ADVERTISEMENT

ಮತ್ತಷ್ಟು ಶಕ್ತಿಗೆ ಬಿಗ್ ಬೋರ್ ಕಿಟ್

ಜಯಸಿಂಹ ಆರ್.
Published 17 ಡಿಸೆಂಬರ್ 2014, 19:30 IST
Last Updated 17 ಡಿಸೆಂಬರ್ 2014, 19:30 IST

ಫಿಲ್ಟರ್, ಸ್ಪ್ರಾಕೆಟ್‌ಗಳಿಂದ ವೇಗ ಮತ್ತು ವೇಗವರ್ಧನೆ ಗಳಿಸಲು ಸಾಧ್ಯವಿದ್ದರೂ, ಅದರ ಶೇಕಡಾವಾರು ಪ್ರಮಾಣ 1–3 ರಷ್ಟಿರುತ್ತದೆ ಅಷ್ಟೆ. ತಮ್ಮ ಅಚ್ಚು ಮೆಚ್ಚಿನ ಸಣ್ಣ ಬೈಕ್‌ಗಳಲ್ಲೇ ಮತ್ತೂ ಹೆಚ್ಚಿನ ಶಕ್ತಿ ಬಯಸುವವರು ಸಾಮಾನ್ಯವಾಗಿ ಬಿಗ್ ಬೋರ್ ಕಿಟ್‌­ಗಳ ಮೊರೆ ಹೋಗುತ್ತಾರೆ.

ಬಿಗ್‌ ಬೋರ್‌ ಕಿಟ್‌ಗಳನ್ನು ಅಳವಡಿಸಿದ ಬೈಕ್‌ಗಳ ಶಕ್ತಿವರ್ಧನೆ ಕನಿಷ್ಠ ಶೇ10ರಷ್ಟಾದರೂ ಇರುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಬಿಗ್‌ ಬೋರ್‌ಗಳ ಅಳವಡಿಕೆಗೆ ಹೇಳಿ ಮಾಡಿಸಿದ ಬೈಕ್‌ ವರ್ಗ 150 ಸಿ.ಸಿ ಸಾಮರ್ಥ್ಯದ್ದು.

ಭಾರತದ ಮಾರುಕಟ್ಟೆಯಲ್ಲಿ ಸದ್ಯಕ್ಕೆ ಲಭ್ಯವಿರುವ ಪ್ರಮುಖ 150 ಸಿ.ಸಿ 4 ಸ್ಟ್ರೋಕ್‌ ಬೈಕ್‌ಗಳ ಎಂಜಿನ್ ಹೋಂಡಾ ಕಂಪೆನಿಯದ್ದಾಗಿದೆ. ಈ ವಿಭಾಗದಲ್ಲಿ ಯಮಾಹ ಮತ್ತು ಬಜಾಜ್‌ಗಳು ತಮ್ಮದೇ ವಿಶೇಷ ಎಂಜಿನ್ ಹೊಂದಿವೆ.

ಹೋಂಡಾ ಯೂನಿಕಾರ್ನ್, ಡಾಝ್ಲರ್, ಟ್ರಿಗರ್, ಹೀರೊ ಹಂಕ್, ಅಚೀವರ್ ಮತ್ತು ಸಿಬಿ ಝಡ್ ಹಾಗೂ ಸಿಬಿ ಝಡ್ ಎಕ್ಸ್‌ಟ್ರೀಮ್ ಮಾದರಿಗ­ಳಲ್ಲಿ ಬಳಕೆಯಲ್ಲಿರುವುದು ಹೋಂಡಾ ಕಂಪೆನಿಯ 150 ಸಿ.ಸಿ ಎಂಜಿನ್. ಈ ಬೈಕ್‌ಗಳಿಗೆ 160 ಸಿ.ಸಿ ಮತ್ತು 180 ಸಿ.ಸಿ ಸಾಮರ್ಥ್ಯದ ಉತ್ತಮ ಬಿಗ್‌ ಬೋರ್ ಕಿಟ್‌ಗಳು ಲಭ್ಯವಿವೆ. ಇವು ಈ ಎಂಜಿನ್‌ಗಳಿಗಷ್ಟೇ ಸರಿಯಾಗಿ ಹೊಂದುತ್ತವೆ. ಇವುಗಳ ಬೆಲೆ ಸುಮಾರು ₨ 6 ರಿಂದ ₨ 18 ಸಾವಿರದವರೆಗೂ ಇದೆ.

‘ರೇಸಿಂಗ್ ಕಾನ್ಸೆಪ್ಟ್’ ಎಂಬ ವಿದೇಶಿ ಕಂಪೆನಿ ಈ ಕಿಟ್‌ಗಳನ್ನು ತಯಾರಿಸು­ತ್ತದೆ. ಕಿಟ್‌ನಲ್ಲಿ ಬೋರ್ ಮತ್ತು ಪಿಸ್ಟನ್‌ ಇರುತ್ತವೆ. ಎಂಜಿನ್‌­ನಲ್ಲಿ­ರುವ ಮೂಲ ಬೋರ್ ಮತ್ತು ಪಿಸ್ಟನ್‌ ಅನ್ನು ಬದಲಿಸಿ ಈ ಕಿಟ್‌ಗಳನ್ನು ಜೋಡಿಸಲಾಗುತ್ತದೆ.

150 ಸಿ.ಸಿ ಸಾಮರ್ಥ್ಯದ ಬೈಕ್‌ಗೆ 160 ಸಿ.ಸಿ ಸಾಮರ್ಥ್ಯದ ಬೋರ್ ಅಳವಡಿಸಿದರೆ ಅದರ ವೇಗ ಶೇ 10–12ರಷ್ಟು ಹೆಚ್ಚುತ್ತದೆ. ಅಂದರೆ ಮೂಲ ಬೋರ್‌ನಲ್ಲಿ ಯೂನಿಕಾರ್ನ್ ಬೈಕ್ ಗಂಟೆಗೆ ಗರಿಷ್ಠ 112 ಕಿ.ಮೀ ವೇಗ ಮುಟ್ಟಿದರೆ, ಬಿಗ್‌ ಬೋರ್ ಅಳವಡಿಸಿದ ಯೂನಿಕಾರ್ನ್ ಗಂಟೆಗೆ 126 ಕಿ.ಮೀ ವೇಗ ಮುಟ್ಟುತ್ತದೆ.

180 ಸಿ.ಸಿ ಸಾಮರ್ಥ್ಯದ ಬಿಗ್ ಬೋರ್ ಕಿಟ್ ಅಳವಡಿಸಿದರೆ ಅದರ ವೇಗ 140ರ ಆಸುಪಾಸನ್ನೂ ದಾಟು­ತ್ತದೆ. 160 ಸಿ.ಸಿ ಬೋರ್‌ಗೆ ಹೋಲಿಸಿ­ದರೆ 180 ಸಿ.ಸಿ ಬೋರ್‌ನಿಂದ ದೊರೆಯುವ ಗರಿಷ್ಠ ವೇಗ ಕಡಿಮೆಯೇ. ಆದರೆ ವೇಗವರ್ಧನೆ ಮತ್ತು ಎಂಜಿನ್ ಸಾಮರ್ಥ್ಯ ಹೆಚ್ಚಿರುತ್ತದೆ. ಅಂದರೆ 800– 900 ಕಿ.ಮೀ ದೂರದ ಪಯಣದ ನಂತರವೂ ನಿಮ್ಮ ಬೈಕ್ ಕೊಸರಾಡದೆ ಮತ್ತೊಂದು ಪಯಣಕ್ಕೆ ಸಿದ್ಧವಿ­ರು­ತ್ತದೆ.

ಒಂದೆರಡು ವರ್ಷಗಳ ಹಿಂದೆ ಯಮಾಹ ಮೋಟಾರ್ಸ್ ತನ್ನ ವೈಝಡ್‌ಎಫ್ ಆರ್‌15 ಮಾದರಿಯ ಬೈಕ್‌ಗಳಿಗೆ ಅಧಿಕೃತ ರೇಸಿಂಗ್ ಕಿಟ್‌ ಅನ್ನು ಒದಗಿಸುತ್ತಿತ್ತು. ಅಧಿಕೃತ ಶೋರೂಂಗಳಲ್ಲಿ ಮಾತ್ರ ಲಭ್ಯವಿದ್ದ ಈ ಕಿಟ್‌ಗಳ ಅಳವಡಿಕೆಯಿಂದ ಆರ್‌15 ಒಂದು ಮುಟ್ಟಿದ ಗರಿಷ್ಠ ವೇಗ ಗಂಟೆಗೆ 156 ಕಿ.ಮೀ.

ಬಿಗ್‌ ಬೋರ್‌ ಕಿಟ್‌ಗಳ ಅಳವಡಿಕೆಯಲ್ಲಿ ಬೆಂಗಳೂರಿನ ಜೊ. ಜೋಲ್ಸ್ ಸಂಸ್ಥೆ ಹೆಸರುವಾಸಿ. ಅದು ಬಿಗ್‌ ಬೋರ್ ಕಿಟ್ ಅಳವಡಿಸಿದ ಯಮಾಹ ಆರ್‌15 ಬೈಕ್‌ ಒಂದರ ಗರಿಷ್ಠ ವೇಗ ಗಂಟೆಗೆ 165 ಕಿ.ಮೀ. ಈ ಬೈಕ್ ಭಾರತದ ಅತಿ ವೇಗದ ಯಮಾಹ ಆರ್‌15 ಎನಿಸಿಕೊಂಡಿದೆ.

ಬಜಾಜ್‌ನ ಪಲ್ಸಾರ್ ಮಾದರಿಯ 200 ಮತ್ತು 220 ಸಿ.ಸಿ ಸಾಮರ್ಥ್ಯದ ಬೈಕ್‌ಗಳಿಗೆ ಉತ್ತಮ ಬಿಗ್‌ ಬೋರ್‌ ಕಿಟ್‌ಗಳಿವೆ. ಯಮಾಹದ ಎಫ್‌ಝಿ ಮಾದರಿಯ ಬೈಕ್‌ಗಳಿಗೂ ರೇಸಿಂಗ್ ಕಾನ್ಸೆಪ್ಟ್ ಬಿಗ್‌ ಬೋರ್‌ ಕಿಟ್‌ಗಳನ್ನು ಒದಗಿಸುತ್ತದೆ. ಇವೆಲ್ಲಾ ಅಧಿಕೃತ ಮತ್ತು ಸಾಬೀತಾದ ಕಿಟ್‌ಗಳ ಮಾತಾಯಿತು.

ಬೆಂಗಳೂರಿನಂಥ ನಗರದಲ್ಲಿ ಸ್ಥಳೀಯವಾಗಿ ತಯಾರಾಗುವ ಬಿಗ್‌ಬೋರ್‌ ಕಿಟ್‌ಗಳೂ ದೊರೆಯುತ್ತವೆ. ಅವೂ ಉತ್ತಮವಾಗೇ ಇರುತ್ತವೆ. ಆದರೆ ಜೀವಿತಾವಧಿಯ ಬಗ್ಗೆ ಹೆಚ್ಚಿನ ಭರವಸೆ ಇರುವುದಿಲ್ಲ.

ಬಿಗ್ ಬೋರ್‌ ಕಿಟ್‌ಗಳೊಂದಿಗೆ ಹೆಡ್‌, ವಾಲ್ವ್‌ಗಳಲ್ಲೂ ತುಸು ಮಾರ್ಪಾಡು ಮಾಡಲಾಗುತ್ತದೆ. ದೊಡ್ಡ ಕಾರ್ಬೊರೇಟರ್, ದೊಡ್ಡ ಫ್ಯುಯೆಲ್ ಜೆಟ್‌ಗಳು ಹಾಗೂ ಫ್ರೀ ಫ್ಲೋ ಎಕ್ಸಾಸ್ಟ್‌ಗಳನ್ನು ಅಳವಡಿಸಿದರೆ ನಿಮ್ಮ ಬೈಕ್ ನಿರಾಯಾಸವಾಗಿ ಗಂಟೆಗೆ 150 ಕಿ.ಮೀ ವೇಗದ ಗಡಿ ದಾಟುತ್ತದೆ. ಫ್ಯುಯೆಲ್ ಇಂಜೆಕ್ಷನ್ ವ್ಯವಸ್ಥೆ ಇರುವ ಬೈಕ್‌ಗಳಲ್ಲಿ ಈ ಕಿಟ್‌ಗಳ ಅಳವಡಿಕೆ ನಂತರ ಇಸಿಯು ರೀಮ್ಯಾಪಿಂಗ್ ಮಾಡಬೇಕಾಗುತ್ತದೆ.

ಇವುಗಳ ಅಳವಡಿಕೆಯಿಂದ ನಿಗದಿತ ವೇಗದಲ್ಲಿ (ಅಂದರೆ 150 ಸಿ.ಸಿ ಸಾಮರ್ಥ್ಯದ ಬೈಕ್‌ಗಳಿಗೆ ಉತ್ತಮ ವೇಗ 60–75 ಕಿ.ಮೀ /ಗಂಟೆ) ಬೈಕ್‌ಗಳ ಮೈಲೇಜ್ ಗಮನಾರ್ಹವಾಗಿ ಹೆಚ್ಚು­ತ್ತದೆ. ಆದರೆ ಗರಿಷ್ಠ ವೇಗದಲ್ಲಿ ಮೈಲೇಜ್ ಕುಗ್ಗುವುದನ್ನು ಅಲ್ಲಗಳೆಯ­ಲಾಗದು. ಹಾಗೆಂದು ಮೈಲೇಜ್‌ಗಾಗಿ ಈ ಮಾರ್ಪಾಡು ಮಾಡುವುದು ಮೂರ್ಖತನವಾದೀತು. ಹತ್ತಾರು ಸಾವಿರ ಬೆಲೆಯ ಕಿಟ್‌ಗಳನ್ನು ಅಳ­ವಡಿಸಿ, ಕೇವಲ ಐದಾರು ಕಿ.ಮೀ/ಲೀ. ಮೈಲೇಜ್ ಹೆಚ್ಚಿಸಿಕೊಳ್ಳುವುದರಿಂದ ಯಾವುದೇ ಲಾಭವಿಲ್ಲ.

ಈ ಕಿಟ್‌ಗಳ ಅಳವಡಿಕೆಗೆ ನುರಿತ ಮೆಕ್ಯಾನಿಕ್‌ ಬೇಕೇಬೇಕು. ಸರಿಯಾಗಿ ಅಳವಡಿಸದ ಕಿಟ್‌ಗಳಿಂದ ಬೈಕ್ ಎಂಜಿನ್ ಸೀಝ್ ಆಗುವ ಅಪಾಯ ಇದ್ದೇ ಇರುತ್ತದೆ.

ಅದರೊಂದಿಗೆ ಗಮನಹರಿಸಲೇಬೇಕಾದ ಮತ್ತಷ್ಟು ಸಂಗತಿಗಳಿವೆ. ಅವೆಂದರೆ ವಾಹನದ ಟೈರ್‌ಗಳು ಮತ್ತು ಬ್ರೇಕಿಂಗ್ ವ್ಯವಸ್ಥೆಯನ್ನು ಉನ್ನತೀಕರಿಸು­ವುದು. ಮೂಲ ಮಾದರಿಯಲ್ಲಿರುವ ಟೈರ್‌ ಮತ್ತು ಬ್ರೇಕ್‌ಗಳು ಕಂಪೆನಿ ನೀಡದ ವೇಗವನ್ನು ನಿಯಂತ್ರಿಸುವ ಸಾಮರ್ಥ್ಯ ಮಾತ್ರ ಹೊಂದಿರುತ್ತವೆ. ಶಕ್ತಿ ಹೆಚ್ಚಿಸಿದೊಡನೆ, ಹೆಚ್ಚಿನ ಸಾಮರ್ಥ್ಯದ ಡಿಸ್ಕ್‌ ಬ್ರೇಕ್‌ಗಳನ್ನು ಮತ್ತು ಹೆಚ್ಚು ರಸ್ತೆ ಹಿಡಿತ ಹೊಂದಿರುವ ಟೈರ್‌ಗಳನ್ನು ಅಳವಡಿಸುವುದು ಅನಿವಾರ್ಯ. ಇಲ್ಲದಿದ್ದಲ್ಲಿ ಅತಿ ವೇಗದಲ್ಲಿ ಹಿಡಿತ ತಪ್ಪಿ ಅಪಘಾತವಾಗುವ ಸಾಧ್ಯತೆ ಹೆಚ್ಚು.

2 ಸ್ಟ್ರೋಕ್‌ಗಳದ್ದು ಬೇರೆಯದೇ ಮಾತು
100, 125 ಸಿ.ಸಿ ಸಾಮರ್ಥ್ಯದ ಬೈಕ್‌ಗಳಿಗೂ ಈ ಕಿಟ್‌ಗಳನ್ನು ಅಳವಡಿಸಲು ಸಾಧ್ಯವಿದ್ದರೂ, ಆ ಬೈಕ್‌ಗಳಲ್ಲಿ ಹೆಚ್ಚಿನ ಶಕ್ತಿ ತಡೆದುಕೊಳ್ಳುವ ಸಾಮರ್ಥ್ಯವಿರುವುದಿಲ್ಲ. ಉದಾಹರಣೆಗೆ 100 ಸಿ.ಸಿ ಸಾಮರ್ಥ್ಯದ ಬೈಕ್‌ಗಳಲ್ಲಿ 60–70 ಕಿ.ಮೀ ವೇಗ ಮುಟ್ಟಿದೊಡನೆ, ಬೈಕ್‌ಗಳು ನಡುಗಲು ಆರಂಭಿಸುತ್ತವೆ. ಇದು ಬೈಕ್‌ಗೂ ಒಳ್ಳೆಯದಲ್ಲ. ಅನಿರೀಕ್ಷಿತ ಸಂದರ್ಭಗಳಲ್ಲಿ ರಸ್ತೆ ಹಿಡಿತ ತಪ್ಪಿ ಅಪಘಾತವಾಗುವ ಸಾಧ್ಯತೆ ಹೆಚ್ಚಾಗೇ ಇರುತ್ತದೆ.

ಹೆಚ್ಚಿನ ಶಕ್ತಿ ತಡೆಯಲಾರದ ಈ ಬೈಕ್‌ಗಳ ಬಿಡಿ ಭಾಗಗಳು ಕಳಚಿ ಬೀಳುವ, ಬ್ರೇಕ್ ವಿಫಲವಾಗುವ ಮತ್ತು ಅಡಿಯಚ್ಚಿಗೆ ಹೊಡೆತ ಬೀಳುವ ಅಪಾಯವಿದ್ದೇ ಇರುತ್ತದೆ. ಹೀಗಾಗಿ ಈ ವಿಭಾಗದಲ್ಲಿ ಬಿಗ್‌ ಬೋರ್‌ಗಳು ಲಭ್ಯವಿದ್ದರೂ ಅವು 2 ಸ್ಟ್ರೋಕ್ ಬೈಕ್‌ಗಳಿಗೆ ಹೇಳಿ ಮಾಡಿಸಿದ ಕಿಟ್‌ಗಳಾಗಿರುತ್ತವೆ.

2 ಸ್ಟ್ರೋಕ್‌ನ 100 ಸಿ.ಸಿ ಸಾಮರ್ಥ್ಯದ ಬೈಕ್‌ಗಳು ನಿರಾಯಾಸ­ವಾಗಿ 100 ಕಿ.ಮೀ ವೇಗ ಮುಟ್ಟುತ್ತವೆ. 125 ಮತ್ತು 135 ಸಿ.ಸಿ ಸಾಮರ್ಥ್ಯದ 2 ಸ್ಟ್ರೋಕ್‌ ಬೈಕ್‌ಗಳು ಸುಲಭವಾಗಿ 200, 220 ಸಿ.ಸಿ ಸಾಮರ್ಥ್ಯದ 4 ಸ್ಟ್ರೋಕ್ ಬೈಕ್‌ಗಳಿಗೆ ನೀರು ಕುಡಿಸುತ್ತವೆ.

ಹೀಗಾಗಿ ಆಫ್‌ ರೋಡ್ ಸ್ಪರ್ಧೆಗಳಲ್ಲಿ ಈ ಬೈಕ್‌ಗಳನ್ನು ಹೆಚ್ಚಾಗಿ ಬಳಸಲಾ­ಗು­ತ್ತದೆ. ಇವುಗಳಿಗೆ ಕೇವಲ 140, 150 ಸಿಸಿ ಸಾಮರ್ಥ್ಯದ ಬಿಗ್‌ ಬೋರ್‌ ಕಿಟ್‌­ಗಳನ್ನು ಅಳವಡಿಸಲಾಗುತ್ತದೆ. ಈ ಕಿಟ್‌ಗಳ ಅಳವಡಿಕೆ ನಂತರ 2 ಸ್ಟ್ರೋಕ್‌ ಬೈಕ್‌ಗಳು ಗಂಟೆಗೆ 150 ಕಿ.ಮೀ ವೇಗದ ಎಲ್ಲೆಯನ್ನೂ ಮೀರಿದ ಉದಾಹರಣೆ ರೇಸಿಂಗ್ ಲೋಕದಲ್ಲಿ ಸಾಕಷ್ಟಿವೆ.

ಹೀಗಿದ್ದೂ 2 ಸ್ಟ್ರೋಕ್ ಬೈಕ್‌ಗಳಿಗೆ ಈ ರೀತಿಯ ಮಾರ್ಪಾಡು ಮಾಡುವವರು ಕಮ್ಮಿ. ಏಕೆಂದರೆ ಅವುಗಳ ದುಪ್ಪಟ್ಟು ಎಂಜಿನ್ ಸಾಮರ್ಥ್ಯದ 4 ಸ್ಟ್ರೋಕ್ ಬೈಕ್‌ಗಳನ್ನು ಹಿಂದಿಕ್ಕುವ ಶಕ್ತಿ ಅವುಗಳಲ್ಲಿ ಈಗಾಗಲೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT