ADVERTISEMENT

ಬದುಕು ಕಲೆಯಾಗಲಿ

ಪಶ್ಚಿಮದ ಅರಿವು /ಹಾರಿತಾನಂದ
Published 4 ಅಕ್ಟೋಬರ್ 2017, 19:30 IST
Last Updated 4 ಅಕ್ಟೋಬರ್ 2017, 19:30 IST

ನಾವು ನೋಡುತ್ತಿರುವ ಜಗತ್ತನ್ನು ಒಟ್ಟಾಗಿ ಸೃಷ್ಟಿ ಎಂದು ಕರೆಯಬಹುದು. ಸೃಷ್ಟಿ ಎಂದರೆ ಉಂಟುಮಾಡಿದ್ದು‌, ಈ‌ ಮೊದಲು ಇರದ ವಿವರಕ್ಕೆ ಈಗ ಇರವನ್ನು ಒದಗಿಸಿದ್ದು; ಆಕಾರವನ್ನು ಕೊಡುವುದು - ಹೀಗೆಲ್ಲ ಅರ್ಥ ಹೇಳಬಹುದು. ಜಗತ್ತನ್ನು ಹೀಗೆ ತನ್ನಿಂದಲೇ ಸೃಷ್ಟಿಸಿದವನು ದೇವರು ಎಂಬ ಕಲ್ಪನೆ ಎಷ್ಟೋ ಜನರಲ್ಲೂ ಸಂಸ್ಕೃತಿಗಳಲ್ಲೂ ಇದೆ. ಇದು ಸತ್ಯವೇ ಅಥವಾ ಸುಳ್ಳೇ ಎಂಬ ಚರ್ಚೆಯನ್ನು ಪಕ್ಕಕ್ಕೆ ಇಡೋಣ; ದೇವರು ಎಂಬುವವನೇ ಈ ಬ್ರಹ್ಮಾಂಡವನ್ನು ಸೃಷ್ಟಿಸಿದ ಎಂಬುದನ್ನು ಸದ್ಯಕ್ಕೆ ಒಪ್ಪೋಣ. ಸೃಷ್ಟಿಕರ್ತನಾದ ದೇವರನ್ನು ‘ಒಬ್ಬ ಕಲಾವಿದ’ ಎಂದು ನಮ್ಮ ಸಂಸ್ಕೃತಿಯಲ್ಲಿ ಕರೆಯಲಾಗಿದೆ. ಇದೊಂದು ಸ್ವಾರಸ್ಯಕರವಾದ ವಿವರ.

ಜಗತ್ತು ಎಷ್ಟೊಂದು ವೈವಿಧ್ಯಮಯ ಅಲ್ಲವೆ? ಇಷ್ಟು ವೈವಿಧ್ಯದಿಂದ‌ ಕೂಡಿರುವ ಜಗತ್ತನ್ನು ಸೃಷ್ಟಿಸಿದವನನ್ನು ಕಲಾವಿದ ಎಂದು ಕರೆದಿರುವುದು ‌ಯುಕ್ತವಾಗಿಯೇ ಇದೆಯೆನ್ನಿ. ಕಲೆ ಎಂದರೆ ವೈವಿಧ್ಯ; ಅದೂ ಕ್ಷಣಕ್ಷಣವೂ ಹೊಸತಾಗುವ ವೈವಿಧ್ಯ; ಮಾತ್ರವಲ್ಲ, ಈ ವಿವಿಧತೆಯಲ್ಲಿ ಸೌಂದರ್ಯ ಇರುತ್ತದೆ; ಅದು ನಮಗೆ‌ ಸಂತೋಷವನ್ನು ಕೊಡುತ್ತದೆ. ಹೀಗಾಗಿಯೇ ನಮಗೆ ಕಲೆ ಎಂದರೆ ಸೆಳೆತ. ಎಂದರೆ ಕಲೆಯಿಂದ‌ ನಮಗೆ ಸಂತೋಷ‌ ಸಿಗುತ್ತದೆ. ಈ‌ ಸಂತೋಷವನ್ನೇ ನಮ್ಮ ಆಲಂಕಾರಿಕರು‌ ಆನಂದ‌ ಎಂದು ಕರೆದರು; ರಸಾನುಭವ ಎಂದು ಕರೆದರು.

ಬ್ರಿಸ್ಟರ್ ಗಿಸೆಲಿನ್ ( Brewster Ghiselin) ಅವರ ‘ದಿ ಕ್ರಿಯೇಟಿವ್ ಪ್ರೋಸೆಸ್’ ( The Creative Process) ಪುಸ್ತಕವನ್ನು ಓದುತ್ತಿದ್ದೆ. ಕಲೆಗೆ ಮೂಲವಾಗಿರುವ ‘ಸೃಜನಶೀಲತೆ’ಯ ಬಗ್ಗೆ ಇದರಲ್ಲಿ ಹಲವರು ಕಲಾವಿದ’ರ‌ ಕಾಣ್ಕೆಗಳಿವೆ. ನಮಗೆ ಸಾಮಾನ್ಯವಾಗಿ ‘ಕಲಾವಿದ’ ಎಂದರೆ ಸಂಗೀತಗಾರನೋ ಚಿತ್ರಕಾರನೋ ಅಷ್ಟೆ. ಆದರೆ ಈ ಪುಸ್ತಕದಲ್ಲಿ ಇರುವುದು ಕೇವಲ ಸಂಗೀತಗಾರ, ಚಿತ್ರಗಾರನಷ್ಟೇ ಅಲ್ಲ; ವಿಜ್ಞಾನಿ, ಗಣಿತಜ್ಞ, ಮನೋವಿಜ್ಞಾನಿ, ಕವಿ, ವಿಮರ್ಶಕ- ಹೀಗೆ ನಾನಾ ಕ್ಷೇತ್ರದ ಪ್ರತಿಭಾಶಾಲಿಗಳಿದ್ದಾರೆ. ಹೀಗಾಗಿ ನಾವಿಲ್ಲಿ ಆಲೋಚಿಸಬೇಕಾದದ್ದು ‘ಕಲಾವಿದ ಎಂದರೆ ಯಾರು?’ ‘ಕಲೆ ಎಂದರೆ ಏನು?’
ನಮ್ಮ ಜೀವನದ ಎಲ್ಲ ವಿವರಗಳಲ್ಲೂ ಕಲೆ ‘ಅಡಗಿರುತ್ತದೆ’.

ADVERTISEMENT

ನಾವು ಅದನ್ನು ನೋಡುವ ಕಣ್ಣನ್ನೂ ಕಟ್ಟುವ ಕೈಯನ್ನೂ ಪಡೆಯಬೇಕಾಗುತ್ತದಷ್ಟೆ. ತಾತ್ವಿಕವಾಗಿ ನೋಡಿದರೂ ಈ ಮಾತಿನ ಪ್ರಸ್ತುತತೆ ಗೊತ್ತಾಗುತ್ತದೆ. ಇಡಿಯ ವಿಶ್ವವೇ ದೇವರ ಕಲೆ ಆದಾಗ, ಇಲ್ಲಿಯ ಬಿಡಿ ವಿವರಗಳೂ ಕಲೆ ಆಗಲೇಬೇಕಲ್ಲವೆ? ಹೀಗಾಗಿ ನಾವು ಕಲಾವಿದರಾಗಲು ಯಾವುದೋ ಒಂದು ಪ್ರತ್ಯೇಕ ವಿದ್ಯೆಯನ್ನು ಮಾತ್ರವೇ ಕಲಿಯಬೇಕಿಲ್ಲ.
(ಹೀಗೆಂದು‌ ಅಂಥವನ್ನು ಕಲಿಯಬಾರದು ಎಂಬುದು ನಮ್ಮ ನಿಲುವಲ್ಲ). ನಮ್ಮ ಉಸಿರಾಟದ ಕ್ರಮದಿಂದ ಹಿಡಿದು ನಾವು ಮಾಡುವ ಅಡುಗೆಯವರೆಗೂ, ನಮ್ಮ ಮಾತಿನಿಂದ ‌ಮೊದಲುಗೊಂಡು ನಮ್ಮ‌ ನಡಿಗೆಯವರೆಗೂ - ಯಾವುದೂ ಕಲೆಯಾಗಬಹುದು.

ನಾವು ಮಾಡುವ ಕೆಲಸದಲ್ಲಿ ಪ್ರೀತಿ ಇದ್ದಾಗ, ಆ‌ ಪ್ರೀತಿ ತಾದಾತ್ಮ್ಯ ಆದಾಗ, ಆ ತಾದಾತ್ಮ್ಯ ಕೆಲಸದಲ್ಲಿ ಸಂತೋಷವನ್ನು ಕೊಟ್ಟಾಗ, ಆ ಸಂತೋಷವೇ ನಮ್ಮ ಕೆಲಸಕ್ಕೆ ಸೌಂದರ್ಯದ ಆಯಾಮವನ್ನೂ ಒದಗಿಸಿದಾಗ ಕಲೆ ಸೃಷ್ಟಿಯಾಗುತ್ತದೆ. ಈ ಎಲ್ಲ ಗುಣಗಳನ್ನು ಸಂಪಾದಿಸಬೇಕಾದವರು ನಾವೇ ಅಲ್ಲವೆ?

ನಮ್ಮ ಪ್ರಪಂಚವನ್ನು ನೋಡುವುದನ್ನು ಮೊದಲಿಗೆ‌ ನಾವು ಕಲಿಯಬೇಕು. ಈಗ ನಾವು ನೋಡುತ್ತಿಲ್ಲವೆ- ಎಂದು ಯಾರಾದರೂ ಕೇಳಬಹುದು.‌ ಹೌದು, ನೋಡುತ್ತಲೇ ಇದ್ದೇವೆ; ಆದರೆ ಹೇಗೆ ನೋಡಬೇಕೋ‌ ಹಾಗೆ ನೋಡುತ್ತಿಲ್ಲ ಅಷ್ಟೆ! ಜಗತ್ತನ್ನು ಒಂದು‌ ಚಿತ್ರವಾಗಿಯೂ ಕಾವ್ಯವಾಗಿಯೂ ಗೀತವಾಗಿಯೂ ನೋಡುವಂಥ ರಸಿಕತೆ ನಮಗೆ ದಕ್ಕಬೇಕು. ಆಗ ನಮ್ಮ ಜೀವನವೇ ಕಲೆಯಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.