ADVERTISEMENT

ಬದಲಾವಣೆಯ ಸವಾರಿಯಲ್ಲಿ ಇನ್ನೋವಾ ಕ್ರಿಸ್ಟ್‌

ಯತೀಶ್ ಕುಮಾರ್ ಜಿ.ಡಿ
Published 29 ಜೂನ್ 2016, 19:30 IST
Last Updated 29 ಜೂನ್ 2016, 19:30 IST
(ಚಿತ್ರಗಳು ಲೇಖಕರವು)
(ಚಿತ್ರಗಳು ಲೇಖಕರವು)   

ದಶಕಗಳ ಹಿಂದೆ ರಸ್ತೆಗಿಳಿದ ಇನ್ನೋವಾ ಹಲವು ಸಲ ಸಣ್ಣಪುಟ್ಟ ಬದಲಾವಣೆಗೆ ಒಳಗಾಗಿತ್ತು. ಆದರೀಗ ಭಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಇನ್ನೋವಾ ಕ್ರಿಸ್ಟ್‌ ಆಗಿ ಬದಲಾಗಿದೆ.

ಭಾರತದ ವಾಹನ ಮಾರುಕಟ್ಟೆಯು ಈಗ ಕೊಂಚ ಮಿನಿ ಎಸ್‌ಯುವಿ ಹಾಗೂ ಎಸ್‌ಯುವಿಯತ್ತ ವಾಲುತ್ತಿದೆ. ಹೀಗಾಗಿ ಕ್ರಿಸ್ಟ್‌ಗೆ ಎಸ್‌ಯುವಿ ನೋಟವನ್ನು ನೀಡಲಾಗಿದೆ. ಎತ್ತರಿಸಿದ ಬಾನೆಟ್‌ ಹೊಂದಿರುವ ವಾಹನ ಮುಂಭಾಗದಿಂದ ನೋಡಿದರೆ ಎಸ್‌ಯುವಿ ರೀತಿ ಕಾಣುತ್ತದೆ.

ಗಡಸು ಮತ್ತು ಸದಭಿರುಚಿಯ ಹೊರಮೈ, ಹೊಸದಾಗಿ ಅಭಿವೃದ್ಧಿಪಡಿಸಿರುವ ಒಳಮೈ, ಐಶಾರಾಮಗಳನ್ನು ಹೊಂದಿ ಭಾರತದ ವಾಹನ ಪ್ರಪಂಚಕ್ಕೆ ಹೊಸ ಮಾನದಂಡವನ್ನು ಸೃಷ್ಟಿಸಿದೆ ಎನ್ನಬಹುದು.

ಕಳೆದ ತಿಂಗಳು ಮಾರುಕಟ್ಟೆ ಪ್ರವೇಶಿಸಿದ ವಾಹನವನ್ನು ಸುಮಾರು 500 ಕಿ.ಮೀ ಪರೀಕ್ಷಾರ್ಥ ಓಡಾಟ ನಡೆಸುವ ಅವಕಾಶ ದೊರಕಿತ್ತು. ಅದಕ್ಕೆ ಆರಿಸಿಕೊಂಡಿದ್ದು ಚಾಮರಾಜನಗರದ ಬಿಳಿಗಿರಿರಂಗನಾಥಸ್ವಾಮಿ ಹುಲಿ ಅಭಯಾರಣ್ಯವನ್ನು.

ಬೆಂಗಳೂರು– ಮೈಸೂರು ರಾಜ್ಯ ಹೆದ್ದಾರಿ, ಕೊಳ್ಳೇಗಾಲದ ಮೇಲೆ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ಹಾಗೂ ಕಾಡಿನ ರಸ್ತೆಯ ಚಾಲನೆಯ ನಂತರ ಹಳೆಯ ಮಾದರಿಗೂ ಹೊಸ ಮಾದರಿಗೂ ಸಾಕಷ್ಟು ವ್ಯತ್ಯಾಸವಿದೆ ಎನ್ನುವುದು ಸ್ಪಷ್ಟವಾಯಿತು.

ಸ್ವಯಂಚಾಲಿತ ಗೇರ್‌ಗಳ ಮಾದರಿಗೆ 2800 ಸಿ.ಸಿ ಎಂಜಿನ್‌ ಅಳವಡಿಸಿದ್ದರೆ, 5 ಗೇರ್‌ಗಳ ಸಾಮಾನ್ಯ ವಾಹನಕ್ಕೆ 2400 ಸಿ.ಸಿ ಎಂಜಿನ್‌ ಅಳವಡಿಸಿದ್ದಾರೆ. ಟೆಸ್ಟ್‌ಡ್ರೈವ್‌ಗೆ ಬಳಸಿದ ಸ್ವಯಂಚಾಲಿತ ಗೇರ್‌ ವಾಹನದಲ್ಲಿ  ಇಕೋ ಮತ್ತು ಪವರ್ ಡ್ರೈವ್ ಇದ್ದು, ಮೈಲೇಜ್‌ ನೀಡುವ ಇಕೋದಲ್ಲೂ ಪಿಕ್‌ಅಪ್‌ ಸಾಕಷ್ಟಿತ್ತು.

ಆದರೆ ಐಶಾರಾಮಿಗೆ ಹತ್ತಿರವಿರುವ ವಾಹನದಲ್ಲಿ ಕಾಣುವ ಗೇರ್‌ ಶಿಫ್ಟ್ ಕೊರತೆ ಎದ್ದು ಕಾಣುತ್ತದೆ. ಗೇರ್‌ ಶಿಫ್ಟ್ ಬದಲು ಪವರ್‌ ಡ್ರೈವ್ ಬಳಸುವ ಅನಿವಾರ್ಯತೆ ಉಂಟಾಗುತ್ತದೆ. ಇದೊಂದು ಕೊರತೆ ಎನ್ನಬಹುದು.

ಹೊಸ ವಾಹನದಲ್ಲಿ ಇಂಧನ ದಕ್ಷತೆ ಉತ್ತಮಗೊಂಡಿದೆ. ಪ್ರಯಾಣ ಸುಖಕರ,  ಡ್ರೈವಿಂಗ್ ಸುಖಕರ, ಕ್ಯಾಬಿನ್‌ನಲ್ಲಿ ಶಬ್ದ ಕಡಿಮೆಯಾಗಿದೆ, ಮುಂಬದಿ ಹಾಗೂ ಮಧ್ಯದ ಸೀಟುಗಳು ಐಶಾರಾಮಿ ಎನ್ನಬಹುದು. ಆದರೆ ಕೊನೆಯ ಸೀಟುಗಳನ್ನು ಮಕ್ಕಳಿಗೆ ಮೀಸಲಿರಿಸಬೇಕಾಗುತ್ತದೆ. 

ಕೊನೆಯ ಸೀಟಿನಲ್ಲಿ ಆರಾಮವಾಗಿ ಕೂರಲು ಆಗುವುದಿಲ್ಲ. ತುಂಬಾ ಇಕ್ಕಟ್ಟಾಗಿದೆ. ಕಾಲಿಗೂ ಸ್ಥಳಾವಕಾಶ ಕಡಿಮೆ. ಹಳೆಯ ಮಾದರಿಯಲ್ಲಿದ್ದ ಸಮಸ್ಯೆ ಇಲ್ಲಿಯೂ ಮುಂದುವರೆದಿದೆ.

ಡ್ಯಾಶ್‌ಬೋರ್ಡ್‌ ಸಂಪೂರ್ಣ ಹೊಸದಾಗಿದ್ದು, ಮಧ್ಯದಲ್ಲಿ 4.2 ಇಂಚಿನ  ಮಲ್ಟಿ ಇನ್‌ಫರ್ಮೇಷನ್ ಡಿಸ್‌ಪ್ಲೇ ವ್ಯವಸ್ಥೆಯಿದೆ. ಇದರಲ್ಲೇ ರಿವರ್ಸ್ ಕ್ಯಾಮೆರಾ, ಜಿಪಿಎಸ್‌ ನಕ್ಷೆ, ಮನರಂಜನೆ, ಎಚ್ಚರಿಕೆ ಸಂದೇಶ ದೊರಕುತ್ತದೆ.

ಹಳೆಯ ವಾಹನದಲ್ಲಿ ರೇಡಿಯೊ ಕಳಪೆಯಾಗಿದ್ದು, 50–60 ಕಿ.ಮೀಗೆ ಸಂಕೇತಗಳನ್ನು ಗ್ರಹಿಸುವ ಶಕ್ತಿ ಕಡಿಮೆಯಾಗುತ್ತಿತ್ತು. ಹೊಸ ವಾಹನದಲ್ಲಿ ಕೊಂಚ ಸುಧಾರಣೆಯಾಗಿದೆ. ಆದರೆ ಮದ್ದೂರು ಬಳಿ ಬಂದಂತೆ ಬೆಂಗಳೂರು ಹಾಗೂ ಮೈಸೂರು ಎಫ್‌ಎಂಗಳನ್ನು ಏಕ ಕಾಲದಲ್ಲಿ ಗ್ರಹಿಸಿ ಕೇಳುಗರಿಗೆ ಕಿರಿಕಿರಿಯಾಗುತ್ತಿತ್ತು.

ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ ಮತ್ತು ಬ್ರೇಕ್ ಅಸಿಸ್ಟ್ ಇರುವ ವಾಹನದಲ್ಲಿ ಬ್ರೇಕ್‌ ಬಹಳ ಸೂಕ್ಷ್ಮ ಸಂವೇದಿ ಎಂದೇ ಹೇಳಬಹುದು. ಬೆಲ್ಟ್‌ ಹಾಕದಿದ್ದರೆ ಬ್ರೇಕ್‌ ಕೊಂಚ ಬಲವಾಗಿ ಒತ್ತಿದರೂ ಮುಂಬದಿ ಇಲ್ಲವೇ ಹಿಂಬದಿ ಪ್ರಯಾಣಿಕರ ಮುಖಕ್ಕೆ ಏಟು ಬೀಳುವುದು ಖಚಿತ.

ಹಿಲ್-ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್ ವ್ಯವಸ್ಥೆಯಿದ್ದು, ಏರು ದಾರಿಯಲ್ಲಿ ವಾಹನ ಚಾಲು ಮಾಡುವಾಗ ಬಹಳ ಉಪಯುಕ್ತವಾಗುತ್ತದೆ.
ಕ್ರಿಸ್ಟ್‌ ಬೆಲೆ ₹ 14 ಲಕ್ಷದಿಂದ ಆರಂಭವಾಗಿ ₹ 21 ಲಕ್ಷ (ಬೆಂಗಳೂರಿನ ಎಕ್ಸ್-ಶೋರೂಂ)ದವರೆಗೆ ಇದೆ.

ಇಷ್ಟು ಹಣ ನೀಡಿದ ಮೇಲೆ ಕನಿಷ್ಠ ಕೊನೆಯ ಆಸನಗಳಲ್ಲಿ ಮತ್ತಷ್ಟು ಸುಧಾರಣೆಯಾಗಬೇಕಿತ್ತು ಎನಿಸುತ್ತದೆ. ಆದರೂ ಈಗಿನ ಮಾರುಕಟ್ಟೆಯಲ್ಲಿ ಮಲ್ಟಿ ಯುಟಿಲಿಟಿ ವಾಹನಗಳ ವರ್ಗದಲ್ಲಿ ಕ್ರಿಸ್ಟ್‌ಗೆ ಪೈಪೋಟಿ ನೀಡುವ ವಾಹನವಿಲ್ಲ.

ಗಮನಾರ್ಹ ಸುಧಾರಣೆಗಳು
ಸ್ವಯಂಚಾಲಿತ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌, ಕೀ ಇಲ್ಲದೆ ಎಂಜಿನ್‌ ಚಾಲು ಆಗುವ ವ್ಯವಸ್ಥೆ, ಸುತ್ತುವರಿಯುವ ಪ್ರಕಾಶ, ಕೂಲಿಂಗ್ ಸಹಿತವಾದ ಮೇಲಿನ ಗ್ಲೌವ್ ಬಾಕ್ಸ್, ಒಂದು ಸ್ಪರ್ಶಕ್ಕೇ ಜಾರುವ 2ನೇ ಸಾಲಿನ ಸೀಟ್, ಸುಲಭವಾಗಿ ಜಾರುವ ಮುಂದಿನ ಪ್ರಯಾಣಿಕರ ಸೀಟ್, ಉತ್ತಮ ಸಸ್ಪೆನ್ಷನ್‌, ಸ್ಟೇರಿಂಗ್‌ನಲ್ಲೇ ಮನರಂಜನಾ ವ್ಯವಸ್ಥೆ ನಿಯಂತ್ರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT