ADVERTISEMENT

ಬರುವುದು ಒಳ್ಳೆಯ ಸಮಯ…

ಪೃಥ್ವಿರಾಜ್ ಎಂ ಎಚ್
Published 20 ಸೆಪ್ಟೆಂಬರ್ 2017, 19:30 IST
Last Updated 20 ಸೆಪ್ಟೆಂಬರ್ 2017, 19:30 IST
ಬರುವುದು  ಒಳ್ಳೆಯ ಸಮಯ…
ಬರುವುದು ಒಳ್ಳೆಯ ಸಮಯ…   

ರಾಜಾಚಾರಿ

ಅಮೆರಿಕದ ವಾಯುಪಡೆಯಲ್ಲಿ ಹಿರಿಯ ಅಧಿಕಾರಿಯಾಗಿ ಕೆಲಸ ಮಾಡುತ್ತಿರುವ ಭಾರತೀಯ ಮೂಲದ ರಾಜಾಚಾರಿ ಅವರನ್ನು ನಾಸಾದ (ನ್ಯಾಷನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್) ಖಗೋಳಯಾನಿಯಾಗಿ ಆಯ್ಕೆ ಮಾಡಲಾಗಿದೆ. ಕಲ್ಪನಾ ಚಾವ್ಲಾ ಹಾಗೂ ಸುನೀತಾ ವಿಲಿಯಮ್ಸ್ ಬಳಿಕ ಗಗನಯಾತ್ರೆ ಕೈಗೊಳ್ಳಲಿರುವ 3ನೇ ಭಾರತೀಯ ಎಂಬ ಹೆಗ್ಗಳಿಕೆಗೆ ರಾಜಾ ಚಾರಿ ಪಾತ್ರರಾಗಲಿದ್ದಾರೆ.

ನಾಸಾದ ಮುಂದಿನ ಯೋಜನೆಗಳಾದ ಭೂಕಕ್ಷೆ, ಮಂಗಳಯಾನ ಸೇರಿದಂತೆ ಬಾಹ್ಯಾಕಾಶ ಅಧ್ಯಯನದ ಗಗನ ಯಾತ್ರೆಗಳಲ್ಲಿ ರಾಜಾ ಚಾರಿ ಕೆಲಸ ಮಾಡಲಿದ್ದಾರೆ. ಇತ್ತೀಚೆಗೆ ನಾಸಾ 18.500 ಜನರನ್ನು ಸಂದರ್ಶನ ನಡೆಸಿ ಒಟ್ಟು 12 ಜನರ ತಂಡವನ್ನು ಆಯ್ಕೆ ಮಾಡಿದೆ. ಇವರಲ್ಲಿ ರಾಜಾ ಚಾರಿ ಕೂಡ ಒಬ್ಬರು.

ADVERTISEMENT

ರಾಜಾಚಾರಿ ತಂದೆ ಆಂಧ್ರಪ್ರದೇಶದವರು. 70ರ ದಶಕದಲ್ಲಿ ಅಮೆರಿಕಕ್ಕೆ ಅವರು ವಲಸೆ ಹೋಗಿದ್ದರು. ಅಮೆರಿಕದಲ್ಲಿ ಜನಿಸಿದ ರಾಜಾ ಚಾರಿ ಅಲ್ಲಿಯೇ ಉನ್ನತ ಶಿಕ್ಷಣ ಪೂರೈಸಿದರು. ಆಸ್ಟ್ರೋನಾಟಿಕಲ್ ಎಂಜಿನಿಯರಿಂಗ್ ಹಾಗೂ ಎಂಜಿನಿಯರಿಂಗ್ ಸೈನ್ಸ್‌ನಲ್ಲಿ ಪದವಿ ಪಡೆದು ಅಮೆರಿಕದ ವಾಯುಪಡೆಯಲ್ಲಿ ಕೆಲಸಕ್ಕೆ ಸೇರಿದರು. ವಾಯುಪಡೆಯ ಸಹ ಕಮಾಂಡರ್ ಆಗಿ ಕೆಲಸ ಮಾಡಿದ್ದ ರಾಜಾಚಾರಿ ಅವರು 2000 ಗಂಟೆಗೂ ಹೆಚ್ಚು ಕಾಲ ವಿಮಾನ ನಡೆಸಿದ ಅನುಭವವನ್ನು ಹೊಂದಿದ್ದಾರೆ. ಹೀಗೆ ಕಠಿಣ ಪರಿಶ್ರಮದ ಮೂಲಕ ಹಂತ ಹಂತವಾಗಿ ಮೇಲೆ ಬಂದ ರಾಜಾಚಾರಿ ಅವರು ಇಂದು ಗಗನ ಯಾತ್ರಿಯಾಗಿದ್ದಾರೆ.

‘ಚಿಕ್ಕವನಿದ್ದಾಗಲೇ ರಾಜಾಚಾರಿಗೆ ವಿಮಾನಗಳು ಎಂದರೆ ಅಚ್ಚುಮೆಚ್ಚು. ಅವನ ಬಳಿ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಬಿಟ್ಟರೆ ಬೇರೆ ರೀತಿಯ ಆಟಿಕೆಗಳೇ ಇರಲಿಲ್ಲ’ ಎಂದು ಅವರ ತಾಯಿ ಹೇಳುತ್ತಾರೆ. ಮುಂದಿನ ಎರಡು ವರ್ಷ ತರಬೇತಿ ಪಡೆದ ಬಳಿಕ ರಾಜಾಚಾರಿ ಅವರು ಗಗನ ಯಾತ್ರೆ ಕೈಗೊಳ್ಳಲಿದ್ದಾರೆ.

***

ಅಧುನಾ

ಕಾಲೇಜು ದಿನಗಳಲ್ಲಿ ಅಧುನಾ ಗೆಳತಿಯರ ಮುಖ ನೋಡಿ, ನಿಮಗೆ ಈ ರೀತಿಯ ಕೇಶ ವಿನ್ಯಾಸ ಚೆನ್ನಾಗಿರುತ್ತದೆ ಎಂದು ಥಟ್ ಅಂತ ಹೇಳಿ ಬಿಡುತ್ತಿದ್ದರು. ಆದೇ ಅವರಲ್ಲಿ ಹೊಸ ದಾರಿ ಮೂಡಿಸಿತ್ತು. ಕೇಶ ವಿನ್ಯಾಸದಲ್ಲಿ ತರಬೇತಿ ಪಡೆದು, ಅದರಲ್ಲಿ ಪರಿಣತಿ ಹೊಂದಿ ಬ್ಲೆಂಟ್ ಎಂಬ ಸಲೂನ್ ಕಂಪೆನಿ ಸ್ಥಾಪಿಸಿದ ಅವರ ಕಥೆ ಇದು.

ಅಧುನಾ ಹುಟ್ಟಿ ಬೆಳೆದದ್ದು ಇಂಗ್ಲೆಂಡ್‌ನಲ್ಲಿ. ಅಪ್ಪ ಬಂಗಾಳಿ, ತಾಯಿ ಬ್ರಿಟಿಷ್ ಮಹಿಳೆಯಾಗಿದ್ದರು. ‘ನನ್ನ ತಂಗಿಯ ಕೂದಲು ತುಂಬಾ ಒರಟಾಗಿದ್ದವು, ಹಾಗಾಗಿ ಅವಳಿಗೆ ನಿತ್ಯ ತಲೆ ಬಾಚುವ ಕೆಲಸ ನನ್ನದಾಗಿತ್ತು! ಅಂದು ಕೂದಲಿನ ಮೇಲೆ ಮೂಡಿದ ಪ್ರೀತಿ ಇಂದು ಕೇಶ ವಿನ್ಯಾಸಕಿಯನ್ನಾಗಿ ರೂಪಿಸಿದೆ’ ಎನ್ನುತ್ತಾರೆ ಅಧುನಾ. ಬಾಲಿವುಡ್ ಮತ್ತು ಹಾಲಿವುಡ್ ಸಿನಿಮಾ ತಾರೆಯರಿಗೂ ಕೇಶ ವಿನ್ಯಾಸದ ಕೆಲಸ ಮಾಡಿದ್ದಾರೆ. ಪ್ರೀತಿ ಜಿಂಟಾ, ಸೈಫ್ ಆಲಿಖಾನ್, ಅಮೀರ್ ಖಾನ್ ಹಾಗೂ ಅಕ್ಷಯ್ ಕುಮಾರ್ ಅವರ ಕೂದಲನ್ನು ತಿದ್ದಿ ತೀಡಿರುವ ಹೆಗ್ಗಳಿಕೆ ಇವರದ್ದು!

ಇಂಗ್ಲೆಂಡ್‌ನಿಂದ ಭಾರತಕ್ಕೆ ಮರಳಿದ ಅಧುನಾ ನೆಲೆಸಿದ್ದು ಮುಂಬೈನಲ್ಲಿ. ಇದು ಫ್ಯಾಷನ್ ಪ್ರಿಯರ ಹಾಟ್ ಫೇವರೆಟ್ ತಾಣವೂ ಹೌದು. ಐದಾರು ವರ್ಷ ಫ್ಯಾಷನ್ ಡಿಸೈನಿಂಗ್ ಕಂಪೆನಿಗಳಲ್ಲಿ ಕೆಲಸ ಮಾಡಿದರು. ವಸ್ತ್ರ ಹಾಗೂ ಕೇಶ ವಿನ್ಯಾಸದಲ್ಲಿ ವಿಶೇಷ ಪರಿಣತಿ ಪಡೆದರು. ಬೇರೆ ಬೇರೆ ಕಂಪೆನಿಗಳಲ್ಲಿ ಕೆಲಸ ಮಾಡುವುದಕ್ಕಿಂತ ಸ್ವತಂತ್ರವಾಗಿ ಕಂಪೆನಿ ಆರಂಭಿಸುವ ಯೋಚನೆ ಮಾಡಿದರು. ಮನೆಯವರ ಸಹಕಾರದೊಂದಿಗೆ 2004ರಲ್ಲಿ ಬ್ಲೆಂಟ್ ಸಲೂನ್ ಕಂಪೆನಿ ಪ್ರಾರಂಭಿಸಿದರು. ಇಂದು ದೇಶದ 19 ನಗರಗಳಲ್ಲಿ ಬ್ಲೆಂಟ್ ಸಲೂನ್‌ಗಳು ತಲೆಎತ್ತಿವೆ. ನೂರಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸಿಕೊಟ್ಟಿದ್ದಾರೆ.

ಜತೆಗೆ ಮಹಿಳೆಯರಿಗಾಗಿ ಫ್ಯಾಷನ್ ತರಗತಿಗಳನ್ನು ನಡೆಸುತ್ತಿದ್ದಾರೆ. ಕೇಶವಿನ್ಯಾಸಕ್ಕೆ ಸಾಕಷ್ಟು ಬೇಡಿಕೆ ಇದ್ದು, ಉತ್ತಮ ಅವಕಾಶಗಳೂ ಲಭ್ಯವಿವೆ. ನಿರುದ್ಯೋಗಿ ಯುವತಿಯರು ಮತ್ತು ಗೃಹಿಣಿಯರು ತರಬೇತಿ ಪಡೆದು ಕೇಶವಿನ್ಯಾಸ ಕ್ಷೇತ್ರದಲ್ಲಿ ತೊಡಗಿಕೊಳ್ಳಬಹುದು ಎಂದು ಅಧುನಾ ಕಿವಿ ಮಾತು ಹೇಳುತ್ತಾರೆ.

https://www.bblunt.com

***

ರಾಜೀವ್ ತಮ್ಹಂಕರ್

ಯುವಕರು ನವೋದ್ಯಮಗಳನ್ನು ಸ್ಥಾಪನೆ ಮಾಡುವ ಸಲುವಾಗಿ ಬೆಂಗಳೂರು, ದೆಹಲಿ, ಮುಂಬೈನಂತಹ ಮೆಟ್ರೊ ನಗರಗಳಿಗೆ ವಲಸೆ ಬರುವುದು ಸಾಮಾನ್ಯ! ಆದರೆ ನವೋದ್ಯಮಗಳ ತಾಣ ವಾಗಿರುವ ಬೆಂಗಳೂರನ್ನು ಬಿಟ್ಟು ಮಾತೃ ನಗರ ಜಬಲ್ಪುರಕ್ಕೆ ತೆರಳಿ ನವೋದ್ಯಮ ಸ್ಥಾಪಿಸಿ ಯಶಸ್ವಿಯಾದ ಯುವಕ ರಾಜೀವ ತಮ್ಹಂಕರ್ ಅವರ ಸಾಧನೆಯ ಕಥೆ ಇದು.

ರಾಜೀವ್ ಮಧ್ಯಪ್ರದೇಶ ರಾಜ್ಯದ ಜಬಲ್ಪುರದವರು. ಐಐಟಿ ರೂರ್ಕಿಯಲ್ಲಿ ಪದವಿ ಪಡೆದ ಬಳಿಕ ಕೆಲಸ ಅರಸಿಕೊಂಡು ಬೆಂಗಳೂರಿಗೆ ಬಂದರು. ಖಾಸಗಿ ಕಂಪೆನಿಗಳಲ್ಲಿ ಕೆಲಸ ಮಾಡುತ್ತಲೇ ನವೋದ್ಯಮ ಸ್ಥಾಪಿಸುವ ಬಗ್ಗೆ ಯೋಚನೆ ಮಾಡಿದರು. ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಕಾಮಿಕ್ ಪುಸ್ತಕಗಳನ್ನು ಮಾರಾಟ ಮಾಡುವ ನವೋದ್ಯಮ ಸ್ಥಾಪಿಸಲು ಮುಂದಾದರು. ಇದನ್ನು ಬೆಂಗಳೂರಿನಲ್ಲಿ ತೆರೆದರೆ ಕಚೇರಿ ಬಾಡಿಗೆಗೆ 30 ಸಾವಿರ, 5 ಜನ ಕೆಲಸಗಾರರಿಗೆ ಒಂದು ಲಕ್ಷ ಸಂಬಳ, ಇತರೆ ವೆಚ್ಚಗಳಿಗೆ 50 ರಿಂದ 60 ಸಾವಿರ ರೂಪಾಯಿ, ಏನಿಲ್ಲವೆಂದರೂ 2 ಲಕ್ಷ ರೂಪಾಯಿ ಬೇಕಾಗುತ್ತದೆ. ಇಲ್ಲಿ ಕಂಪೆನಿ ಆರಂಭಿಸುವುದು ದುಬಾರಿ ಎಂಬುದು ರಾಜೀವ್‌ಗೆ ಮನವರಿಕೆಯಾಯಿತು. ಅವರು ಬೆಂಗಳೂರು ತೊರೆದು ಜಬಲ್ಪುರಕ್ಕೆ ಬಂದು ಅತಿ ಕಡಿಮೆ ವೆಚ್ಚದಲ್ಲಿ ಟಿಬಿಎಸ್ ಪ್ಲಾನೆಟ್ ಎಂಬ ನವೋದ್ಯಮ ಆರಂಭಿಸಿದರು. ಕಚೇರಿ ಬಾಡಿಗೆಗೆ 5 ಸಾವಿರ, 5 ಜನ ಕೆಲಸಗಾರರಿಗೆ 50 ಸಾವಿರ ಸಂಬಳ, ಇತರೆ ವೆಚ್ಚಗಳಿಗೆ 20 ಸಾವಿರ, ಒಟ್ಟು 75 ಸಾವಿರದಲ್ಲಿ ಕಂಪೆನಿ ಖರ್ಚು ವೆಚ್ಚಗಳು ಮುಗಿಯುವಂತೆ ಯೋಜನೆ ರೂಪಿಸಿಕೊಂಡರು. ಇದರ ಫಲವೇ ಇಂದು, ಅವರು ಯಶಸ್ವಿಯಾಗಿ ಉದ್ಯಮವನ್ನು ನಡೆಸುತ್ತಿದ್ದಾರೆ.

ಸಣ್ಣ ಸಣ್ಣ ನಗರಗಳಲ್ಲಿ ನವೋದ್ಯಮ ಸ್ಥಾಪಿಸುವುದರಿಂದ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಿದಂತಾಗುತ್ತದೆ. ಅವರು ವಲಸೆ ಹೋಗುವುದು ತಪ್ಪುತ್ತದೆ. ಹಾಗಾಗಿ ಯುವಕರು ತಮ್ಮ ತವರು ನಗರಗಳಲ್ಲೇ ಉದ್ಯಮ ಸ್ಥಾಪನೆ ಮಾಡಿ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವಂತೆ ರಾಜೀವ್ ಕಿವಿ ಮಾತು ಹೇಳುತ್ತಾರೆ.
https://www.tbsplanet.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.