ADVERTISEMENT

ಪ್ರಿಯ ನಿನಾದ ಪ್ರಾಣವೇ

ಪ್ರಜಾವಾಣಿ ಪ್ರೇಮಪತ್ರ ಸ್ಪರ್ಧೆ–2017

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2017, 19:30 IST
Last Updated 8 ಮಾರ್ಚ್ 2017, 19:30 IST
ಪ್ರಿಯ ನಿನಾದ ಪ್ರಾಣವೇ
ಪ್ರಿಯ ನಿನಾದ ಪ್ರಾಣವೇ   

ಎಡಿಸನ್ ಕೊಡುಗೆಯ ಬೆಳಕಿದ್ದರೂ ಈ ಪತ್ರ ಬರೆವಾಗ ದೀಪದ ಬೆಳಕಿನಲ್ಲಿ ನಾಚುತ್ತಾ, ಮಂದಸ್ಮಿತೆಯಾಗಿ ಈ ಪತ್ರ ಬರೀತಿದೀನಿ. ಈ ಪತ್ರ ಬರೆದಾಗ ಸಿಗರೇಟ್ ಹಚ್ಚಿ, ಎಣ್ಣೆ ಹಾಕ್ಕೊಂಡು ಟೈಟಾಗಿ ಮಲಗದೆ ಫ್ರೆಂಡ್ಸ್ ಜೊತೆ ಕಾಲ ಕಳಿತಿದ್ಯ ಅಂಥ ಗೊತ್ತು. ಒಂದ್ ಫೋನ್ ಮಾಡಕ್ ಏನ್ ದಾಡಿ ನಿನಗೆ, ಲೋ ಈಡಿಯಟ್ಟು ನೀನಿಲ್ಲದೆ ಏನ್ ಬದುಕೋಕೆ ಆಗಲ್ಲ, ಕಣ್ಣೀರು ಹಾಕ್ಕೊಂಡು ಕೂತ್ಕೊಳೊ ಟೆರಿಫಿಕ್ ಹುಡುಗಿ ನಾನಲ್ಲ.

ಒಂದು ಕ್ಯಾಂಡಿ ಕ್ರಷ್ ಗೇಮ್, ಯೂ ಟ್ಯೂಬ್, ಒಂದ್ ಮೂವಿ, ಸಂಜೆ ಸ್ನಾಕ್ಸ್‌ಗೆ ಫ್ರೆಂಡ್ಸ್, ಎಫ್‌ಬಿ, ಟ್ವಿಟ್ಟರ್... ಟೈಂ ಪಾಸ್ ಆಗ್ಲಿಕ್ಕೆ ಸಾಮಾಜಿಕ ಆಯಾಮಗಳು. ಆದ್ರೆ ಇಷ್ಟೇನಾ ಬದುಕು? ಇವ್ಯಾವುಗಳು ನೀ ಜೊತೆಯಾಗಿದ್ದಾಗ ನೀಡೋ ಭಾವಾನುಭೂತಿ, ರಸನಿಮಿಷದ ಸಂತಸದ ಉತ್ತುಂಗಕ್ಕೆ ಸರಿಸಾಟಿಯಾಗ್ಲಿಲ್ಲ. ಇರುವ ಒಂದೇ ಜೀವನವನ್ನು ಖುಷಿಯಾಗಿ, ಸಾತ್ವಿಕ ಸಾರ್ಥಕ್ಯ ನವಿರಲ್ಲಿ ಕಳೆಯಬೇಕು. ನಲಿವಿರದ ಸಂತಸ, ನನ್ನವನಿಲ್ಲದ ಕ್ಷಣ...

ಎಲ್ಲೋ ಸುರಿದ ಮಳೆ ನಿನ್ನ ನೆನಪು ತರುತ್ತೆ, ಬಿಸಿಲಾದರೆ ವಿರಹ, ಚಳಿಯಾದರೆ ಬೆಚ್ಚನೆಯ ಪ್ರಣಯ ಭಾವ. ಹೀಗೆ ಯಾವುದೋ ಒಂದು ಕಲ್ಪನೆಗೆ ನಿನ್ನ ಸಿಕ್ಕಿಸಿಕೊಂಡು ಪತ್ರ ಬರೆಯುತ್ತಾ ಕುಳಿತು ಬಿಡುವುದರಲ್ಲಿ ನಿನ್ನ ಧ್ಯಾನಸ್ಥೆಯಾಗ್ಬಿಡ್ತಿನಿ. ನಂಗೊತ್ತು ಕಣ್ಲಾ ಇಷ್ಟೆಲ್ಲಾ ನಿನಗೆ ನನ್ನ ಪ್ರೀತ್ಸೋವಷ್ಟು ಟೈಂ ಇಲ್ಲ ಅಂತ. ನಾ ನಿನಗೆ ನೀ ನನಗೆಂಬ ಷರತ್ತುಬದ್ಧ ಭಾವಗಳಿಗೆ ಓಗೊಡಲಿಲ್ಲ.

ನೀನು ನನ್ನ ಪ್ರೀತಿಸ್ತ್ಯಾ, ಒಲವಿನ ಮಳೆಗರಿತಿ ಅಂತ ನೆಚ್ಚಿಕೊಂಡು ಪ್ರೀತಿಸ್ಲಿಲ್ಲಾ ಕಣೋ. ನೀ ಪ್ರೀತ್ಸು, ಬಿಡು ನಾನು ನನ್ನ ಪ್ರೀತಿಯ ರೂಪಕಗಳು, ಒಲವಿನ ಬುತ್ತಿಯನ್ನು ಏಳೇಳು ಜನ್ಮಕ್ಕೂ ಉಸಿರಾಗಿಸಿಕೊಂಡು ಬದುಕ್ಬಿಡ್ತೀನಿ. ಮುದ್ದು ನೆನಪಲ್ಲಿ ಇರ್ತೀನಿ. ಹೀಗೆ ಪಟಪಟ ಅಂತ ಬೈಬ್ಬೇಕು ಅನ್ಸುತ್ತೆ. ಆದರೆ ಸಾವಿರ ಭಾವಗಳಿದ್ದರು, ಹೆಕ್ಕಿ ಬರೆಯಲು ಕೂತಾಗ ಪದಗಳೇ ಬರಲೊಲ್ಲವು ಕಣಯ್ಯ.

ಯಾಕೋ ಮಾರಾಯ, ನೀನೊಬ್ಬ ಮಾತ್ರವೇ ಈ ಹೃದಯಕ್ಕೆ ನನ್ನವನು ಅನ್ನಿಸುತ್ತೆ. ನಿನ್ನ ಮಡಿಲಲ್ಲಿ ಮಲಗಿ ಬೆಳದಿಂಗಳ ತಂಗಾಳಿಯಲ್ಲಿ ಪ್ರಕೃತಿಯನ್ನ ಸವಿಯಬೇಕು, ನನ್ನ ಗರ್ಭದಲ್ಲಿ ಜೀವ ತಳೆವ ನಿನ್ನ ಮೂರ್ತ ರೂಪದ ಬಗ್ಗೆ ಮಾತನಾಡಬೇಕೆನ್ನುವ ಬಯಕೆಗಳು, ಅದೆಷ್ಟೋ ಕನಸುಗಳು ನಿಶ್ಶಬ್ದವಾಗಿ ಎದೆಯಲ್ಲಿ ಅಲೆದು ಹಾದು ಹೋಗುತ್ತಿವೆ. ಹೇಳುವುದಾದರು ಎಲ್ಲ ಭಾವವನ್ನು ಗೀಚಲು ಭಾಷೆ ನಿಲುಕುವುದಿಲ್ಲ.

ಪ್ರತಿ ಕ್ಷಣ, ಪ್ರತಿ ಗಳಿಗೆ, ಬೆಳಿಗ್ಗೆ ಎದ್ದ ಮೊದಲ ನೆನಪು, ಮಲಗುವಾಗ ಅದರದಲ್ಲಿನ ನಗು, ಖುಷಿಯ ಕ್ಷಣದಲ್ಲಿ, ದುಃಖದಲ್ಲಿ, ಕೆಲಸದಲ್ಲಿ, ಅಷ್ಟೆಲ್ಲಾ ಯಾಕೆ ದೊರೆ ಎಕ್ಸಾಮ್ ಹಾಲ್‌ನಲ್ಲೂ ಬಿಡದೆ ಕಾಡುವುದೇನು ನೀನು. ಇದರಿಂದ ಮುಕ್ತಿ ಯಾವಾಗ ಕರುಣಿಸುವೆಯೋ ಮಾಧವ. ಜೊತೆಯಲ್ಲಿ ಇದ್ರೆ ಇಷ್ಟೆಲ್ಲಾ ಕಾಟ ಕೊಡೋಕೆ ಆಗಲ್ಲ ಅಂತ ದೂರ ಇರೋದೇ. ಲೋ ಯಾಕೋ ಇಷ್ಟೊಂದು ಹುಚ್ಚು ಹಿಡಿಸ್ತಿದ್ಯಾ... ಪ್ರತಿ ಕ್ಷಣವೂ ಹೀಗೆ ಕಾಡಬೇಡ ಕಣೋ.

ದೃಷ್ಟಿ ತೆಗೆಯಲೇ ನಿನ್ನ ಅದರಗಳಿಗೆ,
ಗರ್ಭ ಧರಿಸಿ ಕುಳಿತುಕೊಳ್ಳಲೇ ನಿನ್ನ
ಹೃದಯದ ಮಂದಿರದಲ್ಲಿ, ನಿನ್ನದೇ
ಅಮೂರ್ತ ರೂಪಕಕ್ಕೆ ಹೊಸ ಜೀವವೈಭವದ
ಸೆಲೆ ತುಂಬಿ ಭುವಿಗೆ ಸ್ವಾಗತಿಸಲೇ
ಅವಳ ಪಿಸು ಮಾತಿಗೂ ದನಿಯಾಗುವ
ನನಗೆ ಅವಳ ಮಡಿಲ ಪ್ರೀತಿ ನೀಡುವೆಯ
ಕಥೆಗಳ ಸಾಗರದಿ ಅವಳ
ಅಂಗೈಯಲ್ಲಿ ನಾ ತೇಲಬೇಕು.


ಹೀಗೆ ಒಮ್ಮೊಮ್ಮೆ ಎಚ್ಚರವಾದಾಗ ಇದ್ದಕ್ಕಿದ್ದ ಹಾಗೆ ಮದುವಣಗಿತ್ತಿ ಆಗ್ಬಿಡ್ತೀನಿ. ಪಚ್ಚೆ ಮಲ್ಲಿಗೆ ರೇಶಿಮೆಯ ಸೀರೆ ಉಟ್ಟು, ತುಸು ಹೂ ಮುಡಿದು, ರಾಶಿ ಹಸಿರು ಬಳೆ ತೊಟ್ಟು, ಸಣ್ಣಗೆ ಕುಂಕುಮವಿಟ್ಟು, ನನ್ಬ ಸೆರಗಿಗೆ ನಿನ್ನ ಶಲ್ಯಕ್ಕೆ ಗಂಟಾಕಿ, ಬಿಳಿ ಅಂಗಿ ತೊಟ್ಟ ನಿನ್ನ ಕಿರುಬೆರಳ ಬಳಸಿ ನಿಂತೆನೆಂದರೆ ನಾನೇ ಸೌಭಾಗ್ಯವತಿ. ನನ್ನ ಕಾಲಿಗೆ ಕಾಲುಂಗುರವಿಟ್ಟು ಸಪ್ತಪದಿ ತುಳಿದು ನಮ್ಮ ಬಾಳಿನ ಬಾಗಿಲನ್ನ ತೆರೆಯಬೇಕು. ಆಮೇಲೆ ಅರುಂಧತಿ ನಕ್ಷತ್ರ ನೋಡಬೇಕಂತೆ.

ಆ ಕ್ಷಣದಲ್ಲಿ ಇಬ್ಬರ ಕೈಗಳು ಆಗಸದೆಡೆಗೆ ಮುಖ ಮಾಡಿದರು, ಇಬ್ಬರು ಕಂಗಳು ಮಿಲನವಾಗಿ ನಾ ನಿನ್ನೆ ನೋಡುತ್ತಿರುವ, ನೀ ನನ್ನ ನೋಡುತ್ತಿರುವ ಆ ಮಧುರ ಕ್ಷಣಗಳು ಹಾಗೆ ಸೆರೆಯಾಗಬೇಕು ಕಣೋ. ನನ್ನ ಬದುಕಿನ ನಕ್ಷತ್ರವನ್ನ ಬಿಟ್ಟು ಬೇರೇನ ನೋಡಲಯ್ಯ ದೊರೆ. ಹಿಡಿದ ಕೈ ಬಾಳಿನ ಬೆಸುಗೆಯ ಸಂಕೇತ. ನನಗೀಗಲೂ ತುಂಬಾ ಇಷ್ಟವಾದ ಕನಸೆಂದರೆ ನಿನ್ನ ಬೆರಳಿಗೆ ಬೆರಳು ಸುತ್ತಿ ಕೈ ಹಿಡಿದು ನನ್ನೀಡಿ ಜೀವನ ಸವೆಸಬೇಕು.

ADVERTISEMENT

ಬರುವಾಗ ನಿನ್ನ ಪಾದ ಮುಟ್ಟಿ ಮುತ್ತು ಕೊಟ್ಟು, ಆಶೀರ್ವಾದ ಪಡೆದು ಬರಬೇಕೆಂದು ಶಾಸ್ತ್ರಗಳೆಲ್ಲ ಮುಗಿದು ನಿನ್ನ ಪಕ್ಕದಲ್ಲಿ ಸತಿಯಾಗಿ ಬರುತ್ತಿರುತ್ತೇನೆ ಖುಷಿಯಿಂದ. ಹೀಗೆ ಕನಸು ಕಂಡು ನಕ್ಕ ದಿನಗಳೆಷ್ಟೋ.

ಮದುವೆಯಾದ ಮೇಲೆ ಅಷ್ಟೇನಾ?? ಮುಂದಕ್ಕೆ ಬೇಡ ಬಿಡು. ಆದ್ರೆ ನೀನು ಮಾತ್ರ ಫೋನ್ ಮಾಡಿದಾಗಲೆಲ್ಲ ನನ್ನ ಡವ್‌ಗಳು, ಒಂದೆರಡು ಮದುವೆ ಅಂತ್ಯಲ್ಲ, ಸ್ವಲ್ಪ ಆದ್ರು ಕರುಣೆ ಇದ್ಯೇನೊ ನಿಂಗೆ ನನ್ ಮೇಲೆ. ತಮಾಷೆ ಅಂತ ಹೇಳ್ತೀಯಾ. ಆದ್ರೆ ಮೇಲೆ ಅಸ್ತು ಅನ್ನೋ ದೇವತೆಗಳು ಇರ್ತಾವಂತೆ. ನೀ ಮಾತಾಡುವ ಸಮಯದಲ್ಲಿ ನನ್ನ ಮೇಲಿನ ಕೋಪಕ್ಕೆ ಅಸ್ತು ಅಂದ್ಬಿಟ್ರೆ ನಾನೆಲ್ಲಿಗೆ ಹೋಗ್ಲಿ? ಗಂಡಸರಿಗೇನು ಗೊತ್ತು ಗೌರಿ ದುಃಖ ಹೇಳು.

ನನಗೆ ಗೊತ್ತು ನಾನೊಬ್ಬಳು ಭಾವನೆಗಳಲ್ಲೇ ಬದುಕುವ ಹುಚ್ಚು ಭಾವ ಜೀವಿ ಎಂದುಕೊಳ್ಳುತ್ತಿ ಎಂದು. ಮನಸ್ಸಿಗೂ ತಿಳಿದಿದೆ ನಿನ್ನ ಕೈ ಹಿಡಿದು ನಡೆಯುವಷ್ಟು ಸ್ವತಂತ್ರವು ನನಗಿಲ್ಲ, ಸಂಗಾತಿಯಾಗಿ ಬಾಳುವ ಸುದಿನವೂ ಮುಂದಿಲ್ಲ, ಇತ್ತರಿಸುವ ಪನ್ನೀರನ್ನ ಒರೆಸಲು ನೀ ಬರಲೊಲ್ಲೆ ಎಂದು.

ಯಾವುದೋ ಖಾಲಿ ಎದೆಯಲ್ಲಿ ನಿನ್ನ ಪ್ರತಿಬಿಂಬವನ್ನೇ ಇಟ್ಟು, ಇದೇ ಪ್ರೀತಿ, ಇದು ನನ್ನೆದೆಯ ಜೀವಾಳ ಅಂದುಕೊಂಡು ಬದುಕು ಸಾಗಿಸುತ್ತಿರುವೆ. ನಿನ್ನ ಸ್ಪರ್ಶದ ಸೋಪಾನವು ನನಗೊಲಿಯುವುದಿಲ್ಲ.

ಆದರೂ ನಿನಗೆ ನನ್ನ ಪ್ರೀತಿ ಅರ್ಥವಾಗುವುದಿಲ್ಲ. ಹನಿ ಕನಸಿನಲ್ಲಿ ಆಲಿಂಗನ, ಮತ್ತಿನ ಮಳೆ, ಭಾವನೆಯ ಅರಮನೆಯನ್ನೇ ಮೈದಳೆದುಕೊಂಡೆ. ಈ ತಿರಸ್ಕಾರ ಭಾವಗಳಿಗೆ ಇಷ್ಟೆಲ್ಲಾ ಕಮರುವ ಕನಸುಗಳು ರಾತ್ರಿಗೆ ಬೇಕಿದ್ದವಾ ಎಂದೆನಿಸುತ್ತಿದೆ. ಹೇಳಿದರೆ ಸಂಬಂಧನ್ನೇ ಕಡಿದುಕೊಳ್ಳುವಷ್ಟು ಕೋಪ ನಿನಗೆ. ಕಡಿದರೆ ಜೀವದ ನಾದವೇ ಹೋದಷ್ಟು ತಾಪ ನನಗೆ. ಇಲ್ಲಿ ಯಾರೂ ಪರಿಪೂರ್ಣರಾಗಿ ಸಂಪೂರ್ಣ ಒಬ್ಬರಿಗೆ ಮಾತ್ರವೇ ದಕ್ಕುವುದಿಲ್ಲ.

ಈ ಜನ್ಮಕ್ಕೆ ನನಗೆ ಸಿಕ್ಕಿದ್ದಿಷ್ಟೇ. ಹೋಗಲಿ ಬಿಡು ಇಲ್ಲಿ ಮತ್ತೊಂದು ಹೃದಯ ನಮ್ಮಷ್ಟೇ ಪ್ರೀತಿಸಬೇಕೆಂಬ ನಿಯಮವೇನೂ ಇಲ್ಲವಲ್ಲ. ಕನಸಿನಲ್ಲಿ ಮಾತ್ರವೇ ದಕ್ಕಿದವನು ನೀ. ಯಾಕಿಷ್ಟು ಯಾತನೆ, ನೋವು ಹುಡುಗ. ಒಂದೊಮ್ಮೆ ದಕ್ಕದ ಪ್ರೀತಿ ಬಯಸಿದ್ದು ನನ್ನದೇ ತಪ್ಪೇನೋ ಎನಿಸುತ್ತದೆ. ಅಲ್ವೊ ನೀ ನನಗೆ ಜೀವನದ ಡೆಪಾಸಿಟ್ ಇಡುವೆ ಎಂದರೆ ಮಾತ್ರ ನಿನ್ನನ್ನು ಪ್ರೀತಿಸಬೇಕ?  ಇಲ್ಲವಾದರೆ ಇನ್ನೆಲ್ಲೋ ಹುಡುಕಲೇನೋ? ವಿಧಿಯ ಆಟವಿದೆಂದು ನೆಪ ಹೇಳಿ ತಲೆ ತಪ್ಪಿಸಿಕೊಳ್ಳುವ ಮಂದಿಗೆ ನಾನೇಕೆ ಕೈ ಜೋಡಿಸಲಿ.

ಅಮೃತವಯ್ಯ ನಿನ್ನ ಮನ, ದೇಗುಲದ ಮಂದಿರ
ಅದುವೇ ನಂದನವನ.
ಕನಸನ್ನಲ್ಲದೆ ಇನ್ನಾವ ಸ್ಥಾನ ಬೆಚ್ಚಗಿನ ಜಾಗ ಕಲ್ಪಿಸಲಿ,
ಮನದಲ್ಲೆ ಮರವಾಗಿ ತಂಪನೆರೆದೆಯಲ್ಲ
ಬೇರು ಬಿಟ್ಟು ಆವಾಹಿಸಿಕೊಂಡೆಯಲ್ಲ.
ಕಡಿದರು, ಉರುಳಿದರು ನೋವು ನನಗಲ್ಲವೇ,
ಸತ್ವವೇನಿರುತ್ತದೆ ಬಾಳಿಗೆ ನೀನಿಲ್ಲದೆ.  ನಿನ್ನವಳಾದ ಮಲ್ಲಿಗೆ ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.