ADVERTISEMENT

ಮಳೆಗಾಲದ ಪ್ರಯಾಣ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2017, 19:30 IST
Last Updated 23 ಆಗಸ್ಟ್ 2017, 19:30 IST
ಮಳೆಗಾಲದ ಪ್ರಯಾಣ
ಮಳೆಗಾಲದ ಪ್ರಯಾಣ   

ತಡವಾಗಿಯಾದರೂ ರಾಜ್ಯದಲ್ಲೀಗ ಹಲವೆಡೆ ಮಳೆ ಸುರಿಯತೊಡಗಿದೆ. ಬರದಿಂದ ಕಂಗೆಟ್ಟಿರುವ ರಾಜ್ಯದ ಜನತೆಗೆ ಮಳೆಯ ಆಗಮನ ಖುಷಿ ತಂದಿದೆ. ಆದರೆ, ಮಳೆಗಾಲದ ಕ್ಷಣಗಳನ್ನು ಆನಂದಿಸುತ್ತಾ ಕಾರಿನಲ್ಲಿ ಪ್ರಯಾಣ ಮಾಡುವಾಗ ಎಚ್ಚರಿಕೆ ವಹಿಸುವುದು ಕೂಡ ಅಷ್ಟೇ ಅಗತ್ಯ.

ಏಕೆಂದರೆ, ನಮ್ಮ ಬಹುತೇಕ ರಸ್ತೆಗಳು ಹದಗೆಟ್ಟ ಸ್ಥಿತಿಯಲ್ಲಿದ್ದು, ಅವುಗಳಲ್ಲಿ ನೀರು ತುಂಬಿಕೊಂಡರೆ ಹೊಂಡಗಳು ಇರುವುದು ಗೊತ್ತಾಗುವುದೇ ಇಲ್ಲ. ಮಳೆಯಲ್ಲಿ ಕಾರು ಓಡಿಸುವಾಗ ಯಾವ ತಯಾರಿಗಳನ್ನು ಮಾಡಿಕೊಂಡಿರಬೇಕು? ವಹಿಸಬೇಕಾದ ಮುಂಜಾಗ್ರತೆಗಳು ಯಾವುವು? ಇಲ್ಲಿದೆ ಒಂದಿಷ್ಟು ಮಾಹಿತಿ:

ಟೈರ್‌ಗೆ ಇರಲಿ ಟ್ರೆಡ್‌ಗಳು: ಟೈರ್‌ಗಳ ಗ್ರಿಪ್‌ಗಾಗಿ ಬೇಕಾಗುವಷ್ಟು ಅವುಗಳ ಹೊರಮೈ ಟ್ರೆಡ್‌ಗಳು ಇವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ರಸ್ತೆ ಮೇಲಿನ ಮಳೆ ನೀರಿನಲ್ಲಿ ಕೆಲವೊಮ್ಮೆ ತೈಲ ಸೋರಿ ರಸ್ತೆ ಜಾರುತ್ತಿರುತ್ತದೆ. ರಸ್ತೆ ಮೇಲೆ ನಿಂತ ನೀರಿನ ಮೇಲೆ ಚಕ್ರ ಹಾದುಹೋದಾಗ ಆ ನೀರು ಸರಿದು ಹೋಗುವಂತೆ ನೋಡಿಕೊಳ್ಳುವ ಟ್ರೆಡ್‌ಗಳು ಕಾರು ರಸ್ತೆಯಿಂದ ಜಾರದಂತೆ ತಡೆಯುತ್ತವೆ. ಟ್ರೆಡ್‌ಗಳು ಸವೆದು ಟೈರ್‌ಗಳ ಮೇಲ್ಮೈ ನುಣುಪಾಗಿದ್ದರೆ ಹೊಸ ಟೈರ್‌ಗಳನ್ನು ಹಾಕುವುದು ಒಳಿತು. ಟ್ರೆಡ್‌ಗಳು 2 ಎಂ.ಎಂ.ನಷ್ಟು ಆಳವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ADVERTISEMENT

ಬ್ರೇಕ್‌ ಆಯಿಲ್‌ ಹಾಕಿದ್ದೀರಾ?: ಮಳೆಗಾಲದಲ್ಲಿ ಕಾರು ಗಳ ಬ್ರೇಕ್‌ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಅಷ್ಟೇ ಮುಖ್ಯ. ಬ್ರೇಕ್‌ನ ಆಯಿಲ್‌ ಹಾಗೂ ಪ್ಯಾಡ್‌ಗಳನ್ನು ಬದಲಾಯಿಸುವುದು ತುಂಬಾ ಅಗತ್ಯ. ಈ ಬದಲಾವಣೆಗೆ ಹೆಚ್ಚಿನ ಖರ್ಚು ಆಗುವುದಿಲ್ಲ. ಆದರೆ, ಕಾರಿನ ಸುರಕ್ಷತೆಗೆ ಅದು ಅನಿವಾರ್ಯ ಎಂಬುದನ್ನು ನೆನಪಿಡಬೇಕು.

ವೇಗದ ಮಿತಿ ಮೀರದಿರಿ: ಮಳೆ ಆಗುವಾಗ ಮುಂದಿರುವ ವಾಹನಗಳು ಸರಿಯಾಗಿ ಕಾಣವುದಿಲ್ಲ. ರಸ್ತೆಗಳಲ್ಲಿರುವ ಗುಂಡಿಗಳು ಸಹ ಈ ಸಂದರ್ಭದಲ್ಲಿ ಕಾಣಿಸಲಾರವು. ಹೀಗಾಗಿ ಕಡಿಮೆ ವೇಗದಲ್ಲಿ ಕಾರು ಓಡಿಸಬೇಕು. ಇದರಿಂದ ಸುರಕ್ಷಿತ ಪ್ರಯಾಣ ಸಾಧ್ಯ.

ವೈಪರ್‌ ವ್ಯವಸ್ಥೆ ಹೇಗಿದೆ?: ಮಳೆಗಾಲದಲ್ಲಿ ಚಾಲಕರ ಅತ್ಯುತ್ತಮ ಸ್ನೇಹಿತರು ಈ ವೈಪರ್‌ಗಳು. ವೈಪರ್‌ಗಳ ರಬ್ಬರ್‌ ಬ್ಲೇಡ್‌ಗಳು ದುಸ್ಥಿತಿಯಲ್ಲಿದ್ದರೆ ಅವುಗಳನ್ನು ಬದಲಾಯಿಸಬೇಕು. ಏಕೆಂದರೆ, ಬಿಸಿಲಿನಿಂದ ಈ ರಬ್ಬರ್‌ ಬ್ಲೇಡ್‌ಗಳಲ್ಲಿ ಬಿರುಕು ಬಿದ್ದಿರುತ್ತದೆ. ವೈಪರ್‌ ವಾಷರ್‌ನಲ್ಲಿ ಸೋಪಿನ ನೀರು ಹಾಕಿಟ್ಟಿರಬೇಕು. ಮಣ್ಣಿನ ನೀರು ಕಾರಿನ ಮುಂಭಾಗದ ಗಾಜಿಗೆ ಅಂಟಿಕೊಂಡಾಗ ಶುಚಿಗೊಳಿಸಲು ಇದರಿಂದ ಸಾಧ್ಯವಾಗುತ್ತದೆ. ಹೊರಗಿನ ನೋಟ ಸರಿಯಾಗಿ ಕಾಣಲು ಮುಂಭಾಗದ ಗಾಜುಗಳು ಶುಚಿಯಾಗಿರುವುದು ತುಂಬಾ ಅಗತ್ಯ.

ಮಳೆಯಲ್ಲಿ ಕಾರು ಕಾಣಬೇಕು: ಮಳೆಯಾಗುವ ರಸ್ತೆಗಳಲ್ಲಿ ಮುಂದಿನ ಸನ್ನಿವೇಶ ನಿಮಗೆ ಕಾಣುವುದು ಎಷ್ಟು ಅಗತ್ಯವೋ ನಿಮ್ಮ ಕಾರು ಬೇರೆಯವರಿಗೆ ಕಾಣುವಂತಿರುವುದು ಅಷ್ಟೇ ಅಗತ್ಯ. ಕಾರಿನ ಹೆಡ್‌ಲೈಟ್‌ಗಳನ್ನು ಚಾಲೂ ಸ್ಥಿತಿಯಲ್ಲಿ ಇಟ್ಟಿರಬೇಕು. ಇಂಡಿಕೇಟರ್‌ಗಳು ಸಹ ಚಾಲೂ ಸ್ಥಿತಿಯಲ್ಲಿರಬೇಕು.

ಬಾಗಿಲು ತೆರೆಯದಿರೆ ಕಿಟಕಿಯಿದೆ: ಮಳೆಯಲ್ಲಿ ಕೆಲವೊಮ್ಮೆ ಕಾರುಗಳ ಬಾಗಿಲುಗಳು ಜಾಮ್‌ ಆಗುವುದುಂಟು. ಅಪಾಯದ ಸ್ಥಿತಿಯಲ್ಲಿ ಕಾರಿನಿಂದ ಹೊರಬರಬೇಕಾದಾಗ ಹ್ಯಾಮರ್‌ ಸಹಾಯದಿಂದ ಕಿಟಕಿಯ ಬಾಗಿಲು ಒಡೆದು ಹೊರಬರಬೇಕು. ಒಮ್ಮೊಮ್ಮೆ ನೀರಿನಲ್ಲೇ ಹೋಗುವ ಸನ್ನಿವೇಶ ಬರುತ್ತದೆ. ಆಗ ತುಸು ಕಾಯ್ದು ದೊಡ್ಡ ವಾಹನಗಳು ಆ ನೀರಿನಲ್ಲಿ ಸಾಗುವುದನ್ನು ಗಮನವಿಟ್ಟು ನೋಡಿ, ನೀರಿನ ಮಟ್ಟವನ್ನು ಮನದಟ್ಟು ಮಾಡಿಕೊಳ್ಳಬೇಕು.

ತುಂಬಾ ನಿಧಾನವಾಗಿ ಅಂತಹ ಪ್ರದೇಶವನ್ನು ದಾಟಬೇಕು. ಮೊದಲ ಗೇರ್‌ನಲ್ಲೇ ಕಾರು ಚಲಿಸುವುದು ಉತ್ತಮ. ರಸ್ತೆಗಳು ಜಲಾವೃತವಾದಾಗ ದಟ್ಟಣೆ ಉಂಟಾಗುವುದು ಮಾಮೂಲಿ. ಎಂತಹ ಸನ್ನಿವೇಶವನ್ನೂ ಎದುರಿಸಲು ಸಜ್ಜಾಗಬೇಕಾದರೆ ಟ್ಯಾಂಕ್‌ ಭರ್ತಿ ಮಾಡಿಕೊಂಡು ಹೋಗಿರಬೇಕು. ನೀರಿನ ಬಾಟಲಿಗಳು, ಸ್ನ್ಯಾಕ್‌ಗಳು, ಸಿ.ಡಿಗಳು ಜತೆಗಿದ್ದರೆ ಕಾಯುವ ತೊಂದರೆಗಳು ಸಹನೀಯವಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.