ADVERTISEMENT

ಮಕ್ಕಳ ಮಿದುಳಿಗೆ ‘ಬಿಬಾಕ್ಸ್ ಬ್ರೇನ್’ ಸಾಣೆ

ಗಣೇಶ ವೈದ್ಯ
Published 7 ಸೆಪ್ಟೆಂಬರ್ 2016, 19:30 IST
Last Updated 7 ಸೆಪ್ಟೆಂಬರ್ 2016, 19:30 IST
ಮಕ್ಕಳ ಮಿದುಳಿಗೆ ‘ಬಿಬಾಕ್ಸ್ ಬ್ರೇನ್’ ಸಾಣೆ
ಮಕ್ಕಳ ಮಿದುಳಿಗೆ ‘ಬಿಬಾಕ್ಸ್ ಬ್ರೇನ್’ ಸಾಣೆ   

ಬೆಳಿಗ್ಗೆಯಿಂದ ದುಡಿದು, ದಣಿದು ಸಂಜೆ ಮನೆಗೆ ಬಂದಿರುತ್ತೀರಿ. ಯಾರಾದರೂ ನಿಮ್ಮ ಭುಜವನ್ನು ಮಸಾಜ್ ಮಾಡಿದರೆ ಎಷ್ಟು ಹಿತವಾಗಿರುತ್ತದೆ ಎಂದುಕೊಳ್ಳುತ್ತೀರಿ. ಆದರೆ ಬೇಕೆಂದಾಗ ಮಸಾಜ್ ಮಾಡಲು ಯಾರೂ ಇರುವುದಿಲ್ಲ, ಇದ್ದರೂ ಅವರಿಗೆ ಸಮಯ ಇರಬೇಕಲ್ಲ. ಇಂಥ ಸಂದರ್ಭದಲ್ಲಿ ಸಹಾಯಕ್ಕೆ ಬರುವ ಯಂತ್ರವೊಂದಿದೆ. ಇದರ ಸ್ವಿಚ್ ಆನ್ ಮಾಡಿ ಖುರ್ಚಿ ಮೇಲೆ ಕೂತರೆ ಸಾಕು, ಭುಜವನ್ನು ಹದವಾಗಿ ಒತ್ತುತ್ತದೆ.

***
ನೀವು ಅಡುಗೆ ಕೆಲಸದಲ್ಲಿ ಬ್ಯೂಸಿ ಆಗಿರುತ್ತೀರಿ. ಆಗಲೇ ಮಗು ಅತ್ತರೆ ಸಮಾಧಾನಿಸುವುದು ಕಷ್ಟ. ಮಗು ಅತ್ತಾಗ ತಂತಾನೇ ತೊಟ್ಟಿಲು ತೂಗಿದರೆ, ಅದರಲ್ಲಿ ಮಗುವಿಗೆ ಇಷ್ಟವಾಗುವಂಥ ಶಬ್ದ, ಬೆಳಕು ಬಂದರೆ ಚೆನ್ನಾಗಿರುತ್ತದಲ್ಲವೇ? ಪಾಪು ತೊಟ್ಟಿಲಲ್ಲಿ ಒದ್ದೆ ಮಾಡಿಕೊಂಡಿದ್ದು ಗೊತ್ತಾಗದಿದ್ದರೆ ನಿಮ್ಮನ್ನು ಒಂದು ಸೈರನ್ ಕೂಗಿ ಕರೆದರೆ ಕೆಲಸ ಇನ್ನೂ ಸುಲಭವಲ್ಲವೇ.

***
ಬೆಳಬೆಳಿಗ್ಗೆ ಗಡಿಬಿಡಿಯಲ್ಲಿ ಬಟ್ಟೆ ತೊಳೆದು ಟೆರೇಸ್ ಮೇಲೆ ಹರವಿ ಕಚೇರಿಗೆ ಹೋಗುತ್ತೀರಿ. ಸಂಜೆ ವಾಪಸಾಗುವ ಮುನ್ನವೇ ಮಳೆ ಬಂದು ಬಟ್ಟೆ ಒದ್ದೆಯಾಗಿಬಿಡುತ್ತದೆ. ಹಾಗಾಗದೇ ಇರುವಂತೆ, ಮಳೆ ಬಂದ ತಕ್ಷಣ ಬಟ್ಟೆಗಳನ್ನೆಲ್ಲ ಒಳಗೆ ಎಳೆದುಕೊಳ್ಳುವ ತಂತ್ರಜ್ಞಾನವಿದ್ದರೆ...

***
ಈ ಆದರೆ, ಹೋದರೆ, ಸಿಕ್ಕರೆ... ಎಲ್ಲ ಬರೀ ‘ರೆ’ಗೆ ಸೀಮಿತ ಎಂದುಕೊಳ್ಳಬೇಡಿ. ಈ ತಂತ್ರಜ್ಞಾನಗಳೆಲ್ಲ ಸಾಕಾರವಾಗಿವೆ. ಅದು ದೊಡ್ಡ ದೊಡ್ಡ ತಂತ್ರಜ್ಞರಿಂದಲ್ಲ. ಇವೆಲ್ಲಾ ಸಾಧ್ಯವಾಗಿರುವುದು ಪ್ರಾಥಮಿಕ ಶಾಲೆ, ಹೈಸ್ಕೂಲ್ ಓದುವ ಮಕ್ಕಳ ಬುದ್ಧಿಮತ್ತೆಯಿಂದ. ವಿಜ್ಞಾನ ಪಾಠ ಎಂದರೆ  ದೂರ ಸರಿಯುವ ಮಕ್ಕಳಿಗೆ, ವಿಜ್ಞಾನದ ರುಚಿ ಹತ್ತುವಂತೆ ಮಾಡುತ್ತಿರುವುದು, ಅವರ ಕಲ್ಪನೆಗಳಿಗೆ ಬೆನ್ನೆಲುಬಾಗಿ ನಿಂತಿರುವುದು ಎವೊಬಿ ಆಟೊಮೇಶನ್ಸ್ ಪ್ರೈವೇಟ್ ಲಿಮಿಟೆಡ್‌ನ ‘ಬಿಬಾಕ್ಸ್’.

‘ಬಿಬಾಕ್ಸ್’ ಒಂದು ಯೋಜನೆ. ‘ಬ್ರೇನ್ ಇನ್ ಎ ಬಾಕ್ಸ್’ ಎಂಬುದನ್ನೇ ಚಿಕ್ಕದಾಗಿ ‘ಬಿಬಾಕ್ಸ್’ ಎನ್ನಲಾಗಿದೆ. 21ನೇ ಶತಮಾನದ ಅಗತ್ಯವಾದ ‘ಕೌಶಲ ಆಧಾರಿತ ಸ್ಮಾರ್ಟ್ ಕಲಿಕಾ ವಿಧಾನ’ವನ್ನು ಪರಿಚಯಿಸುವ ಜೊತೆಗೆ ಮುಂದಿನ ಪೀಳಿಗೆಯ ಸಂಶೋಧಕರನ್ನು ರೂಪಿಸುವುದು, ವಿದ್ಯಾರ್ಥಿಗಳಿಗೆ ವಿಜ್ಞಾನ ಅನಿವಾರ್ಯವಾಗಿ ಓದಲೇಬೇಕಾದ ವಿಷಯ ಎಂಬುದಕ್ಕಿಂತ ಅದರತ್ತ ಆಸಕ್ತಿ ಹುಟ್ಟುವಂತೆ ಮಾಡುವುದು ‘ಬಿಬಾಕ್ಸ್’ ಆಶಯ.

ಸಂದೀಪ್ ಸೆನನ್ ಎನ್ನುವವರು ‘ಬಿಬಾಕ್ಸ್ ಕಿಟ್’ ವಿನ್ಯಾಸ ಮಾಡಿದ್ದಾರೆ. ಅದರಲ್ಲಿ ಬೇರೆ ಬೇರೆ ಪ್ರೋಗ್ರಾಂಗಳಿರುವ ಸೆನ್ಸರ್‌ಗಳಿವೆ. ಈ ಸೆನ್ಸರ್‌ ಅನ್ನು ಕಂಪ್ಯೂಟರ್ ತಂತ್ರಾಂಶದ ಮೂಲಕ ಎಲೆಕ್ಟ್ರಾನಿಕ್ ಬ್ರೇನ್‌ಗೆ (ಮುಖ್ಯ ಯಂತ್ರ) ಸಂಪರ್ಕಿಸಬೇಕು. ಆಗ ಸೆನ್ಸರ್‌ನಲ್ಲಿ ಬರೆದ ಪ್ರೋಗ್ರಾಂ ತನ್ನ ಕೆಲಸ ಶುರು ಮಾಡುತ್ತದೆ.

ಶಾಲೆಗಳಲ್ಲಿ ‘ಬಿಬಾಕ್ಸ್’
ಒಂದು ಸಂಶೋಧನೆ ಪ್ರಕಾರ ಭಾರತದಲ್ಲಿ ತಲಾ ಸಾವಿರ ಯುವ ವಿದ್ಯಾರ್ಥಿಗಳಲ್ಲಿ ನಾಲ್ವರು ಮಾತ್ರ ವಿಜ್ಞಾನ–ತಂತ್ರಜ್ಞಾನವನ್ನು ಆಯ್ದುಕೊಳ್ಳುತ್ತಿದ್ದಾರೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ‘ಬಿಬಾಕ್ಸ್’ ಮುಂದಾಗಿದೆ. ಅದಕ್ಕೆಂದೇ ಹೊಸ ಹೊಸ ಸಾಧನಗಳು ಮತ್ತು ಅವುಗಳ ಸಾಧ್ಯತೆಗಳ ಕುರಿತು ಶಾಲಾ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ‘ಬಿಬಾಕ್ಸ್ ಲ್ಯಾಬ್’ ಆರಂಭಿಸಿದ್ದಾರೆ.

ಬೆಂಗಳೂರು, ಕೇರಳ, ನವದೆಹಲಿ, ಕೊಯಿಮತ್ತೂರಿನ ಶಾಲೆಗಳಲ್ಲಿ ‘ಬಿಬಾಕ್ಸ್ ಲ್ಯಾಬ್’ ಕಾರ್ಯ ನಿರ್ವಹಿಸುತ್ತಿದೆ. ಬೇರೆಲ್ಲಾ ವಿಷಯಗಳಂತೇ ‘ಬಿಬಾಕ್ಸ್ ಲ್ಯಾಬ್’ ತರಗತಿಯೂ ನಡೆಯುತ್ತದೆ. ‘ಬಿಬಾಕ್ಸ್’ನ ಇಬ್ಬರು ಶಿಕ್ಷಕರು ತರಬೇತಿ ನೀಡುತ್ತಾರೆ. ಐದರಿಂದ ಹತ್ತನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಒಂದು ವರ್ಷಕ್ಕೆ ಎಂಬತ್ತು ನಿಮಿಷಗಳಂತೆ ಹದಿನಾರು ತರಗತಿ ಇರುತ್ತದೆ. ಅದಕ್ಕಾಗಿ ವಿದ್ಯಾರ್ಥಿ ವರ್ಷಕ್ಕೆ ಎರಡು ಸಾವಿರ ರೂಪಾಯಿ ಶುಲ್ಕ ಪಾವತಿಸುತ್ತಾನೆ.

ಸಮಾಜದ ಸಮಸ್ಯೆಯನ್ನು ತನ್ನದೇ ಎಂದುಕೊಂಡು ಅದಕ್ಕೆ ಪರಿಹಾರ ಕಂಡುಕೊಳ್ಳಲು ಈ ತರಬೇತಿ ಪ್ರೋತ್ಸಾಹಿಸುತ್ತದೆ. ಸುತ್ತಮುತ್ತ ಸಿಗುವ ವಸ್ತುಗಳನ್ನೇ ಬಳಸಿಕೊಂಡು, ಬಿಬಾಕ್ಸ್ ಕಿಟ್ ಸಹಾಯದೊಂದಿಗೆ ವಿದ್ಯಾರ್ಥಿಗಳು ಹೊಸ ಹೊಸ ತಂತ್ರಗಳನ್ನು ಕಂಡುಕೊಳ್ಳುತ್ತಾರೆ.

ಒಬ್ಬ ಹುಡುಗ ಪಾರ್ಶ್ವ ವಾಯುವಿನಿಂದ ಬಳಲುತ್ತಿರುವ ತನ್ನ ತಾತನ ಜೀವನವನ್ನು ‘ವರ್ಚುವಲ್ ರಿಯಾಲಿಟಿ’ ತಂತ್ರಜ್ಞಾನದಿಂದ ಸರಳಗೊಳಿಸಿದ್ದಾನೆ. ‘ಬಿಬಾಕ್ಸ್ ಕಿಟ್’ ಉಪಯೋಗಿಸಿಕೊಂಡ ಹುಡುಗ, ತಾತನ ಕೈಗೆ ಎಲೆಕ್ಟ್ರಾನಿಕ್ ಗ್ಲೌಸ್ ತೊಡಿಸಿ, ಮಲಗಿದ್ದಲ್ಲಿಂದಲೇ ವಿದ್ಯುದ್ದೀಪ ನಿಯಂತ್ರಿಸುವುದು ಮತ್ತು ಟಿ.ವಿ ಚಾನೆಲ್ ಬದಲಾಯಿಸುವಂಥ ಸೌಕರ್ಯವನ್ನು ಕಲ್ಪಿಸಿದ್ದಾನೆ. ಬೆರಳು ಅಲ್ಲಾಡಿಸುವುದರಿಂದಲೇ ಅವರ ಕೆಲಸಗಳು ನಡೆಯುತ್ತವೆ.

ಈ ಹುಡುಗ ಓದಿನಲ್ಲಿ ಹಿಂದಿದ್ದರೂ ಸಂಶೋಧನೆಯಲ್ಲಿ ಪರಿಣತಿ ತೋರಿದ್ದಾನೆ. ಇದೇ ರೀತಿ, ಹುಡುಗಿಯೊಬ್ಬಳು ಶಾಲೆಗೆ ಸೈಕಲ್ಲಿನಲ್ಲಿ ಹೋಗುತ್ತಾಳೆ. ಮಳೆಗಾಲದಲ್ಲಿ ಆಕೆ ರೈನ್ ಕೋಟ್ ಧರಿಸಿದರೂ ಮುಖದ ಮೇಲೆ ಹನಿಗಳು ಬೀಳುತ್ತಿದ್ದವು. ಅದಕ್ಕೆ ಕನ್ನಡಕ ಹಾಕಿಕೊಂಡಳು. ಕನ್ನಡಕದ ಮೇಲೆಯೂ ನೀರು ಬೀಳುತ್ತದಲ್ಲ. ಹಾಗಾಗಿ ಆಕೆ ಬುದ್ಧಿ ಉಪಯೋಗಿಸಿ ‘ಬಿಬಾಕ್ಸ್’ ಸಲಕರಣೆ ಬಳಸಿಕೊಂಡು ಕಾರಿನ ಮುಂಭಾಗದ ಗಾಜುಗಳಿಗೆ ಇರುವಂತೆಯೇ ಕನ್ನಡಕಕ್ಕೂ ವೈಪರ್‌ಗಳನ್ನು ಮಾಡಿಕೊಂಡಿದ್ದಾಳೆ. ಹೀಗೆ ಚಿಕ್ಕ ಚಿಕ್ಕ ಸಮಸ್ಯೆಗಳಿಗೆ ಮಕ್ಕಳು ತಮ್ಮದೇ ರೀತಿಯಲ್ಲಿ ಪರಿಹಾರ ಕಂಡುಕೊಳ್ಳುವ ಖುಷಿ ಅನುಭವಿಸುತ್ತಿದ್ದಾರೆ.

ನಾವೆಲ್ಲ ಎಷ್ಟೋ ಸಮಯ ಮನೆಯಿಂದ ಹೊರಡುವಾಗ ಫ್ಯಾನು, ದೀಪ ಆರಿಸಲು ಮರೆಯುತ್ತೇವೆ. ಹೊರಟ ಎಷ್ಟೋ ಹೊತ್ತಿನ ನಂತರ ನೆನಪಾಗಿ ಪೇಚಾಡುತ್ತೇವೆ. ಆದರೆ ವಿದ್ಯಾರ್ಥಿಗಳು ಕಂಡುಕೊಂಡ ದಾರಿಯಲ್ಲಿ, ಬಾಗಿಲು ಹಾಕಿದ ತಕ್ಷಣ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ. ಬಾಗಿಲು ತೆರೆದಾಕ್ಷಣ ಬೆಳಕು ಹೊತ್ತಿಕೊಳ್ಳುತ್ತದೆ.

ರಾತ್ರಿ ಗಾಡಿ ಓಡಿಸುವಾಗ ಎದುರಿನಿಂದ ಬರುವ ಗಾಡಿಯ ಲೈಟ್ ಕಣ್ಣಿಗೆ ಬಿದ್ದು ಕಷ್ಟವಾಗುತ್ತದೆ. ಅದಕ್ಕೆ ಮಕ್ಕಳು ತಯಾರಿಸಿದ ಕನ್ನಡಕ ವಿಶೇಷವಾಗಿದೆ. ಲೈಟ್ ಬಿದ್ದಾಕ್ಷಣ ಅದರ ಮೇಲಿರುವ ತೆಳ್ಳನೆಯ ಕಪ್ಪು ಪರದೆಯು ಕನ್ನಡಕದ ಗಾಜನ್ನು ಮುಚ್ಚಿಕೊಳ್ಳುತ್ತದೆ. ಈ ಮಕ್ಕಳ ಅತ್ಯಾಧುನಿಕ ಆಸ್ಪತ್ರೆಯ ಕಲ್ಪನೆಯಲ್ಲಿ, ರೋಗಿಯನ್ನು ಮಲಗಿಸಿಕೊಂಡ ಸ್ಟ್ರೆಚರ್ ಆಸ್ಪತ್ರೆಯ ಬಾಗಿಲಿನಿಂದ ನೇರ ಆಪರೇಷನ್ ಥಿಯೇಟರ್‌ಗೆ ಬರುತ್ತದೆ.

ಬೆಂಗಳೂರಿನ ಎಸ್ಎಸ್ಆರ್ಎಂವಿ ಶಾಲೆ ಮುಂದೆ ಟ್ರಾಫಿಕ್ ಸಮಸ್ಯೆ ಎದುರಿಸುತ್ತಿದ್ದ ವಿದ್ಯಾರ್ಥಿಗಳು ಕಡಿಮೆ ವೆಚ್ಚದಲ್ಲಿ ತಾವೇ ಅಭಿವೃದ್ಧಿಪಡಿಸಿದ ಸಿಗ್ನಲ್ ಅಳವಡಿಸಿಕೊಂಡಿದ್ದಾರೆ. ಅದಕ್ಕೆ ಶಾಲೆಯ ಆಡಳಿತ ಮಂಡಳಿಯ ಒಪ್ಪಿಗೆಯೂ ಸಿಕ್ಕಿದೆ. ಹೀಗೆ ಮಹಾನಗರದ ಸಂಚಾರ ದಟ್ಟಣೆ, ನೀರಿನ ಸಮಸ್ಯೆ, ಪರಿಸರ ಮಾಲಿನ್ಯ ಮುಂತಾದ ಹದಿನೆಂಟು ಸಮಸ್ಯೆಗಳನ್ನು ಗುರ್ತಿಸಿ ಸುಸಜ್ಜಿತ ನಗರವನ್ನು ಹೇಗೆ ಕಟ್ಟಬೇಕು ಎಂದು ಯೋಚಿಸಿ ಅದರ ಮಾದರಿಯನ್ನೂ ವಿದ್ಯಾರ್ಥಿಗಳೇ ಮಾಡಿದ್ದಾರೆ.

ಸೆನ್ಸರ್, ಎಲೆಕ್ಟ್ರಾನಿಕ್ ಬ್ರೇನ್ ಮತ್ತು ಇವೆರಡನ್ನು ಸಂಪರ್ಕಿಸುವ ತಂತ್ರಾಂಶವನ್ನು ಮಾತ್ರ ‘ಬಿಬಾಕ್ಸ್’ ಒದಗಿಸುತ್ತದೆ. ಈ ಸಾಧನಗಳನ್ನು ಎಲ್ಲೆಲ್ಲಿ, ಹೇಗೆಲ್ಲ ಬಳಸಿಕೊಳ್ಳಬಹುದು, ಯಾವೆಲ್ಲ ಸಮಸ್ಯೆಗಳನ್ನು ಬಗೆಹರಿಸಬಹುದು ಎಂದು ಮಕ್ಕಳೇ ಚರ್ಚಿಸಿ ಪರಿಹಾರ ಕಂಡುಕೊಳ್ಳುತ್ತಾರೆ. ಮೇಲೆ ಹೇಳಿದ ಎಲ್ಲ ಸಂಶೋಧನೆಗಳು ಹೀಗೆ ಹುಟ್ಟಿಕೊಂಡವು.

ಅತಿ ಕಡಿಮೆ ಖರ್ಚಿನಲ್ಲಿ ರೂಪುಗೊಂಡವು. ಇಂಥ ಅನೇಕ ಸಂಶೋಧನೆಗಳು ಈಗಾಗಲೇ ಬಂದಿವೆ, ಅದರ ಸೌಕರ್ಯಗಳನ್ನು ಅನುಭವಿಸುತ್ತಿದ್ದೇವೆ ಎಂದು ಮೂಗು ಮುರಿಯಬಹುದು. ಆದರೆ ಈ ಮಕ್ಕಳು ಕಂಡುಕೊಂಡಿದ್ದೆಲ್ಲ ಸುಲಭೋಪಾಯ, ಕಮ್ಮಿ ಖರ್ಚು. ಎಲ್ಲಕ್ಕಿಂತ ಹೆಚ್ಚಾಗಿ, ಮಕ್ಕಳಲ್ಲಿ ಆರಂಭದಿಂದಲೇ ಸಂಶೋಧನೆಯ ನಿಟ್ಟಿನಲ್ಲಿ ಯೋಚಿಸುವ ಶಕ್ತಿ ಬೆಳೆಸುವುದು ‘ಬಿಬಾಕ್ಸ್’ ಉದ್ದೇಶ.

ಮೂರು ವರ್ಷಗಳ ಅವಧಿಯಲ್ಲಿ ನೂರಕ್ಕೂ ಹೆಚ್ಚು ಶಾಲೆಗಳು ‘ಬಿಬಾಕ್ಸ್ ಲ್ಯಾಬ್’ ಯೋಜನೆಯನ್ನು ತಮ್ಮ ಪಠ್ಯಕ್ರಮದಲ್ಲಿ ಅಳವಡಿಸಿಕೊಂಡಿವೆ. 25000ಕ್ಕೂ ಅಧಿಕ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ. ಬಿಬಾಕ್ಸ್ ಕಿಟ್ ಬಳಸಿ ಬೇರೆ ಸಂಸ್ಥೆಗಳೂ ತರಬೇತಿ ನೀಡುತ್ತಿವೆ. 2020ರ ವೇಳೆಗೆ ದೇಶದ 200 ನಗರಗಳಿಗೆ ಈ ಯೋಜನೆಯನ್ನು ವಿಸ್ತರಿಸಬೇಕು ಎಂಬುದು ಸಂದೀಪ್ ಚಿಂತನೆ.

‘ಬೇರೆ ಕಂಪೆನಿಗಳ ಇಂಥ ಕಿಟ್‌ಗಳ ಬೆಲೆ ಮೂವತ್ತೈದು ನಲವತ್ತು ಸಾವಿರ ರೂಪಾಯಿ. ಆದರೆ ಸರಳ ತಂತ್ರಜ್ಞಾನದ ನಮ್ಮ ಕಿಟ್‌ಗೆ ಐದು ಸಾವಿರ ರೂಪಾಯಿ ಮಾತ್ರ’ ಎನ್ನುವ ಸಂದೀಪ್ ಮುಂದಿನ ತಿಂಗಳಿನಿಂದ ಕಿಟ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದಾರೆ. ತಮ್ಮ ಆಸಕ್ತಿ ಯಾವುದರಲ್ಲಿದೆ ಎಂದು ಗುರ್ತಿಸಿಕೊಂಡು ಮಕ್ಕಳು ತಮಗೆ ಬೇಕಾದ ಸೆನ್ಸರ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನೂ ನೀಡಲಿದ್ದಾರೆ.

ಕೇಂದ್ರ ಸರ್ಕಾರ ಶಾಲೆಗಳಲ್ಲಿ ತೆರೆಯಲು ಉದ್ದೇಶಿಸಿರುವ ‘ಅಟಲ್ ಟಿಂಕರಿಂಗ್ ಲ್ಯಾಬ್’ನಂಥ ಯೋಜನೆಯಲ್ಲಿ ‘ಬಿಬಾಕ್ಸ್’ ಕೂಡ ಕೈ ಜೋಡಿಸುವ ಆಶಯ ಹೊಂದಿದೆ. ಹಾಗೊಮ್ಮೆ ಅವಕಾಶ ಸಿಕ್ಕರೆ ಗ್ರಾಮೀಣ ಪ್ರದೇಶದಲ್ಲೂ ತರಬೇತಿ ನೀಡುವ ಗುರಿ ಸಂದೀಪ್ ಅವರದು. ಸದ್ಯ ‘ಬಿಬಾಕ್ಸ್’ನಲ್ಲಿ 106 ಸಿಬ್ಬಂದಿ ಇದ್ದು 76 ತರಬೇತುದಾರರು ಇದ್ದಾರೆ. ‘ಬಿಬಾಕ್ಸ್’ ಬಗ್ಗೆ ಹೆಚ್ಚಿನ ಮಾಹಿತಿ biboxlabs.in ಲಿಂಕ್‌ನಲ್ಲಿದೆ. 

ಬಿಬಾಕ್ಸ್ ಹಿಂದಿನ ಮೆದುಳು
ಸಂದೀಪ್ ಸಿ. ಸೆನನ್ ‘ಬಿಬಾಕ್ಸ್’ ಹಿಂದಿನ ‘ಬ್ರೇನ್’. ಈ ಸಂಸ್ಥೆಯ ಸಂಸ್ಥಾಪಕ ಮತ್ತು ನಿರ್ದೇಶಕರು. ಆಂಗ್ಲ ದಿನಪತ್ರಿಕೆಯೊಂದರ ‘ನ್ಯೂಸ್‌ಪೇಪರ್ ಇನ್ ಎಜುಕೇಶನ್’ ಅಭಿಯಾನದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸಂದೀಪ್ ಭಾಗಿಯಾಗಿದ್ದರು. ಅಲ್ಲಿ ವಿದ್ಯಾರ್ಥಿಗಳು ಕೇಳುವ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರಿಸುತ್ತಿದ್ದರಾದರೂ ತಾವು ವಿಜ್ಞಾನಿ, ಎಂಜಿನಿಯರ್, ವೈದ್ಯರಾಗಲು ಇನ್ನೂ ಹದಿನೈದಿಪ್ಪತ್ತು ವರ್ಷಗಳೇ ಬೇಕು ಎಂದು ಆಸಕ್ತ ವಿದ್ಯಾರ್ಥಿಗಳು ಚಿಂತಿಸುವುದನ್ನು ಸಂದೀಪ್ ಗಮನಿಸಿದ್ದರು. ಇಂಥ ಆಸಕ್ತರ ಮಿದುಳಿಗೆ ಕೆಲಸ ಕೊಡಬೇಕು ಎಂದು ಯೋಚಿಸಿದ ಸಂದೀಪ್, 2012ರಲ್ಲಿ ‘ಬಿಬಾಕ್ಸ್’ ಆರಂಭಿಸಿದರು. ಇದಕ್ಕೆ ಡಿಎಸ್ಐಆರ್ (ಡಿಪಾರ್ಟ್‌ಮೆಂಟ್ ಸೈಂಟಿಫಿಕ್ ಆ್ಯಂಡ್ ಇಂಡಸ್ಟ್ರಿಯಲ್ ರಿಸರ್ಚ್) ಸಹಯೋಗ, ಮುಂದೆ ಡಿಪಾರ್ಟ್‌ಮೆಂಟ್ ಸೈನ್ಸ್ ಅಂಡ್ ಟೆಕ್ನಾಲಜಿ ವತಿಯಿಂದಲೂ ಒಂದಷ್ಟು ನಿಧಿ ಸಿಕ್ಕಿತು.

ಸಂದೀಪ್ ಅವರ ಊರು ಭದ್ರಾವತಿ. ಚಿಕ್ಕವರಿದ್ದಾಗ ಹೊಸ ಆಟಿಕೆ ಕಂಡರೆ ಅದರ ಎಲುಬು, ಮುಳ್ಳು ಬೇರೆ ಮಾಡಿ ಮತ್ತೆ ಜೋಡಿಸುವುದು ಅವರಿಗೆ ಇಷ್ಟದ ಕೆಲಸ. ಮನೆಯ ಪಕ್ಕದಲ್ಲಿದ್ದ ಎಲೆಕ್ಟ್ರಿಕಲ್ ಅಂಗಡಿಯಲ್ಲಿ ಗಂಟೆಗಟ್ಟಲೆ ಕಾಲ ಕಳೆಯುತ್ತಿದ್ದರು. ತರಗತಿಗಿಂತ ಲ್ಯಾಬ್ ಅವರ ಮೆಚ್ಚಿನ ಜಾಗವಾಗಿತ್ತು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಬಿ.ಇ ಮತ್ತು ಆಸ್ಟ್ರೇಲಿಯಾದ ಎಡಿತ್ ಕೋವನ್ ವಿಶ್ವವಿದ್ಯಾಲಯದಲ್ಲಿ ಸಂದೀಪ್ ಎಂಬಿಎ ಓದಿದ್ದಾರೆ.

ಎಂಜಿನಿಯರಿಂಗ್ ಮಾಡುವಾಗ ಅವರು 18 ಪ್ರಾಜೆಕ್ಟ್‌ಗಳಿಗೆ ಕೆಲಸ ಮಾಡಿದ್ದರು. ಅದರಲ್ಲಿ ಒಂದಾದ ತ್ರೀಡಿ ಟ್ರ್ಯಾಕಿಂಗ್ ತಂತ್ರಜ್ಞಾನವನ್ನು ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಷನ್‌ಗೆ ಹನ್ನೆರಡು ಲಕ್ಷ ರೂಪಾಯಿಗೆ ಬಿಟ್ಟುಕೊಟ್ಟು ಆ ಹಣವನ್ನೇ ಮುಂದಿನ ಸಂಶೋಧನೆಗೆ ತೊಡಗಿಸಿದ್ದಾರೆ. ಇವರೊಂದಿಗೆ ಮಧುಸೂದನ್ ನಂಬೂದರಿ ‘ಬಿಬಾಕ್ಸ್’ನ ಮಾರುಕಟ್ಟೆ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT