ಟಿದ ಈ ಕಂಪೆನಿ ಕರ್ನಾಟಕ ಸೇರಿದಂತೆ ಆಂಧ್ರ, ತಮಿಳುನಾಡು, ಕೇರಳದಲ್ಲಿ ಕಾರ್ಯನಿರ್ವಹಿಸುತ್ತಿದೆ. ರೈತರು ಬೆಳೆದ ತರಕಾರಿ ಅಥವಾ ಹಣ್ಣುಗಳನ್ನು ಅವರ ತೋಟಕ್ಕೆ ಹೋಗಿ ಖರೀದಿ ಮಾಡಲಾಗುವುದು. ಇದರಿಂದ ರೈತರು ಮಾರುಕಟ್ಟೆಗೆ ಹೋಗುವ ಸಾಗಣೆ ವೆಚ್ಚ ಉಳಿಯುವುದಲ್ಲದೆ ಸ್ಥಳೀಯ ಮಾರುಕಟ್ಟೆಯಲ್ಲಿ ನೀಡಬೇಕಾಗಿದ್ದ ಕಮಿಷನ್‌ ಕೂಡ ಉಳಿಯುತ್ತದೆ. ರೈತರಿಂದ ನೇರವಾಗಿ ಖರೀದಿ ಮಾಡಿದ ತರಕಾರಿ ಮತ್ತು ಹಣ್ಣುಗಳನ್ನು ‘ಓಜೋನ್‌ ವಾಶ್‌’ ತಂತ್ರಜ್ಞಾನದ ಮೂಲಕ ಸ್ವಚ್ಛಗೊಳಿಸಲಾಗುವುದು. ಹೀಗೆ ಸ್ವಚ್ಛ ಮಾಡಿದ ತರಕಾರಿ ಮತ್ತು ಹಣ್ಣುಗಳನ್ನು ವೈಜ್ಞಾನಿಕವಾಗಿ ಪ್ಯಾಕ್‌ ಮಾಡಿ ‘ಲೀಫ್’ ಎಂಬ ಬ್ರ್ಯಾಂಡ್‌ ಮೂಲಕ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎನ್ನುತ್ತಾರೆ ಕಂಪೆನಿಯ ಬ್ರ್ಯಾಂಡ್‌ ಡೆವಲಪರ್‌ ರಘುವೀರ್‌ ಬದ್ರಿನಾಥ್‌.

ರೈತರ ಬೆಳೆಯನ್ನು ಮೊದಲ ದರ್ಜೆ ಮತ್ತು ಎರಡನೇ ದರ್ಜೆ ಎಂದು ವರ್ಗೀಕರಿಸದೇ ಎಲ್ಲವನ್ನು ಖರೀದಿ ಮಾಡುವುದು ವಿಶೇಷ. ಖರೀದಿ ಮಾಡಿದ 24 ಗಂಟೆಯೊಳಗೆ ರೈತರಿಗೆ ಹಣ ಪಾವತಿ ಮಾಡಲಾಗುವುದು. ಕಂಪೆನಿಯ ಕೋಲ್ಡ್‌ ಸ್ಟೋರೇಜ್‌ ವಾಹನಗಳು ತೋಟಕ್ಕೆ ಬಂದು ತರಕಾರಿ ಮತ್ತು ಹಣ್ಣುಗಳನ್ನು ತುಂಬಿಕೊಂಡು ಹೋಗುತ್ತವೆ. ನಂತರ ಅವುಗಳನ್ನು ಶುದ್ಧೀಕರಿಸಿ ಗ್ರಾಹಕರ ಉಪಯೋಗಕ್ಕಾಗಿ ಮಾರುಕಟ್ಟೆಗೆ ಕಳುಹಿಸಲಾಗುವುದು. ಲಾರೆನ್ಸ್‌ಡೆಲ್‌ ಕಂಪೆನಿಯು ರೈತರ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಿದೆ.

ಸುಮಾರು ಮೂರು ಸಾವಿರಕ್ಕೂ ಹೆಚ್ಚು ರೈತರು ಇದರ ಲಾಭ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮಹಾರಾಷ್ಟ್ರದಲ್ಲೂ ಲೀಫ್‌ ಬ್ರ್ಯಾಂಡ್‌ ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುವುದು ಎನ್ನುತ್ತಾರೆ ಬದ್ರಿನಾಥ್‌. ಪ್ರತಿ ದಿನ 25 ಸಾವಿರ ಕೆ.ಜಿ ತರಕಾರಿ ಮತ್ತು ಹಣ್ಣುಗಳು ಲೀಫ್‌ ಬ್ರ್ಯಾಂಡ್‌ ಅಡಿಯಲ್ಲಿ ಮಾರುಕಟ್ಟೆಗೆ ಬರುತ್ತಿದ್ದು, ಕಂಪೆನಿಯ ವಾರ್ಷಿಕ ಆದಾಯ 22 ಕೋಟಿ ರೂಪಾಯಿ ದಾಟಿದೆ. ರೈತರ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಿರುವ ಈ ಕಂಪೆನಿಯ ಸಾಧನೆ ನಿಜಕ್ಕೂ ಶ್ಲಾಘನೀಯ.
http://www.lawrencedale.com/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.