ADVERTISEMENT

ಬಯಸಿದಂತೆ ಬದುಕುವ ಸ್ವಾತಂತ್ರ್ಯ

ಪೃಥ್ವಿರಾಜ್ ಎಂ ಎಚ್
Published 19 ಜುಲೈ 2017, 19:30 IST
Last Updated 19 ಜುಲೈ 2017, 19:30 IST
ಬಯಸಿದಂತೆ ಬದುಕುವ ಸ್ವಾತಂತ್ರ್ಯ
ಬಯಸಿದಂತೆ ಬದುಕುವ ಸ್ವಾತಂತ್ರ್ಯ   

ಅಭಿಷೇಕ್ ದುಬೆ
ಸಮಾಜ ಸೇವೆ ಕೆಲವರಿಗೆ ವೃತ್ತಿಯಾಗಿದ್ದರೆ, ಮತ್ತೆ ಕೆಲವರಿಗೆ ಪ್ರವೃತ್ತಿ! ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಮಧ್ಯಪ್ರದೇಶದ ಯುವಕ ಅಭಿಷೇಕ್ ದುಬೆ ತಾನು ಉಳಿತಾಯ ಮಾಡಿದ ಹಣವನ್ನು ಅನಾಥ ಮಕ್ಕಳ ಶಿಕ್ಷಣಕ್ಕೆ ವಿನಿಯೋಗ ಮಾಡುತ್ತಿದ್ದಾರೆ. ಮುಸ್ಕಾನ್ ಎಂಬ ಲಾಭರಹಿತ ಸ್ವಯಂ ಸೇವಾ ಸಂಸ್ಥೆ ಸ್ಥಾಪಿಸಿ ಅದರ ಮೂಲಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದಾರೆ.

ಅಭಿಷೇಕ್ ಕೂಡ ಅನಾಥಾಶ್ರಮದಲ್ಲಿ ಬೆಳೆದವರು. ಚಿಕ್ಕ ವಯಸ್ಸಿಗೆ ಪೋಷಕರನ್ನು ಕಳೆದುಕೊಂಡು ಅವರ ಚಿಕ್ಕಪ್ಪನ ನೆರವಿನಿಂದ ಆಶ್ರಮ ಶಾಲೆಗಳಲ್ಲಿ ವಿದ್ಯಾಭ್ಯಾಸ ಪೂರೈಸಿದರು. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಅಭಿಷೇಕ್, ಭೋಪಾಲ್, ಗ್ವಾಲಿಯರ್, ಇಂದೋರ್ ನಗರಗಳಲ್ಲಿನ ವಿವಿಧ ಅನಾಥಾಲಯಗಳಲ್ಲಿರುವ 370 ಮಕ್ಕಳನ್ನು ದತ್ತು ತೆಗೆದುಕೊಂಡು ಅವರಿಗೆ ಆಹಾರ, ವಸತಿ ಮತ್ತು ಶಿಕ್ಷಣದ ವ್ಯವಸ್ಥೆ ಕಲ್ಪಿಸಿದ್ದಾರೆ.

ಶೈಕ್ಷಣಿಕ ನೆರವು ಮಾತ್ರವಲ್ಲದೆ ಆ ಮಕ್ಕಳೊಂದಿಗೆ ಭಾವನಾತ್ಮಕ ಸಂಬಂಧವನ್ನು ಇರಿಸಿಕೊಂಡಿದ್ದಾರೆ. ‘ಸಾಮಾನ್ಯವಾಗಿ ಅನಾಥಾಶ್ರಮಗಳಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ನಾವು ಒಂಟಿ ಎಂಬ ಭಾವನೆ ಇರುತ್ತದೆ. ಇದರಿಂದ ಮಾನಸಿಕವಾಗಿ ಖಿನ್ನರಾಗಿರುತ್ತಾರೆ. ಈ ಅನುಭವ ನನಗೂ ಆಗಿದೆ. ಹಾಗಾಗಿ ಪ್ರತಿ ವಾರಾಂತ್ಯದಲ್ಲಿ ಅನಾಥಾಶ್ರಮಗಳಿಗೆ ಭೇಟಿ ಕೊಟ್ಟು ಅಲ್ಲಿನ ಮಕ್ಕಳ ಜೊತೆ ಭಾವನಾತ್ಮಕವಾಗಿ ಬೆರೆಯುತ್ತೇನೆ. ಇದರಿಂದ ಅವರು, ನಮಗೆ ಪೋಷಕರಿಲ್ಲ ಎಂಬ ಕೊರಗಿನಿಂದ ಹೊರ ಬರಲು ಸಾಧ್ಯವಾಗುತ್ತದೆ. ಆ ಮಕ್ಕಳನ್ನು ಸಿನಿಮಾ, ಪಾರ್ಕ್, ಹೊಟೇಲ್‌ಗಳಿಗೆ ಕರೆದುಕೊಂಡು ಹೋಗಿ ಅವರ ಮುಖದಲ್ಲಿನ ಸಂತಸ ಕಂಡು ನಾನು ಸಂಭ್ರಮಿಸುತ್ತೇನೆ’ ಎಂದು ಹೇಳುತ್ತಾರೆ.

ADVERTISEMENT

ತಿಂಗಳಲ್ಲಿ ಉಳಿತಾಯ ಮಾಡಿದ ಹಣ ಹಾಗೂ ಗೆಳೆಯರು ಮಾನವೀಯ ದೃಷ್ಟಿಯಿಂದ ನೀಡಿದ ಹಣವನ್ನು ಮಾತ್ರ ಈ ಮಕ್ಕಳ ಏಳಿಗೆಗೆ ಬಳಕೆ ಮಾಡುತ್ತಿದ್ದೇನೆ. ಸರ್ಕಾರ, ಕಂಪೆನಿಗಳು, ಸಂಸ್ಥೆಗಳು ನೀಡುವ ದೇಣಿಗೆಯನ್ನು ಸ್ವೀಕರಿಸುತ್ತಿಲ್ಲ. ಅವರಲ್ಲಿ ಅನಾಥ ಪ್ರಜ್ಞೆ ಮೂಡದಂತೆ ಬೆಳೆಸಬೇಕು ಎಂಬ ಉದ್ದೇಶದಿಂದ ಈ ಸಂಸ್ಥೆ ಸ್ಥಾಪನೆ ಮಾಡಲಾಗಿದೆ ಎನ್ನುತ್ತಾರೆ.
www.facebook.com/muskaango

***

ಎರಿಕ್ ಪೌಲ್

ದೆಹಲಿ ಮೂಲದ ಎರಿಕ್ ಪೌಲ್‌ಗೆ ಕಾರ್ ರೇಸಿಂಗ್ ಅಂದ್ರೆ ಪ್ಯಾಶನ್. 24 ವರ್ಷ ತುಂಬುವುದರೊಳಗೆ ಭಾರತದ ಬಹುತೇಕ ರಸ್ತೆಗಳ ಪರಿಚಯವಾಗಿತ್ತು. ದೇಶದ 8 ದಿಕ್ಕುಗಳಲ್ಲೂ ಪ್ರವಾಸ ಮಾಡಿ ಸೈ ಎನಿಸಿಕೊಂಡಿದ್ದರು. ದುರಾದೃಷ್ಟವಶಾತ್ ಒಂದು ದಿನ ಅಪಘಾತಕ್ಕೆ ತುತ್ತಾಗಿ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡು ಹಾಸಿಗೆ ಹಿಡಿದರು. ಆದರೆ ಮಾನಸಿಕವಾಗಿ ಕುಗ್ಗದ ಎರಿಕ್, ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದು ಗಾಲಿಕುರ್ಚಿಯಲ್ಲಿ ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಿದರು. ‘ಅಪಘಾತವಾಗಿ ಹಾಸಿಗೆಯಲ್ಲಿ ಮಲಗಿದ್ದಾಗ ವಿಷದ ಇಂಜೆಕ್ಷನ್ ಕೊಟ್ಟು ನನಗೆ ಇಹಲೋಕದಿಂದ ಮುಕ್ತಿ ಕೊಡಿ ಎಂದು ವೈದ್ಯರಿಗೆ ದುಂಬಾಲು ಬಿದಿದ್ದೆ. ಈ ವೇಳೆ ಮನೆಯವರು ತುಂಬಿದ ಆತ್ಮ ವಿಶ್ವಾಸ ಮತ್ತು ವೈದ್ಯರ ಆಪ್ತಸಮಾಲೋಚನೆ ಮೂಲಕ ಇಂದು ಹೊಸ ಬದುಕು ಕಟ್ಟಿಕೊಳ್ಳುವಂತೆ ಆಯಿತು’ ಎಂದು ಹೇಳುತ್ತಾರೆ.

ಕನ್ಯಾಕುಮಾರಿಯಿಂದ ಲೇಹ್‌ಗೆ ಏಕಾಂಗಿಯಾಗಿ ಕಾರಿನಲ್ಲಿ ಪ್ರವಾಸ ಮಾಡಿ ಎರಿಕ್ ಲಿಮ್ಕಾ ದಾಖಲೆ ಮಾಡಿದ್ದಾರೆ. ನಿರಂತರವಾಗಿ 3917 ಕಿ.ಮೀ ದೂರವನ್ನು ಕೇವಲ 160 ಗಂಟೆಗಳಲ್ಲಿ ಕ್ರಮಿಸುವ ಮೂಲಕ ಹೊಸ ದಾಖಲೆ ಬರೆದು ಆ ಮೂಲಕ ದೇಶದ ಗಮನ ಸೆಳೆದಿದ್ದಾರೆ. ಪ್ಯಾರಾಒಲಿಂಪಿಕ್ ಆಟಗಾರರು ಆಗಿರುವ ಅವರಿಗೆ ಕ್ರೀಡೆಯಲ್ಲಿ ಮಹತ್ತರ ಸಾಧನೆ ಮಾಡಬೇಕು ಎಂಬ ಗುರಿಯನ್ನು ಹೊಂದಿದ್ದಾರೆ. ಯಾವುದೋ ಒಂದು ಕೆಟ್ಟ ಗಳಿಗೆಯಲ್ಲಿ ಬಂದೆರಗುವ ಕಷ್ಟಗಳಿಗೆ ನಾವು ಎದೆಗುಂದದೆ ಮುನ್ನಡೆದರೆ ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸಬಹುದು. ದೈಹಿಕ ತೊಂದರೆಗೆ ಒಳಾಗದವರು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಖಿನ್ನತೆಯಿಂದ ಹೊರಬರಲು ಸಾಧ್ಯವಿದೆ. ಹಾಗೇ ತಮ್ಮ ಬದುಕನ್ನು ಸುಂದರವಾಗಿಸಿಕೊಳ್ಳಬಹುದು ಎಂದು ಅಂಗವಿಕಲರಿಗೆ ಕಿವಿಮಾತು ಹೇಳುತ್ತಾರೆ.
www.facebook.com/Eric-Paul-Conquering-Disability

***

ಮೊಹಮ್ಮದ್ ಅಲಾಂ ಶೇಕ್

ದಾಖಲೆಗಳು ಇರುವುದೇ ಅಳಿಸಿ ಹಾಕಲಿಕ್ಕೆ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾರೆ ಪ್ಯಾರಾ ಅಥ್ಲೀಟ್ ಮೊಹಮ್ಮದ್ ಅಲಾಂ ಶೇಕ್. ಈಜಿನಲ್ಲಿ ಉತ್ತಮ ಸಾಧನೆ ಮಾಡಿರುವ ಅವರು ದೇಶವನ್ನು ಪ್ರತಿನಿಧಿಸಿ ಹತ್ತಾರು ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಮೊಹಮ್ಮದ್ ಅಲಾಂ ಶೇಕ್ ಮುಂಬೈ ನಗರದವರು. ಮೆಕಾನಿಕಲ್ ಎಂಜಿನಿಯರಿಂಗ್ ಹಾಗೂ ಎಂಬಿಎ ಪದವಿ ಪಡೆದಿರುವ ಅವರು ಖಾಸಗಿ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ವಾಸ್ತವವಾಗಿ ಅಲಾಂ ಶೇಕ್ ಹುಟ್ಟು ಅಂಗವಿಕಲರಲ್ಲ! ತಮ್ಮ 25ನೇ ವಯಸ್ಸಿಗೆ ಜ್ವರ ಬಂದು ಕಾಲು ಕಳೆದುಕೊಳ್ಳುವಂತಾಯಿತು. ಬೆನ್ನುಹುರಿಯಲ್ಲಿ ಸಮಸ್ಯೆ ಕಂಡುಬಂದಿದ್ದರಿಂದ ಶಾಶ್ವತವಾಗಿ ಅವರು ಗಾಲಿಕುರ್ಚಿ ಅವಲಂಬಿಸಬೇಕಾಗಿದೆ.

ಅಲಾಂ ಶೇಕ್ ಅಂಗವೈಕಲ್ಯಕ್ಕೆ ತುತ್ತಾಗುವ ಮೊದಲು ಜನಪ್ರಿಯ ಕರಾಟೆ ಪಟುವಾಗಿದ್ದರು. ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಹೆಸರು ಸಂಪಾದಿಸಿದ್ದರು. ಕರಾಟೆಯಲ್ಲಿ 60ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದ್ದರು. ಇವರ ಅಜ್ಜ ಕುಸ್ತಿ ಪೈಲ್ವಾನ್ ಆಗಿದ್ದರು. ಅವರಂತೆ ಅಲಾಂ ಶೇಕ್ ಕೂಡ ಕುಸ್ತಿ ಪಟುವಾಗಬೇಕು ಎಂಬ ಕನಸು ಕಂಡಿದ್ದರು. ಈ ವೇಳೆ ಜ್ವರಕ್ಕೆ ತುತ್ತಾಗಿ ಕಾಲುಗಳನ್ನು ಕಳೆದುಕೊಂಡರು.

ಅಂಗವಿಕಲನಾದೆ ಎಂದು ಮನೆಯಲ್ಲಿ ಕೂರದೇ ಕೆಲಸಕ್ಕೆ ಹೋಗತೊಡಗಿದೆ. ಆದರೂ ಮನಸ್ಸಿಗೆ ನೆಮ್ಮದಿ ಇರುತ್ತಿರಲಿಲ್ಲ, ಕ್ರೀಡೆಯಲ್ಲಿ ತೊಡಗಿಕೊಂಡರೆ ನೆಮ್ಮದಿ ಸಿಗಬಹುದು ಎಂದು ಮನೆಯ ಸಮೀಪವಿದ್ದ ಈಜುಕೊಳದಲ್ಲಿ ಈಜಲು ಆರಂಭಿಸಿದೆ. ಹೀಗೆ ಆರಂಭವಾದ ಈಜಿನ ಪಯಣ ಇಂದು ಬ್ರಿಟಿಷ್ ಕಾಲುವೆಯನ್ನು ಈಜಿ ದಾಖಲೆ ಬರೆಯುವಂತಾಯಿತು ಎನ್ನುತ್ತಾರೆ ಅಲಾಂ ಶೇಕ್.

2018ರಲ್ಲಿ ನಡೆಯುವ ಏಷ್ಯನ್ ಅಥ್ಲೆಟಿಕ್ಸ್ ಹಾಗೂ ಪ್ಯಾರಾಒಲಿಂಪಿಕ್ ಟೂರ್ನಿಯಲ್ಲಿ ಭಾಗವಹಿಸುವ ಸಲುವಾಗಿ ತಾಲೀಮು ನಡೆಸುತ್ತಿದ್ದಾರೆ. ಈ ಬಾರಿ ದೇಶಕ್ಕಾಗಿ ಚಿನ್ನದ ಪದಕವನ್ನು ಗೆದ್ದು ತರುವ ವಿಶ್ವಾಸದಲ್ಲಿ ಅಲಾಂ ಶೇಕ್ ಇದ್ದಾರೆ.
swimswam.com/mohammad-shams-aalam-shaikh-

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.