ADVERTISEMENT

ಬುಕ್‌ಚೋರ್‌ ತಂಡ

ವರ್ತಮಾನದ ಗ್ರಹಿಕೆ…

ಪೃಥ್ವಿರಾಜ್ ಎಂ ಎಚ್
Published 18 ಜನವರಿ 2017, 19:30 IST
Last Updated 18 ಜನವರಿ 2017, 19:30 IST
ಬುಕ್‌ಚೋರ್‌  ತಂಡ
ಬುಕ್‌ಚೋರ್‌ ತಂಡ   

ಇದು ಮಧ್ಯಮ ವರ್ಗದ ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸಾಧನೆ ಕಥೆ. ಸಾಮಾನ್ಯವಾಗಿ ಎಂಜಿನಿಯರಿಂಗ್ ಕೋರ್ಸ್‌ನ ಕಾಲೇಜು ಶುಲ್ಕಕ್ಕಿಂತಲೂ ಪಠ್ಯಪುಸ್ತಕಗಳ ಬೆಲೆಯೇ ದುಬಾರಿಯಾಗಿರುತ್ತದೆ. ಹಾಗಾಗಿ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ಸೆಕೆಂಡ್ ಹ್ಯಾಂಡ್ ಪುಸ್ತಕಗಳನ್ನು ಖರೀದಿಸುತ್ತಾರೆ. ಸೆಕೆಂಡ್ ಹ್ಯಾಂಡ್ ಪುಸ್ತಕಗಳನ್ನು ಹುಡುಕುವುದೇ ಒಂದು ದೊಡ್ಡ ಸಮಸ್ಯೆ. ಈ ಪುಸ್ತಕಗಳು ಸೀಮಿತ ಮಾರುಕಟ್ಟೆ ಪ್ರದೇಶಗಳಲ್ಲಿ ಮಾತ್ರ ದೊರೆಯುತ್ತವೆ.

ಉದಾಹರಣೆಗೆ, ಬೆಂಗಳೂರಿನ ಅವೆನ್ಯೂ ರಸ್ತೆ, ಕೋಲ್ಕತ್ತಾದ ಕಾಲೇಜು ರಸ್ತೆ, ಮುಂಬೈನ ಫೋರ್ಟ್ ಪ್ರದೇಶ ಮತ್ತು ದೆಹಲಿಯ ದರ್ಯಾಗಂಜ್ ಸ್ಥಳಗಳಲ್ಲಿ ಮಾತ್ರ ಹಳೆಯ ಪುಸ್ತಕಗಳು ದೊರೆಯುತ್ತವೆ. ಅಲ್ಲಿಗೆ ಪುಸ್ತಕ ಖರೀದಿಸಲು ಹೋದವರಿಗೆಲ್ಲ ಪುಸ್ತಕಗಳು ದೊರೆಯುವುದಿಲ್ಲ! ದಿನಗಟ್ಟಲೇ, ವಾರಗಟ್ಟಲೆ ಅಲೆಯಬೇಕಾಗುತ್ತದೆ!

ಹೀಗೆ ಸೆಕೆಂಡ್ ಹ್ಯಾಂಡ್ ಪುಸ್ತಕಗಳಿಗಾಗಿ ದೆಹಲಿಯ ಜೈಪೆ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ತಂಡವೊಂದು ಅಲೆದು ಸುಸ್ತಾಗಿತ್ತು. ಎಲ್ಲ ಹಳೆ ಪುಸ್ತಕಗಳು ಇ-ಕಾಮರ್ಸ್ ಮಾದರಿಯಲ್ಲಿ ಸಿಗುವಂತಿದ್ದರೆ ಎಷ್ಟು ಚೆನ್ನ ಎಂದು ಆ ತಂಡ ಆಲೋಚಿಸಿತ್ತು. ಅದರ ಫಲಪ್ರದವಾಗಿ ಹುಟ್ಟಿದ್ದೇ ‘ಬುಕ್‌ಚೋರ್’ ಎಂಬ ಸೆಕೆಂಡ್ ಹ್ಯಾಂಡ್ ಇ-ಕಾಮರ್ಸ್ ಕಂಪೆನಿ. ಇದನ್ನು ಗೆಳೆಯರಾದ ಭವೇಶ್, ಪ್ರತೀಕ್, ಅಲೋಕ್  ಸ್ಥಾಪನೆ ಮಾಡಿದ್ದಾರೆ.

2015ರಲ್ಲಿ ಎರಡು ಕೊರಿಯರ್ ಕಂಪೆನಿಗಳು ಮತ್ತು ಒಂದು ಸರ್ಕಾರೇತರ ಸಂಸ್ಥೆ ಜೊತೆ ಸೇರಿ 35ಲಕ್ಷ ರೂಪಾಯಿ ಬಂಡವಾಳದಲ್ಲಿ ಈ ಕಂಪೆನಿಯನ್ನು ಕಟ್ಟಿದರು. ಕಳೆದ ಎರಡು ವರ್ಷಗಳಲ್ಲಿ ಈ ಕಂಪೆನಿಯ ವಹಿವಾಟು 15 ಕೋಟಿ ರೂಪಾಯಿ ದಾಟಿದೆ. ಕಳೆದ ವರ್ಷ ಹತ್ತು ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ಮಾರಾಟ ಮಾಡಲಾಗಿದೆ ಎನ್ನುತ್ತಾರೆ ಕಂಪೆನಿಯ ಸಹ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ಭವೇಶ್. ವಿದ್ಯಾರ್ಥಿದೆಸೆಯಲ್ಲಿ ಅನುಭವಿಸಿದ ಸಂಕಷ್ಟ ಇಂದು ಬದುಕಿನ ದಾರಿ ತೋರುವುದರ ಜತೆಗೆ ವಿದ್ಯಾರ್ಥಿ ಸಮುದಾಯಕ್ಕೆ ಅನುಕೂಲತೆ ಮಾಡಿಕೊಟ್ಟಿದೆ.  ಬುಕ್ ಚೋರ್‌ನಲ್ಲಿ ಪುಸ್ತಕಗಳನ್ನು ಮಾರಲು ಮತ್ತು ಕೊಳ್ಳುವುದಕ್ಕೂ ಅವಕಾಶ ಕಲ್ಪಿಸಲಾಗಿದೆ.   www.bookchor.com/

ಮೇಘಾ ದೇಸಾಯಿ

ಸಮುದಾಯ, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಸಕ್ರಿಯರಾಗಿ ದುಡಿಯುತ್ತಿರುವ ಗುಜರಾತ್ ಮೂಲದ ಮೇಘಾ ದೇಸಾಯಿ ಅವರ ಸಾಧನೆಯ ಕಥೆ ಇದು.  ವ್ಯಾಪಾರ ಮತ್ತು ಸರ್ಕಾರೇತರ ಸಂಸ್ಥೆಗಳು ಎಂಬ ಎರಡು ಮಾರ್ಗಗಳು ಇಡೀ ಜಗತ್ತನ್ನು ನಿಯಂತ್ರಿಸುತ್ತಿವೆ ಎಂಬುದನ್ನು ಅರಿತಿದ್ದ ಮೇಘಾ, ವ್ಯಾಪಾರ ಮಾಡಲು ಹೋಗಿ ಕೈಸುಟ್ಟುಕೊಂಡರು. ನಂತರ ಸರ್ಕಾರಗಳಿಗೆ ಸಮಾನಾಂತರವಾಗಿ ಕೆಲಸ ಮಾಡುತ್ತಿರುವ ಸರ್ಕಾರೇತರ ಸಂಸ್ಥೆಗಳ ಮಾದರಿಯಲ್ಲೇ ಒಂದು ಸಂಸ್ಥೆಯನ್ನು ಸ್ಥಾಪಿಸಿ ಗುಜರಾತಿನಲ್ಲಿ ಸಮುದಾಯ ಅಭಿವೃದ್ಧಿ ಕೆಲಸಗಳಲ್ಲಿ ತೊಡಗಿದ್ದಾರೆ.

ADVERTISEMENT

ಮೇಘಾ ದೇಸಾಯಿ ಅವರ ವಂಶವೃಕ್ಷದ ಬೇರು ಹರಡಿರುವುದು ಗುಜರಾತ್ ರಾಜ್ಯದಲ್ಲಿ. ತಂದೆ ಅಮೆರಿಕದಲ್ಲಿ ನೆಲೆಸುವ ಮೂಲಕ ಅನಿವಾಸಿ ಭಾರತೀಯರಾದರು. ಮೇಘಾ ಕೂಡ ಅಮೆರಿಕದಲ್ಲೇ ಶಿಕ್ಷಣ ಪಡೆದು ಉದ್ಯಮ ಆರಂಭಿಸಲು ಮುಂದಾದರು. ಬಂಡವಾಳದ ಕೊರೆತೆಯಿಂದ ಉದ್ಯಮ ಸ್ಥಾಪಿಸಲು ಸಾಧ್ಯವಾಗಲಿಲ್ಲ. 2006ರಲ್ಲಿ ಹೊಟ್ಟೆ ಪಾಡಿಗಾಗಿ ‘ಧರ್ಮ’ ಎಂಬ ಜಾಹೀರಾತು ಏಜೆನ್ಸಿಯನ್ನು ತೆರೆದರು.

2008ರಲ್ಲಿ ಉಂಟಾದ ಆರ್ಥಿಕ ಹಿಂಜರಿತದ ಪರಿಣಾಮ ಧರ್ಮ ಏಜೆನ್ಸಿ ನಷ್ಟದಲ್ಲಿ ಮುಳುಗಿತು. ಮೇಘಾ ಆ ಸಂಸ್ಥೆಯನ್ನು ಮುಚ್ಚಿ ಭಾರತಕ್ಕೆ ಮರಳಿದರು. ಒಂದು ವರ್ಷ ಗುಜರಾತ್ ರಾಜ್ಯವನ್ನು ಸುತ್ತುವ ಮೂಲಕ ಹೊಸ ಅನುಭವ ಪಡೆದರು. ಮಹಿಳೆಯರು ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವುದನ್ನು ಗುರುತಿಸಿದರು. ವಿದ್ಯಾರ್ಥಿನಿಯರ ಸಮಸ್ಯೆಗಳನ್ನು ಆಲಿಸಿದರು.

ನಂತರದ ದಿನಗಳಲ್ಲಿ ಮಹಿಳಾ ಸಮುದಾಯಕ್ಕೆ ಅನುಕೂಲತೆ ಮಾಡಿಕೊಡುವ ಉದ್ದೇಶದಿಂದ ‘ದೇಸಾಯಿ’ ಎಂಬ ಸರ್ಕಾರೇತರ ಸಂಸ್ಥೆ ತೆರೆದರು. ಅದರ ಮೂಲಕ, ವಿದ್ಯಾರ್ಥಿನಿಯರಿಗೆ ಉಚಿತ ನ್ಯಾಪ್್ಕಿನ್ ವಿತರಣೆ, ಆರೋಗ್ಯ ತಪಾಸಣೆ ಮತ್ತು ಉಚಿತ ಔಷಧಿ ವಿತರಣೆ, ಮಕ್ಕಳಿಗೆ ಕಂಪ್ಯೂಟರ್ ಮತ್ತು ಇಂಗ್ಲಿಷ್ ಕಲಿಕೆ, ಕರಕುಶಲ ಕೌಶಲ ತರಬೇತಿ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಿದ್ದಾರೆ. ಇಂದು ಸುಮಾರು 2.5 ಲಕ್ಷ ಜನರು ದೇಸಾಯಿ ಫೌಂಡೇಶನ್ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಭಾರತೀಯ ಮಹಿಳೆಯರ ಸಬಲೀಕರಣ ಮತ್ತು ಅವರ ಉನ್ನತಿಗಾಗಿ ದುಡಿಯುವುದೇ ನನ್ನ ಜೀವನದ ಗುರಿ ಎನ್ನುತ್ತಾರೆ ಮೇಘಾ ದೇಸಾಯಿ.
 www.meghasdesai.com/

ಸೋನಿಯಾ ಮತ್ತು ಅನುರಾಗ್

ಕೇವಲ ಎರಡು ಲಕ್ಷ ರೂಪಾಯಿ ಹೂಡಿಕೆ ಮಾಡಿ ಐದು ಕೋಟಿ ರೂಪಾಯಿ ವರಮಾನ ಪಡೆಯುತ್ತಿರುವ ಯುವ ದಂಪತಿಯ ಸಾಧನೆಯ ಕಥೆ ಇದು. ಅವರೇ ಮುಂಬೈ ಮೂಲದ ಸೋನಿಯಾ ಸಿಂಘಾಲ್ ಮತ್ತು ಅನುರಾಗ್. 2 ವರ್ಷಗಳ ಹಿಂದೆ ಆರಂಭಿಸಿದ ಸಿ.ಎ (ಚಾರ್ಟೆಡ್ ಅಕೌಂಟೆಂಟ್) ಜಾಬ್ ಪೋರ್ಟಲ್ ಇಂದು ಜನಪ್ರಿಯ ವೆಬ್‌ ಪೋರ್ಟಲ್ ಆಗಿದೆ. ಇದರ ಸ್ಥಾಪನೆಯ ಹಿಂದೆ ಒಂದು ರೋಚಕ ಕಥೆ ಇದೆ.

ಸೋನಿಯಾ ಸಿಂಘಾಲ್ ಸಿ.ಎ ಮುಗಿಸಿದ ಬಳಿಕ ಕೆಲಸಕ್ಕಾಗಿ ಹಲವಾರು ಕಂಪೆನಿಗಳಿಗೆ ಅರ್ಜಿ ಹಾಕಿದರೂ ಕೆಲಸ ಮಾತ್ರ ಸಿಗುತ್ತಿರಲಿಲ್ಲ! ಅರ್ಜಿಗಳನ್ನು ಹಾಕಿ ಹೈರಾಣಾಗಿದ್ದ ಸೋನಿಯಾ, ಈ ಕೆಲಸದ ಸಹವಾಸವೇ ಸಾಕು ಎಂಬ ನಿರ್ಧಾರಕ್ಕೆ ಬಂದಿದ್ದರು! ಈ ವೇಳೆ ಪತಿ ಅನುರಾಗ್ ಸಂದರ್ಶನದಲ್ಲಿ ಪತ್ನಿ ಪದೇ ಪದೇ  ವಿಫಲರಾಗುತ್ತಿರುವುದನ್ನು ಗಮನಿಸಿದ್ದರು. ಸೋನಿಯಾಗೆ ಕಲಿತಿರುವ ವಿದ್ಯೆಯನ್ನು ಸ್ಪಷ್ಟವಾಗಿ ಮತ್ತು ಆಕರ್ಷಕವಾಗಿ ಪ್ರಸ್ತುತಪಡಿಸಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಮನಗಂಡಿದ್ದರು. ಅದಕ್ಕಾಗಿ ಜಾಬ್ ಕನ್ಸೆಲ್್ಟೆನ್ಸಿವೊಂದರಲ್ಲಿ ತರಬೇತಿ ಕೊಡಿಸಿದರು.

ನಂತರ ಸೋನಿಯಾಗೆ ಕೆಲಸ ನಿರಾಯಾಸವಾಗಿ ದೊರೆಯಿತು. ಸೋನಿಯಾ, ಸಿ.ಎ ಪಡೆದ ಫ್ರೆಶರ್ಸ್ ಅಭ್ಯರ್ಥಿಗಳಿಗಾಗಿ ಟಿಪ್ಸ್ ನೀಡಲು ‘ಸಿಎಜಾಬ್‌ಪೋರ್ಟಲ್‌ಬ್ಲಾಗ್‌ಸ್ಪಾಟ್‌’ಎಂಬ ಬ್ಲಾಗ್ ಬರೆಯತೊಡಗಿದರು. ಅದರಲ್ಲಿ ಕೆಲಸದ ಮಾಹಿತಿ, ಕೌಶಲ ಮತ್ತು ಸಂದರ್ಶನ ಎದುರಿಸುವ ಬಗೆ ಹೇಗೆ ಎಂಬುದನ್ನು ವಿವರಿಸುತ್ತಿದ್ದರು. ಬ್ಲಾಗ್ ಅನುಕೂಲತೆ ಪಡೆದ ನೂರಾರು ಅಭ್ಯರ್ಥಿಗಳು ಇದನ್ನು ಜಾಬ್ ಕನ್ಸಲ್್ಟೆನ್ಸಿಯನ್ನಾಗಿ  ಪರಿವರ್ತನೆ ಮಾಡಿ ಎಂಬ ಸಲಹೆ ನೀಡಿದರು.

ಆ ಸಲಹೆಯನ್ನು ಸದುಪಯೋಗಪಡಿಸಿಕೊಂಡು  ದಂಪತಿ  2 ಲಕ್ಷ ರೂಪಾಯಿ ಬಂಡವಾಳ ಹೂಡಿ ‘ಸಿಎಜಾಬ್‌ಪೋರ್ಟಲ್’ ಎಂಬ ಕಂಪೆನಿ ಆರಂಭಿಸಿದರು. ಇಲ್ಲಿ ಸಿ.ಎ ಕೆಲಸದ ಸ್ಥಳಾವಕಾಶಗಳು, ಕೌಶಲ ಮತ್ತು  ಸಂದರ್ಶನ ಮಾಹಿತಿ ನೀಡಲಾಗುತ್ತದೆ. ನೂರಕ್ಕೂ ಹೆಚ್ಚು ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ಸಿಎಜಾಬ್‌ಪೋರ್ಟಲ್‌, ಸಾವಿರಾರು ಜನರಿಗೆ ಉದ್ಯೋಗದ ದಾರಿ ತೋರಿಸಿದೆ.
cajobportal.com/

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.